ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹದಿನಾರನೆಯ ಲೇಖನ
ರಾಜಕಾರಣಿ ಮತ್ತು ಮುತ್ಸದ್ದಿಯಾಗಿದ್ದ ಮಸಾನಿ, ತನ್ನ ಸಾರ್ವಜನಿಕ ಬದುಕಿನಲ್ಲಿ ಅದ್ಭುತವಾದ ಪ್ರಾಮಾಣಿಕತೆಯ ಮೂಲಕವೇ ಖ್ಯಾತರಾಗಿದ್ದವರು.
ಮಿನೂ ಮಸಾನಿ ಎಂದೇ ಜನಪ್ರಿಯರಾಗಿದ್ದ ಮಿನೋಚರ್ ರುಸ್ತುಮ್ ಮಸಾನಿ, ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ವಕೀಲ, ಪತ್ರಕರ್ತ, ಬರಹಗಾರ, ರಾಜತಾಂತ್ರಿಕ ಮತ್ತು ಪ್ರಬುದ್ಧ ಸಂಸದೀಯ ಪಟುವಾಗಿದ್ದರು.
ಸರ್ ರುಸ್ತಮ್ ಪಿ. ಮಸಾನಿಯವರ ಪುತ್ರನಾಗಿ, ಮಿನೂ ನವೆಂಬರ್ 20, 1905 ರಂದು ಬಾಂಬೆಯಲ್ಲಿ ಜನನ. 1930 ರ ಹೊತ್ತಿಗೆ, ಅವರು ಕ್ಯಾಥೆಡ್ರಲ್ ಹೈಸ್ಕೂಲ್, ಭಾರ್ದಾ ನ್ಯೂ ಹೈಸ್ಕೂಲ್, ಎಲ್ಫಿನ್‌ಸ್ಟನ್ ಕಾಲೇಜು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಲಿಂಕನ್ಸ್ ಇನ್‌ನಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬ್ಯಾಚುಲರ್ ಆಫ್ ಆರ್ಟ್ಸ್, ಎಲ್‌ಎಲ್‌ಬಿ ಮತ್ತು ಬಾರ್ ಅಟ್ ಲಾ ಪದವಿಗಳನ್ನು ಗಳಿಸಿಕೊಂಡಿದ್ದರು.
ಲಂಡನ್‌ನಲ್ಲಿ ತರಬೇತಿ ಪಡೆದು ಭಾರತಕ್ಕೆ ಮರಳುವ ವಕೀಲ ಮಸಾನಿ ಬಾಂಬೆ ನ್ಯಾಯಾಲಯಗಳಲ್ಲಿ ತನ್ನ ಕಾನೂನು ಕೆಲಸವನ್ನು ಆರಂಭಿಸುತ್ತಾರೆ. ಆದರೆ, ಕೆಲವೇ ದಿನಗಳಲ್ಲಿ ಆ ಉದ್ಯೋಗವನ್ನು ತೊರೆದು, 1932 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕುತ್ತಾರೆ. ಹಲವು ವರ್ಷಗಳ ಕಾಲ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮತ್ತು ಬಾಂಬೆ ಪ್ರಾಂತೀಯ ಕಾಂಗ್ರೆಸ್ ಸಮಿತಿಯಲ್ಲಿ ಸದಸ್ಯರಾಗಿ ಕೆಲಸ ಮಾಡಿದ್ದರು. ಅಸಹಕಾರ ಚಳುವಳಿಯಲ್ಲೂ ಭಾಗವಹಿಸಿದ್ದರು. 1932 ರಿಂದ 39 ರ ನಡುವೆ ಹಲವು ಬಾರಿ ಬ್ರಿಟಿಷ್ ಸರಕಾರವು ಅವರನ್ನು ಜೈಲಿಗೆ ತಳ್ಳಿತ್ತು. 1943 ರಲ್ಲಿ ಮತ್ತೆ ಅಂತಹದ್ದೇ ಆರೋಪದ ಮೇಲೆ ಜೈಲು ಸೇರಿದ್ದರು.
