ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಅಂತಿಮ ಸುತ್ತನ್ನು ಪ್ರವೇಶಿಸಿರುವ ವಿನೇಶ್ ಫೋಗಟ್ ಅವರ ಹಳೆಯ ಟ್ವಿಟರ್ ಪೋಸ್ಟ್ ಈಗ ಮತ್ತೆ ವೈರಲ್ ಆಗುತ್ತಿದೆ.
ಈ ಟ್ವೀಟ್ ಅವರು ಮಾಜಿ ಸಂಸದ ಬ್ರಜ್ ಭೂಷಣ್ ವಿರುದ್ಧ ನಡೆದಿದ್ದ ಹೋರಾಟದ ಸಂದರ್ಭದಲ್ಲಿ ಮಾಡಿದ್ದರು. ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಬ್ರಜ್ ಭೂಷಣ್ ಅವರನ್ನು ವಜಾಗೊಳಿಸಿ ಸಂತ್ರಸ್ಥರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಕುಸ್ತಿಪಟುಗಳು ಹೋರಾಟ ನಡೆಸುತ್ತಿದ್ದರು.
ಈ ಹೋರಾಟ ರಾಜಕೀಯ ತಿರುವು ಪಡೆದು ಮೋದಿ-ಬಿಜೆಪಿ ಬೆಂಬಲಿಗರು ಇದನ್ನು ದೇಶ ವಿರೋಧಿ ಹೋರಾಟವೆನ್ನುವಂತೆ ಬಿಂಬಿಸಿ ಪ್ರಚಾರ ಮಾಡಿದ್ದಲ್ಲದೆ, ಕುಸ್ತಿಪಟುಗಳನ್ನು ಅವಮಾನಿಸಿ ಲಕ್ಷಾಂತರ ಪೋಸ್ಟುಗಳನ್ನು ಸಹ ಹಾಕಿದ್ದರು. ಆದರೆ ಇದಕ್ಕೆಲ್ಲ ಕುಗ್ಗದ ಕುಸ್ತಿಪಟುಗಳು ಹೋರಾಟ ನಡೆಸುತ್ತಲೇ ಇದ್ದರು.
ಒಂದು ಹಂತದಲ್ಲಿ ಈ ಕ್ರೀಡಾಪಟುಗಳ ವಿರುದ್ಧ ಪೊಲೀಸ್ ಬಲವನ್ನು ಸಹ ಪ್ರಯೋಗಿಸಲಾಗಿತ್ತು. ಕೊನೆಗೆ ಕಳೆದ ಬಾರಿಯ ಚುನಾವಣೆಯಲ್ಲಿ ಬೃಜ್ ಭೂಷಣ್ ಬದಲಿಗೆ ಅವರ ಮಗನಿಗೆ ಟಿಕೆಟ್ ನೀಡಲಾಗಿತ್ತು. ಇಂದಿಗೂ ಕುಸ್ತಿಪಟುಗಳು v/s ಬಿಜೆಪಿ ಫೈಟಿಂಗ್ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.
ಇದಕ್ಕೆ ಕಾರಣವೆಂದರೆ ರೈತ ಹೋರಾಟದ ನಂತರ ಬಿಜೆಪಿ ದೊಡ್ಡ ಮಟ್ಟದಲ್ಲಿ ಮುಖಭಂಗ ಉಂಟುಮಾಡಿದ ಹೋರಾಟವೆಂದರೆ ಇದೇ ಕುಸ್ತಿಪಟುಗಳ ಹೋರಾಟ. ಐಟಿ ಸೆಲ್‌ನ ದೊಡ್ಡ ಮಟ್ಟದ ಅಪಪ್ರಚಾರದ ಕ್ಯಾಂಪೇನ್ ನಡುವೆಯೂ ಈ ಕ್ರೀಡಾಳುಗಳು ತಮ್ಮ ನ್ಯಾಯಯುತ ಹೋರಾಟವನ್ನು ಮುಂದುವರೆಸಿದ್ದರು.
ಇದೇ ಸಂದರ್ಭದಲ್ಲಿ ವಿನೇಶ್ ಫೋಗಟ್ ಭಾವುಕರಾಗಿ ಕಣ್ಣೀರು ಹಾಕಿದ್ದರು. ಮತ್ತು ಪ್ರಸ್ತುತ ವೈರಲ್ ಆಗಿರುವ ಟ್ವಿಟರ್ ಪೋಸ್ಟ್ ಸಹ ಮಾಡಿದ್ದರು. ಈಗ ಬೆಳ್ಳಿ ಅಥವಾ ಚಿನ್ನದ ಪದಕ ಅವರಿಗೆ ಖಚಿತವಾಗಿರುವ ಸಂದರ್ಭದಲ್ಲಿ ಆ ಪೋಸ್ಟ್ ಮತ್ತೆ ವೈರಲ್ ಆಗಿದೆ.