Home ಅಂಕಣ ವಿನೇಶ್‌ ಪೋಗಟ್‌: ಈ ದಿಟ್ಟ ಹುಡುಗಿಯನ್ನು ಭಾರತದ ಬೀದಿಗಳಲ್ಲಿ ಅಕ್ಷರಶಃ ಎಳೆದಾಡಲಾಗಿತ್ತು!

ವಿನೇಶ್‌ ಪೋಗಟ್‌: ಈ ದಿಟ್ಟ ಹುಡುಗಿಯನ್ನು ಭಾರತದ ಬೀದಿಗಳಲ್ಲಿ ಅಕ್ಷರಶಃ ಎಳೆದಾಡಲಾಗಿತ್ತು!

0
  • ಹನುಮಂತ ಹಾಲಿಗೇರಿ

 “ನನ್ನ ಸಹ ಆಟಗಾರ್ತಿಯರ, ನನ್ನ ಗೆಳತಿಯರ ಮೇಲೆ ಕೆಲವು ತಿಂಗಳ  ಹಿಂದೆಯಷ್ಟೇ ನಮ್ಮವರಿಂದಲೇ ಲೈಂಗಿಕ ದೌರ್ಜನ್ಯ  ನಡಿತಲ್ಲ,  ಆಗ ಆದ ಅವಮಾನದ ಕೆಂಡ ಇನ್ನೂ ನನ್ನ ಎದೆಯಲ್ಲಿ ಹಾಗೆ ಉರಿಯುತ್ತಿದೆ. ಆಗ ನನಗೆ ಅನಿಸಿದ್ದು ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಒಲಂಪಿಕ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ನಾವು ಮಹಿಳಾ ಕುಸ್ತಿ ಪಟುಗಳು ಅಂದ್ರೆ ಎಂಥ ತಾಕತ್ತು ಅನ್ನುವುದನ್ನುತೋರಿಸ್ತಿನಿ ನೋಡ್ತಿರಿ” ಎಂದಿದ್ದಳು ಈ ಹುಡುಗಿ ವಿನೇಶ್‌ ಪೊಗಟ್.‌

 ಹೀಗಂತ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಟೋಕಿಯೋದಲ್ಲಿ ಒಲಂಪಿಕ್‌ನಲ್ಲಿ ಕಂಚು ಗೆದ್ದು  ತಂದಿರುವ ಹೆಮ್ಮೆಯ ಕ್ರೀಡಾಪಟು ಭಜರಂಗ್‌ ಪೋನಿಯಾ. ಅಂಥ ದಿಟ್ಟ ಹುಡುಗಿಯ ಚಿನ್ನದ ಕನಸು ಈಗ ಭಗ್ನಗೊಂಡಿದೆ. ಈ ನೆಲದ ಮಗಳು ಚಿನ್ನ ತಂದೆ ತರುತ್ತಾಳೆ ಎಂದು ಕಾಯ್ತು ಕುಳಿತಿದ್ದ ಭಾರತೀಯರೆಲ್ಲರಿಗೂ ಸಹ ಈಗ ನಿರಾಶೆ ಮಡುವುಗಟ್ಟಿದೆ. ಕೇವಲ ತೂಕದಲ್ಲಿ 100 ಗ್ರಾಮ ವ್ಯತ್ಯಾಸವಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ವಿನೇಶ್‌ ಪೊಗಟ್‌ ಅವರನ್ನು ಆಟದಿಂದ ಹೊರಗಿಟ್ಟಿರುವುದನ್ನು ಅನ್ಯಾಯ ಏನ್ನಬೇಕೋ, ವಿಧಿ ವಿಪರ್ಯಾಸವೆನ್ನಬೇಕೋ ಗೊತ್ತಾಗುತ್ತಿಲ್ಲ.