ಕಾಂಗ್ರೆಸ್ ಪಕ್ಷದೊಳಗೆ ಕಾಂಗ್ರೆಸ್ ಸೋಷ್ಯಲಿಸ್ಟ್ ಪಾರ್ಟಿಯನ್ನು ಕಟ್ಟುವಲ್ಲಿ ಮಿನೂ ಮಸಾನಿ ಬಹಳ ದೊಡ್ಡ ಪಾತ್ರ ವಹಿಸಿದ್ದರು. 1934 ರಿಂದ 1939 ರ ತನಕ ಅವರು ಆಲ್ ಇಂಡಿಯಾ ಕಾಂಗ್ರೆಸ್ ಸೋಷ್ಯಲಿಸ್ಟ್ ಪಾರ್ಟಿಯ ಜಂಟಿ ಕಾರ್ಯದರ್ಶಿಯಾಗಿದ್ದರು. ಜೊತೆಗೆ ಅದರ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದರು.
ಸಣ್ಣ ಪ್ರಾಯದಲ್ಲಿಯೇ ಮಸಾನಿ ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ನಾಯಕರ ಅಭಿಮಾನಿಯಾಗಿದ್ದರು. ಆದರೆ ಸ್ಟಾಲಿನ್ ಅವರ ಕ್ರೌರ್ಯದ ಕಾರಣದಿಂದ ಅವರ ನಿಲುವುಗಳು ಬದಲಾಗುತ್ತವೆ. ನಂತರ ಅವರು ಕಮ್ಯುನಿಸಮ್ಮನ್ನು ವಿರೋಧಿಸಲು ಆರಂಭಿಸುತ್ತಾರೆ. ಕಾಂಗ್ರೆಸ್ ಸೋಷ್ಯಲಿಸ್ಟ್ ಪಾರ್ಟಿಯಲ್ಲಿ ಕಮ್ಯುನಿಸ್ಟರನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಾರೆ. ಆದರೆ, ಈ ವಿಷಯದಲ್ಲಿ ಪಕ್ಷದ ಇತರ ಸದಸ್ಯರ ಮನವೊಲಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ರಾಮಮನೋಹರ್ ಲೋಹಿಯಾ, ಅಚ್ಯುತ ಪಟವರ್ಧನ್ ಮತ್ತು ಅಶೋಕ್ ಮೆಹ್ತಾ ಅವರುಗಳೊಂದಿಗೆ ಪಕ್ಷ ತೊರೆಯುತ್ತಾರೆ. ಆ ನಂತರದಲ್ಲಿ ಕಮ್ಯುನಿಸ್ಟರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ ಎಂಬುದು ಕೂಡ ಇತಿಹಾಸ.
ಈ ಕಾಲದಲ್ಲಿ ಮಾರ್ಕ್ಸ್‌ವಾದಿ ಸಿದ್ಧಾಂತವನ್ನು ವಿರೋಧಿಸಿಕೊಂಡು “ಸೋಷ್ಯಲಿಸಂ ರಿಕನ್ಸಿಡರ್ಡ್” ರಂಬ ಪ್ರಸಿದ್ಧ ಲೇಖನವನ್ನು ಬರೆಯುತ್ತಾರೆ. ಆ ನಂತರ ಮಹಾತ್ಮಾ ಗಾಂಧಿಯವರ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕುವ ಮಸಾನಿ, ಟಾಟಾ ಕಂಪೆನಿಯ ತಮ್ಮ ಉದ್ಯೋಗವನ್ನು ತೊರೆಯುತ್ತಾರೆ. ಅವರನ್ನು ನಾಸಿಕ್ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಅಲ್ಲಿ ಅವರು ಇತರ ದೊಡ್ಡ ದೊಡ್ಡ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತಾರೆ.
ಸಂಸದರಾಗಿ
ಮಸಾನಿ 1935 ರಿಂದ 1945 ರವರೆಗೆ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಕೌನ್ಸಿಲರ್ ಆಗಿದ್ದರು ಮತ್ತು 1943 ರಿಂದ 1944 ರವರೆಗೆ ಬಾಂಬೆಯ ಮೇಯರ್ ಆಗಿದ್ದರು. ಅವರು 1945 ರಿಂದ 1947 ರವರೆಗೆ ಕೇಂದ್ರ ಶಾಸಕಾಂಗ ಸಭೆಯ ಸದಸ್ಯರಾಗಿದ್ದರು, 1946 ರಿಂದ 1948 ರವರೆಗೆ ಸಂವಿಧಾನ ಸಭೆಯ ಸದಸ್ಯರಾಗಿದ್ದರು ಮತ್ತು 1950 ರಿಂದ 1952 ರವರೆಗೆ ತಾತ್ಕಾಲಿಕ ಸಂಸತ್ತಿನ ಸದಸ್ಯರಾಗಿದ್ದರು. ಭಾರತದ ಸಂವಿಧಾನದ ಕರಡು ರಚನೆಗೆ ಮಸಾನಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಕೇಂದ್ರಾಧಿಕಾರ ಸಮಿತಿಯ ಸದಸ್ಯರೂ ಆಗಿದ್ದರು.
