Home ಅಂಕಣ ಫಹಾದ್ ಭಯೋತ್ಪಾದಕನೇ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ?

ಫಹಾದ್ ಭಯೋತ್ಪಾದಕನೇ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ?

0
ನಕಲಿ ಆಧಾರ್ ಕಾರ್ಡ್ ಪ್ರಕರಣ, ಭಯೋತ್ಪಾದಕ ಕೃತ್ಯಕ್ಕೆ ಸಮವೇ?
ಸಂಬಂಧಿಕರನ್ನು ಕಾಣಲು ಬಂದ ಫಹಾದ್‌ಗೆ, ಭಯೋತ್ಪಾದಕ ಪಟ್ಟ ಕಟ್ಟಿದ್ದು ಹೇಗೆ?
20 ವರ್ಷಗಳ ಜೈಲು ಹಕ್ಕಿ ಫಹಾದ್ ಪ್ರಕರಣದಲ್ಲಿ ಪಾಟಿ ಸವಾಲಿನ ದಾಖಲೆ ಇಲ್ಲಿದೆ.. ನವೀನ್ ಸೂರಿಂಜೆಯವರ ಬರಹದಲ್ಲಿ

ಫಹಾದ್ ಎಂಬ 24 ವರ್ಷದ ಯುವಕನನ್ನು ಮೈಸೂರು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ 2006 ರಂದು ಅರೆಸ್ಟ್ ಮಾಡಿದ್ದರು. ಆತನ ಸಹಚರರು ಎಂದು ಹೇಳಿ ಇನ್ನಿಬ್ಬರನ್ನು ಅರೆಸ್ಟ್ ಮಾಡಿದ್ದರು. ಫಹಾದ್ ಬಳಿ ಎಕೆ-47 ಕೂಡಾ ವಶಪಡಿಸಿಕೊಂಡು ಚಾರ್ಜ್ಶೀಟ್ ದಾಖಲಿಸಿದ್ದರು. ಫಹಾದ್ ಎಂಬ ಈ ಯುವಕ ಪಾಕಿಸ್ತಾನದವನು. ಆತನ ತಾಯಿ ಮೂಲತಃ ಕೇರಳದವರು. ಮೈಸೂರು-ಕೇರಳದ ಗಡಿಗಳಲ್ಲಿ ಸಂಬಂಧಿಕರನ್ನು ಹೊಂದಿರುವ ಫಹಾದ್ ತನ್ನ ಸಂಬಂಧಿಕರನ್ನು ಕಾಣಲು ಮೈಸೂರಿಗೆ ಬಂದಿದ್ದನು. ಇಲ್ಲಿಯೇ ಸಂಬಂಧಿಕ ಹುಡುಗಿಯೊಬ್ಬಳ ಜೊತೆ ಪ್ರೇಮಾಂಕುರವಾಗಿ ಮೈಸೂರಿನಲ್ಲೇ ಉಳಿಯಬೇಕು ಎಂದು ನಿರ್ಧರಿಸಿ ಸಣ್ಣ ಅಂಗಡಿ ತೆರೆದು ಜೀವನ ಸಾಗಿಸುತ್ತಿದ್ದನು. ಅದಕ್ಕಾಗಿ ಸ್ಥಳೀಯರ ಸಹಾಯದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದನು. ಒಂದು ನಕಲಿ ಆಧಾರ್ ಕಾರ್ಡ್ ಪ್ರಕರಣವನ್ನು ಪಾಕಿಸ್ತಾನದ ಪ್ರಜೆ ಎಂಬ ಕಾರಣಕ್ಕಾಗಿ ‘ಭಯೋತ್ಪಾಧನಾ ಪ್ರಕರಣ’ವನ್ನಾಗಿ ಪರಿವರ್ತಿಸಲಾಯಿತು.

2006 ರಿಂದ 2026 ರವರೆಗೂ ಜೈಲಿನಲ್ಲಿ ಇದ್ದ ಫಹಾದ್ 20 ವರ್ಷಗಳ ಬಳಿಕ ಹೈಕೋರ್ಟ್ ನಿಂದ ಬಿಡುಗಡೆ ಭಾಗ್ಯ ಪಡೆದುಕೊಂಡಿದ್ದಾನೆ. ಯಾವ ರೀತಿ ಭಯೋತ್ಪಾದನಾ ಪ್ರಕರಣಗಳಲ್ಲಿ ಯುವಕರನ್ನು ಸಿಲುಕಿಸಲಾಗುತ್ತದೆ ಎಂಬುದಕ್ಕೆ ತನಿಖಾಧಿಕಾರಿಯನ್ನು ಬೆಂಗಳೂರಿನ ಹಿರಿಯ ವಕೀಲ ಎಸ್ ಬಾಲನ್ ನಡೆಸಿದ ಪಾಟಿ ಸವಾಲಿನ ದಾಖಲೆಗಳನ್ನು ಓದಬೇಕು.

