Home ಅಂಕಣ ಕೋಮಿಗಳು ದ್ವೇಷಿಸುವ “ಕ್ರೈಸ್ತ ಸಂಸ್ಥೆ”ಯಲ್ಲಿ ಮೌಲ್ಯಗಳ ಕಲಿಕೆ

ಕೋಮಿಗಳು ದ್ವೇಷಿಸುವ “ಕ್ರೈಸ್ತ ಸಂಸ್ಥೆ”ಯಲ್ಲಿ ಮೌಲ್ಯಗಳ ಕಲಿಕೆ

0

ಈ ಬರಹದ ಶೀರ್ಷಿಕೆಯಲ್ಲಿ “ಕ್ರೈಸ್ತ ಸಂಸ್ಥೆ” ಎಂಬುದನ್ನು ಉದ್ಧರಣ ಚಿಹ್ನೆಯಲ್ಲಿ, ಅಂದರೆ, ಕೋಟ್ ಮಾರ್ಕ್‌ನಲ್ಲಿ ಬರೆದಿರುವುದು ಉದ್ದೇಶಪೂರ್ವಕವಾಗಿದೆ. ಇದು ಕ್ರೈಸ್ತರು ಸ್ಥಾಪಿಸಿದ, ಅವರ ಆಡಳಿತವಿರುವ ವಿದ್ಯಾಸಂಸ್ಥೆಯಾಗಿದ್ದರೂ, ಎಂದಿಗೂ ಯಾವುದೇ ಕ್ರೈಸ್ತೇತರರಿಗೆ ಹಾಗನಿಸುವಂತೆ ಯಾರೂ ನಡೆದುಕೊಂಡಿಲ್ಲ ಎಂಬುದೇ ಇದಕ್ಕೆ ಕಾರಣ. ಹಿಂದೂ “ಮೇಲ್ಜಾತಿ” ಶಾಲೆಗಳಲ್ಲಿ ಕಲಿತ ಅನುಭವದಿಂದ ಇದನ್ನು ಹೇಳುತ್ತಿದ್ದೇನೆ.

ಜೊತೆಗೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತೆ, ಕಲಿಸುತ್ತಿದ್ದೇನೆ ಎಂದು ಪೂರ್ತಿ ಸುಳ್ಳು, ಅರೆಬರೆ ಸತ್ಯ ಹೇಳುವ ಹೇಳುವ *ಎಂಟೈರ್ ಪೊಲಿಟಿಕಲ್ ಸಾಯನ್ಸ್” ಮೋದಿಯ ಶಿಷ್ಯನಾದ ಡಾ. ಅರುಣ ಎಂಬಾತ ದ್ವೇಷ ಭಾಷಣ ಮಾಡಿ ಕೇಸು ಹಾಕಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬರಹ ಓದಬೇಕೆಂದು ವಿನಂತಿ. ಒಟ್ಟಿನಲ್ಲಿ ಈತ ಸಮಾಜವನ್ನು”ಅವರು”, “ನಾವು” ಎಂದು ಕೋಮು ನೆಲೆಯಲ್ಲಿ ವಿಭಜಿಸುತ್ತಾನೆ. “ಅವರ” ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಬೇಡಿ; “ನಮ್ಮ” ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿ ಎನ್ನುವ ಈ ದ್ವೇಷಪ್ರೇಮಿ ಬಾಲಕ- “ಅವರ” ಆಸ್ಪತ್ರೆಗೆ ಸೇರಿಸಬೇಡಿ, “ನಮ್ಮ” ಆಸ್ಪತ್ರೆಗೆ ಸೇರಿಸಿ ಎಂದು ಹೇಳಿಲ್ಲ ಸದ್ಯ! ಈ ಶೂದ್ರ – “ನಮ್ಮವರು” ಎನ್ನುತ್ತಲೇ ಪ್ರತ್ಯೇಕಿಸುವ, ಅಸ್ಪೃಶ್ಯತೆಯ ವಕ್ತಾರ ಬ್ರಾಹ್ಮಣ್ಯದ ಚಾಕರಿ ಮಾಡುತ್ತಲೇ ಕೋಮು ನೆಲೆಯಲ್ಲಿ ಅಸ್ಪೃಶ್ಯತೆ ತರಲು ಬಯಸುತ್ತಿದ್ದಾನೆ.

