Home ಅಂಕಣ ಬೊಗಸೆಗೆ ದಕ್ಕಿದ್ದು-62: ಅಗಲಿದ ಗುರುಗಳಿಗೆ ಕೃತಜ್ಞ ವಿದ್ಯಾರ್ಥಿಯ ಕಂಬನಿ

ಬೊಗಸೆಗೆ ದಕ್ಕಿದ್ದು-62: ಅಗಲಿದ ಗುರುಗಳಿಗೆ ಕೃತಜ್ಞ ವಿದ್ಯಾರ್ಥಿಯ ಕಂಬನಿ

0

“..ನನಗೆ ಮತ್ತು ನನ್ನಂತಾ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು ಎಂಬ ಕಾರಣಕ್ಕಾಗಿ ಇದನ್ನು ಬರೆಯುತ್ತಿಲ್ಲ. ಅಂತವರು ಸಾವಿರಾರು ಜನರು ಇದ್ದಾರೆ ಮತ್ತು ಆಗಿ ಹೋಗಿದ್ದಾರೆ. ಆದರೆ, ಕೃಷ್ಣರಾಜ ಮಾಸ್ಟ್ರ ಛಾಪೇ ಬೇರೆ..” ಒಂದು ಭಾವನಾತ್ಮಕ ಬರಹ ತಪ್ಪದೇ ಓದಿ.. ನಿಖಿಲ್ ಕೋಲ್ಪೆಯವರ ಬರಹದಲ್ಲಿ

ನಾನಿಂದು ಏನಾದರೂ ಬರವಣಿಗೆ ಮಾಡುತ್ತಿದ್ದರೆ, ಏನಾದರೂ ಮೌಲ್ಯಗಳನ್ನು ಇಟ್ಟುಕೊಂಡಿದ್ದರೆ, ಅದಕ್ಕೆ ಅಡಿಪಾಯ ಹಾಕಿದವರಲ್ಲಿ ಒಬ್ಬರಾದ ಗುರುಗಳು- ನಾಟಿ ಕೃಷ್ಣರಾಜ ಶೆಟ್ಟಿ ಮಾಸ್ಟ್ರು ಕೆಳದಿನಗಳ ಹಿಂದೆ ತಮ್ಮ 91ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ತಮ್ಮ ಮಗಳ ಮನೆಯಲ್ಲಿ ನಿಧನರಾದರು ಎಂದು ತಿಳಿದಾಗ, ಅವರ ಅಂತ್ಯ ಸಂಸ್ಕಾರ ಅದೇ ದಿನ ಮಧ್ಯಾಹ್ನ ನಮ್ಮ ಊರಿನಲ್ಲೇ ಮುಗಿದಾಗಿತ್ತು. ಹೋಗಲಾಗಲಿಲ್ಲ. ಆದರೆ, ಅವರನ್ನು ಜೀವನವಿಡೀ ಮತ್ತೆ ಮತ್ತೆ ನೆಪಿಸಿಕೊಳ್ಳುತ್ತಾ ಬಂದಿದ್ದೇನೆ. ಎಂದಿಗೂ ಮರೆತು ಹೋಗುವಂತವರಲ್ಲ!