ಹಿರಿಯ ವಕೀಲ ಎಸ್ ಬಾಲನ್ ಅವರು ತನಿಖಾಧಿಕಾರಿಯನ್ನು ನಡೆಸಿದ ಕ್ರಾಸ್ ಎಕ್ಸಾಮಿನೇಶನ್ ಇಲ್ಲಿದೆ :

ಎಸ್ ಬಾಲನ್ : ಗುಂಡು ಹಾರಿಸಿದಾಗ ಗನ್‌ಶಾಟ್ ರೆಸಿಡ್ಯೂ (Gun Shot Residue /GSR) ಉಂಟಾಗುತ್ತದೆ ಎಂಬುದು ನಿಜವೇ? ಅಂದರೆ ಗುಂಡು ಬಂದೂಕಿನಿಂದ ಹಾರಿದಾಗ ಅದರೊಳಗಿನ ಸೂಕ್ಷ್ಮ ಕಣಗಳು, ಅನಿಲಗಳು ಮತ್ತು ಸುಟ್ಟು ಹೋಗದ ಗನ್‌ಪೌಡರ್ ಇತ್ಯಾದಿಗಳುಇರುತ್ತವೆ. ವಿಧಿವಿಜ್ಞಾನದಲ್ಲಿ, ಇದು ಶಂಕಿತನೊಬ್ಬ ಆಯುಧದಿಂದ ಗುಂಡು ಹಾರಿಸಿದ್ದಾನೆಯೇ ಎಂದು ನಿರ್ಧರಿಸಲು, ಅಪರಾಧದ ದೃಶ್ಯಗಳನ್ನು ಪುನರ್ನಿರ್ಮಿಸಲು ಮತ್ತು ಗುಂಡು ಹಾರಿಸುವ ದೂರವನ್ನು ಅಂದಾಜು ಮಾಡಲು ಬಳಸುವ ನಿರ್ಣಾಯಕ ಸಾಕ್ಷ್ಯವಾಗಿದೆ. ಹೌದು ತಾನೆ ?

ತನಿಖಾಧಿಕಾರಿ : ಹೌದು. ಗನ್‌ಶಾಟ್ ರೆಸಿಡ್ಯೂಗಳಲ್ಲಿ ಸಾವಯವ (Organic) ಮತ್ತು ಅಜೈವಿಕ (Inorganic) ಅಂಶಗಳು ಇರುತ್ತವೆ.

ಎಸ್ ಬಾಲನ್: ನೋಡಿ, ನೀವು ಭಯೋತ್ಪಾಧಕರು ಮತ್ತು ನಿಮ್ಮ ಮಧ್ಯೆ ಗುಂಡಿನ ಚಕಮಕಿ ನಡೆಯಿತು ಅಂತ ಹೇಳ್ತೀರಿ.ಗುಂಡು ಹಾರಾಟ ನಡೆದ ಘಟನಾ ಸ್ಥಳದಿಂದ ಗನ್‌ಶಾಟ್ ರೆಸಿಡ್ಯೂ ಸಂಗ್ರಹಿಸಲು ನೀವು ಪ್ರಯತ್ನಿಸಿದ್ದೀರಾ?

ತನಿಖಾಧಿಕಾರಿ : ಹೌದು, ಪ್ರಯತ್ನಿಸಿದೆ. ಆದರೆ ಅದು ದೊರೆಯಲಿಲ್ಲ.

ಎಸ್ ಬಾಲನ್ : ಗನ್‌ಶಾಟ್ ರೆಸಿಡ್ಯೂ ಸಂಗ್ರಹಿಸಲು ನೀವು ಯಾವ ಕ್ರಮ ಕೈಗೊಂಡಿರಿ?

ತನಿಖಾಧಿಕಾರಿ : ನನ್ನ ಕಣ್ಣಿಗೆ ಗೋಚರವಾದುದನ್ನು ಮಾತ್ರ ಘಟನಾ ಸ್ಥಳದಿಂದ ಸಂಗ್ರಹಿಸಿದೆ.

ಎಸ್ ಬಾಲನ್ : ಗುಂಡು ಹಾರಾಟ ನಡೆದಾಗ, ಅದೂ ಭಯೋತ್ಪಾದಕರ ಪ್ರಕರಣದಲ್ಲಿ ಗುಂಡು ಹಾರಾಟದ ತನಿಖೆ ನಡೆಸಲು ತಜ್ಞರು ಬರುತ್ತಾರೆ. ನೀವು ಉದ್ದೇಶಪೂರ್ವಕವಾಗಿ ತಜ್ಞರ ಸಹಾಯ ಪಡೆಯಲಿಲ್ಲವೇ?

ತನಿಖಾಧಿಕಾರಿ : ಸುಳ್ಳು

ಎಸ್ ಬಾಲನ್ : ತಜ್ಞರ ಸಹಾಯ ಪಡೆಯಲು ಪ್ರಯತ್ನಿಸಿದ್ದೀರಾ?

ತನಿಖಾಧಿಕಾರಿ : ಆ ಸಮಯದಲ್ಲಿ ಮೈಸೂರಿನಲ್ಲಿ ತಜ್ಞರು ಲಭ್ಯವಿರಲಿಲ್ಲ. ಆದ್ದರಿಂದ ಅವರ ಸಹಾಯ ಪಡೆಯಲಿಲ್ಲ. ನಂತರ 27.10.2006 ರಂದು ಗನ್‌ಶಾಟ್ ರೆಸಿಡ್ಯೂ ಸಂಗ್ರಹಿಸಲು ತಜ್ಞರಿಗೆ ಮನವಿ ಕಳುಹಿಸಿದ್ದೆ. ಆದರೆ ಆ ಮನವಿಯ ಪ್ರತಿಯನ್ನು ಚಾರ್ಜ್‌ಶೀಟ್ ಜೊತೆ ಸಲ್ಲಿಸಿಲ್ಲ.

ಎಸ್ ಬಾಲನ್ : ಗುಂಡು ಹಾರಾಟದ ಸಮಯದಲ್ಲಿ ಗುಂಡುಹಾರಿಸಿದ ವ್ಯಕ್ತಿಯ ಕೈ, ಬಟ್ಟೆ, ಗುಂಡು ಬಿದ್ದ ಜಾಗ ಇವು ಪ್ರಮುಖ ಸಾಕ್ಷಿಯ ಸ್ಥಳಗಳು. ನಿಜ ತಾನೆ?