ಬಾಲ್ಯದಲ್ಲಿ ಶಾಲೆ, ಕಾಲೇಜುಗಳಲ್ಲಿ ನನ್ನ ಕ್ರೈಸ್ತ ಗೆಳೆಯರ ಒಡನಾಟದ ಬಗ್ಗೆ ಹಿಂದೆ ಬರೆದಿದ್ದೆ. ಆದರೆ, ನನಗೆ ಅವರ ಜೀವನದ ಅತ್ಯಂತ ಹತ್ತಿರದ ಪರಿಚಯವಾದುದು ನಾನು ಇದೀಗ ಯೌವನಕ್ಕೆ ಕಾಲಿಡುತ್ತಿದ್ದೇನೆ ಎನ್ನುತ್ತಿರುವಾಗಲೇ ಮುಂಬಯಿಗೆ ಹೋದ ಸಂದರ್ಭದಲ್ಲಿ. ಅದಕ್ಕಿಂತ ಮೊದಲು ಒಂದು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಒಂದು ವರ್ಷದ ಬಗ್ಗೆ ಇಲ್ಲಿ ಬರೆಯಬೇಕು. ಆರನೇ ತರಗತಿವರೆಗೆ ಸದಾ ಎರಡನೇ ಸ್ಥಾನ, ಮತ್ತೆ ಮೊದಲನೇ ಸ್ಥಾನ, ನಂತರ ಕನಿಷ್ಟ ಮೊದಲನೇ ದರ್ಜೆಯಲ್ಲಿಯಾದರೂ ಪಾಸಾಗುತ್ತಿದ್ದ ನಾನು ಎರಡನೇ ಪಿಯುಸಿಯಲ್ಲಿ ಮೊದಲ ಬಾರಿಗೆ ಫೇಲ್ ಆದದ್ದು ನನ್ನ ಮನೆಯವರಿಗೆ ಆಘಾತ ತಂದಿತ್ತು. ನಿನ್ನ ಆಸಕ್ತಿಗೆ ಆರ್ಟ್ಸ್ ಒಳ್ಳೆಯದೆಂಬ ತಂದೆಯವರ ಸಲಹೆಯನ್ನು ಮೀರಿ, ವಿಜ್ಞಾನ ವಿಷಯ ತೆಗೆದುಕೊಂಡಿದ್ದ ನನಗೆ ಅದು, ಅದರಲ್ಲೂ ಮುಖ್ಯವಾಗಿ ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಿಯವಾಗಿತ್ತು. ಅಂಕಗಣಿತದಲ್ಲೂ ಸಾಕಷ್ಟು ಹುಷಾರಾಗಿದ್ದ ನನಗೆ ಮುಂದೆ ಎದುರಾದ ಬೀಜಗಣಿತ, ಟ್ರಿಗ್ನಾಮೆಟ್ರಿ, ಕ್ಯಾಲ್ಕ್ಯುಲಸ್ ಇತ್ಯಾದಿ ತಲೆತಿರುಗಿಸಿಬಿಟ್ಟಿತು. ಉಳಿದ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳಿದ್ದರೂ, ಗಣಿತದಲ್ಲಿ 13 ಅಂಕ ಪಡೆದು ಫೇಲಾದೆ.

ಮನೆಯ ಪ್ರೀತಿಯ ಕಿರಿಕಿರಿ ಚುಚ್ಚುತ್ತಿದ್ದುದರಿಂದ ಮಂಗಳೂರಿನ ಸೈಂಟ್ ಎಲೋಸಿಯಸ್ ಸಂಜೆ ಕಾಲೇಜಿನ ಆರ್ಟ್ಸ್ ವಿಭಾಗ ಸೇರಿ ತರಗತಿಗೆ ಮೊದಲನೆಯವನಾಗಿ ಪಿಯುಸಿ ಮುಗಿಸಿದೆ. ಈ ಎಲೋಶಿಯಸ್ ಕಾಲೇಜಿನಲ್ಲಿ ಕ್ರೈಸ್ತರ ಸಂಖ್ಯೆ ತುಲನಾತ್ಮಕವಾಗಿ ಹೆಚ್ಚು ಇದ್ದುದರಿಂದ ಅವರನ್ನು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು. ಅದಕ್ಕಿಂತಲೂ ಹೆಚ್ಚಾಗಿ, ಈಗ ಸಂಘಪರಿವಾರವು ಕರಾವಳಿಯಲ್ಲಿ ಕ್ರೈಸ್ತರ ವಿರುದ್ಧ ದ್ವೇಷವನ್ನು ಹರಡುತ್ತಿರುವ ಸಂದರ್ಭದಲ್ಲಿ, ಅವರು ಕರಾವಳಿಗಾಗಿ ಏನು ಮಾಡಿದ್ದಾರೆ ಎನ್ನುತ್ತಾ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮುಖ್ಯವಾಗಿ ಆರ್ಥಿಕವಾಗಿ ಅವರ ಯಶಸ್ಸಿಗೆ ಅಸೂಯೆ ಪಡುತ್ತಿರುವವರಿಗೆ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ದಲಿತರ ಲೆಕ್ಕವಿಲ್ಲದಷ್ಟು ಮಕ್ಕಳಿಗೆ ಶಿಕ್ಷಣ ಒದಗಿಸಿ, ಅವರನ್ನು ಜೀವನದಲ್ಲಿ ಮುನ್ನೆಲೆಗೆ ತಂದ ನೂರಾರು ಕ್ರೈಸ್ತ ಸಂಸ್ಥೆಗಳಲ್ಲಿ ಅಲೋಶಿಯಸ್ ಕಾಲೇಜನ್ನು ಮೊದಲ ಸಾಲಿನಲ್ಲಿ ಹೆಸರಿಸಬೇಕು. ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಕ್ರೈಸ್ತರು ಸ್ಥಾಪಿಸಿದ ಸಂಸ್ಥೆಗಳ ಮಹಾನ್ ಕೊಡುಗೆಗಳ ಬಗ್ಗೆಯೇ ಮುಂದೆ ಬರೆಯಬೇಕು.

ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಲೀನಾ ಮಥಾಯಸ್ ಎಂಬವರು ನನ್ನ ನೆನಪಿನಲ್ಲಿ ಬಹಳವಾಗಿ ಉಳಿದಿದ್ದಾರೆ. ಅದಕ್ಕೆ ಕಾರಣಗಳಿವೆ. ನಾನು ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ಕೇವಲ ಗಣಿತ ಕಾರಣವಲ್ಲ. ವಿದ್ಯಾರ್ಥಿಗಳು ಒಂದು ವಿಷಯ ತೆಗೆದುಕೊಂಡಾಗ ಕಲಿಯುವ ವಿಷಯಗಳ ಸೀಮಿತತೆ ನನಗೆ ಇಷ್ಟವಿರಲಿಲ್ಲ. ಕಾಲೇಜಿಗೆ ಹೋಗಿ, ಇಡೀ ವರ್ಷ ನಾಲ್ಕಾರು ವಿಷಯಗಳ ಹತ್ತಾರು ಪಠ್ಯಗಳನ್ನೇ ಓದಿ ಪರೀಕ್ಷೆ ಬರೆಯುವುದೇಕೆ ಎಂಬುದು ನನ್ನ ವಾದವಾಗಿತ್ತು. ಹೊರಗೆ, ಲೈಬ್ರರಿಯಲ್ಲಿ ಹಲವಾರು ವಿಷಯಗಳ ಸಾವಿರಾರು ಪುಸ್ತಕಗಳು ಇರುವಾಗ, ನಾವೇಕೆ ನಮ್ಮ ಕಲಿಕೆಯನ್ನು ಸೀಮಿತಗೊಳಿಸಬೇಕು? ಕಾಲೇಜಿಗಾದರೂ ಯಾಕೆ ಹೋಗಬೇಕು? ನಮ್ಮ ಜ್ಞಾನದ ಹರವು ಅಂದರೆ, ಅಗಲದಷ್ಟೇ ಆಳವೂ ಮುಖ್ಯ ಎಂದು ನನಗಾಗ ಹೊಳೆದಿರಲಿಲ್ಲ. ಅದನ್ನು ತಿಳಿಸಿ, ಸಾಂಸ್ಥಿಕ ಶಿಕ್ಷಣದ ಮಹತ್ವವನ್ನು ಸಾಕಷ್ಟು ಮನವರಿಕೆ ಮಾಡಿದವರೇ ಲೀನಾ ಮಥಾಯಸ್.

ಅದು ನಡೆದದ್ದು ಹೀಗೆ: ನನ್ನ ತಾಯಿ ನನ್ನ ಮನವೊಲಿಸಿ ಒಂದು ದಿನ ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿಗೆ ಕರೆದುಕೊಂಡುಹೋಗಿ ಪ್ರಿನ್ಸಿಪಾಲರ ಚೇಂಬರಿನಲ್ಲಿ ಲೀನಾ ಮಥಾಯಸ್ ಅವರ ಮುಂದೆ ಕೂರಿಸಿದರು. ನನ್ನ ಬಗ್ಗೆ ದೂರನ್ನೂ, ಮೆಚ್ಚುಗೆಯನ್ನೂ, ನಾನು ಫೇಲಾದುದರ ಬಗ್ಗೆ, ನಾನು ಕಾಲೇಜಿಗೆ ಹೋಗದಿರುವ ಬಗ್ಗೆ ನನ್ನ ನಿರ್ಧಾರದ ಕುರಿತು ತನ್ನ ಗೋಳನ್ನೂ ನನ್ನ ತಾಯಿ ಹರಿಯಬಿಟ್ಟರು. ಇದನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡ ಪ್ರಿನ್ಸಿಪಾಲರು, ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಸ್ವಲ್ಪ ಅಚ್ಚರಿಗೆ ಗುರಿಯಾದಂತಿತ್ತು. ಗಣಿತ ಬಿಟ್ಟು ಉಳಿದೆಲ್ಲವೂ ಅತ್ಯುತ್ತಮವೇ ಆಗಿತ್ತು. ಇಷ್ಟು ಮಾರ್ಕುಬಂದಿದೆ. ಇಷ್ಟು ಪ್ರತಿಭೆ ಇಟ್ಟುಕೊಂಡು ಜೀವನವನ್ನೇಕೆ ಹಾಳುಮಾಡುತ್ತೀಯಾ ಎಂದು ಅರ್ಧಗಂಟೆ ಔಪಚಾರಿಕ ಶಿಕ್ಷಣದ ಅಗತ್ಯ ಇತ್ಯಾದಿಗಳ ಕುರಿತು ಪಾಠವನ್ನೇ ಮಾಡಿಬಿಟ್ಟರು. ನನ್ನನ್ನು ಬಾಹ್ಯ ಅಂದರೆ, ಅನೌಪಚಾರಿಕ ವಿದ್ಯಾರ್ಥಿಯಾಗಿ ನೇರವಾಗಿ ಎರಡನೇ ಪಿಯುಸಿಗೆ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ ಇರುವ ತರಗತಿಗೆ ಸೇರಿಸಿಕೊಂಡರು. ಈ ರೀತಿಯ “ಎಕ್ಸ್‌ಟರ್ನಲ್” ವಿದ್ಯಾರ್ಥಿ ನಾನೊಬ್ಬನೇ ಆಗಿದ್ದೆ. ಅವರ ಬುದ್ಧಿವಾದದಿಂದ ಚೆನ್ನಾಗಿ ಕಲಿಯಬೇಕೆಂದು ಮನಸ್ಸು ಬಂದು ಕ್ಲಾಸಿಗೆ ಹೋಗಿ ಮೊದಲ ಸಾಲಿನಲ್ಲಿ ಮೊದಲ ಜಾಗದಲ್ಲೇ ಕುಳಿತುಕೊಂಡೆ. ಅದಾಗಲೇ ನಾನು ಹಿಂದೆ ವಿಜ್ಞಾನದಲ್ಲಿ ಇದ್ದರೂ, ಮುಂದೆ ಕಲಿಯಬೇಕಿರುವ ವಿಷಯಗಳನ್ನು ಕುತೂಹಲದಿಂದ ಮೊದಲೇ ಓದಿ ಇದ್ದುದರಿಂದ ಮತ್ತು ಎಡಪಂಥೀಯ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಇದ್ದುದರಿಂದ ಪ್ರಾಧ್ಯಾಪಕರ ಜೊತೆಗೆ “ಭಯಂಕರ” ಚರ್ಚೆಗೆ ಇಳಿಯುತ್ತಿದ್ದೆ. ಇದು ಮತ್ತು ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಕಳೆದ ಒಂದು ವರ್ಷವೇ ಮುಂದಿನ ಕಲಿಕೆಗೆ ಮತ್ತು ಪತ್ರಕರ್ತನಾಗಲು ಪೀಠಿಕೆಗೆ ಕಾರಣವಾಯಿತು ಎಂಬುದನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ.