ನನಗೆ ಮತ್ತು ನನ್ನಂತಾ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು ಎಂಬ ಕಾರಣಕ್ಕಾಗಿ ಇದನ್ನು ಬರೆಯುತ್ತಿಲ್ಲ. ಅಂತವರು ಸಾವಿರಾರು ಜನರು ಇದ್ದಾರೆ ಮತ್ತು ಆಗಿ ಹೋಗಿದ್ದಾರೆ. ಆದರೆ, ಕೃಷ್ಣರಾಜ ಮಾಸ್ಟ್ರ ಛಾಪೇ ಬೇರೆ. ಶಾಲೆಯಲ್ಲಿ ಇರುವಾಗಲೂ ಶಾಲೆಬಿಟ್ಟ ನಂತರವೂ ವಿದ್ಯಾರ್ಥಿಗಳ ಗೌರವವನ್ನು ನಿರಂತರವಾಗಿ ಉಳಿಸಿಕೊಂಡು ಬಂದವರು ಅವರು. ಊರಲ್ಲೆಲ್ಲಾ ಕೃಷ್ಣರಾಜ ಮಾಸ್ಟ್ರು ಎಂದರೆ, ಎಲ್ಲರಿಗೂ ಬಹಳ ಗೌರವ. ನಾನು ಕಲಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ, ಪಾಣೆಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಶತಮಾನೋತ್ಸವ ಆಚರಿಸಿದ ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ದಶಕಗಳ ಸೇವೆ ಸಲ್ಲಿಸಿದವರು. ಹೆಸರಿನಲ್ಲಿ ಶೆಟ್ಟಿ ಎಂದಿರುವುದರಿಂದ ಕೆಲವರು ಅವರನ್ನು ಬಂಟರೆಂದು ತಪ್ಪು ತಿಳಿದಿದ್ದರು. ಆದರೆ, ಅವರು ಜೈನರು. ಅವರ ಜಾತಿ ಉಲ್ಲೇಖಿಸಲು ಕಾರಣ ಎಂದರೆ, “ಮೇಲು ಜಾತಿ” ವ್ಯಾಪಾರಿ ವರ್ಗದ ಉಳ್ಳವರ ಆಡಳಿತವಿದ್ದ ಶಾಲೆಯಲ್ಲಿ ಆ ಜಾತಿಯ ಮತ್ತು ಬ್ರಾಹ್ಮಣ ಶಿಕ್ಷಕರ ಸಂಖ್ಯಾಬಲವಿತ್ತು. ನೇರನೇರ ಜಾತಿ ತಾರತಮ್ಯ ಇಲ್ಲದಿದ್ದರೂ, ಒಳಗೊಳಗೇ ಸೂಕ್ಷ್ಮ ಪಕ್ಷಪಾತವಿತ್ತು. ನಾನೀಗ ಹೇಳುತ್ತಿರುವುದು ಐದು ದಶಕಗಳ ಹಿಂದಿನ ಕತೆಗಳು. ಇಂತದ್ದರಲ್ಲಿ ಎಲ್ಲಾ ಮಕ್ಕಳನ್ನು ಜಾತಿಧರ್ಮ ಭೇದವಿಲ್ಲದೇ ಎಲ್ಲರನ್ನೂ ಮಕ್ಕಳಂತೆಯೇ ಪ್ರೀತಿಸುತ್ತಿದ್ದ, ಜೊತೆಗೆ ಅಪರೂಪಕ್ಕೆ- “ಅರ್ಹ”ರಿಗೆ ಅವರ ಮಗ, ಇವರ ಮಗ ಎಂಬ ಭೇದ ಇಲ್ಲದೇ ಚಿಕ್ಕದೊಂದು ನಾಗರ ಬೆತ್ತದಿಂದ ಬೇಕಾದಷ್ಟೇ ಬಿಸಿಮುಟ್ಟಿಸುತ್ತಿದ್ದ ಇವರು, ಅಪರೂಪದ ಶಿಕ್ಷಕರು. ಕಪ್ಪು, ಗಟ್ಟಿಮುಟ್ಟಾದ ದೇಹದ, ಹುರಿ ಮೀಸೆಯ ಗಂಟೆಯಂತಾ ಗಡಸು ಕಂಠದ ಇವರು, ಬೆಳಿಗ್ಗೆ ಶಾಲೆಯಲ್ಲಿ ಬೆಳಿಗ್ಗೆ, ಪಾಠಗಳ ಮಧ್ಯದ ವಿರಾಮದ ಸಮಯದಲ್ಲಿ ಮಕ್ಕಳ ಬೊಬ್ಬೆ, ಚೀರಾಟ ಮಿತಿ ಮೀರಿದಾಗ ಆಪೀಸು ಕೋಣೆಯಿಂದ ಹೊರಬಂದು, “ಯಾರದೂ?!!” ಎಂದು ಒಮ್ಮೆ ಘರ್ಜಿಸಿದರೆ, ಒಂದರಿಂದ ಏಳನೇ ತರಗತಿ ವರೆಗಿನ 16 ಕ್ಲಾಸುಗಳ ಮಕ್ಕಳೂ ಸಿಡಿಲು ಬಡಿದಂತೆ ಗಪ್‌ಚುಪ್! ಶಾಲೆಯಲ್ಲಿ ಯಾರೂ ಇಲ್ಲವೇ ಇಲ್ಲವೆಂಬಷ್ಟು ಮೌನ.