ತನಿಖಾಧಿಕಾರಿ : ಹೌದು. ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆ, ಕೈಗಳು, ಗುಂಡು ತಗುಲಿದ ಗುರಿಯ ಸ್ಥಳ ಹಾಗೂ ಗುಂಡು ಬಿದ್ದ 3 ರಿಂದ 5 ಅಡಿ ವ್ಯಾಪ್ತಿಯ ಪ್ರದೇಶವು ಪ್ರಮುಖ ಸಾಕ್ಷ್ಯಗಳಾಗಿವೆ ಎಂಬುದು ನಿಜ.

ಎಸ್ ಬಾಲನ್ : ನಿಮ್ಮ ಪ್ರಕಾರ ಆರೋಪಿಗಳ ಗುಂಡು ಎಲ್ಲಿಗೆ ಬಿದ್ದಿತ್ತು ?

ತನಿಖಾಧಿಕಾರಿ : ಈ ಪ್ರಕರಣದಲ್ಲಿ ಗುಂಡು ಪೊಲೀಸ್ ಜೀಪ್‌ಗೆ ತಗುಲಿತ್ತು.

ಎಸ್ ಬಾಲನ್ : ನೀವೇ ಹೇಳಿದ್ರಿ, ಗುಂಡು ಬಿದ್ದ ಸ್ಥಳ, ಗುರಿಯ ಅಂತರ ಪ್ರಮುಖ ಸಾಕ್ಷ್ಯ ಎಂದು ಹೇಳಿದ್ದೀರಿ. ಗುಂಡು ಹಾರುತ್ತಲ್ಲಾ, ಗನ್ನ ಮೂತಿ (Muzzle End ) ಆ ಸ್ಥಳದಿಂದ ಗುಂಡು ಬಿದ್ದ ಪೊಲೀಸ್ ಜೀಪ್ ನಡುವಿನ ಅಂತರ ತನಿಖೆ ಮಾಡಿದ್ದೀರಾ ?

ತನಿಖಾಧಿಕಾರಿ : ಗನ್‌ನ ಮೂತಿ (Muzzle End) ಮತ್ತು ಗುಂಡು ತಗುಲಿದ ಪೊಲೀಸ್ ಜೀಪ್ ನಡುವಿನ ಅಂತರವನ್ನು ನಾನು ತನಿಖೆ ಮಾಡಿಲ್ಲ.

ಎಸ್ ಬಾಲನ್ : ಗುಂಡು ಹಾರಿಸಿದ ಸ್ಥಳದಿಂದ ಗುಂಡು ಬಿದ್ದ ಪೊಲೀಸ್ ಜೀಪ್ ನಡುವಿನ ಅಂತರವನ್ನು ತನಿಖೆ ಮಾಡುವುದು ಅಗತ್ಯವೆಂದು ತನಿಖಾಧಿಕಾರಿಯಾಗಿ ನಿಮಗೆ ಅನಿಸಿತೇ?

ತನಿಖಾಧಿಕಾರಿ : ಹೌದು, ಅದು ಅಗತ್ಯವಾಗಿತ್ತು.

ಎಸ್ ಬಾಲನ್ : ಅಂದರೆ, ನೀವು ಉದ್ದೇಶಪೂರ್ವಕವಾಗಿ ಅಂತರ ತನಿಖೆ ಮಾಡಲಿಲ್ಲ.

ತನಿಖಾಧಿಕಾರಿ : ನಾನು ಉದ್ದೇಶಪೂರ್ವಕವಾಗಿ ತನಿಖೆ ಮಾಡಲಿಲ್ಲ ಎಂಬುದು ತಪ್ಪು. ನಾನು ಅಳತೆ ಮಾಡಲಿಲ್ಲ ನಿಜ. ಆ ಸಮಯದಲ್ಲಿ ಅದು ನನ್ನ ಜ್ಞಾನದಲ್ಲಿರಲಿಲ್ಲ.

ಎಸ್ ಬಾಲನ್ : ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆಯಲ್ಲಿ ಕೂಡಾ ಜಿಎಸ್ಆರ್(Gun Shot Residue) ಇರುತ್ತದೆ ಎಂದು ನೀವುಆಗಲೇ ಒಪ್ಪಿಕೊಂಡಿದ್ದೀರಿ. ಹಾಗಾಗಿ ಗುಂಡು ಹಾರಿಸಿದ ಆರೋಪಿಯ ಬಟ್ಟೆಯಿಂದ ಜಿಎಸ್ಆರ್ ಸಂಗ್ರಹಿಸಲು ಯತ್ನಿಸಿದ್ರಾ ?

ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ದೇಹದಿಂದ ಯಾವುದೇ ಸಾಕ್ಷ್ಯ ಸಂಗ್ರಹಿಸಲು ನಾನು ಪ್ರಯತ್ನಿಸಲಿಲ್ಲ.

ಎಸ್ ಬಾಲನ್ : ಯಾಕೆಂದರೆ ಗುಂಡು ಹಾರಿಸಿದ್ದಾನೆ ಎನ್ನಲಾದ ಆರೋಪಿಯ ದೇಹದಲ್ಲಿ, ಬಟ್ಟೆಯಲ್ಲಿ ಜಿಎಸ್ಆರ್ ಸಿಗಲ್ಲ

ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ದೇಹದಲ್ಲಿ GSR ಸಿಗದೇ ಇರಬಹುದು ಎಂಬುದು ಸತ್ಯವಾಗಿರಬಹುದು.

ಎಸ್ ಬಾಲನ್ : ಗುಂಡು ಹಾರಿಸಿದ ಆರೋಪಿಯ ಬಟ್ಟೆಯಲ್ಲಿ ಜಿಎಸ್ಆರ್ ಇರಲಿಲ್ಲ. ಹಾಗಾಗಿ ಸಂಗ್ರಹಿಸಿಲ್ಲ

ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆಗಳಲ್ಲಿ GSR ಇರುವುದಿಲ್ಲ ಎಂಬ ಕಾರಣಕ್ಕೆ ನಾನು ಸಂಗ್ರಹಿಸಲಿಲ್ಲ ಎನ್ನುವುದು ತಪ್ಪು.