ಯಾಕೆಂದರೆ, ಇವತ್ತು ಬೇರೆ ಜಾತಿ, ಧರ್ಮಗಳ ಮಕ್ಕಳು ವಿದ್ಯೆ ಕಲಿತು “ಇತರರು” ತಮ್ಮನ್ನು ಮೀರಿಸಿದರೆ ಸಹಿಸಲಾಗದ, ಅದಕ್ಕೆ ಧಾರ್ಮಿಕ ನೆಪಗಳ ಮೂಲಕ ತಡೆಯೊಡ್ಡುವ, ಬೇರೆ ಧರ್ಮಗಳ ಮಕ್ಕಳು ಸಹಿತ ಯಾರು ಸತ್ತರೂ, ಕೊಲೆಯಾದರೂ, ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಸಿಂಬಲ್ ಒತ್ತುವ, ಸಂಭ್ರಮಿಸುವ ಕಾಲದಲ್ಲಿ ನನಗೆ ಬುದ್ಧಿ ಹೇಳಿ ಕಲಿಯುವಂತೆ ಪ್ರೇರೇಪಿಸಿದ ಆ ತಾಯಿಯರನ್ನು ನೆನಪಿಸುತ್ತೇನೆ.

ಕೆಲವೇ ದಿನಗಳಲ್ಲಿ ಇದೇ ಲೀನಾ ಮಥಾಯಸ್ ಅವರ ಜೊತೆ ತರಗತಿಯಲ್ಲಿಯೇ ನನ್ನ ಮುಖಾಮುಖಿ ಚರ್ಚೆಯಾಯಿತು. ಅವರು ಒಂದು ನಿಯಮ ತಂದರು. ಅದರಂತೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ಅವರ ಹೆಸರಿಗೆ ಅನುಗುಣವಾಗಿ ಅಂದರೆ, ಆಲ್ಫಾಬೆಟಿಕ್ ಆರ್ಡರ್‌ನಲ್ಲಿ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಗೆಳೆಯರ ಜೊತೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಇದರಿಂದ ಅಸಮಾಧಾನವಾಯಿತು. ಮೊದಲ ಸಾಲಲ್ಲಿ ಕುಳಿತಿದ್ದ ನನಗೆ ಹಿಂದೆ ಹೋಗಬೇಕು ಎಂಬ ಬೇಸರ. ವಿದ್ಯಾರ್ಥಿಗಳು ಪ್ರತಿಭಟಿಸಿದರು. ಈ ಪ್ರಿನ್ಸಿಪಾಲರು ಮಿತಿಮೀರಿದ ಖಡಕ್ ಶಿಸ್ತಿಗೆ ಹೆಸರುವಾಸಿ. ಎಲ್ಲರೂ ಅವರಿಗೆ ಹೆದರುತ್ತಿದ್ದರು. ಎಲ್ಲಾ ಪ್ರಾಧ್ಯಾಪಕರು ನಿಮಗೆ ಬೇಕಾದಲ್ಲಿ ಕುಳಿತಿರಿ ಎಂದರೂ, ಒಬ್ಬರು ಮಾತ್ರ- ಪ್ರಿನ್ಸಿಪಾಲರು ಹೇಳಿದ ರೀತಿಯಲ್ಲೇ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ಪಾಠ ಮಾಡುವುದಿಲ್ಲ ಎಂದು ಹಟ ಹಿಡಿದರು. ನಾವೂ ಹಟ ಬಿಡಲಿಲ್ಲ. ಒಂದು ಸಂಜೆ ಅವರು ಪ್ರಿನ್ಸಿಪಾಲರನ್ನೇ ಕರೆದುಕೊಂಡು ಬಂದಾಗ ಎಲ್ಲರೂ ಗಾಬರಿಯಿಂದ ಎದ್ದು ನಿಂತರು.

ಇದನ್ನಿಲ್ಲಿ ಬರೆಯಲು ಕಾರಣವೆಂದರೆ, ಕ್ರೈಸ್ತ ಮೌಲ್ಯಗಳ ಬಗ್ಗೆ ಮುಂದೆ ನಡೆದ ಚರ್ಚೆ. ಪ್ರಿನ್ಸಿಪಾಲರು ಬಂದವರೇ, ನಾನು ಹೇಳಿದಂತೆ ಕುಳಿತುಕೊಳ್ಳಲು ಒಪ್ಪುವವರು ತಕ್ಷಣ ಅಲ್ಲಲ್ಲೇ ಕುಳಿತುಕೊಳ್ಳಿ ಎಂದರು. ಎಂತಾ ಭೇದೋಪಾಯ! ಕೆಲವರು ಬಡಬಡನೇ ಕುಳಿತರು. ಪ್ರಿನ್ಸಿಪಾಲರು ಮೌನವಾಗಿಯೇ ನಿಂತಿದ್ದರು. ನಿಂತೇ ಇದ್ದ ನಾನು ಸುತ್ತಲೂ ನೋಡುತ್ತೇನೆ: ಕೆಲವರಷ್ಟೇ ನಿಂತಿದ್ದಾರೆ. ಮುಂದಿನ ಒಂದು ನಿಮಿಷದಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಎಂದು ಎಲ್ಲರೂ ಕುಳಿತರು. ನಿಂತು ಉಳಿದವನು ನಾನೊಬ್ಬನೇ! ಪ್ರಭುತ್ವವು ಪ್ರಜೆಗಳನ್ನು ದಮನಿಸುವ ಸರಳ ವಿಧಾನವಿದು. ಅವರ ದೌರ್ಬಲ್ಯಗಳನ್ನು ಉಪಯೋಗಿಸಿ ಒಡೆಯುವುದು.

ನಾನು ನೇರವಾಗಿ ಚರ್ಚೆಗೆ ಇಳಿದೆ. “ನೀವೇ ಬುದ್ಧಿ ಹೇಳಿದಂತೆ, ಚೆನ್ನಾಗಿ ಕಲಿಯಬೇಕೆಂದು ನಾನು ಇಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದೇನೆ. ನನ್ನನ್ನು ಈಗ ಹೆಸರಿನ ಪ್ರಕಾರ ಹಿಂದಿನ ಸಾಲಿಗೆ ಕಳಿಸುವುದು ಅನ್ಯಾಯ; ಗಿಡ್ಡಗಿರುವವರು ಕೆಲವರು ಕೊನೆಯ ಸಾಲಿಗೆ ಹೋಗುತ್ತಾರೆ. ಎತ್ತರದವರು ಮುಂದಿನ ಸಾಲಿಗೆ ಹೋಗುತ್ತಾರೆ. ಇದು ಅನ್ಯಾಯ” ಎಂದು ವಾದಿಸಿದೆ. ಅವರು ಜಪ್ಪಯ್ಯ ಅನ್ನಲಿಲ್ಲ. “ಚರ್ಚೆ ಬೇಡ, ನೀನು ನನ್ನ ರೂಲ್ ಒಪ್ಪುತ್ತೀಯೋ ಇಲ್ಲವಾ? ಗಿಡ್ಡಗೆ ಇರುವವರು ಅವರೇ ಮಾತನಾಡುತ್ತಾರೆ. ಉದ್ದ ಇರುವ ನೀನು ಮಾತಾಡುವ ಅಗತ್ಯ ಇಲ್ಲ” ಎಂದವರು ಹೇಳಿದರು.

ಎಳೆಯನಾಗಿದ್ದ ನಾನು ಸ್ವಲ್ಪ ಉದ್ಧಟತನ ಮತ್ತು ಅವಿವೇಕದಿಂದಲೇ ಏಸುಕ್ರಿಸ್ತನನ್ನು ಚರ್ಚೆಗೆ ಎಳೆದುತಂದೆ. “ಧ್ವನಿ ಇಲ್ಲದವರ ಪರ ಮಾತನಾಡಬೇಕು ಎಂದು ಏಸುವೇ‌ ಹೇಳಿದ್ದು. ರೋಮನರ ದಬ್ಬಾಳಿಕೆ ವಿರುದ್ಧ ಮಾತನಾಡಿದ್ದಕ್ಕೆ ಅವರು ಶಿಲುಬೆಯೇರಿದರು” ಎಂದು ವರಸೆ ಹಾಕಿದೆ. ಅವರು ಉತ್ತರ ನೇರವಾಗಿತ್ತು: “ಅವರು ಶಿಲುಬೆ ಏರಿದರು; ನೀನು ನೇರ ಮನೆಗೆ ಹೋಗುತ್ತಿ. ನೀನು ಎಕ್ಸ್‌ಟರ್ನಲ್ ಸ್ಟೂಡೆಂಟ್ ಎಂಬುದನ್ನು ಮರೆಯಬೇಡ. ಟಿ.ಸಿ. ಕೊಟ್ಟು ಮನೆಗೆ ಕಳಿಸುತ್ತೇನೆ.”

ಯಾವುದೇ ಧರ್ಮದ ಬೋಧನೆಗೂ, ಆಚರಣೆಗೂ, ವ್ಯತ್ಯಾಸವಿದೆ ಎಂಬುದು ನನಗೆ ತಿಳಿದುಹೋಯಿತು. ನನ್ನನ್ನು ಹೊರಗೆ ಹಾಕಿದರೆ ನನ್ನ ತಂದೆ, ತಾಯಿಯ ಮುಖ ಹೇಗಾಗಬಹುದೆಂಬ ಚಿತ್ರ ಕಣ್ಣೆದುರು ಬಂತು. “ಆಯ್ತು. ನನ್ನ ಪ್ರತಿಭಟನೆ ದಾಖಲಿಸಿ ನಿಮ್ಮ ರೂಲ್ ಒಪ್ಪುತ್ತೇನೆ” ಎಂದು- ಈಗ ಅನಿಸುವಂತೆ- ನಾಟಕೀಯವಾಗಿ, ಆದರೆ, ಪ್ರಾಮಾಣಿಕವಾಗಿಯೇ ಹೇಳಿ ನಾನು ಪುಸ್ತಕಗಳನ್ನು ಎತ್ತಿಕೊಂಡು ಹಿಂದಿನ ಸಾಲಲ್ಲಿ ಹೋಗಿ ಕುಳಿತೆ.

