ಬೆಂಗಳೂರು: ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ಗೆ ಬಿಗ್ ರಿಲೀಫ್ ಆಗಿ, ಹುಲಿ ಪಂಜದ ಪೆಂಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೆ ಶ್ಯೂರಿಟಿ ನೀಡುವಂತೆ ಹೇಳಿದೆ. ಸಾಕ್ಷ್ಯ ನಾಶಪಡಿಸಬಹುದು ಎಂದು ಆರೋಪಿಸಿ ಸಂತೋಷ್‌ಗೆ ಜಾಮೀನು ನೀಡುವುದನ್ನು ಅರಣ್ಯ ಇಲಾಖೆ ವಿರೋಧಿಸಿತ್ತು.
ಸಂತೋಷ್ ಸೋಮವಾರ ಜಾಮೀನು ಕೋರಿದ್ದು, ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಬುಧವಾರದವರೆಗೆ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಕಾಲಾವಕಾಶ ನೀಡಿತ್ತು. ನ್ಯಾಯಾಲಯವು ಗುರುವಾರ ಎರಡೂ ಕಡೆಯ ವಿಚಾರಣೆ ನಡೆಸಿ ಆದೇಶವನ್ನು ಕಾಯ್ದಿರಿಸಿ, ಶುಕ್ರವಾರ ಪ್ರಕಟಿಸಿತು.
ಜಾಮೀನು ಪಡೆದ ನಂತರ, ಸಂತೋಷ್ ಅವರ ವಕೀಲರು, ಅವರ ಬಂಧನದ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದರು.
“ಜಾಮೀನು ಸಿಗುತ್ತದೆ ಎಂದು ನಿರೀಕ್ಷಿಸಿದ್ದೆವು ಮತ್ತು ಅದನ್ನು ಪಡೆದುಕೊಂಡಿದ್ದೇವೆ. ಅರಣ್ಯ ಇಲಾಖೆ ಅಕ್ರಮವಾಗಿ ಬಂಧಿಸಿತ್ತು. ಅವರನ್ನು ಪ್ರಶ್ನಿಸದೆ ಬಂಧಿಸಲಾಯಿತು. ಇದೊಂದು ಷಡ್ಯಂತ್ರದ ಪ್ರಕರಣದಂತೆ ಕಾಣುತ್ತಿದೆ” ಎಂದು ಕೆ.ನಟರಾಜ್ ಹೇಳಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ಕನ್ನಡ ಬಿಗ್ ಬಾಸ್ ಕಾರ್ಯಕ್ರಮದ ವೇಳೆ ಹುಲಿಯುಗುರಿನ ಪೆಂಡೆಂಟ್ ಪ್ರದರ್ಶಿಸಿದ್ದಕ್ಕಾಗಿ ಅರಣ್ಯ ಇಲಾಖೆ ಭಾನುವಾರ ರಾತ್ರಿ ಸಂತೋಷ್ ಅವರನ್ನು ಬಂಧಿಸಿತ್ತು. ಆಪಾದಿತರ ಬಳಿಯಿದ್ದ ಉಗುರುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ವರದಿಗಳಿಗಾಗಿ ಕಾಯಲಾಗುತ್ತಿದೆ. ಸಂತೋಷ್ ಅವರು ಹುಲಿ ಉಗುರುಗಳನ್ನು ಧರಿಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಂತೋಷ್ ಇಂದು ಸಂಜೆ ಅಥವಾ ಶನಿವಾರ ಬೆಳಗ್ಗೆ ಹೊರ ಬರುವ ಸಾಧ್ಯತೆ ಇದೆ.
ಸಂತೋಚ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮರಳಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರ ಸಹೋದರ ಸಂಬಂಧಿ ರಮೇಶ್ ಅವರು, “ನಮಗೆ ಬೇಲ್ ಸಿಕ್ಕಿದ್ದು ಸಂತೋಷ ತಂದಿದೆ. ಇಡೀ ಪ್ರಕರಣಣ ಪಿತೂರಿಯಂತೆ ಕಾಣುತ್ತಿದೆ, ಬಿಗ್ ಬಾಸಿಗೆ ಹೋಗುವ ಕುರಿತು ಇನ್ನೂ ಯೋಚಿಸಿಲ್ಲ, ಸಂತೋಷ್ ಜೈಲಿನಿಂದ ಬಂದ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದೇವೆ” ಎಂದು ಹೇಳಿದರು.