ಎಸ್ ಬಾಲನ್ : ಮತ್ತೆ ಯಾಕೆ ಗುಂಡುಹಾರಿಸಿದ್ದಾನೆ ಎನ್ನಲಾದ ಆರೋಪಿಯ ಬಟ್ಟೆಯಿಂದ ಜಿಎಸ್ಆರ್ ಸಂಗ್ರಹಿಸಿಲ್ಲ ?

ತನಿಖಾಧಿಕಾರಿ : ಗುಂಡು ಹಾರಿಸಿದ ವ್ಯಕ್ತಿಯ ಬಟ್ಟೆಗಳಿಂದ GSR ಸಂಗ್ರಹಿಸಲಿಲ್ಲ. ಏಕೆಂದರೆ ಅದರ ಬಗ್ಗೆ ನನಗೆ ತಿಳಿದಿರಲಿಲ್ಲ.

ಎಸ್ ಬಾಲನ್ : ನೋಡಿ, ಚಾರ್ಜ್ ಶೀಟ್ ಪ್ರಕಾರ, ಭಯೋತ್ಪಾದಕರು ಅಂತಹೇಳುವ ಆರೋಪಿಗಳತ್ತಾ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಯಾರು ?

ತನಿಖಾಧಿಕಾರಿ : ಡಿಸಿಪಿ (ಕಾನೂನು) ಕೆ.ಟಿ. ಬಾಲಕೃಷ್ಣನ್ ಅವರು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದರು.

ಎಸ್ ಬಾಲನ್ : ಡಿಸಿಪಿ ಕೆ ಟಿ ಬಾಲಕೃಷ್ಣನ್ ಅವರ ಕೈ, ಬಟ್ಟೆಗಳಲ್ಲಾದರೂ ಗನ್ಪೌಡರ್, ರಾಸಾಯನಿಕ, ಗುಂಡಿನ ಸೂಕ್ಷ್ಮ ಅವಶೇಷ ಸಿಗುತ್ತದೆ. ಅದನ್ನಾದರೂ ಸಂಗ್ರಹಿಸಿದ್ದೀರಾ ?

ತನಿಖಾಧಿಕಾರಿ : ಇಲ್ಲ. ಡಿಸಿಪಿ ಬಾಲಕೃಷ್ಣನ್ ಅವರ ಕೈ ಹಾಗೂ ಬಟ್ಟೆಗಳಿಂದ GSR ಸಂಗ್ರಹಿಸಲಿಲ್ಲ.

ಎಸ್ ಬಾಲನ್ : ಯಾಕೆಂದರೆ, ಜಿಎಸ್ಆರ್ ಸಿಗುವುದಿಲ್ಲ ಅಂತ ನಿಮಗೆ ಗೊತ್ತಿತ್ತು.

ತನಿಖಾಧಿಕಾರಿ : GSR ದೊರೆಯುವುದಿಲ್ಲ ಎಂದು ತಿಳಿದಿದ್ದರಿಂದ ಸಂಗ್ರಹಿಸಲಿಲ್ಲ ಎನ್ನುವುದು ತಪ್ಪು.

ಎಸ್ ಬಾಲನ್ : ಮತ್ತೆ ಯಾಕೆ ಅವರಬಟ್ಟೆ, ಕೈಯಿಂದ ಜಿಎಸ್ಆರ್ ಸಂಗ್ರಹಿಸಲಿಲ್ಲ ಅಂತ ಕಾರಣ ಹೇಳಬಹುದಾ ?

ತನಿಖಾಧಿಕಾರಿ : ನಾನು ಯಾಕೆ ಡಿಸಿಪಿ ಅವರ ಕೈ ಹಾಗೂ ಬಟ್ಟೆಗಳಿಂದ GSR ಸಂಗ್ರಹಿಸಲಿಲ್ಲ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಎಸ್ ಬಾಲನ್: ಗುಂಡು ಹಾರಾಟದ ಜಾಗದಲ್ಲಿ ಸುಟ್ಟ ಅವಶೇಷ(burnt pieces) ಇರುತ್ತದೆ. ಅದನ್ನು ಸಂಗ್ರಹಿಸಿದ್ದೀರಿ.

ತನಿಖಾಧಿಕಾರಿ : ಇಲ್ಲ. ಗುಂಡು ಹಾರಾಟದ ಘಟನಾ ಸ್ಥಳದ ಸುತ್ತಮುತ್ತ ಸುಟ್ಟ ಅವಶೇಷಗಳನ್ನು (burnt pieces) ಸಂಗ್ರಹಿಸಲಿಲ್ಲ, ಏಕೆಂದರೆ ಅವು ದೊರೆಯಲಿಲ್ಲ.

ಎಸ್ ಬಾಲನ್ : ನೋಡಿ, ನೀವು ಭಯೋತ್ಪಾದಕರು ಎಂದು ಆರೋಪಿಸಿರುವ ಈ ಹುಡುಗರ ಕೈಯ್ಯಲ್ಲಿ ಎಕೆ-47 ಇತ್ತು. ಎಕೆ-47 ಸೇರಿದಂತೆ ಯಾವುದೇ ವಸ್ತು ಆರೋಪಿ ಕೈಯ್ಯಲ್ಲಿ ಇದ್ದರೆ ಅದರಫಿಂಗರ್ ಪ್ರಿಂಟ್ತೆಗೆದುಕೊಳ್ಳಬೇಕು ಎನ್ನುವುದು ತೀರಾ ಸಹಜವಾದ ಪೊಲೀಸ್ ತನಿಖೆ. ಅದಕ್ಕೇನು ವಿಶೇಷ ಜ್ಞಾನ ಬೇಡ.ನೀವು ಆರೋಪಿಗಳ ಕೈಯ್ಯಲ್ಲಿದ್ದ ಎಕೆ-47 ಮತ್ತು ಗನ್ನ ಫಿಂಗರ್ ಪ್ರಿಂಟ್ ತಗೊಂಡ್ರಾ ?