ಆದರೂ, ಇವರ ತರಗತಿಯೆಂದರೆ, ಮಕ್ಕಳಿಗೆ ಅತ್ಯುತ್ಸಾಹ! ದಪ್ಪ ಹುರಿಮೀಸೆಯ ಹಿಂದಿನ ನಸುನಗುವಿನಲ್ಲಿ ಏನೋ ಆಯಸ್ಕಾಂತವಿತ್ತು. ನವಿರು ಹಾಸ್ಯದೊಂದಿಗೆ ಪಾಠ. ಮಕ್ಕಳೊಂದಿಗೂ, ದೊಡ್ಡವರೊಂದಿಗೂ ಸಂವಹನ ಕಲೆಯೆಂಬುದು ಅವರಿಗೆ ಸಿದ್ಧಿಸಿತ್ತು. ಉದಾಹಣೆಗೆ ಇಂಗ್ಲೀಷ್ ಕಲಿಸುತ್ತಾ, “ಜಿ. ಎಲ್. ಎ. ಎಸ್. ಎಸ್- ಗ್ಲಾಸ್” ಎಂದವರೇ ತಕ್ಷಣವೇ “ಕೆಳಗೆ ಬಿದ್ದರೆ ಖಲಾಸ್” ಎನ್ನುತ್ತಿದ್ದರು. ಯಾರೂ ಇಂದಿಗೂ, ಇಂತಾ ಸ್ಪೆಲ್ಲಿಂಗುಗಳನ್ನು ಮರೆತಿರಲಾರರು. ಶಾಲೆಯಲ್ಲಿ ಸಾಕಷ್ಟು ಕೊಠಡಿಗಳು ಇದ್ದರೂ, ಕೆಲವೊಮ್ಮೆ ಇವರ ಪಾಠ ಆಫೀಸು ಕೋಣೆಯ ಹೊರಗಿನ ವಿಶಾಲವಾದ ಜಗಲಿಯಲ್ಲಿ ನಡೆಯುತ್ತಿತ್ತು. ಹೊರಗಿನ ಮುಕ್ತ ವಾತಾವರಣವೇ ಕಲಿಕೆಗೆ ಹೆಚ್ಚು ಪೂರಕ ಎಂಬುದು ಅವರ ನಂಬಿಕೆ.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸ್ಕೌಟ್ಸ್ ಶಿಕ್ಷಕರಾಗಿದ್ದ ಅವರು ನನ್ನಂಥ ಮಕ್ಕಳಲ್ಲಿ ಕೆಲವು ಮೌಲ್ಯಗಳು ಮತ್ತು ಪರೋಪಕಾರಿ ಬುದ್ಧಿಯನ್ನು ಬೆಳೆಸಿದರು. ಇವರು ಯಕ್ಷಗಾನ ತಾಳಮದ್ದಳೆಯಲ್ಲೂ ಎತ್ತಿದ ಕೈ. ತಾಳಮದ್ದಳೆ ಎಂದರೆ ಏನೆಂದು ಗೊತ್ತಿಲ್ಲದವರಿಗಾಗಿ ಹೇಳಬೇಕೆಂದರೆ, ಅದು ಯಕ್ಷಗಾನದ ಮರಿ ರೂಪ. ಆದರೆ, ಇದರಲ್ಲಿ ವೇಷದಾರಿಗಳು ಭಾಗವತರ ಎದುರು ತಮ್ಮ ಪಾತ್ರಗಳಿಗೆ ಅನುಗುಣವಾಗಿ ಎದುರುಬದುರು ಕುಳಿತಿರುತ್ತಾರೆ. ವೇಷ ಮತ್ತು ಕುಣಿತ ಇರುವುದಿಲ್ಲ. ಮಾತುಗಾರಿಕೆಯೇ ಪ್ರಧಾನ. ವೇಷವಿಲ್ಲದ ಕಾರಣದಿಂದ ಪಾತ್ರವನ್ನೂ ಮಾತಿನಲ್ಲೇ ಕಟ್ಟಿಕೊಡಬೇಕು. ಯಕ್ಷಗಾನದಂತೆ ಇಲ್ಲಿಯೂ ಸಂಭಾಷಣೆಗಳನ್ನು ಯಾರೂ ಬರೆದಿರುವುದಿಲ್ಲ. ಪಾತ್ರಧಾರಿಗಳೇ ಕಲ್ಪನೆಯಿಂದ ಸಂಭಾಷಣೆಯನ್ನು ಸ್ಥಳದಲ್ಲೇ ಕಟ್ಟಿಕೊಡಬೇಕು. ಎರಡು ಪಾತ್ರಗಳ ನಡುವೆ ಆಳವಾದ ಸ್ವಾರಸ್ಯಕರ ತಿಕ್ಕಾಟಗಳೂ ಉಂಟಾಗುತ್ತವೆ. ಕೃಷ್ಣರಾಜ ಮಾಸ್ಟ್ರು ನಿರ್ಗಳವಾದ ಮಾತುಗಾರಿಕೆ ಮತ್ತು ಪಾತ್ರಗಳ ಆಯಾಮಗಳ ವಿಸ್ತರಣೆಯ ಮೂಲಕ ಬೆಳಗುತ್ತಿದ್ದರು. ಪ್ರತೀ ಶನಿವಾರ ಸಂಜೆ ಶಾಲೆಯ ಜಗಲಿಯಲ್ಲೋ, ಬೇರೆಲ್ಲೋ ನಡೆಯುತ್ತಿದ್ದ ಈ ತಾಳಮದ್ದಳೆಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪ್ರಸಿದ್ಧ ಅರ್ಥದಾರಿಗಳೊಂದಿಗೆ ಇವರು ವಾಗ್ಯುದ್ಧ ನಡೆಸುವುದನ್ನು ಕೇಳಿದ್ದೇನೆ. ಊರಿನ ಆಸಕ್ತರೂ ನೆರೆಯುತ್ತಿದ್ದರು. ಇದರಿಂದ ನಮ್ಮ ಪದ ಸಂಪತ್ತು ಹೆಚ್ಚಾಗುತ್ತಿತ್ತು. ಅಪರೂಪಕ್ಕೆ ಹವ್ಯಾಸಿ ಪ್ರದರ್ಶನಗಳಲ್ಲಿ ವೇಷವನ್ನೂ ಹಾಕುತ್ತಿದ್ದರು. ಅವರ ಬಗ್ಗೆ ಹೇಳುವುದಿದ್ದರೆ ಹೇಳಲು ಬಹಳಷ್ಟು ಇದೆ. ಆದರೆ, ನನ್ನ ಮೇಲೆ ತೀರ ಪ್ರಭಾವ ಬೀರಿದ ಕೆಲವೊಂದು ಹಳೆಯ ಘಟನೆಗಳನ್ನಷ್ಟೇ ಇಲ್ಲಿ ಹೇಳುತ್ತೇನೆ.

