ಬೆಂಗಳೂರು: ನಾಳೆ ದೆಹಲಿಯಲ್ಲಿ ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದು, ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ.
ಡಿನ್ನರ್, ಬ್ರೇಕ್ಫಾಸ್ಟ್ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯತ್ತ ಮುಖಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಗೆ ಹಾರಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಅಲ್ಲದೇ ನಾಳೆ ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ನೆಪದಲ್ಲಿ ಇಬ್ಬರು ನಾಯಕರನ್ನು ದೆಹಲಿ ಕರೆಸಿಕೊಂಡರಾ ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.
ದೇಶದ ಅನೇಕ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ ಅಂತಾ ಕಾಂಗ್ರೆಸ್ ಸಮರ ಸಾರಿದೆ. ಇದೀಗ ಎರಡನೇ ಹಂತದ ವೋಟ್ ಚೋರಿ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಂಡಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಅಭಿಯಾನ ನಡೆಯಲಿದೆ. ಹೀಗಾಗಿ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ಮಂಡ್ಯ ನಾಯಕರ ಟೀಂ ದಿಲ್ಲಿ ಯಾತ್ರೆ ಕೈಗೊಂಡಿದೆ. ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ತಂಡ ದೆಹಲಿಗೆ ತೆರಳುವ ಯೋಜನೆ ಇತ್ತು. ಆದರೆ ಅನಾರೋಗ್ಯದ ಕಾರಣ ಚಲುವರಾಯಸ್ವಾಮಿ ದೆಹಲಿಗೆ ಹೋಗುತ್ತಿಲ್ಲ. ಉಳಿದಂತೆ ಶಾಸಕರುಗಳಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ದೆಹಲಿಗೆ ತೆರಳಿದ್ದಾರೆ.