ತನಿಖಾಧಿಕಾರಿ : ಗನ್ ಹಾಗೂ AK-47 ನಿಂದ ಫಿಂಗರ್‌ಪ್ರಿಂಟ್‌ಗಳನ್ನು ಸಂಗ್ರಹಿಸಲಿಲ್ಲ.

ಎಸ್ ಬಾಲನ್ : ಆರೋಪಿಯ ಕೈಯ್ಯಲ್ಲಿ ಎಕೆ-47 ಇದ್ದಿದ್ದರೆ ಅವರ ಫಿಂಗರ್ ಫ್ರಿಂಟ್ ತಗೊಳ್ಳುತ್ತಿದ್ರಿ. ಉದ್ದೇಶಪೂರ್ವಕವಾಗಿ ಫಿಂಗರ್ ಪ್ರಿಂಟ್ ತೆಗೆದುಕೊಂಡಿಲ್ಲ.

ತನಿಖಾಧಿಕಾರಿ : ನಾನು ಉದ್ದೇಶಪೂರ್ವಕವಾಗಿ ಗನ್ ಮತ್ತು AK-47 ಮೇಲೆ ಫಿಂಗರ್‌ಪ್ರಿಂಟ್‌ಗಳನ್ನು ತೆಗೆದುಕೊಳ್ಳಲಿಲ್ಲ ಎನ್ನುವುದು ತಪ್ಪು.

ಎಸ್ ಬಾಲನ್ : ಎಕೆ-47 ಆರೋಪಿಗಳ ಕೈಯ್ಯಲ್ಲಿ ಇರಲಿಲ್ಲ. ಇದ್ದಿದ್ದರೆ ಯಾಕೆ ಫಿಂಗರ್ ಪ್ರಿಂಟ್ ಸಂಗ್ರಹಿಸಲಿಲ್ಲ ?

ತನಿಖಾಧಿಕಾರಿ : ಯಾಕೆ ಫಿಂಗರ್‌ಪ್ರಿಂಟ್‌ಗಳನ್ನು ಸಂಗ್ರಹಿಸಲಿಲ್ಲ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಎಸ್ ಬಾಲನ್ : ಒಬ್ಬ ಆರೋಪಿಯ ಕೈಯ್ಯಲ್ಲಿ ಎಕೆ -47 ಇದ್ದರೆ, ಆ ಎಕೆ-47 ಎಲ್ಲಿಂದ ಬಂತು ? ಅದರ ಮೂಲ ಯಾವುದು ? ಯಾರು ತಯಾರಕರು ಎಂಬುದು ತನಿಖೆ ಮಾಡುವುದು ಪೊಲೀಸರ ಸಹಜ ತನಿಖಾ ಪ್ರಕ್ರಿಯೆ. ನೀವು ಈ ನಿಟ್ಟಿನಲ್ಲಿ ತನಿಖೆ ಮಾಡಿದ್ರಾ ?

ತನಿಖಾಧಿಕಾರಿ : ಇಲ್ಲ. ಆರೋಪಿಯ ಕೈಯ್ಯಲ್ಲಿದ್ದ AK-47 ಹಾಗೂ ಗನ್‌ನ ತಯಾರಕರು ಮತ್ತು ಮೂಲದ ಬಗ್ಗೆ ನಾನು ತನಿಖೆ ನಡೆಸಿಲ್ಲ.

ಎಸ್ ಬಾಲನ್ : ಯಾಕೆಂದರೆ, ನೀವೇ ಘಟನೆಯನ್ನು ಸೃಷ್ಟಿಸಿ, ಆರೋಪಿ ಬಳಿ ಎಕೆ-47 ಇಟ್ಟು (planted) ಪ್ರಕರಣ ದಾಖಲಿಸಿದ್ದೀರಿ. ಹಾಗಾಗಿ ಎಕೆ-47 ಮೂಲದ ಬಗ್ಗೆ ತನಿಖೆ ನಡೆಸಲಿಲ್ಲ.

ತನಿಖಾಧಿಕಾರಿ : ಎಕೆ-47 (planted) ಇಟ್ಟಿದ್ದರಿಂದ ತನಿಖೆ ಮಾಡಲಿಲ್ಲ ಎನ್ನುವುದು ತಪ್ಪು.

ಎಸ್ ಬಾಲನ್ : AK-47 ಮತ್ತು ಗನ್‌ನಲ್ಲಿ ಬಳಸುವ ಕಾರ್ಟ್ರಿಡ್ಜ್‌ಗಳು ಹಾಗೂ ಗುಂಡುಗಳು ಆರ್ಡಿನನ್ಸ್ ಫ್ಯಾಕ್ಟರಿಗಳಲ್ಲಿ ತಯಾರಾಗುತ್ತವೆ.

ತನಿಖಾಧಿಕಾರಿ : ನಿಜ.

ಎಸ್ ಬಾಲನ್ : ಗನ್ ನ ಪ್ರತಿಯೊಂದು ಕಾರ್ಟ್ರಿಡ್ಜ್ ಮತ್ತು ಗುಂಡಿನ ಮೇಲೆ ತಯಾರಿಕಾ ಸಂಖ್ಯೆ ಇರುತ್ತದೆ.

