ಜಲಗಾಂವ್: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಅಮಲ್ನೇರ್-ಧುಲೆ ಹೆದ್ದಾರಿಯ ಮಾಂಗ್ರೂಲ್ ಗ್ರಾಮದ ಬಳಿ ಮಂಗಳವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಮೂರು ವಾಹನಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದಾರುಣ ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಗುಜರಾತ್ ನೋಂದಣಿಯ ಕಾರೊಂದು ಮೊದಲು ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅದರ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ (MSRTC) ಬಸ್ ವೇಗವಾಗಿ ಬಂದು ಈ ಎರಡೂ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್ಸಿನ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿದೆ. ಬೈಕ್‌ನಲ್ಲಿದ್ದ ನಿಲೇಶ್ ತಾವಾಡೆ ಮತ್ತು ಫಲ್ಗುಣಿ ಭೋಯ್ ಎಂಬುವವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಜ್ಜುಗುಜ್ಜಾದ ಕಾರಿನಿಂದ ಮಗುವಿನ ರಕ್ಷಣೆ: ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಪಘಾತದಲ್ಲಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದ ಕಾರಿನ ಅವಶೇಷಗಳ ಮಧ್ಯೆ ಸಿಲುಕಿದ್ದ ಸಣ್ಣ ಹೆಣ್ಣು ಮಗುವನ್ನು ಪೊಲೀಸರು ಮತ್ತು ಸಾರ್ವಜನಿಕರು ಭಾರಿ ಶ್ರಮವಹಿಸಿ ಪವಾಡ ಸದೃಶ ರೀತಿಯಲ್ಲಿ ಸುsetupರಕ್ಷಿತವಾಗಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ಕಾರಿನಲ್ಲಿದ್ದ ನಂದಲಾಲ್ ಮಹಾಜನ್, ಅನಿತಾ ಮಹಾಜನ್, ಸುರೇಶ್ ಮಹಾಜನ್ ಮತ್ತು ನಿರ್ಮಲಾ ಎಂಬ ನಾಲ್ವರು ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಆದಿತ್ಯ ಸೇರಿದಂತೆ ಅಪಘಾತದಲ್ಲಿ ಗಾಯಗೊಂಡ ಇತರೆ ಪ್ರಯಾಣಿಕರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರೆಲ್ಲರೂ ಕೌಟುಂಬಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