ನಾನು ಏಳನೇ ತರಗತಿಯ ಕೊನೆಯ ಪಬ್ಲಿಕ್ ಪರೀಕ್ಷೆ ತನಕ ಯಾವತ್ತೂ ತರಗತಿಯಲ್ಲಿ ಎರಡನೆಯವನಾಗಿ ಬರುತ್ತಿದ್ದೆ. ಆಡಳಿತವಿದ್ದ ಜಾತಿಯ ಒಬ್ಬ ಹುಡುಗ ಯಾವತ್ತೂ ಒಂದು ಅಥವಾ ಎರಡು ಮಾರ್ಕುಗಳಿಂದ ಮೊದಲ ಸ್ಥಾನವನ್ನೇ ಪಡೆಯುತ್ತಿದ್ದ. ಆತ ನನ್ನ ಗೆಳೆಯನೇ ಆಗಿದ್ದರೂ, ಪ್ರತಿಸ್ಪರ್ಧಿ. ಒಂದಿಬ್ಬರು ಶಿಕ್ಷಕರು ಒಂದೇ ರೀತಿಯ ಉತ್ತರಕ್ಕೂ ಆತನಿಗೆ ಎರಡು, ನನಗೆ ಒಂದು ಮಾರ್ಕು ಕೊಡುತ್ತಿದ್ದರು. ಒಂದು ಸಲ ಆರನೇ ತರಗತಿಯಲ್ಲಿ ಏನಾಯಿತೆಂದರೆ, ಮಕ್ಕಳಿಗೆ ಯಾವಗಲೂ ತಿದ್ದಿ ಮಾರ್ಕು ಹಾಕಿದ ಉತ್ತರ ಪತ್ರಿಕೆಗಳನ್ನು ತರಗತಿಯಲ್ಲೇ ನೀಡಲಾಗುತ್ತಿತ್ತು. ಆ ಜಾತಿಗೆ ಸೇರಿದ್ದ, ಬಡವರೂ, ಸಾಧು ಸ್ವಭಾವದ ಶಿಕ್ಷಕಿಯೊಬ್ಬರು- ಒಂದು ಉತ್ತರವನ್ನು ನಾನು ಸರಿಯಾಗಿ ಮತ್ತು ಸ್ವಲ್ಪ ಹೆಚ್ಚೇ ಬರೆದಿದ್ದರೂ ಯಾವುದೋ ದಾಕ್ಷಿಣ್ಯಕ್ಕೆ ಒಳಗಾಗಿ- ನನಗೆ ಕಡಿಮೆ ಅಂಕ ನೀಡಿದ್ದರು. ಅನ್ಯಾಯ ಪ್ರತಿಭಟಿಸಬೇಕು ಎಂದು ತಂದೆಯವರು ಹೇಳುತ್ತಿದ್ದುದು ನನ್ನಲ್ಲಿ ಜಾಗೃತವಾಗಿ, ದೊಡ್ಡ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರ ಕತೆಗಳೆಲ್ಲ ನೆನಪಿಗೆ ಬಂದು, ನೇರವಾಗಿ ಪ್ರತಿಭಟಿಸಿ, ಮುಖ್ಯೋಪಾಧ್ಯಾಯರಾಗಿದ್ದ ಕೃಷ್ಣರಾಜ ಸಾರ್ ಬಳಿ ದೂರು ನೀಡಿದೆ. ಉತ್ತರ ಪತ್ರಿಕೆ ನೋಡಿದ ಅವರು, ಬೀರಿದ ಒಂದು ಕಿಡಿನೋಟಕ್ಕೇ ಟೀಚರ್ ಪಾಪಪ್ರಜ್ಞೆಯಿಂದ ಬೆವತು ಮುದುಡಿದ್ದರು. ನನಗೆ ಅವರನ್ನು ಕಂಡು ಬೇಸರವಾಯಿತು. ಮುಂದೆ ಅವರು ಹಾಗೆ ಮಾಡಲಿಲ್ಲ.

ನಮ್ಮ ಶಾಲೆಯಲ್ಲಿ ಆಗಲೇ ಮಂತ್ರಿಮಂಡಲ ರಚಿಸಲಾಗುತ್ತಿತ್ತು. ಮುಖ್ಯಮಂತ್ರಿ, ಗೃಹ ಮಂತ್ರಿ… ಹೀಗೆ ಹಲವಾರು ಮಂತ್ರಿಗಳು! ಮೇಲೆ ಹೇಳಿದ ಜಾತಿಯ, ತೀರಾ ಜಾತಿವಾದಿ, ಕೋಮುವಾದಿ, ಕುತಂತ್ರಿ ಆದರೆ ಚೆನ್ನಾಗಿಯೇ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರು ಆಡಳಿತ ಮಂಡಳಿಯ ಗುಪ್ತಚರ ಏಜೆಂಟ್ ಆಗಿದ್ದು, ಇದರ ಉಸ್ತುವಾರಿ. ಮೇಲೆ ಹೇಳಿದ ಆ ವಿದ್ಯಾರ್ಥಿಯೇ ಮುಖ್ಯಮಂತ್ರಿ. ಕೆಲವು ಮೇಲ್ಜಾತಿಯ ದಡ್ಡ ಪಡಪೋಷಿಗಳನ್ನು ಕೂಡ ಮಂತ್ರಿ ಮಾಡಲಾಗಿದ್ದರೂ, ಕಲಿಯುವುದರಲ್ಲಿ ಚೆನ್ನಾಗಿದ್ದ ನನಗೆ ಯಾವುದೇ ಮಂತ್ರಿಗಿರಿ ದಕ್ಕಿರಲಿಲ್ಲ! ಇದನ್ನು ವಿರೋಧಿಸಿ ಬ್ರಾಹ್ಮಣರು ಸೇರಿದಂತೆ, ಕೆಲವು ಶಿಕ್ಷಕರು ಮುಖ್ಯೋಪಾಧ್ಯಾಯರ ಗಮನಕ್ಕೆ ತಂದರು. ಆಗ ಕೃಷ್ಣರಾಜ ಮಾಸ್ಟ್ರು ಲೈಬ್ರರಿ ಮಂತ್ರಿ ಎಂಬ ಹೊಸ ಹುದ್ದೆಯನ್ನೇ ಆರಂಭಿಸಿ, ನನ್ನನ್ನು ಮಂತ್ರಿ ಮಾಡಿದರು. ಆ ವರ್ಷವಷ್ಟೇ ಶಾಲೆಗೆ ಹೊಸದಾಗಿ ಬಂದ ಮೂವರು ಶಿಕ್ಷಕರಲ್ಲಿ ಒಬ್ಬರಾಗಿದ್ದ ಜಯಂತ ನಾಯಕ್ ಅವರೊಂದಿಗೆ ನನಗೆ ಲೈಬ್ರರಿಯ ಉಸ್ತುವಾರಿ ನೀಡಲಾಗಿತ್ತು. ನಾವಿಬ್ಬರೂ ಸೇರಿ ಸುಮಾರು 10,000 ಪುಸ್ತಕಗಳನ್ನು ಧೂಳು ಒರೆಸಿ, ನಂಬರ್ ಕೊಟ್ಟು, ಹೆಸರೂ ನಂಬರೂ ಮಹಾ ಲೆಡ್ಜರ್‌ನಲ್ಲಿ ಪಟ್ಟಿ ಮಾಡಿ, ಕ್ರಮವಾಗಿ ಜೋಡಿಸಿದ್ದೆವು. ವಾರಕ್ಕೊಂದು ದಿನ ಒಂದೊಂದು ತರಗತಿಗೆ ಹೋಗಿ, ಮಕ್ಕಳಿಗೆ ಪುಸ್ತಕಗಳನ್ನು ಕೊಡುವ ಎರವಲು ಕೊಡುವ ಕಾರ್ಯಕ್ರಮ ಆರಂಭಿಸಿದೆವು. ಈಗಲೂ ಆ ಪಟ್ಟಿಯಲ್ಲಿ ನನ್ನ ಮತ್ತು ಜಯಂತ ನಾಯಕ್ ಅವರ ಅಕ್ಷರಗಳನ್ನೇ ಬಹುತೇಕ ಕಾಣಬಹುದು. ಇದರಿಂದಾಗಿ ನನಗೆ ಆ ತನಕ ಕಂಡು, ಕೇಳರಿಯದ ನೂರಾರು ಪುಸ್ತಕಗಳ ಪರಿಚಯವಾಯಿತು. ಶಿವರಾಮ ಕಾರಂತರ ಬಾಲಜಗತ್ತು- ಮಕ್ಕಳ ವಿಶ್ವಕೋಶಗಳನ್ನು ನಾನು ಮೊದಲು ನೋಡಿ ಅಚ್ಚರಿಪಟ್ಟದ್ದು ಮತ್ತು ಓದಿದ್ದು ಆಗಲೇ. ನನಗೆ ಬೇಕಾದಷ್ಟು ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದುವ ಅನುಮತಿಯನ್ನೂ ಇದೇ ಕೃಷ್ಣರಾಜ ಸರ್ ಕೊಟ್ಟಿದ್ದರು. ದಿನ ರಾತ್ರಿ ಓದುವುದೇ ಕೆಲಸವಾಯಿತು. ಪ್ರತಿದಿನ ಶಾಲೆ ಬಿಟ್ಟು ಮನೆ ಸೇರುವಾಗಲೂ ಮುಸ್ಸಂಜೆಯಾಗುತ್ತಿತ್ತು. ಇದರಿಂದ ನನ್ನ ಸಾಹಿತ್ಯ ಆಸಕ್ತಿ, ಜ್ಞಾನ ಮತ್ತು ಪ್ರತಿಯೊಂದು ವಿಷಯದ ಕುರಿತು ತಣಿಯದ ಕುತೂಹಲ ಬೆಳೆಯಿತು. ಆ ಅಭ್ಯಾಸ ಇಂದಿಗೂ ಉಳಿದುಕೊಂಡು ಬಂದಿದೆ. ಅದಕ್ಕಾಗಿ ನಾನು ಕೃಷ್ಣರಾಜ ಸರ್‌ಗೆ ಸದಾ ಋಣಿ ಆಗಿರಬೇಕು.

