ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಯಾವುದೇ ನ್ಯಾಯಾಂಗ ಪರಿಶೀಲನೆ ಇಲ್ಲದೆ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರವನ್ನು ಪ್ರಶ್ನಿಸಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್‌ಕರ್ ಅವರ ಪೀಠವು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಪಿಎಂಎಲ್‌ಎಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಈಗಾಗಲೇ ಬಾಕಿ ಇರುವ ಇತರ ಅರ್ಜಿಗಳ ಜತೆಗೆ ಶಾಸಕ ವೀರೇಂದ್ರ ಪಪ್ಪಿ ಅವರ ಅರ್ಜಿಯನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ.ಎಸ್. ನರಸಿಂಹ, ಪಿಎಂಎಲ್‌ಎ ಕಾಯ್ದೆಯಲ್ಲಿನ ಕೆಲವು ಅಂಶಗಳಲ್ಲಿ ದೋಷಗಳಿರುವಂತೆ ಕಂಡುಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಸ್ತಿ ಹಕ್ಕುಗಳು ಹಾಗೂ ಸಾಂವಿಧಾನಿಕ ರಕ್ಷಣೆಗಳಿಗೆ ಸಂಬಂಧಿಸಿದ ಸಂಕೀರ್ಣ ವಿಷಯಗಳಲ್ಲಿ ನ್ಯಾಯಾಂಗೇತರ ಸದಸ್ಯರು ಹೇಗೆ ನಿರ್ಣಯ ಕೈಗೊಳ್ಳಲು ಸಾಧ್ಯ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.
ಪಿಎಂಎಲ್‌ಎಯ ಸೆಕ್ಷನ್ 20 ಮತ್ತು 21ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳ ಕುರಿತು ಪೀಠವು ನೋಟಿಸ್ ಜಾರಿಗೊಳಿಸಿದೆ. ಜೊತೆಗೆ ಪಿಎಂಎಲ್‌ಎ ಸೆಕ್ಷನ್ 6ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಬಾಕಿ ಇರುವ ಪ್ರಕರಣಗಳೊಂದಿಗೆ ಈ ಅರ್ಜಿಯನ್ನು ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತು.
ವೀರೇಂದ್ರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ರಂಜಿತ್ ಕುಮಾರ್, ಪಿಎಂಎಲ್‌ಎ ಕಾಯ್ದೆಯ ನಿಯಮಗಳು ಯಾವುದೇ ಹೊಣೆಗಾರಿಕೆ ಇಲ್ಲದೆ ಇ.ಡಿ.ಗೆ ಕಾರ್ಯನಿರ್ವಹಿಸುವ ಅವಕಾಶ ನೀಡುತ್ತಿದ್ದು, ಇದರಿಂದ ವ್ಯಾಪಕ ಅಧಿಕಾರ ದುರುಪಯೋಗ ನಡೆಯುತ್ತಿದೆ ಎಂದು ದೂರಿದರು. ಸೆಕ್ಷನ್ 20 ಮತ್ತು 21 ಅಡಿಯಲ್ಲಿ ಇ.ಡಿ.ಗೆ ಯಾವುದೇ ಕಾರಣ ತಿಳಿಸದೇ 180 ದಿನಗಳವರೆಗೆ ಆಸ್ತಿ ಮತ್ತು ದಾಖಲೆಗಳನ್ನು ಜಪ್ತಿಯಲ್ಲಿರಿಸಿಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಅವರು ಹೇಳಿದರು.
ಇದೀಗ ಪಿಎಂಎಲ್‌ಎ ಅಡಿಯಲ್ಲಿ ತೀರ್ಪು ನೀಡುವ ಪ್ರಾಧಿಕಾರದಲ್ಲಿ ಏಕಸದಸ್ಯರಿದ್ದು, ಅವರಿಗೆ ನ್ಯಾಯಾಂಗ ಹಿನ್ನೆಲೆಯಿಲ್ಲ ಎಂಬುದನ್ನೂ ವಕೀಲರು ಪೀಠದ ಗಮನಕ್ಕೆ ತಂದರು. ದೇಶಾದ್ಯಂತ ಇ.ಡಿ. ಅಧಿಕಾರಿಗಳು ನಡೆಸಿದ ಜಪ್ತಿಗಳಲ್ಲಿ ಶೇ.99ರಷ್ಟು ಪ್ರಕರಣಗಳನ್ನು ಇದೇ ಪ್ರಾಧಿಕಾರ ದೃಢೀಕರಿಸಿರುವುದನ್ನು ಜಾರಿ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ನ ಅಂಕಿ ಅಂಶಗಳನ್ನು ಉಲ್ಲೇಖಿಸಿ ವಿವರಿಸಿದರು. ಇದರಿಂದ ಪ್ರಾಧಿಕಾರವು ಸ್ವತಂತ್ರ ವಿವೇಚನೆ ಬಳಸದೇ ಕೇವಲ ಅನುಮೋದನಾ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾದಿಸಿದರು.
ಹಿನ್ನೆಲೆಯಲ್ಲಿ, 2016ರಲ್ಲಿ ಚಳ್ಳಕೆರೆದಲ್ಲಿರುವ ವೀರೇಂದ್ರ ಅವರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ್ದು, ಅಪಾರ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿತ್ತು. ಘೋಷಿತ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣ ಮತ್ತು ಪೂರಕ ದೂರುಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಈ ವರ್ಷ ವೀರೇಂದ್ರ ಅವರಿಗೆ ಸೇರಿದ ಮನೆ ಹಾಗೂ ದೇಶದ ವಿವಿಧೆಡೆ ಇರುವ ಕ್ಯಾಸಿನೊಗಳಲ್ಲಿ ಶೋಧ ನಡೆಸಿತ್ತು. ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆರೋಪದ ಹಿನ್ನೆಲೆಯಲ್ಲಿ ವೀರೇಂದ್ರ ಅವರನ್ನು ಇ.ಡಿ. ಬಂಧಿಸಿತ್ತು.