ಈ ಘಟನೆ ನನ್ನನ್ನು ಆಳವಾದ ಚಿಂತನೆಗೆ ಗುರಿ ಮಾಡಿತು. ಕ್ರೈಸ್ತ ಮೌಲ್ಯಗಳ ಜೊತೆಗೆ ನನ್ನ ಬಡವರು ಮತ್ತು ಶೋಷಿತರ ಪರವಾದ ಎಡಪಂಥೀಯ ಚಿಂತನೆಗಳೂ ಬೆಳೆದವು ಎಂಬುದಕ್ಕೆ ನಾಲ್ಕೂವರೆ ದಶಕಗಳ ಹಿಂದಿನ ಈ ಘಟನೆಯನ್ನು ಇವತ್ತೇ ನಡೆದಿರುವಂತೆ ಈಗ ನೆನಪಿಸಿ ಬರೆಯುತ್ತಿರುವುದೇ ಸಾಕ್ಷಿ. ಮೌಲ್ಯಗಳ ತಾಕಲಾಟ, ಚರ್ಚೆ ನಡೆಯಬೇಕು. ಅದು ಪ್ರಾಮಾಣಿಕವಾದ ಮಾನವೀಯ ನಂಬಿಕೆಗಳ ಆಧಾರದಲ್ಲಿ ನಡೆಯಬೇಕೇ ಹೊರತು ಕರ್ಮಠ ಚರ್ಚೆಗಳು, ನಾನೇ ಮೇಲೆ, ನನ್ನದೇ ಮೇಲೆ ಎಂಬ ಸಂಘರ್ಷಕ್ಕೆ ಕಾರಣವಾಗಬಾರದು.

ಮುಂದೆ ಕೆಲವರ್ಷಗಳ ನಂತರ ನಾನು ಅಂತೊನಿಯೋ ಕಝಂತ್ಸಾಕಿಸ್ ಎಂಬ ಗ್ರೀಕ್ ಲೇಖಕನ “ಲಾಸ್ಟ್ ಟೆಂಪ್ಟೇಷನ್ ಆಫ್ ಕ್ರೈಸ್ಟ್” ಎಂಬ ಕಾದಂಬರಿ ಓದಿದಾಗಲೂ ಈ ಘಟನೆ ನೆನಪಿಗೆ ಬಂತು. ರೋಮನರ ದಬ್ಬಾಳಿಕೆಗೆ ವಿರುದ್ಧವಾಗಿ ಹೋರಾಟ ಮಾಡಿ ಶಿಲುಬೆಯ ಶಿಕ್ಷೆಗೆ ಗುರಿಯಾದ ಏಸುವಿನ ಮುಂದೆ “ಸೆವೆನ್ ಸಿನ್ಸ್” ಅಂದರೆ, ಏಳು ಪಾಪಗಳು, ಅಥವಾ ಏಳು ಲಾಲಸೆಗಳು ಕುಣಿಯುತ್ತವೆ. ಅವನು ತನ್ನ ಹೋರಾಟದ ಹಾದಿಯಿಂದ ಜಗ್ಗುವುದಿಲ್ಲ. ಅವನಿಗೆ ಆಗಿನ ಶೋಷಕರು ಅಧಿಕಾರ ಸಂಪತ್ತಿನ ಇನ್ನೊಂದು ಕೊನೆಯ ಲಾಲಸೆ ಒಡ್ಡುತ್ತಾರೆ. ಅದನ್ನು ಮೀರಿ ನಿಂತು ಆತ ಶಿಲುಬೆಗೇರುತ್ತಾನೆ. ಈ ಕಾದಂಬರಿಯ ರಾಜಕೀಯ ಪರಿಣಾಮ, ಅಭಿಪ್ರಾಯ ಏನೇ ಇರಲಿ. ಹಾಗಾದರೆ, ನಾನ್ಯಾಕೆ ಲೀನಾ ಮಥಾಯಸ್ ಅವರ “ಅನ್ಯಾಯ” ಪ್ರತಿಭಟಿಸಿ ಮನೆಗೆ ಹೋಗದೇ ತರಗತಿಯಲ್ಲಿ ಉಳಿದೆ? ಚಿಂತನೆಯನ್ನು ನಿಮಗೆ ಬಿಡುತ್ತೇನೆ.