1957 ರಲ್ಲಿ, ಮಸಾನಿ ಬಿಹಾರದ ರಾಂಚಿಯಿಂದ ಆಗಿನ ಜಾರ್ಖಂಡ್ ಪಕ್ಷದ ಗುರುತಿನೊಂದಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಲೋಕಸಭಾ ಸದಸ್ಯರಾಗಿದ್ದುಕೊಂಡು, ಮಿಶ್ರ ಆರ್ಥಿಕತೆಯನ್ನು ತರಲು ತನ್ನ ಶಕ್ತಿಮೀರಿ ಪ್ರಯತ್ನ ಮಾಡಿದ್ದರು ಮತ್ತು ಸಮಾಜವಾದಿ ನೀತಿಗಳನ್ನು ವಿರೋಧಿಸಿದ್ದರು.
1959 ರಲ್ಲಿ, ಅವರು ಸಿ. ರಾಜಗೋಪಾಲಾಚಾರಿ ಅವರೊಂದಿಗೆ ಬಲಪಂಥೀಯವಾಗಿದ್ದ “ಸ್ವತಂತ್ರ ಪಕ್ಷ”ವನ್ನು ಸ್ಥಾಪಿಸುತ್ತಾರೆ. ಮಿನೂ ಮಸಾನಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಪ್ರಧಾನ ಕಾರ್ಯದರ್ಶಿಯಾಗಿ, ಮಸಾನಿ ತಮ್ಮ ಸಂಘಟನಾ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಧಾರೆಯೆರೆದಿದ್ದರು. 1967 ರ ಚುನಾವಣೆಯಲ್ಲಿ, ಆ ಪಕ್ಷವು ಲೋಕಸಭೆಯ ಏಕೈಕ ಅತಿದೊಡ್ಡ ವಿರೋಧ ಪಕ್ಷವಾಗಿ 44 ಸ್ಥಾನಗಳನ್ನು ಪಡೆದುಕೊಂಡಿತ್ತು. ರಾಜಸ್ಥಾನ ಮತ್ತು ಗುಜರಾತ್ ವಿಧಾನಸಭೆಗಳಲ್ಲಿ “ಸ್ವತಂತ್ರ ಪಕ್ಷ”ವು ಪ್ರಮುಖ ವಿರೋಧ ಪಕ್ಷವಾಗಿ ಹೊಮ್ಮಿತ್ತು.
ಮಸಾನಿ 1957 ರಿಂದ 1962 ರವರೆಗೆ ಎರಡನೇ ಲೋಕಸಭೆ, 1963 ರಿಂದ 1967 ರವರೆಗೆ ಮೂರನೇ ಲೋಕಸಭೆ ಮತ್ತು 1967 ರಿಂದ 1971 ರವರೆಗೆ ನಾಲ್ಕನೇ ಲೋಕಸಭೆಯ ಸದಸ್ಯರಾಗಿದ್ದರು. ಅವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ಮಸಾನಿ 1957 ರಿಂದ 1971 ರವರೆಗೆ ತನ್ನ ವೃತ್ತಿಜೀವನವನ್ನು ಸಂಸತ್ತಿನಲ್ಲಿ ಕಳೆದ ಒಬ್ಬ ಪ್ರಸಿದ್ಧ ಸಂಸದೀಯ ಪಟುವಾಗಿದ್ದರು. ವಿರೋಧ ಪಕ್ಷದ ನಾಯಕರಾಗಿ ಮತ್ತು ಕೆಳಮನೆಯಿಂದ ನೇಮಿಸಲ್ಪಟ್ಟ ವಿವಿಧ ಸಮಿತಿಗಳ ಸದಸ್ಯರಾಗಿ, ಅಗತ್ಯವಿದ್ದಾಗಲೆಲ್ಲ ತಮ್ಮ ದನಿ ಎತ್ತಿದವರು. ಅಮೂಲ್ಯವಾದ ಭಾಷಣಗಳನ್ನು ಮಾಡಿದವರು. ಸಂಸತ್ತಿನಲ್ಲಿ ಅವರು ಮಾಡಿದ ಹಲವು ನಿರ್ಣಾಯಕ ಭಾಷಣಗಳು ಕಾಂಗ್ರೆಸ್ ಮಿಸ್‌ರೂಲ್ ಆಂಡ್ ಸ್ವತಂತ್ರ ಆಲ್ಟರ್ನೇಟಿವ್ ಎಂಬ ಹೆಸರಿನಲ್ಲಿ ಪ್ರಕಟವಾದವು.
ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕರಾಗಿದ್ದ ಅವರು, ಪ್ರತಿ ಬಾರಿಯ ಕೇಂದ್ರ ಬಜೆಟ್ ಮಂಡನೆಯ ನಂತರದ ಹಣಕಾಸು ಮಸೂದೆಯ ಮೇಲಿನ ಚರ್ಚೆಯನ್ನು ತಾವೇ ಆರಂಭಿಸುತ್ತಿದ್ದರು.
ಮಸಾನಿ ತಮ್ಮ ಸದಸ್ಯರ ಹಾಜರಾತಿ ಮತ್ತು ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದೆಂದರೆ, ಸುಮ್ಮನೆ ವಿರೋಧಿಸುವುದಕ್ಕಾಗಿಯೇ ವಿರೋಧಿಸುವುದಲ್ಲ ಎಂಬುದನ್ನು ಅವರು ದೃಢವಾಗಿ ನಂಬಿದ್ದರು. ಹಲವಾರು ಸಂದರ್ಭಗಳಲ್ಲಿ ಅವರು ಆಡಳಿತ ಪಕ್ಷವನ್ನು ನೇರವಾಗಿ ಬೆಂಬಲಿಸುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಇತರ ಗುಂಪುಗಳೊಂದಿಗೆ ಭಿನ್ನಮತ ಹೊಂದಲು ಅವರು ಹಿಂಜರಿಯುತ್ತಿರಲಿಲ್ಲ.
1970 ರ ಹೊತ್ತಿಗೆ ಇಂದಿರಾ ಗಾಂಧಿಯವರ ಜನಪ್ರಿಯತೆಯ ಉತ್ತುಂಗವು ಇತರ ಎಲ್ಲಾ ಪಕ್ಷಗಳನ್ನು ಬದಿಗೆ ಸರಿಸುತ್ತಿದ್ದ ಕಾಲದಲ್ಲಿ, ಸ್ವತಂತ್ರ ಪಕ್ಷವೂ ಅಂಚಿಗೆ ಸರಿಯಿತು. ಆ ಸಮಯದಲ್ಲಿ ಮಸಾನಿ ಪಕ್ಷಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳುತ್ತಾರೆ.
ತಮ್ಮ ಬದುಕಿನ ಕೊನೆಯ ಕಾಲದಲ್ಲಿ ಮಸಾನಿ ಸಮಾಜವಾದದ ಬಗ್ಗೆ ವಿಭಿನ್ನವಾಗಿ ಯೋಚಿಸಲು ಆರಂಭಿಸಿದ್ದರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ಮಿಶ್ರ ಆರ್ಥಿಕತೆಯ ಕಲ್ಪನೆಯನ್ನು ಅವರು ಪ್ರಚಾರ ಮಾಡಿದರು. ಅವರ ದೃಷ್ಟಿಕೋನವನ್ನು ಲೇಖನಗಳ ಮೂಲಕ ಬರೆದರು.
ಅಲ್ಪಸಂಖ್ಯಾತರ ಮೇಲಿನ ತಾರತಮ್ಯ ತಡೆಗಟ್ಟುವಿಕೆ ಮತ್ತು ರಕ್ಷಣೆಯ ವಿಶ್ವಸಂಸ್ಥೆಯ ಉಪ ಆಯೋಗದ ಪ್ರತಿನಿಧಿಯಾಗಿ ಮಸಾನಿ ಅವರನ್ನು ಭಾರತ ಸರಕಾರವು ನಾಮನಿರ್ದೇಶನ ಮಾಡಿತ್ತು. ಸೋವಿಯತ್ ಒಕ್ಕೂಟ ಮತ್ತು ಯುರೋಪಿನಲ್ಲಿದ್ದ ಅದರ ಇತರ ಭಾಗಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಕುರಿತು ಮೌನವಹಿಸಲು ನಿರಾಕರಿಸುವ ಅವರು ಪ್ರಧಾನ ಮಂತ್ರಿ ನೆಹರೂರ ಕೋಪಕ್ಕೆ ಗುರಿಯಾಗುತ್ತಾರೆ. 1948 ರಲ್ಲಿ ಅವರನ್ನು ಮರಳಿ ಕರೆಸಿಕೊಂಡು ಬ್ರೆಝಿಲ್‌ನ ರಾಯಭಾರಿಯಾಗಿ ಕಳಿಸಲಾಗುತ್ತದೆ. 1949 ರವರೆಗೆ ಅವರು ಆ ಹುದ್ದೆಯಲ್ಲಿದ್ದರು.