ತನಿಖಾಧಿಕಾರಿ : ಸತ್ಯ. ಕಾರ್ಟ್ರಿಡ್ಜ್ ಮತ್ತು ಗುಂಡಿನ ಮೇಲೆ ತಯಾರಿಕಾ ಸಂಖ್ಯೆ ಇರುತ್ತದೆ.

ಎಸ್ ಬಾಲನ್: ಕಾರ್ಟ್ರಿಡ್ಜ್ ಮತ್ತು ಗುಂಡಿನ ಮೇಲೆ ತಯಾರಿಕಾ ಸಂಖ್ಯೆ, ಬ್ಯಾಚ್ ಆಧರಿಸಿ ಗುಂಡು ಎಲ್ಲಿ ತಯಾರಾಗಿದೆ ಎಂದು ಸುಲಭವಾಗಿ ಪತ್ತೆ ಹಚ್ಚಬಹುದು?

ತನಿಖಾಧಿಕಾರಿ : ಬ್ಯಾಚ್ ನಂಬರ್ ಆಧರಿಸಿ ಯಾವ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ ಎಂದು ಸುಲಭವಾಗಿ ಪತ್ತೆಹಚ್ಚಬಹುದು ಎಂಬುದು ಸತ್ಯ.

ಎಸ್ ಬಾಲನ್: ಎಕೆ 47 ಮತ್ತು ಗನ್ ನ ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಗುಂಡುಗಳು ಎಲ್ಲಿ ತಯಾರಾಗಿದೆ ಎಂದು ಸುಲಭವಾಗಿ ಪತ್ತೆಯಾಗಬಹುದಾದರೂ ನೀವು ಆ ಬಗ್ಗೆ ತನಿಖೆ ನಡೆಸಿಲ್ಲ

ತನಿಖಾಧಿಕಾರಿ : ಹೌದು. AK-47 ಹಾಗೂ ಗನ್‌ನಲ್ಲಿ ಪತ್ತೆಯಾದ ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಗುಂಡುಗಳು ಯಾವ ಕಾರ್ಖಾನೆಯಲ್ಲಿ ತಯಾರಾಗಿವೆ ಎಂಬುದರ ಬಗ್ಗೆ ತನಿಖೆ ನಡೆಸಿಲ್ಲ.

ಎಸ್ ಬಾಲನ್ : ಯಾವುದೇ ಆರೋಪಿಯಿಂದ ಸ್ಯಾಟಲೈಟ್ ಮೊಬೈಲ್ ರಿಕವರಿ ಮಾಡಿದ್ರೆ ಅದರ IMEI ಸಂಖ್ಯೆ ಸಂಗ್ರಹಿಸ್ತೀರಿ. ಆರೋಪಿ ಫಹಾದ್ ನಿಂದ ವಶಪಡಿಸಿಕೊಂಡ ಸ್ಯಾಟಲೈಟ್ ಮೊಬೈಲ್ ನ IMEI ಸಂಗ್ರಹಿಸಿದ್ದೀರಾ ?

ತನಿಖಾಧಿಕಾರಿ : ಆರೋಪಿತ ನಂ.1ರಿಂದ ವಶಪಡಿಸಿಕೊಂಡ ಸ್ಯಾಟಲೈಟ್ ಮೊಬೈಲ್‌ನ IMEI ಸಂಖ್ಯೆಯನ್ನು ಸಂಗ್ರಹಿಸಲಿಲ್ಲ.

ಎಸ್ ಬಾಲನ್ : ಹೋಗಲಿ. ಆರೋಪಿಯ ಮೊಬೈಲ್ SIM ಕಾರ್ಡ್‌ನ IMSI ಸಂಖ್ಯೆಯನ್ನು ಸಂಗ್ರಹಿಸಿದ್ದೀರಾ ?

ತನಿಖಾಧಿಕಾರಿ : ಇಲ್ಲ.

ಎಸ್ ಬಾಲನ್ : ಆರೋಪಿ ಬಳಿ ಇದ್ದ ಸ್ಯಾಟಲೈಟ್ ಫೋನ್ ಮತ್ತು SIM ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರೀಕ್ಷಿಸಿದ್ರಾ ?

ತನಿಖಾಧಿಕಾರಿ : ಇಲ್ಲ. ಪರೀಕ್ಷೆ ನಡೆಸಲಿಲ್ಲ.

ಎಸ್ ಬಾಲನ್ : ನೋಡಿ, ನೀವು ಫಹಾದ್ ಭಯೋತ್ಪಾಧಕ ಅಂತೀರಿ. ಅವನ ಬಳಿ ಎಕೆ -47 ಸಿಕ್ತು ಅಂತೀರಿ, ಆತ ಗುಂಡು ಹಾರಿಸಿದ ಅಂತೀರಿ. ಅವನ ಮೊಬೈಲ್ ಮೆಮೋರಿ ಡೇಟಾ ತೆಗೆದ್ರೆ ಇನ್ನಷ್ಟೂ ಮಾಹಿತಿ ಸಿಗುತ್ತೆ. ಅವನ ಮೊಬೈಲ್ ಡೇಟಾ ತೆಗೆದ್ರಾ ನೀವು ?

ತನಿಖಾಧಿಕಾರಿ : ಇಲ್ಲ. ಫೋನ್‌ನ ಒಳಗಿನ ಮೆಮೊರಿಯ ಡೇಟಾವನ್ನು ಸಂಗ್ರಹಿಸಲಿಲ್ಲ.

ಎಸ್ ಬಾಲನ್ : ಒಬ್ಬ ಸಾಮಾನ್ಯ ಅರೋಪಿಯನ್ನು ಬಂಧಿಸಿದಾಗ ಆತನ ಮೊಬೈಲ್ ಸಿಡಿಆರ್ ತೆಗೆದುಕೊಳ್ಳುತ್ತೀರಿ. ಭಯೋತ್ಪಾಧನೆಯ ಆರೋಪಿಯ ಸಿಡಿಆರ್ ತೆಗೆದ್ರಾ ?

