ವಾರಾಣಸಿ ಇನ್ನು ಸಂಪೂರ್ಣ ಸಸ್ಯಾಹಾರಿ ನಗರಿ: ನಗರದ ಎಲ್ಲಾ ಮಾಂಸದ ಅಂಗಡಿಗಳನ್ನು ಹೊರವಲಯಕ್ಕೆ ಸಾಗಿಸಲು ಸಜ್ಜಾದ ಪಾಲಿಕೆ

ವಾರಾಣಸಿ: ಉತ್ತರ ಪ್ರದೇಶದ ಪವಿತ್ರ ಧಾರ್ಮಿಕ ನಗರಿ ವಾರಾಣಸಿಯು ಶೀಘ್ರದಲ್ಲೇ ಸಂಪೂರ್ಣ ಸಸ್ಯಾಹಾರಿ ನಗರವಾಗಿ ಬದಲಾಗುವತ್ತ ಹೆಜ್ಜೆ ಇಟ್ಟಿದೆ. ವಾರಾಣಸಿ ಮುನ್ಸಿಪಲ್ ಕಾರ್ಪೊರೇಷನ್ (VMC) ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ, ಮೀನು ಮತ್ತು ಕೋಳಿ ಅಂಗಡಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಅಧಿಕೃತವಾಗಿ ನಿರ್ಧರಿಸಿದೆ.

ಇದರ ಭಾಗವಾಗಿ ನಗರ ಮಿತಿಯೊಳಗಿರುವ ಸುಮಾರು 350 ರಿಂದ 400 ಮಾಂಸದ ಅಂಗಡಿಗಳನ್ನು ಮುಂಬರುವ ಆರು ತಿಂಗಳ ಅವಧಿಯಲ್ಲಿ, ಅಂದರೆ ದೀಪಾವಳಿ ಹಬ್ಬದ ಒಳಗಾಗಿ ಹಂತ-ಹಂತವಾಗಿ ನಗರದ ಗಡಿಯಿಂದ ಹೊರಗೆ ಸ್ಥಳಾಂತರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈ ಅಂಗಡಿಗಳನ್ನು ರಾಮನಗರ, ಸುಜಾಬಾದ್, ಗಣೇಶ್‌ಪುರ, ಅವಲೇಶ್ ನಗರ ಮತ್ತು ಶಿವಪುರ ಮುಂತಾದ ಹೊರವಲಯದ ಪ್ರದೇಶಗಳಿಗೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಹತ್ವದ ನಿರ್ಧಾರ ಜಾರಿಯಾದಲ್ಲಿ ಕಾಶಿ ನಗರಿಯು ದೇಶದ ಎರಡನೇ ಅತಿ ದೊಡ್ಡ ಸಸ್ಯಾಹಾರಿ ನಗರವಾಗಿ ಗುರುತಿಸಿಕೊಳ್ಳಲಿದೆ. ಪ್ರಸ್ತುತ ಜಗತ್ತಿನ ಏಕೈಕ ಸಂಪೂರ್ಣ ಸಸ್ಯಾಹಾರಿ ಪಟ್ಟಣ ಎಂಬ ಹೆಗ್ಗಳಿಕೆಗೆ ಗುಜರಾತ್‌ನ ‘ಪಾಲಿತಾನಾ’ (Palitana) ಪಾತ್ರವಾಗಿದೆ.

ಅಲ್ಲಿ 2014 ರಿಂದಲೇ ಮಾಂಸ, ಮೀನು ಮತ್ತು ಮೊಟ್ಟೆಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಸ್ತುತ ವಾರಾಣಸಿ ನಗರದಲ್ಲಿ ಶೇಕಡಾ 72 ರಷ್ಟು ಹಿಂದೂಗಳು ಮತ್ತು ಶೇಕಡಾ 27 ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದಾರೆ ಎಂದು ಅಂದಾಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು