ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ.
ಮೂತ್ರನಾಳದ ಸೋಂಕು ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಶನಿವಾರ ಥಾಣೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಪರೀಕ್ಷೆ ನಡೆಸಿದ ವೈದ್ಯರು ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ಪತ್ತೆ ಮಾಡಿದ್ದರು. ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಮಂಗಳವಾರ ಇನ್ನೂ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಡಾ.ವಿವೇಕ್ ತ್ರಿವೇದಿ ಹೇಳಿದ್ದಾರೆ.
ಆಸ್ಪತ್ರೆಯ ಉಸ್ತುವಾರಿ ಎಸ್. ಸಿಂಗ್ ಅವರು ಕಾಂಬ್ಳಿಗೆ ಅವರ ಜೀವನದುದ್ದಕ್ಕೂ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ ಎಂದು ತ್ರಿವೇದಿ ಹೇಳಿದ್ದಾರೆ. ಈ ನಡುವೆ ಮಂಗಳವಾರ ಕಾಂಬ್ಳಿ ತಮ್ಮ ಹಾಸಿಗೆಯಿಂದಲೇ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಭಾವುಕರಾದರು. ‘ಮೇಮ್ ಚಾಂಪಿಯನ್ಸ್’ ಎಂಬ ಪ್ರೇರಕ ಗೀತೆಯನ್ನು ಹಾಡುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ತನ್ನ ಆಟದ ಮೇಲಿನ ಪ್ರೀತಿ ಎಂದಿಗೂ ಮಸುಕಾಗುವುದಿಲ್ಲ ಎಂದು ಅವರು ಹೇಳಿದರು.
ಅವರು ತಮ್ಮ ಬಾಲ್ಯದ ಗೆಳೆಯ ಮತ್ತು ಮಾಜಿ ಸಹ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ತನಗೆ ಬೆಂಬಲ ನೀಡಿದ ಎಲ್ಲಾ ಹಿತೈಷಿಗಳಿಗೆ ಧನ್ಯವಾದ ಹೇಳಿದರು. ‘ಈಗ ನನ್ನ ಆರೋಗ್ಯ ಸುಧಾರಿಸುತ್ತಿದೆ. ಸಚಿನ್ ತೆಂಡೂಲ್ಕರ್ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅವರಿಗೆ ಧನ್ಯವಾದ ಅರ್ಪಿಸಿದರು. ನಾನು ಎಂದಿಗೂ ಕ್ರಿಕೆಟ್ ಬಿಡುವುದಿಲ್ಲ. ಏಕೆಂದರೆ ನಾನು ಎಷ್ಟು ಶತಕ ಮತ್ತು ದ್ವಿಶತಕಗಳನ್ನು ಬಾರಿಸಿದ್ದೇನೆ ಎನ್ನುವುದು ನನಗೆ ನೆನಪಿದೆ. ಇಲ್ಲಿನ ವೈದ್ಯರಿಂದಾಗಿ ನಾನು ಬದುಕಿದ್ದೇನೆ. ಅವರು ಏನೂ ಹೇಳಿದರೂ ನಾನು ಮಾಡಲು ಸಿದ್ಧ ಎಂದು ಕಾಂಬ್ಳಿ ವಿವರಿಸಿದರು. ಈ ಹಿಂದೆ ಕಾಂಬ್ಳಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಗ ಸಚಿನ್ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದರು.
ಕಾಂಬ್ಳಿ ಅವರ ಆರೋಗ್ಯ ಸ್ಥಿತಿಯನ್ನು ಅವರ ಸ್ನೇಹಿತ ಮಾರ್ಕಸ್ ಕೌಟೊ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಕಾಂಬ್ಳಿ ಈಗ ಚೆನ್ನಾಗಿದ್ದಾರೆ. ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನು ಇಂದು ಅವರನ್ನು ಭೇಟಿಯಾದೆ. ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಾಂಬ್ಳಿ ಅವರನ್ನು ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಇರಿಸುವಂತೆ ಕೇಳಿಕೊಂಡೆ. “ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಯಾರಾದರೂ ಖಂಡಿತವಾಗಿಯೂ ಸಹಾಯ ಮಾಡುತ್ತಾರೆ” ಎಂದು ಮಾರ್ಕಸ್ ಕೌಟೊ ಹೇಳಿದರು. ಕ್ರಿಕೆಟಿಗನಾಗಿ ಮಿಂಚಿರುವ ವಿನೋದ್ ಕಾಂಬ್ಳಿ ಬಗ್ಗೆ ಗೌರವವಿದ್ದು, ಚೇತರಿಕೆಗೆ ಅಗತ್ಯ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.