ಅದು ಶೀತಲ ಸಮರದ ಕಾಲ. ಸೋವಿಯತ್ ಒಕ್ಕೂಟವು ಜಗತ್ತಿನಾದ್ಯಂತ ತನ್ನ ಹಿತಾಸಕ್ತಿಗಳಿಗೆ ಉತ್ತೇಜನ ನೀಡಲು ಮುಂಚೂಣಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿತ್ತು. ಈ ಸೋವಿಯತ್ ಸವಾಲನ್ನು ಹಿಮ್ಮೆಟ್ಟಿಸಲು ಅಂತರಾಷ್ಟ್ರೀಯ ಮಟ್ಟದ ಹಲವು ಸಂಘಟನೆಗಳನ್ನು ಹುಟ್ಟು ಹಾಕಲಾಗಿತ್ತು. ಅವುಗಳಲ್ಲಿ ಒಂದು ಪ್ಯಾರಿಸ್‌ನ “ಕಾಂಗ್ರೆಸ್ ಫಾರ್ ಕಲ್ಚರಲ್ ಫ್ರೀಡಂ” (ICCF).
ಮಸಾನಿಯವರು ಜಯಪ್ರಕಾಶ್ ನಾರಾಯಣ್, ಅಶೋಕ ಮೆಹ್ತಾ ಮತ್ತು ಎ.ಡಿ. ಗೋರ್ವಾಲಾ ಮೊದಲಾದವರೊಂದಿಗೆ ಸೇರಿಕೊಂಡು 1950 ರಲ್ಲಿ ಭಾರತದಲ್ಲಿಯೂ ICCF ಸ್ಥಾಪಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅದನ್ನು ಪ್ಯಾರಿಸ್‌ನ ಮೂಲ ಸಂಘಟನೆಯೊಂದಿಗೆ ಸಂಯೋಜಿಸುತ್ತಾರೆ. ICCF ಒಂದು ಪಕ್ಷಾತೀತ ಸಂಘಟನೆಯಾಗಿತ್ತು. ಅದರಲ್ಲಿ ಮುಕ್ತ ಅಭಿಪ್ರಾಯದ ವಿದ್ವಾಂಸರು, ಬರಹಗಾರರು, ಕಲಾವಿದರು ಮತ್ತು ವಿಜ್ಞಾನಿಗಳು ಸದಸ್ಯರಾಗಿದ್ದರು. ಅವರೆಲ್ಲ ಕಲೆಯನ್ನು ವಿಮರ್ಶಿಸಲು ಮತ್ತು ಪ್ರೋತ್ಸಾಹಿಸಲು ಬೇಕಾದ ಮುಕ್ತ ಬೌದ್ಧಿಕ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದರು.
ಅದಕ್ಕೂ ಎರಡು ವರ್ಷಗಳ ಹಿಂದೆ (1948 ರಲ್ಲಿ) ಅವರು ಆಗಿನ ಉಪ ಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಭಾರತದಲ್ಲಿ ಪ್ರತ್ಯೇಕತಾವಾದಿ ಸಿದ್ಧಾಂತವನ್ನು ನಿರ್ಮೂಲನೆ ಮಾಡಲು ಡೆಮಾಕ್ರಟಿಕ್ ರಿಸರ್ಚ್ ಸರ್ವಿಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಮಾಸ್ಕೋದ ಕಮಿಂಟರ್ಸ್ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದ ಮತ್ತು ಐವತ್ತರ ದಶಕದ ಆರಂಭದಲ್ಲಿ ಆಂಧ್ರಪ್ರದೇಶದಲ್ಲಿ ಹಿಂಸಾತ್ಮಕ ದಂಗೆಗಳನ್ನು ನಡೆಸಿದ್ದ ಕಮ್ಯುನಿಸ್ಟರಿಂದ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯಕ್ಕೆ ಆಗಬಹುದಾದ ಅಪಾಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಸಲು ಅದು ಪ್ರಯತ್ನಿಸುತ್ತಿತ್ತು.
