ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಸಂಜೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಪ್ರತ್ಯೇಕ ಸಿಡಿಲು ಬಡಿತದ ಘಟನೆಗಳಲ್ಲಿ ಒಬ್ಬ ಯುವಕ ಮೃತಪಟ್ಟು, ನಾಲ್ವರು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಧನಸಿಂಗ್ ನಾಯಕ್ ತಾಂಡಾದ ಮಹೇಶ್ ಕಿಶನ್ ಚೌಹಾಣ್ (22) ಎಂಬ ಯುವಕ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಂದೆಡೆ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು (ಬಿ) ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸುವರ್ಣ ಸೈನತ ಕಾರಿಗಾರ್, ಪಾರ್ವತಿ, ನರಸಿಂಗ್ ಮತ್ತು ಅಶ್ವಿನಿ ಎಂಬ ನಾಲ್ವರು ರೈತರಿಗೆ ಸಿಡಿಲು ಬಡಿದು ಗಂಭೀರ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಾರ್ವತಿ ಮತ್ತು ಅಶ್ವಿನಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಠಾತ್ ಮಳೆಯಿಂದಾಗಿ ನಗರದ ರಸ್ತೆಗಳು ಮತ್ತು ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರು ನುಗ್ಗಿ ಜಲಾವೃತಗೊಂಡಿದೆ. ಬೆಳಗಾವಿಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ಜಿಲ್ಲಾಧಿಕಾರಿ ಕಚೇರಿಯ ಛಾವಣಿ ಸೋರಿ ಸಿಬ್ಬಂದಿ ಪರದಾಡುವಂತಾಯಿತು. ಮಳೆನೀರು ಡಿಸಿ ಚೇಂಬರ್‌ಗೂ ನುಗ್ಗಿದ್ದು, ಖಾನಾಪುರ, ಸವದತ್ತಿ, ಚಿಕ್ಕೋಡಿ ಮತ್ತು ಗೋಕಾಕ್ ತಾಲೂಕುಗಳಲ್ಲೂ ಉತ್ತಮ ಮಳೆಯಾಗಿದೆ.
ಹಾವೇರಿ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಸುರಿದ ಮಳೆಯು ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ತುಸು ತಂಪು ನೀಡಿದೆ. ಹಾವೇರಿ ನಗರ ಸೇರಿದಂತೆ ಸವಣೂರು, ಬ್ಯಾಡಗಿ, ಶಿಗ್ಗಾವಿ ಮತ್ತು ರಾಣೇಬೆನ್ನೂರು ತಾಲೂಕುಗಳಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮತ್ತು ಎನ್.ಆರ್. ಪುರ ಭಾಗದಲ್ಲಿ ಭಾರಿ ಮಳೆಗೆ ತರೀಕೆರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು ಬಾಳೆ ತೋಟಗಳು ಧರೆಗುರುಳಿ ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ಸುತ್ತಮುತ್ತಲ ಭಾಗಗಳಲ್ಲೂ ಸಂಜೆ ಗುಡುಗು ಸಹಿತ ಮಳೆಯಾದ ವರದಿಯಾಗಿದೆ.