ಇತ್ತೀಚೆಗಷ್ಟೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಸಂಸ್ಥೆ ವಿರುದ್ಧದ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಮಹಿಳಾ ಕುಸ್ತಿಪಟುಗಳು ವಾರಗಟ್ಟಲೇ ಪ್ರತಿಭಟನೆ ನಡೆಸಿದ್ದರು. ಆಗ  ಯಥಾಪ್ರಕಾರ ನಮ್ಮ ದೇಶದ ಕ್ಷುಲ್ಲಕ ರಾಜಕಾರಣಿಗಳ ಕುಮ್ಮಕ್ಕಿನಿಂದಾಗಿ ಪೊಲೀಸರು ಈ ವಿನೇಶ್‌ ಪೋಗಟ್‌ಪ್ರತಿಭಟನಾ ನಿರತ ಕ್ರೀಡಾಪಟುಗಳನ್ನು ದರದರನೆ ಎಳೆದೊಯ್ದಿದ್ದರು. ಆದರೆ, ಆಗ ಅವರ ಬೆಂಬಲಕ್ಕೆ ಯಾವ ಸರ್ಕಾರವೂ ಬರಲಿಲ್ಲ. ಕುಸ್ತಿ ಸಂಸ್ಥೆಯ ಅಧ್ಯಕ್ಷ ಮತ್ತು ಸಂಸದ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ತಮ್ಮ ಅಧಿಕಾರ ಬಳಸಿ ಕುಸ್ತಿಪಟುಗಳ ಧರಣಿಯನ್ನು ಬಲವಂತವಾಗಿ ಅಂತ್ಯಗೊಳಿಸಿದ್ದರು. ನ್ಯಾಯ ಸಿಗದೇ ಇದ್ದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳನ್ನೇ ಕುಸ್ತಿಪಟುಗಳು ನದಿಗೆ ಬಿಸಾಡಿದ್ದ ಹೀನಾಯ ಘಟನೆಗೆ ಅಂದು ದೆಹಲಿ ಸಾಕ್ಷಿಯಾಗಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಒಳಗೊಳಗೆ ಉರಿಯುತ್ತ ಕುಳಿತಿದ್ದ ವಿನೇಶ್‌ಗೆ ಅಂದೇ ನಮ್ಮಗಳ ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಗೆದ್ದು ತೋರಿಸುತ್ತೇನೆ. ಇವರ ದೌರ್ಜನ್ಯಕ್ಕೆ ಅದೇ ನನ್ನ ಉತ್ತರ ಎಂದು ಸಂಕಲ್ಪ ಮಾಡಿದ್ದರು. ಆ ಮೂಲಕ ಅವರು, ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ವಿಭಿನ್ನ ಮಾರ್ಗ ತುಳಿಯಲು ಹಟ ತೊಟ್ಟಿದ್ದರು.

ವಿಶ್ವಚಾಂಪಿಯನ್‌ ಆಗಲು ಹೊರಟಿರುವ ಈ ಹುಡುಗಿಯನ್ನು ಅವಳ ದೇಶದಲ್ಲಿ ಕಾಲಿನಿಂದ ಒದೆಯಲಾಗಿತ್ತು, ಈ ಹುಡುಗಿಯನ್ನು ತನ್ನ ದೇಶದ ಬೀದಿಗಳಲ್ಲಿ ಎಳೆದಾಡಲಾಗಿತ್ತು. ಈ ಹುಡುಗಿ ಈಗ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ ಈ ದೇಶದ ವ್ಯವಸ್ಥೆ ವಿರುದ್ಧ ಹೋರಾಡಿ ಆಕೆ ಸೋತಿದ್ದಳು.” ಎಂದು ವಿನೇಶ್‌ ಫೋಗಾಟ್‌ ಅವರ ಭಾವ ಕೂಡ ಆಗಿರುವ ಬಜರಂಗ್ ಪುನಿಯಾ ಟ್ವೀಟ್‌ ಮಾಡಿದ್ದಾರೆ.  ಅಷ್ಟೇ ಅಲ್ಲದೇ ಇಎಸ್‌ಪಿಎನ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಜರಂಗ್ ಪುನಿಯಾ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಫೋಗಾಟ್‌ ಭಾರತೀಯ ಯುವ ಮಹಿಳಾ ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಪದಕ ಗೆಲ್ಲಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