1952 ರಲ್ಲಿ ಅವರು ಸ್ಥಾಪಿಸಿದ್ದ ಫ್ರೀಡಂ ಫಸ್ಟ್ ಪತ್ರಿಕೆಯ ಸಂಪಾದಕರಾಗಿದ್ದುಕೊಂಡು ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ಸಮಯದಲ್ಲಿ ವಿಧಿಸಲಾಗಿದ್ದ ಮಾಧ್ಯಮ ಸೆನ್ಸಾರ್‌ಶಿಪ್ ವಿರುದ್ಧ ಮಸಾನಿ ಹೋರಾಡಿದ್ದರು. ಅದಕ್ಕಾಗಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನಂತರ ಅದು ಫ್ರೀಡಂ ಫಸ್ಟ್ ಪ್ರಕರಣ ಎಂದೇ ಗುರುತಿಸಲ್ಪಟ್ಟಿತು. ನ್ಯಾಯಾಲಯ ಅವರ ಮಾತನ್ನು ಅಂಗೀಕರಿಸಿತಾದರೂ ಒಬ್ಬ ಸಂಪಾದಕನ ಸ್ವಾತಂತ್ರ್ಯವನ್ನು ನಿಭಾಯಿಸಲು ಹಲವು ಅಡೆತಡೆಗಳನ್ನು ಕಂಡ ಮಸಾನಿ ತನ್ನ ಪತ್ರಿಕೆಯನ್ನು ನಿಲ್ಲಿಸಿ ಬಿಡುತ್ತಾರೆ. ನಂತರದಲ್ಲಿ ಫ್ರೀಡಂ ಫಸ್ಟ್ ತ್ರೈಮಾಸಿಕವಾಗಿ ಪ್ರಕಟವಾಗಲು ಆರಂಭಿಸಿತು. ಅದು ಭಾರತದ ಉದಾರವಾದದ ನಿಜವಾದ ದನಿಯಾಗಿ ಗುರುತಿಸಲ್ಪಟ್ಟಿತು.
1978 ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಮಸಾನಿ ಅವರನ್ನು ದೇಶದ ಮೊಟ್ಟ ಮೊದಲ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ ಸಿದ್ಧಾಂತ ಮತ್ತು ವಿಧಾನಗಳ ಬಗೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದ ಅವರು ಬಹಳ ಬೇಗನೆ ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.
ಮಸಾನಿ ಅವರನ್ನು ಲಿಬರಲ್ ಇಂಟರ್‌ನ್ಯಾಷನಲ್ ಸಂಘಟನೆಯ ಪೋಷಕರಾಗಿ ಗೌರವಿಸಲಾಗಿತ್ತು. ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದರು. ಆದರೂ ಕೂಡ ತನ್ನನ್ನು ಹಾಗೆ ಕರೆಯುವುದನ್ನು ಅವರು ಇಷ್ಟ ಪಡುತ್ತಿರಲಿಲ್ಲ. ತನ್ನನ್ನು ಸಮಸ್ಯಾತ್ಮಕವಾಗಿದ್ದ “ಪಂಗಡೇತರ” ಎಂದೂ ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ಎಂದೂ ಕರೆದುಕೊಳ್ಳಲು ಇಷ್ಟ ಪಡುತ್ತಿದ್ದರು.
ನೆಹರೂ ಅವರ ಗೆಳೆಯ ಮತ್ತು ಬೆಂಬಲಿಗರಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಮಸಾನಿ, ನಂತರದಲ್ಲಿ ಸರ್ದಾರ್ ಪಟೇಲ್ ಅವರ ನೀತಿಗಳಲ್ಲಿ ಪ್ರಾಯೋಗಿಕೆತಯನ್ನು ಕಾಣಲು ಪ್ರಾರಂಭಿಸಿದ್ದರು. ರಾಜಕಾರಣದಿಂದ ನಿವೃತ್ತರಾದರೂ ಕೂಡ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿಯೇ ಇದ್ದರು. ಜೊತೆಗೆ ವೈಯಕ್ತಿಕ ಸ್ವಾತಂತ್ರ್ಯದ ದೊಡ್ಡ ದನಿಯಾಗಿದ್ದರು.
1968 ಮಾರ್ಚಲ್ಲಿ ಅವರು ಯುವಜನರ ಹಕ್ಕುಗಳು ಮತ್ತು ಅವರನ್ನು ಕರ್ತವ್ಯ ಪ್ರಜ್ಞೆಯಿರುವ ಉತ್ತಮ ನಾಗರೀಕರಾಗಿ ರೂಪಿಸಲು ಲೆಸ್ಲೀ ಸಾಹ್ನಿ ಪ್ರೋಗ್ರಾಂ ಆಫ್ ಟ್ರೈನಿಂಗ್ ಫಾರ್ ಡೆಮಾಕ್ರಸಿಯನ್ನು ಸ್ಥಾಪಿಸುತ್ತಾರೆ.