ಏಳನೇ ತರಗತಿಯಲ್ಲಿರುವಾಗ ಸುರತ್ಕಲ್ಲಿನ ಹೈಸ್ಕೂಲೊಂದರಲ್ಲಿ ಸೌಟ್ಸ್, ಗೈಡ್ಸ್ ಶಿಬಿರವಿತ್ತು. ನಾನು ನಮ್ಮ ಶಾಲೆಯ ಟ್ರೂಪ್ ಲೀಡರ್ ಆಗಿದ್ದೆ. ಒಂದು ದಿನ, ಭಾನುವಾರ ಬೆಳಿಗ್ಗೆ ಎದ್ದು ನಾನೂ, ಉಳಿದ ಕೆಲವರೂ ದೊಡ್ಡದಾದ ಕ್ಯಾಂಪಸಲ್ಲಿ ತಿರುಗಾಡುತ್ತಿದ್ದಾಗ ಅಲ್ಲೊಂದು ಚರ್ಚಿನಲ್ಲಿ (ಚಾಪೆಲ್ ಇರಬಹುದು) ಪೂಜೆ ನಡೆಯುತ್ತಿದ್ದು, ಬಹಳ ಜನರು ಸೇರಿದ್ದರು. ನಾವೂ ಬೆರಗಿನಿಂದ ಹೊಕ್ಕೆವು. ಚರ್ಚಿಗೆ ಹೋಗುವುದು ನನಗೆ ಹೊಸದಲ್ಲವಾದರೂ, ಉಳಿದ, ಜಿಎಸ್‌ಬಿ ಮತ್ತು ಬ್ರಾಹ್ಮಣರು ಸೇರಿದಂತೆ ಎಲ್ಲಾ ಹುಡುಗರಿಗೆ ಹೊಸತು. ಅಲ್ಲಿ ಎಲ್ಲಾ ಮಕ್ಕಳು ಸಾಲಾಗಿ ನಿಂತಿದ್ದರು. ನಾವೂ ಸೇರಿಕೊಂಡೆವು. ಎಲ್ಲರೂ ಮೊಣಕಾಲೂರಿದರು. ನಾವೂ ಊರಿದೆವು. ಪಾದ್ರಿಯವರು ಎಲ್ಲರ ನಾಲಗೆ ಮೇಲೆ ಚಿಕ್ಕ ವೇಫರ್‌ನಂತದ್ದು ಇಟ್ಟರು. ನಾವು ಅದನ್ನು ದೇವರ ಪ್ರಸಾದ ಎಂದು ನುಂಗಿದೆವು. ಅದನ್ನು ಹೋಲಿ ಕಮ್ಯುನಿಯನ್, ಹೋಲಿ ಕನ್ಫರ್ಮೇಷನ್ ಆದ ಕ್ರೈಸ್ತ ಮಕ್ಕಳಿಗೆ ಮಾತ್ರ ಕೊಡುವುದೆಂದು ಆಗ ನನಗೆ ಗೊತ್ತಿರಲಿಲ್ಲ.

