ಬೆಂಗಳೂರು: ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದಲು ನಿರಾಕರಿಸಿರುವುದು “ಸಂವಿಧಾನದ ನಿಬಂಧನೆಗಳ ಉಲ್ಲಂಘನೆ” ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ಸಂವಿಧಾನವು ಈ ಬಗ್ಗೆ ಸ್ಪಷ್ಟವಾಗಿದ್ದರೂ, ರಾಜ್ಯಪಾಲರು ಸರ್ಕಾರದ ಭಾಷಣವನ್ನು ಪೂರ್ತಿಯಾಗಿ ಓದದಿರುವುದು ತೀವ್ರ ವಿಷಾದನೀಯ ಎಂದು ಹೇಳಿದ್ದಾರೆ.
“ಸಂವಿಧಾನದ 176 ನೇ ವಿಧಿಯ ಅಡಿಯಲ್ಲಿ, ರಾಜ್ಯಪಾಲರು ವರ್ಷದ ಮೊದಲ ಅಧಿವೇಶನದಲ್ಲಿ ವಿಧಾನಮಂಡಲವನ್ನು ಉದ್ದೇಶಿಸಿ ಮಾತನಾಡಬೇಕು ಮತ್ತು ಆ ಭಾಷಣವು ಚುನಾಯಿತ ಸರ್ಕಾರದ ನೀತಿಯ ಹೇಳಿಕೆಯಾಗಿರುತ್ತದೆಯೇ ಹೊರತು ಅವರ ವೈಯಕ್ತಿಕ ಅಭಿಪ್ರಾಯಗಳಲ್ಲ. ಇದನ್ನು ಸಚಿವ ಸಂಪುಟ ಸಿದ್ಧಪಡಿಸುತ್ತದೆ ಮತ್ತು ಸಂವಿಧಾನಬದ್ಧವಾಗಿ ಅವರು ಸಲಹೆಯಂತೆ ಅದನ್ನು ಮಂಡಿಸಬೇಕು,” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರೂ ಆಗಿರುವ ಸಚಿವರು ಹೇಳಿದರು.
ಪೂರ್ಣ ಭಾಷಣವನ್ನು ಓದಲು ನಿರಾಕರಿಸುವುದು 176 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಮತ್ತು ರಾಜ್ಯಪಾಲರು ಮಂತ್ರಿಮಂಡಲದ ಸಲಹೆ ಮತ್ತು ಸಹಾಯದ ಮೇರೆಗೆ ಕಾರ್ಯನಿರ್ವಹಿಸಬೇಕು ಎಂಬ 163 ನೇ ವಿಧಿಗೂ ವಿರುದ್ಧವಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವ ಖರ್ಗೆ ಹೇಳಿದರು.
ಅವರ ಪ್ರಕಾರ, ಪ್ರಶ್ನೆಯಲ್ಲಿರುವ ಭಾಷಣವು ಸಂಪೂರ್ಣ ಸತ್ಯಾಂಶಗಳಿಂದ ಕೂಡಿದ್ದು, ಕರ್ನಾಟಕ ಸರ್ಕಾರದ ಅಧಿಕೃತ ನಿಲುವನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕಕ್ಕೆ ನ್ಯಾಯಯುತ ಅನುದಾನವನ್ನು ನಿರಾಕರಿಸಿರುವುದು ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ಕುಸಿತದ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಯವರ ಬಳಿ ಪದೇ ಪದೇ ಪ್ರಸ್ತಾಪಿಸಿದ್ದಾರೆ ಎಂದು ಅವರು ಗಮನಸೆಳೆದರು.
“ಇದರ ಹೊರತಾಗಿಯೂ, ಸಾಂವಿಧಾನಿಕ ಔಚಿತ್ಯ ಮತ್ತು ಹುದ್ದೆಯ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ, ನೈಜ ಕಾಳಜಿಗಳಿದ್ದರೆ ಸೀಮಿತ ಭಾಷಾ ಬದಲಾವಣೆಗಳನ್ನು ಪರಿಗಣಿಸಬಹುದು ಎಂದು ಸರ್ಕಾರ ತಿಳಿಸಿತ್ತು. ಆದರೆ ಇಡೀ ಭಾಗಗಳನ್ನೇ ಕೈಬಿಡಬೇಕೆಂದು ಪಟ್ಟು ಹಿಡಿಯುವುದು ಸ್ವೀಕಾರಾರ್ಹವಲ್ಲ ಮತ್ತು ಇದು ಕರ್ನಾಟಕದ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ,” ಎಂದು ಖರ್ಗೆ ಬೆಟ್ಟು ಮಾಡಿದರು.
ಗೆಹ್ಲೋಟ್ ಅವರ ಕ್ರಮವು ಕೇವಲ ಪಕ್ಷಪಾತದ ಮಧ್ಯಪ್ರವೇಶವಾಗಿದ್ದು, ಇದು ರಾಜ್ಯಪಾಲರ ಹುದ್ದೆಯ ಸಾಂವಿಧಾನಿಕ ಪಾತ್ರ ಮತ್ತು ತಟಸ್ಥತೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, “ನಿಜವಾಗಿಯೂ ಯಾರು ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಗಂಭೀರ ಪ್ರಶ್ನೆಗಳನ್ನು ಇದು ಹುಟ್ಟುಹಾಕುತ್ತದೆ,” ಎಂದು ಅವರು ಆರೋಪಿಸಿದರು.
ಯುಪಿಎ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (MGNREGA) ಬದಲಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಕ್ಷಿತ್ ಭಾರತ್- ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ)’ (VB-G RAM G) ಬಗೆಗಿನ ಋಣಾತ್ಮಕ ಟೀಕೆಗಳ ಬಗ್ಗೆ ರಾಜ್ಯಪಾಲರು ಅಸಮಾಧಾನಗೊಂಡಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅದರ ಮೇಲಿನ ಎರಡು ಪ್ಯಾರಾಗಳನ್ನು ತೆಗೆದುಹಾಕಬೇಕೆಂದು ಗೆಹ್ಲೋಟ್ ಬಯಸಿದ್ದರು, ಆದರೆ ಸರ್ಕಾರವು ಅವುಗಳನ್ನು ಉಳಿಸಿಕೊಳ್ಳಲು ದೃಢವಾಗಿತ್ತು ಎಂದು ಮೂಲಗಳು ಪಿಟಿಐಗೆ (PTI) ತಿಳಿಸಿವೆ.
‘VB-G RAM G’ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವಾಕ್ಯ ಸೇರಿದಂತೆ ಎರಡು ವಾಕ್ಯಗಳನ್ನು ಕೈಬಿಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು, ಆದರೆ ರಾಜ್ಯಪಾಲರು ಅದನ್ನು ಒಪ್ಪಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