ತನಿಖಾಧಿಕಾರಿ : ಕಾಲ್ ಡೀಟೈಲ್ ರೆಕಾರ್ಡ್ (CDR) ಪಡೆಯಲಿಲ್ಲ.

ಎಸ್ ಬಾಲನ್ : Nokia ಮೊಬೈಲ್ ಮತ್ತು ಅದರ ಎರಡು SIM ಕಾರ್ಡ್‌ಗಳ IMEI ಹಾಗೂ IMSI ಸಂಖ್ಯೆಗಳನ್ನು ಸಂಗ್ರಹಿಸಿದ್ರಾ ?

ತನಿಖಾಧಿಕಾರಿ : ಇಲ್ಲ.

ಎಸ್ ಬಾಲನ್ : Nokia ಫೋನ್ ಹಾಗೂ SIM ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಿದ್ದೀರಾ ?

ತನಿಖಾಧಿಕಾರಿ : ಇಲ್ಲ.

ಎಸ್ ಬಾಲನ್ : ಆರೋಪಿ ಮನೆಯಿಂದ 3 ಕುರಾನ್ ಪುಸ್ತಕ ವಶಕ್ಕೆ ತೆಗೆದುಕೊಂಡಿದ್ದೀರಿ ಅಂತ ಚಾರ್ಜ್ಶೀಟ್ ನಲ್ಲಿ ಹಾಕಿದ್ದೀರಿ. ಅದಕ್ಕೂ ಘಟನೆಗೂ ಏನು ಸಂಬಂಧ ?

ತನಿಖಾಧಿಕಾರಿ : ಆರೋಪಿತನ ಮನೆಯಿಂದ ವಶಪಡಿಸಿಕೊಂಡ 3 ಕುರಾನ್ ಪುಸ್ತಕಗಳು, Osama Bin Laden I Know ಹಾಗೂ Guerrillas ಪುಸ್ತಕಗಳ ಲೇಖಕರು ಯಾರು ಮತ್ತು ಅವುಗಳಿಗೆ ಘಟನೆಯೊಂದಿಗೆ ಏನು ಸಂಬಂಧ ಎಂಬುದರ ಬಗ್ಗೆ ನಾನು ತನಿಖೆ ನಡೆಸಿಲ್ಲ.

ಎಸ್ ಬಾಲನ್ : ಆರೋಪಿ ಫಹಾದ್ ಅಲ್ ಬದರ್ ಸಂಘಟನೆಗೆ ಸೇರಿದವನು ಎನ್ನುತ್ತೀರಿ. ಇದರ ಬಗ್ಗೆ ಏನು ಮಾಹಿತಿ ಇದೆ ? ಅದರ ಸ್ಥಾಪಕ ಯಾರು ? ನಾಯಕ ಯಾರು ?

ತನಿಖಾಧಿಕಾರಿ : ‘ಅಲ್-ಬದರ್’ ಸಂಘಟನೆ ಭಾರತದಲ್ಲಿ ನಿಷೇಧಿತ ಸಂಘಟನೆ ಎಂಬ ದಾಖಲೆಗಳನ್ನು ಮಾತ್ರ ಸಂಗ್ರಹಿಸಿದ್ದೇನೆ. ಆದರೆ ಅದರ ಸ್ಥಾಪಕ ಯಾರು, ನಾಯಕ ಯಾರು ಮತ್ತು ಮುಖ್ಯ ಕಚೇರಿ ಎಲ್ಲಿದೆ ಎಂಬುದು ನನಗೆ ತಿಳಿದಿಲ್ಲ.

ಎಸ್ ಬಾಲನ್ : ಆರೋಪಿ ‘ಅಲ್-ಬದರ್’ ಸಂಘಟನೆಗೆ ಸೇರಿದವನು ಎಂದು ಹೇಗೆ ತನಿಖೆ ನಡೆಸಿದ್ರಿ ?

ತನಿಖಾಧಿಕಾರಿ : ಆರೋಪಿಯು ‘ಅಲ್-ಬದರ್’ ಸಂಘಟನೆಯ ಸದಸ್ಯನಾಗಿದ್ದಾನೆ ಎಂಬ ಬಗ್ಗೆ ನಾನು ಯಾವುದೇ ತನಿಖೆ ನಡೆಸಿಲ್ಲ. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.

ಎಸ್ ಬಾಲನ್ : ಆರೋಪಿ ‘ಅಲ್-ಬದರ್’ ಸಂಘಟನೆಯ ಲೆಟರ್ ಹೆಡ್ ಹೊಂದಿದ್ದ ಎಂದು ಚಾರ್ಜ್ಶೀಟ್ ನಲ್ಲಿ ಹೇಳಿದ್ರಿ. ಅದು ಎಲ್ಲಿ ಮುದ್ರಿಸಲಾಗಿತ್ತು ?

ತನಿಖಾಧಿಕಾರಿ : ಅಲ್-ಬದರ್ ಸಂಘಟನೆಯ ಲೆಟರ್‌ಹೆಡ್‌ಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಿಲ್ಲ.

ಎಸ್ ಬಾಲನ್ : AK-47, 9 ಮಿ.ಮೀ. ಪಿಸ್ತೂಲ್, AK-47 ರೈಫಲ್‌ನ 90 ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು 9 ಮಿ.ಮೀ. ಪಿಸ್ತೂಲ್‌ನ 7 ಜೀವಂತ ಕಾರ್ಟ್ರಿಡ್ಜ್‌ಗಳು ಮೈಸೂರಿಗೆ ಹೇಗೆ ಬಂದವು ಮತ್ತು ಅವುಗಳ ಮೂಲ ಏನು ಎಂಬ ಬಗ್ಗೆ ತನಿಖೆ ನಡೆಸಿಲ್ಲ.