ನಾವು ಶಾಲೆಗೆ ಮರಳಿದ ನಂತರ ಅಲ್ಲಲ್ಲಿ ಗುಸುಗುಸು ಶುರುವಾಯಿತು. ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿರುವಂತಿತ್ತು. ಆರೋಪ ಎಂದರೆ, ನಾನು ಜಿಎಸ್‌ಬಿ ಮತ್ತು ಬ್ರಾಹ್ಮಣ ಹುಡುಗರ ಜಾತಿ ಕೆಡಿಸಿದೆ ಎಂದು. ನನ್ನ ಮನೆಗೆ ದೂರು ಹೋದರೂ, ಯಾರೂ ಕ್ಯಾರೇ ಅನ್ನಲಿಲ್ಲ. ಇದು ಮಹಾಪರಾಧ ಎಂಬಂತೆ ಆರಂಭವಾದರೂ ಗುಸುಗುಸು ಹಂತದಲ್ಲೇ ದೊಡ್ಡ ವಿಷಯವಾಗದೇ ಮುಚ್ಚಿಹೋದುದಕ್ಕೆ ಮೊದಲೇ ಹೇಳಿದಂತೆ ಮುಖ್ಯೋಪಾಧ್ಯಾಯರೂ ಸ್ಕೌಟ್ಸ್ ಶಿಕ್ಷಕರೂ ಆಗಿದ್ದ ಕೃಷ್ಣರಾಜ ಸಾರ್ ಕಾರಣ. ನನ್ನನ್ನು ವಿಚಾರಿಸಿದಾಗ ನಾನು, “ದೇವರೊಬ್ಬನೇ, ನಾಮ ಹಲವು” ಎಂದು ನೀವೇ ಕಲಿಸಿದ್ದು ಎಂದು ಮುಗ್ಧವಾಗಿ ಹೇಳಿದೆ. ಅವರು ಆಡಳಿತದ ಎದುರು ನನ್ನನ್ನು ಸಮರ್ಥಿಸಿಕೊಂಡು, “ಮಕ್ಕಳಿಗೆಂತಾ ದೇವರು? ಮಕ್ಕಳೇ ದೇವರು!” ಎಂದು ಘಟನೆಯನ್ನು ಎಲ್ಲರ ಹಿತದೃಷ್ಟಿಯಿಂದ ಯಾರಿಗೂ ಹೇಳಬಾರದು ಎಂದು ಎಲ್ಲರಿಗೂ ಮನವರಿಕೆ ಮಾಡಿದರಂತೆ!

