ನವದೆಹಲಿ: ಉತ್ತರಾಖಂಡದ ರಿಷಿಕೇಶ್‌ದಲ್ಲಿ ಬಿಜೆಪಿಯ ಹಿರಿಯ ಮುಖಂಡರೊಬ್ಬರ ಪುತ್ರನಿಂದ 19 ವರ್ಷದ ಯುವತಿಯೊಬ್ಬಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನಾಕಾರರು ಬಿಜೆಪಿ ಶಾಸಕ ರೇಣು ಬಿಶ್ತ್ ಅವರ ಕಾರನ್ನು ಧ್ವಂಸಗೊಳಿಸಿದ್ದಾರೆ. ಪುಲ್ಕಿತ್ ಆರ್ಯ ಅವರ ಮಾಲಿಕತ್ವದ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಆದರೆ ಅವರ ಮೃತ ದೇಹವು ಇಂದು ಬೆಳಗ್ಗೆ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಹಿನ್ನಲೆ ಆರೋಪಿ ಪುಲ್ಕಿತ್ ಆರ್ಯ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ್ದು, ಹತ್ಯ ಮಾಡಿದ ಸ್ಥಳವಾದ ಉತ್ತರಾಖಂಡದ ರೆಸಾರ್ಟ್‌ನ ಕೆಲವು ಭಾಗಗಳನ್ನು ಆಡಳಿತವು ಕೆಡವಿ ಹಾಕಿದೆ. ಈ ಹತ್ಯೆಯ ವಿಚಾರವಾಗಿ ಕೋಪಗೊಂಡ ಸ್ಥಳೀಯರು, ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಿದ್ದು, ನಂತರ ಸ್ಥಳೀಯ ಬಿಜೆಪಿ ಶಾಸಕ ರೇಣು ಬಿಷ್ತ್ ಅವರ ಕಾರನ್ನು ಧ್ವಂಸಗೊಳಿಸಿದ್ದಾರೆ. ಈ ಹತ್ಯೆಯ ಆರೋಪಿ ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗ, ಪುಲ್ಕಿತ್ ಆರ್ಯ ಸೇರಿದಂತೆ ಮೂವರನ್ನು ಉತ್ತರಾಖಂಡ್ ಪೊಲೀಸರು ಬಂದಿಸಿದ್ದು, ಆರೋಪಿ ಪುಲ್ಕಿತ್ ಆರ್ಯ ಬಂಧನದ ನಂತರ ಬಿಜೆಪಿ ಮುಖಂಡ ವಿನೋದ್ ಆರ್ಯ ಮತ್ತು ಪಕ್ಷದ ಸದಸ್ಯರಾಗಿದ್ದ ಆರೋಪಿಯ ಸಹೋದರ ಅಂಕಿತ್ ಆರ್ಯ ಅವರನ್ನು ಪುಷ್ಕರ್ ಸಿಂಗ್ ಧಾಮಿ ಸರ್ಕಾರ ಪಕ್ಷದಿಂದ ಹೊರ ಹಾಕಿದೆ.