ತನಿಖಾಧಿಕಾರಿ : ಹೌದು. ತನಿಖೆ ನಡೆಸಿಲ್ಲ.

ಎಸ್ ಬಾಲನ್ : ಆರೋಪಿಯಿಂದ ವಶಕ್ಕೆ ತೆಗೆದುಕೊಂಡ ಲ್ಯಾಪ್‌ಟಾಪ್ ಚಾರ್ಜರ್, ಕಾರ್ಡ್ ರೀಡರ್, DVD ರೀಡರ್, ಡಿಸ್ಕ್ ಡ್ರೈವ್ ಮಾಡ್ಯುಲರ್, ಕೀಪ್ಯಾಡ್, ಮೌಸ್, ವೆಬ್ ಕ್ಯಾಮೆರಾ, ಪವರ್ ಸಪ್ಲೈ ಕಾರ್ಡ್, ರಿಲಯನ್ಸ್ ವೈರ್‌ಲೆಸ್ ಮಾಡ್ಯೂಲ್, CD ಮತ್ತು ಹೆಡ್‌ಫೋನ್‌ಗಳು ಈ ಪ್ರಕರಣಕ್ಕೆ ಹೇಗೆ ಸಂಬಂಧಪಟ್ಟಿವೆ ಎಂಬ ಬಗ್ಗೆ ತನಿಖೆ ನಡೆಸಿಲ್ಲ. ನಡೆಸಿದ್ರೆ ತೋರಿಸಿ

ತನಿಖಾಧಿಕಾರಿ : ಹೌದು. ಈ ಬಗ್ಗೆ ತನಿಖೆ ನಡೆಸಿಲ್ಲ

ಎಸ್ ಬಾಲನ್ : ಭಯೋತ್ಪಾನೆ ಅಂದರೆ ಅಲ್ಲಿ ಸಂಚು (Conspiracy) ಇರುತ್ತದೆ. ಈ Conspiracyಯ ಸ್ಥಳದ ಮಹಜರು ನಡೆಸಿದ್ದೀರಾ ?

ತನಿಖಾಧಿಕಾರಿ : ಆರೋಪಿ ನಂ.1 ಮತ್ತು ಇತರರು ನಡೆಸಿದ ಸಂಚು (Conspiracy) ನಡೆದ ಸ್ಥಳದ ಬಗ್ಗೆ ಯಾವುದೇ ಮಹಜರು ರಚಿಸಿಲ್ಲ.

ಎಸ್ ಬಾಲನ್ : ಈ ಹಿಂದೆ ಆರೋಪಿ ವಿರುದ್ಧ ಭಯೋತ್ಪಾದನೆಯ ಕೇಸುಗಳು ಇದ್ದುವಾ ?

ತನಿಖಾಧಿಕಾರಿ : ಮೈಸೂರಿನಲ್ಲಿ IPC 121, 121A ಮತ್ತು 122ರ ಅಡಿಯಲ್ಲಿ ಆರೋಪಿ ನಂ.1 ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ.

ಎಸ್ ಬಾಲನ್ : ಆರೋಪಿ ನಿಷೇದಿತ ಭಯೋತ್ಪಾಧನಾ ಸಂಘಟನೆಯಲ್ಲಿ ಇದ್ದ, ಅದಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಎಂದು ಚಾರ್ಜ್ಶೀಟ್ ನಲ್ಲಿ ಹೇಳಿದ್ದೀರಿ. ಈ ಬಗ್ಗೆ ತನಿಖೆಯ ಡಿಟೇಲ್ಸ್ ಅನ್ನು ಚಾರ್ಜ್ಶೀಟ್ ನಲ್ಲಿ ತೋರಿಸಿ.

ತನಿಖಾಧಿಕಾರಿ : ಆರೋಪಿ ನಂ.1 ಯಾವುದೇ ನಿಷೇಧಿತ ಅಥವಾ ಇತರ ಸಂಘಟನೆಗಳ ಸಭೆಗಳಲ್ಲಿ ಭಾಗವಹಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಿಲ್ಲ. ಮೈಸೂರಿನಲ್ಲಿ ಅಥವಾ ಬೇರೆಡೆ ಆರೋಪಿ ನಂ.1 ಸಾರ್ವಜನಿಕರಿಂದ ಚಂದಾ ಸಂಗ್ರಹಿಸಿದ್ದಾನೆ ಎಂಬ ಆರೋಪಗಳಿರಲಿಲ್ಲ.

(ಇದು ನ್ಯಾಯಾಲಯದ ಕ್ರಾಸ್ ಎಕ್ಸಾಮಿನೇಷನ್ ದಾಖಲೆಗಳನ್ನು ಆಧರಿಸಿದ ಲೇಖನ. ಪೂರ್ತಿ ಕ್ರಾಸ್ ಎಕ್ಸಾಮಿನೇಶನ್ ಅಂಶಗಳು ಇದರಲ್ಲಿ ಇಲ್ಲ. ಮುಖ್ಯವಾದ ಭಾಗವನ್ನು ಮಾತ್ರ ಆಯ್ದುಕೊಂಡು ಮಾಹಿತಿಗಾಗಿ ನೀಡಲಾಗಿದೆ. ಇದರ ಸರಣಿ ಮುಂದುವರೆಯುತ್ತದೆ. ಆಸಕ್ತರು, ಕಾನೂನು ವಿದ್ಯಾರ್ಥಿಗಳು ಗಮನಿಸಬಹುದು – ನವೀನ್ ಸೂರಿಂಜೆ)

You cannot copy content of this page

Exit mobile version