ತಿರುವನಂತಪುರಂ : 2026ರ ಕೇರಳ ವಿಧಾನಸಭಾ ಚುನಾವಣೆಯ ‘ಸೆಮಿಫೈನಲ್’ ಎಂದೇ ಬಿಂಬಿತವಾಗಿದ್ದ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ರಾಜಕೀಯ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ರಾಜ್ಯಾದ್ಯಂತ ಭರ್ಜರಿ ಜಯಭೇರಿ ಬಾರಿಸಿದ್ದರೆ, ಆಡಳಿತರೂಢ ಎಡರಂಗ (ಎಲ್‌ಡಿಎಫ್) ತೀವ್ರ ಮುಖಭಂಗ ಅನುಭವಿಸಿದೆ. ಇತ್ತ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಐತಿಹಾಸಿಕ ಜಯ ಸಾಧಿಸುವ ಮೂಲಕ ಎಡಪಕ್ಷಗಳ 45 ವರ್ಷಗಳ ಕೋಟೆಯನ್ನು ಛಿದ್ರಗೊಳಿಸಿದೆ.
- ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಭರ್ಜರಿ ಜಯ
- 6ರ ಪೈಕಿ 4 ಮಹಾನಗರ ಪಾಲಿಕೆಗಳು ಯುಡಿಎಫ್ ತೆಕ್ಕೆಗೆ, ಇದೇ ಮೊದಲ ಬಾರಿಗೆ ತಿರುವನಂತಪುರಂನಲ್ಲಿ ಬಿಜೆಪಿಗೆ ಅಧಿಕಾರ
- ಆಡಳಿತರೂಢ ಎಲ್‌ಡಿಎಫ್‌ಗೆ ಭಾರಿ ಹಿನ್ನಡೆ, ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು ಪಾಲಿಕೆಗಳನ್ನು ಕಳೆದುಕೊಂಡ ಮೈತ್ರಿಕೂಟ
- 86 ಪುರಸಭೆಗಳ ಪೈಕಿ 54ರಲ್ಲಿ ಯುಡಿಎಫ್‌ಗೆ ಜಯ, 941 ಗ್ರಾ.ಪಂ.ಗಳಲ್ಲಿ 500ಕ್ಕೂ ಹೆಚ್ಚು ಕಡೆ ಗೆಲುವಿನ ನಗೆ ಬೀರಿದ ಯುಡಿಎಫ್
