Home ಬೆಂಗಳೂರು ಪಶುವೈದ್ಯೆ ಸಮೀಕ್ಷಾ ಸಾವು: ತ್ಯಾವರೆಕೊಪ್ಪ ಮೃಗಾಲಯದ ನಿರ್ದೇಶಕರ ಅಮಾನತಿಗೆ ವೈದ್ಯರ ಸಂಘ ಆಗ್ರಹ

ಪಶುವೈದ್ಯೆ ಸಮೀಕ್ಷಾ ಸಾವು: ತ್ಯಾವರೆಕೊಪ್ಪ ಮೃಗಾಲಯದ ನಿರ್ದೇಶಕರ ಅಮಾನತಿಗೆ ವೈದ್ಯರ ಸಂಘ ಆಗ್ರಹ

0

ಬೆಂಗಳೂರು: ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಸಾವು ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಕುಟುಂಬಸ್ಥರು ದೂರಿದ್ದು, ಕರ್ನಾಟಕ ಪಶುವೈದ್ಯ ಸಂಘವು ಮೃಗಾಲಯದ ನಿರ್ದೇಶಕರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಸಮೀಕ್ಷಾ ಅವರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪಶುವೈದ್ಯ ಸಂಘವು ಸಚಿವರಿಗೆ ಮನವಿ ಸಲ್ಲಿಸಿದ್ದು, ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿದೆ.

ಕರ್ನಾಟಕ ಪಶುವೈದ್ಯ ಸಂಘದ ಅಧ್ಯಕ್ಷ ಶಿವಶರಣಪ್ಪ ಜಿ. ಯಲಗೋಡ ಮಾತನಾಡಿ, “ಮೃಗಾಲಯದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ವಿ.ಎಂ. ಅಮರಕ್ಷರ ಅವರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಮಧ್ಯರಾತ್ರಿಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಾಡುಪ್ರಾಣಿಗಳ ಚಿಕಿತ್ಸೆಗೆ ಸಮೀಕ್ಷಾ ಅವರನ್ನು ಕಳುಹಿಸಿರುವುದು ಡಿಸಿಎಫ್ ಅವರ ತಪ್ಪು. ಈಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರಿಗಳು ಮೃತ ವೈದ್ಯೆಯ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಈಶ್ವರ ಖಂಡ್ರೆ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, “ಸಮೀಕ್ಷಾ ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಯುವ ವೈದ್ಯೆಯಾಗಿದ್ದರು. ಅವರ ಸಾವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಭವಿಷ್ಯದಲ್ಲಿ ಪಶುವೈದ್ಯರ ಸುರಕ್ಷತೆಗಾಗಿ ಹೊಸ ಎಸ್‌ಒಪಿ (SOP) ಸಿದ್ಧಪಡಿಸಲಾಗುವುದು,” ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, “ಪ್ರಾಥಮಿಕ ಮಾಹಿತಿಯಂತೆ ಸಮೀಕ್ಷಾ ಅವರು ಪಕ್ಷಿಯೊಂದಕ್ಕೆ ಆ್ಯಂಟಿಬಯೋಟಿಕ್ ನೀಡಲು ಹೋಗಿದ್ದರು, ನಂತರ ಗರ್ಭಿಣಿ ಜಲಾನಿಯ ಆರೋಗ್ಯ ತಪಾಸಣೆಗೆ ಮುಂದಾದಾಗ ಈ ಘಟನೆ ನಡೆದಿದೆ. ಅಧಿಕಾರಿಗಳ ಲೋಪ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದರು.

ಸರ್ಕಾರವು 30 ಲಕ್ಷ ರೂಪಾಯಿಗಳ ಪರಿಹಾರ ಧನ ಘೋಷಿಸಿದೆ. ಆದರೆ, ಸಮೀಕ್ಷಾ ಅವರ ಪೋಷಕರು ಹಣಕ್ಕಿಂತ ಹೆಚ್ಚಾಗಿ ನ್ಯಾಯಕ್ಕೆ ಆದ್ಯತೆ ನೀಡಿದ್ದಾರೆ ಮತ್ತು ತಮ್ಮ ಮಗಳ ನೆನಪಿಗಾಗಿ ಸ್ಮಾರಕ ನಿರ್ಮಿಸುವಂತೆ ವಿನಂತಿಸಿದ್ದಾರೆ. ಇದಕ್ಕೆ ಸಮ್ಮತಿಸಿರುವ ಸಚಿವರು, ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪಶುವೈದ್ಯ ಸಂಘವು ವನ್ಯಜೀವಿಗಳ ಜೊತೆ ಕೆಲಸ ಮಾಡುವ ಪಶುವೈದ್ಯರಿಗಾಗಿ ಪ್ರತ್ಯೇಕ ಕೇಡರ್ ಮತ್ತು ಸುಸಜ್ಜಿತ ನಾಯಕತ್ವದ ಅಗತ್ಯವನ್ನೂ ಸರ್ಕಾರಕ್ಕೆ ಒತ್ತಿಹೇಳಿದೆ.

You cannot copy content of this page

Exit mobile version