ಇದರ ನಂತರ ನಡೆದ ಕತೆಯನ್ನೂ ಸ್ವಲ್ಪ ಬರೆಯುತ್ತೇನೆ. ಪ್ರಿನ್ಸಿಪಾಲರ ಎದುರು ಮಣಿಯಬೇಕಾದುದಕ್ಕೆ ನನಗೇನೂ ಅವಮಾನವಾಗಲಿಲ್ಲ. ಬದಲಾಗಿ, ಅವರ ಎದುರು ಕೊನೆಯ ವರೆಗೆ ನಿಂತು ವಾದಿಸಿದಕ್ಕೆ ವಿದ್ಯಾರ್ಥಿಗಳ ನಡುವೆ ನಾನು “ದೊಡ್ಡಜನ” ಆದೆ. ಇದಕ್ಕೆಲ್ಲಾ ಕಾರಣರಾದ ಆ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರ ಮೇಲೆ ನಮಗೆ ಸಿಟ್ಟಿತ್ತು. ಹಾಗಾಗಿ ಅವರು ಕ್ಲಾಸಿಗೆಂದು ಕಾರಿಡಾರಿನಲ್ಲಿ ಬರುತ್ತಿರುವಾಗಲೇ ಎಲ್ಲರೂ ಕಾ, ಕೀ, ಕೂ ಎಂದು ಕಿರುಚಿ, ಅವರು ಒಳಬರುತ್ತಿದ್ದಂತೆ ಸುಮ್ಮನಾಗುತ್ತಿದ್ದರು‌. ನಾನಂತೂ ನನ್ನನ್ನು ಹಿಂದಿನ ಸಾಲುಗಳಿಗೆ ಕಳಿಸಿದ್ದು ಮತ್ತು ನನ್ನ ಉದ್ದ ಕಾಲುಗಳ ಲಾಭ ಪಡೆದು ಡೆಸ್ಕನ್ನು ಮೊಣಕಾಲುಗಳಿಂದ ಎತ್ತಿ ಧಡಾರನೇ ಕೆಳಗೆ ಬಿಡುತ್ತಿದ್ದೆ. ಇದರಿಂದ ಅವರು ತುಂಬಾ ವಿಚಲಿತರಾದರೂ, ಮೂಲ ಕಿಡಿಗೇಡಿಯಾದ ನನ್ನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮೇಲಾಗಿ, ನಾನು ಇನ್ನೊಂದು ಕಿರುಕುಳ ಆರಂಭಿಸಿದ್ದೆ. ಇದು ನನ್ನ “ಅಹಿಂಸಾತ್ಮಕ” ಪ್ರತಿಭಟನೆಯಾಗಿತ್ತು. ಅದೆಂದರೆ, ದಿನದ ಪಾಠವನ್ನು ಮೊದಲೇ ಓದಿ ಬಂದು, ಚರ್ಚಿಸಬಹುದಾದ ವಿಷಯಗಳಲ್ಲಿ ತಕ್ಷಣವೇ ಎದ್ದುನಿಂತು ಪ್ರಶ್ನೆಕೇಳಿ, ಚರ್ಚೆ ಮಾಡಿ ಪಾಠಕ್ಕೆ ತಡೆಯೊಡ್ಡುವುದು. ಇದು ಎಷ್ಟರ ಮಟ್ಟಿಗೆ ನಡೆಯಿತು ಎಂದರೆ, ಒಂದು ದಿನ ಅವರು ಬಂದವರೇ, “ನಾನು ನನ್ನ ಜೀವನದಲ್ಲಿ ಹಲವಾರು ಪೋಲಿ ಪುಂಡರನ್ನು ನೋಡಿದ್ದೇನೆ. ನನಗೆ ಸ್ವಲ್ಪವೂ ಬೇಜಾರಿಲ್ಲ. ಆದರೆ, ಪ್ರತಿಭಾವಂತ ವಿದ್ಯಾರ್ಥಿಗಳೇ ಹೀಗೆ ಮಾಡುವುದೆಂದರೆ….” ಎಂದು ಮುಂದೆ ಮಾತನಾಡಲಾಗದೆ ಗದ್ಗದಿತರಾದರು. ನನಗೆ ಎಷ್ಟು ಪಶ್ಚಾತ್ತಾಪ ಆಯಿತೆಂದರೆ, ಮುಂದೆ ಅವರ ತಂಟೆಗೆ ಹೋಗಲಿಲ್ಲ.

ಇದು ಅವರಲ್ಲೂ ಬಹಳ ಬದಲಾವಣೆ ತಂದಿತು. ನಾನು ಯುವ ಕಮ್ಯುನಿಸ್ಟ್ ರಾಜಕೀಯದಲ್ಲಿ ಇದ್ದುದರಿಂದ ಕೇವಲ ಹಾಜರಾತಿಗಾಗಿ ಮಾತ್ರ ಕ್ಲಾಸಿಗೆ ಹೋಗುತ್ತಿದ್ದೆ. ಒಂದು ಸಲ ಅವರು ಬಂದವರೇ ನನ್ನನ್ನು ಗಮನಿಸಿ, ಒಂದು ಜೋಕು ಹೊಡೆದರು: “ನಾನು ಹಗಲು ಲಾ ಕಾಲೇಜಿನಲ್ಲಿ ಕಲಿಸುತ್ತೇನೆ. ಇಲ್ಲಿ ಪಾರ್ಟ್ ಟೈಮ್ ಗೆಸ್ಟ್ ಲೆಕ್ಚರರ್. ಅದೇ ರೀತಿಯಲ್ಲಿ ಇಲ್ಲಿ ಕೆಲವು ಪಾರ್ಟ್ ಟೈಮ್ ಗೆಸ್ಟ್ ಸ್ಟೂಡೆಂಟುಗಳಿದ್ದಾರೆ. ಅವರು ಮನಸ್ಸಾದಾಗ ಕ್ಲಾಸಿಗೆ ಬರುವುದು, ಲೆಕ್ಚರರಿಗೇ ಪ್ರಶ್ನೆ ಕೇಳಿ, ಅವರಿಗೇ ಪಾಠ ಮಾಡಿ ಹೋಗುವುದು” ಎಂದು ನನ್ನನ್ನು ತೋರಿಸಿ ನಕ್ಕರು. ಎಲ್ಲರೂ ನಕ್ಕರು. ಎಲ್ಲವೂ ತಿಳಿಯಾಯಿತು. ಮುಂದೆ ನಾನು ಹೇಳಿಕೊಳ್ಳುವ ಮಾರ್ಕು ಪಡೆಯಲಿಲ್ಲವಾದರೂ, ಕ್ಲಾಸಿನಲ್ಲಿ ಉಳಿದ ಎಲ್ಲರಿಗಿಂತ ಹೆಚ್ಚು ಮಾರ್ಕು ಪಡೆದಿದ್ದೆ. ಇದಕ್ಕಾಗಿ ನನ್ನನ್ನು ಮೊದಲಿಗೆ ಅಭಿನಂದಿಸಿದವರು ಇದೇ ಪ್ರಾಧ್ಯಾಪಕರು ಮತ್ತು ಪ್ರಿನ್ಸಿಪಾಲರು.