ಆ ಕಾಲದಲ್ಲಿ ಒಂದಿಬ್ಬರು ಶಿಕ್ಷಕರು ಮಕ್ಕಳಿಗೆ ಕ್ರೂರವಾಗಿ ಹೊಡೆಯುತ್ತಿದ್ದರು. ಒಬ್ಬರ ಬೆತ್ತವಂತೂ ಆರಡಿ ಎತ್ತರ, ಬೆತ್ತದಂತೆ ತೆಳ್ಳಗಿದ್ದ ಅವರ ಸೊಂಟಕ್ಕೆ ಬರುತ್ತಿತ್ತು. ಕೃಷ್ಣರಾಜ ಸರ್ ಅವರು, ಎಂದಿಗೂ ಮಕ್ಕಳಿಗೆ ಕೋಪದಿಂದ, ನೋವಾಗಲಿ ಎಂಬಂತೆ ಹೊಡೆಯುತ್ತಿರಲಿಲ್ಲ. ಅವರ ಕೈಯಲ್ಲಿದ್ದ ತೆಳ್ಳಗಿನ ಒಂದೂವರೆ ಅಡಿ ಉದ್ದದ ನಾಗರಬೆತ್ತವು ಆ ಕಾಲದ ಒಂದು ಸಂಕೇತ ಮಾತ್ರವೇ ಆಗಿದ್ದು, ಅಪರೂಪಕ್ಕೆ ಕ್ಲಿನಿಕಲ್ ಆಗಿ ಬಳಕೆಯಾಗುತ್ತಿತ್ತು. ನಂತರದ ವರ್ಷಗಳಲ್ಲಿ ಬೆತ್ತ ಎಲ್ಲರ ಕೈಗಳಿಂದ ಮಾಯವಾಗಿತ್ತು.  ಆ ವರ್ಷ, ಏಳನೇ ತರಗತಿಗೆ ನಮ್ಮದೇ ಕೊನೆಯ ಪಬ್ಲಿಕ್ ಪರೀಕ್ಷೆ. ಅದಕ್ಕೆ ಮುಂಚಿತವಾಗಿ ಮಾಸ್ಟ್ರು ಜಗಲಿಯಲ್ಲಿ ಒಂದು ಚಿಕ್ಕ ಪರೀಕ್ಷೆ ನಡೆಸಿದರು. ಅದು ಇಂಗ್ಲೀಷಿನಲ್ಲಿ. ಆದರೆ ಅದರಲ್ಲಿ ನಾನೊಬ್ಬನೇ ಜಸ್ಟ್ ಪಾಸ್ ಆಗಿದ್ದೆ. ಮಾರ್ಕುಗಳನ್ನು ಕಂಡು ಜಗಲಿಯಲ್ಲಿ ತಮ್ಮೆದುರು ಗುಂಪಾಗಿ ಕುಳಿತಿದ್ದ ನಮ್ಮನ್ನು ನೋಡಿ ಗಳಗಳನೇ ಅತ್ತು, “ನಾನು ನಿಮಗೆ ರಜೆ ಸಮಯ ಬಿಟ್ಟು ಉಳಿದ ಒಂಭತ್ತು ತಿಂಗಳು ಪಾಠ ಮಾಡಿದ್ದಕ್ಕೆ, ನೀವು ತಿಂಗಳಿಗೊಂದು ಮಾರ್ಕು ತೆಗೆದಿದ್ದರೂ ಪಾಸ್ ಆಗುತ್ತಿದ್ದಿರಿ!” ಎಂದರು. ನಾವು ಸದಾ ಗೌರವಿಸುತ್ತಿದ್ದ ಮೇಷ್ಟ್ರು ಕಣ್ಣೀರು ಹಾಕಿದ್ದು ನೋಡಿ ನಮಗೆಲ್ಲ ತೀರಾ ಕಸಿವಿಸಿ ಆಯಿತು. ನಂತರ, ಫೇಲಾದ ಎಲ್ಲರನ್ನೂ ಸಾಲಾಗಿ ಕರೆದು, ಅಂಗೈಗೆ ಚಿಕ್ಕ ಚಿಕ್ಕ ಪೆಟ್ಟು ಕೊಟ್ಟರು. ನಾನು ಹೇಗೂ ಪಾಸಾಗಿದ್ದೇನಲ್ಲ; ನನಗೆ ಪೆಟ್ಟು ಬೀಳುವುದಿಲ್ಲ ಎಂದು ಒಳಗೊಳಗೆ ಬೀಗುತ್ತಾ ಕುಳಿತಿದ್ದೆ. ಆದರೆ, ಕೊನೆಗೆ ನನ್ನನ್ನು ಕರೆದ ಅವರು, “ನೀನು ಪಾಸಾಗಿದ್ದಿ; ಆದರೆ, ಇದು ನಿನ್ನಂತ ವಿದ್ಯಾರ್ಥಿಗೆ ತಕ್ಕ ಮಾರ್ಕಲ್ಲ!” ಎಂದು ಉಳಿದವರಿಗಿಂತ ಸ್ವಲ್ಪ ಜೋರಾಗಿಯೇ ಒಂದೇಟು ಕೊಟ್ಟರು. ಇದರಿಂದ ಮತ್ತು ಅವರ ಗದ್ಗದ ಕಂಠದಿಂದ ನನಗೆ ಎಷ್ಟೊಂದು ಪಶ್ಚಾತ್ತಾಪ ಉಂಟಾಯಿತು ಎಂದರೆ, ಆಗಿನಿಂದಲೇ ಮುಂದಿನ 15-20 ದಿನಗಳನ್ನು ಪಾಠಗಳ ಓದಿನಲ್ಲೇ ಕಳೆದೆ. ಪರಿಣಾಮವಾಗಿ ನಾನು ಆ ಪಬ್ಲಿಕ್ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ, ಮಾತ್ರವಲ್ಲ ಸುತ್ತಮುತ್ತಲಿನ ಎಲ್ಲಾ ಶಾಲೆಗಳ ಮಕ್ಕಳಿಗಿಂತಲೂ ಹೆಚ್ಚಿನ ಮಾರ್ಕು ಪಡೆದು ಮೊದಲಿಗನಾಗಿ ಬಂದಿದ್ದೆ. ಇಂಗ್ಲೀಷಿನಲ್ಲೂ 85 ಮಾರ್ಕುಗಳು ಬಂದಿದ್ದವು. ಆ ಕಾಲದಲ್ಲಿ ಭಾಷಾ ವಿಷಯಗಳಲ್ಲಿ 80 ಮೀರಿ ಮಾರ್ಕು ಯಾರಿಗೂ ಕೊಡುತ್ತಿರಲಿಲ್ಲ! ನನ್ನನ್ನು ಸದಾ ಎರಡನೇ ಸ್ಥಾನಕ್ಕೆ ತಳ್ಳುತ್ತಿದ್ದ ಹುಡುಗನಿಗಿಂತ ಹುಡುಗನನ್ನು ಎರಡನೇ ಸ್ಥಾನಕ್ಕೆ ಸುಮಾರು 45 ಮಾರ್ಗಗಳ ಅಂತರದಿಂದ ತಳ್ಳಿದ್ದೆ. ಇದರಿಂದ ಆ ತನಕ ನನಗೆ ನಡೆಯುತ್ತಿದ್ದ ತಾರತಮ್ಯ ಬಯಲಾಗಿತ್ತು. ಇದರಿಂದ ಒಂದು ಒಂದು ಗುಂಪಿನ ಶಿಕ್ಷಕರಿಗೆ ಬಹಳಷ್ಟು ಖುಷಿಯಾಗಿತ್ತು. ಕೃಷ್ಣರಾಜ ಮಾಸ್ಟ್ರು ನನ್ನ ಹೆತ್ತವರ ಬಳಿ ನನ್ನನ್ನು ಕೊಂಡಾಡಿ, ನಿಮ್ಮ ಮಗ ನಮಗೆ ಹೆಮ್ಮೆ ತಂದ ಎಂದು ಕೊಂಡಾಡಿದ್ದರು.