“ನಾನು ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಹೋರಾಡುತ್ತಿದ್ದೇನೆ. ಇದು ನನಗೋಸ್ಕರ ಅಲ್ಲ. ನನ್ನ ವೃತ್ತಿಬದುಕು ಮುಗಿದಿದೆ. ಇದು ನನ್ನ ಕೊನೆಯ ಒಲಿಂಪಿಕ್ಸ್‌. ನಾನು ಯುವ ಮಹಿಳಾ ಕುಸ್ತಿಪಟುಗಳ ಸಲುವಾಗಿ ಹೋರಾಡಬೇಕು. ದೇಶದಲ್ಲಿ ಯುವ ಮಹಿಳಾ ಕುಸ್ತಿಪಟುಗಳು ಯಾವುದೇ ಭಯ ಅಂಜಿಕೆ ಇಲ್ಲದೆ ಬಂದು ಕುಸ್ತಿ ಅಖಾಡದಲ್ಲಿ ಸುರಕ್ಷಿತವಾಗಿ ಹೋರಾಡುವಂತ್ತಾಗಬೇಕು. ಈ ಉದ್ದೇಶ ಸಲುವಾಗಿಯೇ ನಾನು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಈಗ ಇಲ್ಲಿದ್ದೇನೆ ಎಂದು ವಿನೇಶ್ ನನ್ನ ಬಳಿ ಹೇಳಿದ್ದರು,” ಎಂದು ಬಜರಂಗ್ ಪೂನಿಯಾ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.

 ವಿನೇಶ್‌ ಅವರ ಹಟ ಇನ್ನೇನು ಫಲಪ್ರದವಾಗುವುದರಲ್ಲಿತ್ತು. ಆ ಕ್ಷಣಕ್ಕಾಗಿ ಇಡೀ ಭಾರತ ಕಾಯ್ದು ಕುಳಿತಿತ್ತು.  ನಿನ್ನೆಯಷ್ಟೆ ಸೆಮಿಫೈನಲ್‌ನಲ್ಲಿ ವಿಜಯ ಸಾಧಿಸಿ ಐತಿಹಾಸಿಕ  ಬೆಳ್ಳಿ ಪದಕ ಖಾತರಿಪಡಿಸಿದ್ದ ವಿನೇಶ್‌ ಇವತ್ತು ಬೆಳಗ್ಗೆ ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ಚಿನ್ನದ ಪದಕವನ್ನು ಜಸ್ಟ್‌ ಮಿಸ್‌ ಮಾಡಿಕೊಂಡಿರುವುದು ಭಾರತೀಯರೆಲ್ಲರ ಕಣ್ಣಲ್ಲಿ ನಿರಾಸೆ ಕವಿಯುವಂತಿದೆ ಮಾಡಿದೆ.

“ನಿನ್ನೆಯಷ್ಟೇ ನಡೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಗೆದ್ದ ಭಾರತದ ಸಿಂಹಿಣಿ ವಿನೇಶ್ ಫೋಗಟ್, 4 ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಕುಸ್ತಿಪಟುಗಳನ್ನು ಸೋಲಿಸಿ ವಿಜಯದ ನಗೆ ಬೀರಿದ್ದರು. ಆ ನಂತರ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವಚಾಂಪಿಯನ್‌ ಎದುರು ಜಯ ದಾಖಲಿಸಿದರು.

ಇಂದು,ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಫ್ರೀಸ್ಟೈಲ್‌ ಕುಸ್ತಿಯ ಫೈನಲ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಸಲುವಾಗಿ ವಿನೇಶ್‌ ಫೋಗಾಟ್‌ ಅಮೆರಿಕದ ರೆಸ್ಲರ್‌ ಸಾರಾ ಹಿಲ್‌ಡೆಬ್ರಾಂಟ್‌ ಎದುರು ಪೈಪೋಟಿ ನಡೆಸಲಿದ್ದರು. ಗೆದ್ದರೆ ಚಿನ್ನ ಸೋತರೆ ಬೆಳ್ಳಿ ಪದಕಕ್ಕೆ ಕೊರಳೊಡ್ಡವವರಿದ್ದರು. ಆದರೆ ತೂಕದಲ್ಲಾದ ಸಣ್ಣ ಎಡವಟ್ಟಿನಿಂದ ಈ ದಿಟ್ಟ ಹುಡುಗಿಯ ಕನಸು ಭಗ್ನಗೊಂಡಿರುವುದು ಭಾರತೀಯ ಕ್ರೀಡಾಜಗತ್ತಿಗಾದ ದೊಡ್ಡ ಗಾಯವೇ ಸರಿ.

  • ಹನುಮಂತ ಹಾಲಿಗೇರಿ

You cannot copy content of this page

Exit mobile version