ಅವರು ಸೊಸೈಟಿ ಫಾರ್ ದಿ ರೈಟ್ ಟು ಡೈ ವಿದ್ ಡಿಗ್ನಿಟಿ ಸಂಘವನ್ನು ಸ್ಥಾಪಿಸಿದ್ದರು. ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರ ದಯಾಮರಣಕ್ಕಾಗಿ ಪ್ರಚಾರ ಕಾರ್ಯ ಆರಂಭಿಸಿದಾಗ ವಿವಾದದ ಕೇಂದ್ರಬಿಂದುವೂ ಆಗಿದ್ದರು. 1985 ರಲ್ಲಿ ಲೆಸ್ಲೀ ಸಾಹ್ನಿ ಪ್ರೋಗ್ರಾಂ ಮತ್ತು ಬಿ.ಆರ್. ಶೆಣೈ ಅವರ ಆರ್ಥಿಕ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಆರ್ಥಿಕ ಶಿಕ್ಷಣದ ಯೋಜನೆಯನ್ನು ಆರಂಭಿಸುತ್ತಾರೆ. ಅದು ಜನಸಾಮಾನ್ಯರಿಗೆ ಆರ್ಥಿಕತೆಯ ಕುರಿತ ಅರಿವನ್ನು ನೀಡಲು ಮತ್ತು ಎಂಭತ್ತರ ದಶಕದಲ್ಲಿ ಆರಂಭವಾಗಿದ್ದ ಆರ್ಥಿಕ ಸುಧಾರಣೆಗಳ ಕಡೆಗೆ ಹೆಚ್ಚು ಗಮನ ನೀಡಿತ್ತು.
ತನ್ನ ಸಾರ್ವಜನಿಕ ಜೀವನಲ್ಲಿ ಅತ್ಯುನ್ನತ ಮಟ್ಟದ ಪ್ರಾಮಾಣಿಕತೆಯ ಕಾರಣದಿಂದ ಅವರು ಖ್ಯಾತರಾಗಿದ್ದರು. ಅವರು ಒಬ್ಬ “ಯಶಸ್ವೀ” ರಾಜಕಾರಣಿ ಎಂದು ಗುರುತಿಸಲ್ಪಡದಿರಲು ಅವರಿಗಿದ್ದ ಈ ಅರ್ಹತೆಯೊಂದೇ ಸಾಕಾಗಿತ್ತು. ಸಾಮಾನ್ಯವಾಗಿ ಯಶಸ್ಸನ್ನು ಮಂತ್ರಿ ಪಟ್ಟ ಮತ್ತು ಇತರ ಹುದ್ದೆಗಳ ಮೂಲಕವೇ ಅಳೆಯಲಾಗುತ್ತದೆ.
1981 ರಲ್ಲಿ ಮಸಾನಿ ತಮ್ಮ ಆತ್ಮಕಥೆಯನ್ನು “ಅಗೈನ್ಸ್ಟ್ ದಿ ಟೈಡ್” ಎಂಬ ಹೆಸರಿನಲ್ಲಿ ಎರಡು ಸಂಪುಟಗಳಲ್ಲಿ ಬರೆದರು. ತನ್ನ ಆತ್ಮಕಥೆಯನ್ನು ಅವರು ಕೊನೆಗೊಳಿಸುವುದು ಹೀಗೆ:
“ನಮ್ಮ ರಾಜಕಾರಣಿಗಳು ಈಗಾಗಲೇ ರಿಪೇರಿ ಮಾಡಲು ಕೂಡ ಸಾಧ್ಯವಾಗದ ಅವಸ್ಥೆಯಲ್ಲಿರುವುದರಿಂದ, ದೇಶವನ್ನು ಉಳಿಸಬೇಕಾದರೆ, ಅದಕ್ಕೆ ಅತ್ಯಂತ ಸಣ್ಣ ಮನುಷ್ಯನೇ ಸಹಾಯ ಮಾಡಬೇಕಾಗುತ್ತದೆ. ಮುಖ್ಯವಾಗಿ, ನಗರದ ಮಧ್ಯಮ ವರ್ಗ ಮತ್ತು ಹಳ್ಳಿಗಳಲ್ಲಿ ಭೂಮಿ ಹೊಂದಿರುವ ರೈತರು. ಇವರುಗಳೇ ಈ ದೇಶದ ಬೆನ್ನೆಲುಬು. ಈ ವರ್ಗದ ಜನರು ನೆಹರೂ ಹೇರಿದ ಮತ್ತು ಈಗಲೂ ವ್ಯಾಪಕವಾಗಿರುವ ಸಮಾಜವಾದಿ ಮಾದರಿಯ ಅಡಿಯಲ್ಲಿ ಕ್ರೂರವಾಗಿ ಬಳಲುತ್ತಿವೆ. ಆದರೂ ಅವರ ಬೆನ್ನು ಮುರಿದಿಲ್ಲ. ಈ ದೇಶವನ್ನು ಉಳಿಸಲು ನಾನು ಅವರನ್ನೇ ಕಾಯುತ್ತಿದ್ದೇನೆ.”