ಇಡೀ ಶಾಲಾ ಜೀವನದಲ್ಲಿ ನಾನು ಪೆಟ್ಟು ತಿಂದದ್ದು ಎರಡೇ ಸಲ. ಎರಡೂ ಇವರ ಕೈಯಿಂದಲೇ. ಚಿಕ್ಕದಾದ, ಹೆಚ್ಚು ನೋವಾಗದ, ಇಂದಿಗೂ ನೆನಪಿರುವ ಪೆಟ್ಟುಗಳು. ಇದಕ್ಕಿಂತ ಹಿಂದೆ ಏನಾಗಿತ್ತೆಂದರೆ, ಶಾಲಾ ಆವರಣದ ಸ್ವಚ್ಛತೆಗೆ ಅವರು ಬಹಳ ಮಹತ್ವ ಕೊಟ್ಟಿದ್ದರು. ಪ್ರತೀ ತರಗತಿಯ ಹೊರಗೆ ಚಾಪುಡಿ ಬರುತ್ತಿದ್ದ ಪ್ಲೈವುಡ್ಡಿನ ಪೆಟ್ಟಿಗೆಗಳು. ಮಕ್ಕಳು ಇದನ್ನು ಮನೆಗೆ ಹೋಗುವ ಮೊದಲು ಕೊಠಡಿಯ ಒಳಗಿಡಬೇಕು. ಮರುದಿನ ತರಗತಿಗೆ ಮೊದಲು ಬಂದವರು ಹೊರಗಿಡಬೇಕು. ನಮಗೆ ಕೆಲವರಿಗೆ ಶಾಲೆಗೆ ಹೋಗುವುದೆಂದರೇ ಸಂಭ್ರಮ. ಒಂದು ದಿನ ನಾನು ಮತ್ತು ಕಲಿಯುವುದರಲ್ಲಿ ತುಂಬಾ ಚುರುಕಾಗಿದ್ದ ಖಾಲಿದ್ ಎಂಬ ಹುಡುಗ ಬಹಳ ಬೇಗನೇ ಬಂದು ಏಳನೇ ತರಗತಿಯಲ್ಲಿ ಪಟ್ಟಾಂಗ ಹೊಡೆಯುತ್ತಾ ಕುಳಿತಿದ್ದೆವು. ಕೃಷ್ಣರಾಜ ಮಾಸ್ಟ್ರು ಎಂದಿನಂತೆ ಬೆತ್ತ ಕೈಯಲ್ಲಿ ಹಿಡಿದುಕೊಂಡು ಕೊಠಡಿಗಳನ್ನು ನೋಡುತ್ತಾ ಬಂದವರು ನಮನ್ನು ನೋಡಿದರು. ಇನ್ನೂ ಒಳಗೆಯೇ ಇದ್ದ ಕಸದ ಬುಟ್ಟಿಯನ್ನು ನೋಡಿ, ನಸು ನಗುತ್ತಲೇ ಬುಟ್ಟಿ ಯಾಕೆ ಹೊರಗೆ ಇಟ್ಟಿಲ್ಲ ಎಂದು ಕೇಳಿದರು. ಶಾಲೆ ಆರಂಭವಾಗಲು ಹೊತ್ತಿದೆಯಲ್ಲಾ ಸಾರ್ ಎಂದೆವು. “ಬಂದ ಕೂಡಲೇ ಬುಟ್ಟಿ ಹೊರಗಿಡಬೇಕು ಎಂಬುದು ನಿಯಮ. ನೀವು ಕಲಿಯುವುದರಲ್ಲಿ ಹುಷಾರಿದ್ದೀರಿ ಹೌದು… ಆದರೆ…. ಬನ್ನಿ ಇಲ್ಲಿ! ಕೈ ಮುಂದೆ ಮಾಡಿ!” ಎಂದವರೇ ಇಬ್ಬರ ಕೈಗೂ ಒಂದೊಂದು ಚಿಕ್ಕದಾಗಿ ಬಿಟ್ಟು, “ ಕರ್ತವ್ಯ ಮೊದಲು, ಅದಿಲ್ಲದೇ ಯಾವುದೂ ಇಲ್ಲ ಬಂದ ಕೂಡಲೇ ಬುಟ್ಟಿ ಹೊರಗಿಡಬೇಕು ಗೊತ್ತಾಯ್ತಾ?!” ಎಂದು ಮುಗುಳು ನಗುತ್ತಲೇ ತಮ್ಮ ಕೊಠಡಿಗೆ ತೆರಳಿದರು.

ಇಂತಾ ಹಲವಾರು ಘಟನೆಗಳನ್ನು ಹೇಳಬಹುದು. ಶಿಕ್ಷಕರು ಮನೋಭಾವದಲ್ಲಿ ಹೇಗಿರಬೇಕು ಎಂಬುದಕ್ಕೆ ಇವರು ಮಾದರಿ. ಕೊನೆಯ ತನಕ ಬಹುತೇಕ ವಿದ್ಯಾರ್ಥಿಗಳ ಹೆಸರು, ಮನೆಯವರ ಹೆಸರು ನೆನಪಿನಲ್ಲಿ ಇಟ್ಟುಕೊಂಡು, “ಏನಾ ಮಾಧವ? ಈಗ ಎಲ್ಲಿ ನೀನು, ಏನು ಮಾಡ್ತಿದ್ದಿ? ನಿನ್ನ ತಮ್ಮ ಇದ್ನಲ್ಲಾ ಕೇಶವ, ಪೋಕ್ರಿ ಸುಬ್ಬ! ಈಗ ಏನು ಮಾಡ್ತಾನೆ? ಮತ್ತೆ ನಿನ್ನ ತಂಗಿ ಅವಳ್ಯಾರು… ಹಾಂ ಜಲಜ…ಈಗ ಎಲ್ಲಿದ್ದಾಳೆ? ತಾಯಿ ಹುಶಾರಿದ್ದಾರಾ?” ಹೀಗೆ ವಿಚಾರಿಸುತ್ತಿದ್ದರು ಎಂದರೆ, ಮಕ್ಕಳ ಕುರಿತು ಅವರ ತಾದಾತ್ಮ್ಯ ಹೇಗಿತ್ತು ಎಂಬುದನ್ನು ಯಾರೂ ಊಹಿಸಬಹುದು. ಹೆಚ್ಚೇನು ಹೇಳದೇ, ಇಂತಾ ಶಿಕ್ಷಕರು ಪ್ರತೀ ಶಾಲೆಯಲ್ಲಿ ಒಬ್ಬರಾದರೂ ಇರಲಿ ಎಂದು ಆಶಿಸುತ್ತಾ, ತುಂಬಿದ ಕಣ್ಣುಗಳಿಂದ ಕೃತಜ್ಞತೆ ಸಲ್ಲಿಸುತ್ತೇನೆ.

You cannot copy content of this page

Exit mobile version