ಬೆಂಗಳೂರು : ಕಳೆದ ಹಲವು ದಿನಗಳಿಂದ ವಾಣಿಜ್ಯ ಬಳಕೆಯ ಅನಿಲ ಕೊರತೆಯಿಂದ (Gas Cylinder) ಸಂಕಷ್ಟ ಅನುಭವಿಸುತ್ತಿದ್ದ ರಾಜ್ಯದ ಹೋಟೆಲ್ (Hotels) ಉದ್ಯಮಕ್ಕೆ ಕೊನೆಗೂ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಇಂದಿನಿಂದ ಹೋಟೆಲ್ಗಳಿಗೆ ಹೆಚ್ಚುವರಿ ಪ್ರಮಾಣದಲ್ಲಿ ಅನಿಲ ಪೂರೈಕೆ ಮಾಡಲು ಕೇಂದ್ರ ಸರ್ಕಾರ (Central Govt) ಆದೇಶ ಹೊರಡಿಸಿದೆ.
ಮಿನಿಸ್ಟ್ರಿ ಆಫ್ ಪೆಟ್ರೋಲಿಯಂ ಅಂಡ್ ನ್ಯಾಚುರಲ್ ಗ್ಯಾಸ್ ಸೂಚನೆಯಂತೆ, ಈ ಹಿಂದೆ ಕಡಿತಗೊಳಿಸಲಾಗಿದ್ದ ಪೂರೈಕೆಯನ್ನು ಮತ್ತೆ ಹೆಚ್ಚಿಸಿ ಯುದ್ಧಪೂರ್ವದ ಮಟ್ಟದತ್ತ ತರುವ ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯನ್ನು ಸುಮಾರು ಶೇಕಡಾ 50ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘಟನೆ0 ಕರ್ನಾಟಕದಲ್ಲಿ ಮಾತ್ರ ಅನಿಲ ಕೊರತೆ ಗಂಭೀರವಾಗಿರುವ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದು, ಪ್ರಧಾನಮಂತ್ರಿಗೆ ಪತ್ರ ಬರೆದಿತ್ತು. ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಲು ಸಹ ಸಂಘ ಸಿದ್ಧತೆ ನಡೆಸಿತ್ತು.
ಅನಿಲ ಕೊರತೆಯಿಂದ ಹಲವು ಹೋಟೆಲ್ಗಳು ಕಾರ್ಯಾಚರಣೆಯಲ್ಲಿ ಅಡಚಣೆ ಅನುಭವಿಸಿದ್ದವು. ಕೆಲವೆಡೆ ಅಡುಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಪರ್ಯಾಯ ಇಂಧನ ಬಳಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಉದ್ಯಮದಲ್ಲಿ ಆರ್ಥಿಕ ಒತ್ತಡವೂ ಹೆಚ್ಚಾಗಿತ್ತು.
ವಾಣಿಜ್ಯ ಸಿಲಿಂಡರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಪೈಪ್ ಮೂಲಕ ನೈಸರ್ಗಿಕ ಅನಿಲ ಬಳಕೆಗೆ ಉತ್ತೇಜನ ನೀಡುವ ಬಗ್ಗೆ ಕೇಂದ್ರದಿಂದ ವಿಶೇಷ ಪ್ರೋತ್ಸಾಹ ನೀಡಲಾಗಿದೆ.
ಹಿಂದಿನ ದಿನಗಳಲ್ಲಿ ಪೂರೈಕೆಯಲ್ಲಿ ಶೇಕಡಾ 30ರಷ್ಟು ಕಡಿತ ಮಾಡಲಾಗಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹೋಟೆಲ್ ಉದ್ಯಮಿಗಳು ಸಂಕಷ್ಟ ಎದುರಿಸಿದ್ದರು. ಹೊಸ ಆದೇಶದಿಂದ ಉದ್ಯಮದಲ್ಲಿ ಚಟುವಟಿಕೆ ಪುನಃ ಚೇತರಿಸಿಕೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ
