ಬೆಂಗಳೂರು: ಬಹುಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ. ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ನಲಪಾಡ್ ಅವರ ಹೆಸರನ್ನೂ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪೂರ್ಣಗೊಳಿಸಿ, ಪ್ರಮುಖ ಆರೋಪಿ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಮೊಹಮ್ಮದ್ ನಲಪಾಡ್ ಸೇರಿದಂತೆ ಇತರರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ನಲಪಾಡ್ ಅವರಿಗೆ ಕಾನೂನು ಸಂಕಷ್ಟ ಹೆಚ್ಚುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ದೋಷಾರೋಪ ಪಟ್ಟಿಯಲ್ಲಿರುವ ಮಾಹಿತಿಯ ಪ್ರಕಾರ, ಬಿಟ್‌ಕಾಯಿನ್ ನಗದೀಕರಣ ಪ್ರಕ್ರಿಯೆಯಲ್ಲಿ ನಲಪಾಡ್ ಅವರ ಸಂಪರ್ಕವನ್ನು ಶ್ರೀಕಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ನಲಪಾಡ್ ತಮ್ಮ ಸ್ನೇಹಿತರ ಮೂಲಕ ಕ್ರಿಪ್ಟೋಕರೆನ್ಸಿಯನ್ನು ನಗದಾಗಿ ಪರಿವರ್ತಿಸಲು ನೆರವಾಗಿದ್ದಾರೆ ಎಂಬ ಆರೋಪವನ್ನು ತನಿಖಾ ತಂಡ ಉಲ್ಲೇಖಿಸಿದೆ.
ಇದಲ್ಲದೆ, ಮುಂಬೈ ಮೂಲದ ವ್ಯಕ್ತಿಯೊಬ್ಬರ ಮೂಲಕ ಹವಾಲಾ ಮಾರ್ಗದಲ್ಲಿ ಹಣ ನಗದೀಕರಣ ನಡೆದಿದ್ದು, ಅದರಿಂದ ಬಂದ ಕಮಿಷನ್ ಮೊತ್ತದಲ್ಲಿ ನಲಪಾಡ್ ಅವರಿಗೂ ಪಾಲು ಸಂದಾಯವಾಗಿರುವ ಕುರಿತು ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಇದೇ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ) ಕೂಡ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಇಡಿ ಅಧಿಕಾರಿಗಳು ನಲಪಾಡ್ ಸೇರಿದಂತೆ ಹಲವು ಆರೋಪಿಗಳ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕಿ, ಸುಖೇಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲರನ್ನು ಬಂಧಿಸಿ ವಿಚಾರಣೆಯನ್ನೂ ನಡೆಸಲಾಗಿದೆ.
ಈ ನಡುವೆ, ಮೊಹಮ್ಮದ್ ನಲಪಾಡ್ ಅವರಿಗೆ ಈಗಾಗಲೇ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಇಡಿ, ಅವರು ವಿವಿಧ ಕಾರಣಗಳನ್ನು ನೀಡಿ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮೂರನೇ ಬಾರಿ ನೋಟಿಸ್ ಜಾರಿಗೊಳಿಸಲು ಇಡಿ ಸಿದ್ಧತೆ ನಡೆಸಿದ್ದು, ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಕೆಯ ಬೆಳವಣಿಗೆಯೊಂದಿಗೆ ನಲಪಾಡ್ ಮೇಲಿನ ತನಿಖಾ ಒತ್ತಡ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