ಇದನ್ನು ಉಲ್ಲೇಖಿಸಿದ ಕಾರಣ ಎಂದರೆ, ನನ್ನ ಪ್ರತಿಭಟನೆಯ “ಅಹಿಂಸಾತ್ಮಕ” ವಿಧಾನ ಮತ್ತು ಅವರು ಬಳಸಿದ ಮನಪರಿವರ್ತನೆಯ ವಿಧಾನ ಬುದ್ಧ, ಏಸು, ಗಾಂಧಿ ಮುಂತಾದ ಮಹಾತ್ಮರ ವಿಧಾನಗಳ ತೀರಾ ಪೇಲವ ಉದಾಹರಣೆಗಳಾದರೂ, ಪರಿಣಾಮಕಾರಿ ಎಂಬ ತಿಳುವಳಿಕೆ ನನ್ನಲ್ಲಿ ಮೂಡಿಸಿದ್ದು.

ಸೈಂಟ್ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಹಲವಾರು ಪ್ರಾಧ್ಯಾಪಕರಾಗಿದ್ದ ಕ್ರೈಸ್ತರು ಮತ್ತು ಪಾದ್ರಿಗಳ ಜೊತೆಯೂ ಮಾತುಕತೆ, ಚರ್ಚೆ ನಡೆಯುತ್ತಿತ್ತು. ಕಾಲೇಜಿನ ಆವರಣದಿಂದ ಕೋರ್ಟಿನ ಕಡೆಗೆ ಹೋಗುವ ಒಂದು ಒಳರಸ್ತೆಯಿದೆ. ಅಲ್ಲಿಯೇ ಗೋಡೆಯ ಮೇಲೆಲ್ಲಾ ಪೈಂಟಿಂಗ್ಸ್ ಇರುವ ಚಾಪೆಲ್ ಮತ್ತು ಕಾಲೇಜಿನ ಜೀವಶಾಸ್ತ್ರದ ಪ್ರಯೋಗಶಾಲೆಗಳು, ಚಿಕ್ಕ ಬೊಟಾನಿಕಲ್ ಗಾರ್ಡನ್ ಇದ್ದುದನ್ನು ಹಿಂದೆ ಹೇಳಿದ್ದೇನೆ. ನನಗೆ ಕೆಲವು ಸಲ ಅಲ್ಲಿಗೆ ಒಬ್ಬನೇ ಹೋಗಿ ತಿರುಗಾಡುವ ಅಭ್ಯಾಸವಿತ್ತು. ಎರಡೂ ಕಡೆ ಇದ್ದ ಪಾದ್ರಿಗಳು ಏನು ಎತ್ತ ಎಂದು ವಿಚಾರಿಸಿ, ಬೇಕಾದ ವಿವರಣೆಗಳನ್ನು ನೀಡುತ್ತಿದ್ದರು. ಪ್ರಾಣಿಗಳು ಮತ್ತು ದೇಹದ ಭಾಗಗಳನ್ನು ಫಾರ್ಮಾಲಿನ್ ದ್ರಾವಣ ಇದ್ದ ಬಾಟಲಿಗಳಲ್ಲಿ ತುಂಬಿಸಿ ಇಟ್ಟದ್ದು, ಬೇರೆ ಬೇರೆ ರೀತಿಯ ಒಣ ಎಲೆಗಳನ್ನು ಸಂಗ್ರಹಿಸಿ ಇಟ್ಟದ್ದನ್ನು ನನಗೆ ಮೊದಲ ಬಾರಿಗೆ ತೋರಿಸಿದ್ದು ಅವರೇ; ಒಬ್ಬರು ಪಾದ್ರಿ. ಅವರೆಂದೂ ಭೇದಭಾವವನ್ನು ತೋರಿದ್ದಾಗಲೀ, ತಮ್ಮ ಧರ್ಮವನ್ನು ಹೊಗಳಿದ್ದು, ಬೇರೆ ಧರ್ಮಗಳನ್ನು ಹೀಯಾಳಿಸಿದ್ದು ಕಂಡಿಲ್ಲ. ಕರಾವಳಿಯ ಕ್ರೈಸ್ತರು ಸಾಮಾನ್ಯವಾಗಿ ಹೀಗೆಯೇ ಇರುವುದನ್ನು ಕಂಡಿದ್ದೇನೆ. ಇದಕ್ಕೆ ವ್ಯತಿರಿಕ್ತವಾಗಿ ಇರುವ ಕರ್ಮಠರು ಎಲ್ಲಾ ಕಡೆ ಇದ್ದೇ ಇರುತ್ತಾರೆ ಬಿಡಿ. ಇಂದು ಇಂತಾ ಸಾಮರಸ್ಯದ ವಾತಾವರಣಕ್ಕೆ ಹುಳಿ ಹಿಂಡುವವರನ್ನು ನೋಡುವಾಗ ನೋವಾಗುತ್ತದೆ; ಸಿಟ್ಟೂ ಬರುತ್ತದೆ. ಅವರು ಅವವರವ ನಂಬಿಕೆಗಳನ್ನು ಇಟ್ಟುಕೊಳ್ಳಲಿ; ನೀವು ನಿಮ್ಮ ನಿಮ್ಮ ನಂಬಿಕೆಗಳನ್ನು! ಅದರಿಂದ ಯಾರಿಗಾದರೂ ತೊಂದರೆ ಇದೆಯೇ?! ಇಲ್ಲ! ಧರ್ಯದ ಹೆಸರಿನಲ್ಲಿ ಒಬ್ಬರು ಇನ್ನೊಬ್ಬರ ಕತ್ತು ಹಿಸುಕಲು ಹೋದರೆ ಮಾತ್ರ ಎಲ್ಲರೂ ನೋಯುತ್ತೀರಿ; ಸಾಯುತ್ತೀರಿ!

-ನಿಖಿಲ್ ಕೋಲ್ಪೆ

You cannot copy content of this page

Exit mobile version