ತನ್ನ ಸುತ್ತಲೂ ಯುಬಜನರು ನೆರೆದಿದ್ದರೆ ಬಹಳ ಸಂತೋಷ ಪಡುತ್ತಿದ್ದರು. ಹಾಗಾಗಿಯೇ ಅವರ ಮೊದಲ ಮತ್ತು ಕೊನೆಯ ಪುಸ್ತಕಗಳು ಯುವಕರಿಗಾಗಿಯೇ ಬರೆಯಲ್ಪಟ್ಟಿದ್ದವು ಎಂಬುದರಲ್ಲೂ ಆಶ್ಚರ್ಯವಿಲ್ಲ. ಮೊದಲನೆಯದ್ದು ಅವರ್ ಇಂಡಿಯಾ. ಅದು ಆ ಕಾಲದ ಅತಿ ಹೆಚ್ಚು ಮಾರಾಟವಾದ ಪುಸ್ತಕ ಮತ್ತು ಸ್ವಾತಂತ್ರ್ಯ ಪೂರ್ವ ಭಾರತದ ಶಾಲಾ ಪಠ್ಯಪುಸ್ತಕವೂ ಆಗಿತ್ತು. ನೆಹರೂ ಮತ್ತು ಅವರ ಸಂಘವನ್ನು ತೊರೆದ ನಂತರ ಆ ಪುಸ್ತಕ ಶಾಲೆಗಳಿಂದಲೂ ನಿರ್ಗಮಿಸಿದವು. ಕೊನೆಯ ಪುಸ್ತಕ ಅದರ ಮುಂದುವರಿಕೆಯಾದ ವಿ ಇಂಡಿಯನ್ಸ್. ಮೊದಲ ಪುಸ್ತಕದ ಪ್ರತಿ ಪುಟದಲ್ಲೂ ಆಶಾವಾದ ಪುಟಿಯುತ್ತಿತ್ತು. ಆದರೆ ಕೊನೆಯ ಪುಸ್ತಕದಲ್ಲಿ ವೈಫಲ್ಯದ ಬಗೆಗಿನ ತಪ್ಪೊಪ್ಪಿಗೆಯಿತ್ತು. ತನ್ನ ಪೀಳಿಗೆ ಮಾಡಿದ ತಪ್ಪನ್ನು ಯುವಕರಿಗೆ ಮನವರಿಕೆ ಮಾಡಿಸುವಂತಿತ್ತು.
ವಿ ಇಂಡಿಯನ್ಸ್ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಅವರು ಹೀಗೆ ಬರೆದಿದ್ದಾರೆ:
“ನನ್ನ ಅಭಿಪ್ರಾಯದಲ್ಲಿ, ನಮ್ಮ ಪೀಳಿಗೆಯು ನಮ್ಮ ದೇಶವನ್ನು ಅದೆಷ್ಟು ಹದಗೆಡಿಸಿದ್ದೇವೆಂದರೆ, ನನ್ನಂತವರು ಯುವಜನರಿಗೆ ಪಾಠ ಮಾಡುವ ಹಕ್ಕನ್ನೇ ಕಳೆದುಕೊಂಡಿದ್ದೇವೆ…”
1998 ರಲ್ಲಿ ಅವರು ಮುಂಬೈಯಲ್ಲಿ ನಿಧನರಾದರು.
1946 ರಲ್ಲಿ ಶ್ರೀಮತಿ ಶಕುಂತಲಾ ಶ್ರೀವಾಸ್ತವರನ್ನು ವಿವಾಹವಾಗಿದ್ದ ಅವರಿಗೆ ಜರೀರ್ ಮಸಾನಿ ಎಂಬ ಮಗನಿದ್ದರು.
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.
