Home ರಾಜಕೀಯ ವಕ್ಫ್ ತಿದ್ದುಪಡಿ ವಿಧೇಯಕ ದುರ್ಬಲ ಜನರ ಪಾಲಿಗೆ ವರದಾನ: ದೇವೇಗೌಡ

ವಕ್ಫ್ ತಿದ್ದುಪಡಿ ವಿಧೇಯಕ ದುರ್ಬಲ ಜನರ ಪಾಲಿಗೆ ವರದಾನ: ದೇವೇಗೌಡ

0

ವಕ್ಫ್ ತಿದ್ದುಪಡಿ ವಿಧೇಯಕವು ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಬಡ, ದುರ್ಬಲ ಜನರಿಗೆ ವರದಾನವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರತಿಪಾದಿಸಿದ್ದಾರೆ.

ರಾಜ್ಯಸಭೆಯಲ್ಲಿ ನಿನ್ನೆ ವಿಧೇಯಕ ಕುರಿತು ಮಾತನಾಡಿದ ಅವರು, ದೇಶದಲ್ಲಿರುವ ವಕ್ಫ್ ಬೋರ್ಡ್‌ಗಳ ಆಸ್ತಿ ಸುಮಾರು 1.2 ಲಕ್ಷ ಕೋಟಿ ಬೆಲೆ ಬಾಳುತ್ತದೆ. ಇಂತಹ ಬೆಲೆ ಬಾಳುವ ಆಸ್ತಿಯನ್ನು ದಾನಿಗಳು ನೀಡಿದ್ದಾರೆ. ಈ ಆಸ್ತಿಯನ್ನು ರಕ್ಷಣೆ ಮಾಡಿ ಬಡ ಮುಸ್ಲಿಮರಿಗೆ ಅನುಕೂಲ ಆಗುವ ಕೆಲಸವನ್ನು ಈ ವಿಧೇಯಕ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾವು ಜಾತ್ಯತೀತ ಎಂದು ಹೇಳಿಕೊಂಡವರು ಮುಸ್ಲಿಮರಿಗೆ ಕಳೆದ ಎಪ್ಪತ್ತೈದು ವರ್ಷಗಳಿಂದ ಅನ್ಯಾಯ ಮಾಡುತ್ತಲೇ ಇದ್ದಾರೆ ಎಂದು ಕಿಡಿಕಾರಿದ ಅವರು. ವಕ್ಫ್ ಆಸ್ತಿ ದುರ್ಬಳಕೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ವಿಧೇಯಕವು ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಮುಸ್ಲಿಮರನ್ನು ಮೇಲೆತ್ತುತ್ತದೆ. ಆದರೆ, ಎಲ್ಲಿಯೂ ಅವರ ಧಾರ್ಮಿಕ ನಂಬಿಕೆಗಳಲ್ಲಿ ಮೂಗು ತೂರಿಸುವುದಿಲ್ಲ. ಇದನ್ನು ಈ ವಿಧೇಯಕದ ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕು. ಇದು ಕೇವಲ ಕಂದಾಯ ಮತ್ತು ಆಡಳಿತ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಮ್ಮ ದೇಶದಲ್ಲಿನ ನಾಗರಿಕರು ದೇವರನ್ನು ನಾನಾ ಹೆಸರುಗಳಲ್ಲಿ, ಬಗೆಯಲ್ಲಿ ಪೂಜಿಸುತ್ತಾರೆ. ಕರೆಯುತ್ತಾರೆ. ಕೆಲವರು ಅಲ್ಲಾ ಎನ್ನುತ್ತಾರೆ. ನಾನು ರಾಮ ಎಂದು ಕರೆಯುತ್ತೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ.

ಎಲ್ಲಾ ದೇವರುಗಳ ಬಗ್ಗೆ ಗೌರವ, ನಂಬಿಕೆ ಹೊಂದಿದ್ದೇನೆ. ನಾನು ತಿರುಪತಿ, ಅಮೃತಸರದ ಸ್ವರ್ಣ ಮಂದಿರ, ಅಜ್ಜಿ‌ರ್ ದರ್ಗಾಕ್ಕೂ ಹೋಗುತ್ತೇನೆ. ನನ್ನ ನಂಬಿಕೆ ನನ್ನದು. ಇತರರ ನಂಬಿಕೆಯನ್ನು ಗೌರವಿಸುತ್ತೇನೆ. ತುಳಿತಕ್ಕೆ ಒಳಗಾದ ದುರ್ಬಲರ ಪರವಾಗಿ ನಾನು ವಕ್ಫ್ ವಿಧೇಯಕ ಮತ್ತು ಮೋದಿ ಅವರ ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದು ಗೌಡರು ಹೇಳಿದ್ದಾರೆ.

ಕರ್ನಾಟಕದಲ್ಲಿ ನಾನು ಮುಖ್ಯಮಂತ್ರಿ ಆಗಿ ಅಲ್ಪಸಂಖ್ಯಾತರ ರಕ್ಷಣೆಗೆ ಸಾಕಷ್ಟು ನಿರ್ಧಾರಗಳನ್ನು ಮಾಡಿದ್ದೇನೆ. ಅವರ ಒಳ್ಳೆಯದಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದೇನೆ. ಹಾಗಂತ ನಾನು ಯಾವುದೇ ಸಿದ್ಧಾಂತಕ್ಕೆ ಜೋತು ಬಿದ್ದಿಲ್ಲ. ರೈತರಿಗೂ ಒಳ್ಳೆಯದು ಮಾಡಿದ್ದೇನೆ. ಅಲ್ಲದೆ, ನಾನು ಯಾವುದೇ ಸಿದ್ಧಾಂತದವನಲ್ಲ. ನಾನು ರೈತ. ಮುಸ್ಲಿಂ ಮಾತ್ರವಲ್ಲ ಬಹಳಷ್ಟು ಸಮುದಾಯಕ್ಕೆ ಮೀಸಲಾತಿ ನೀಡಿದ್ದೇನೆ.

ಸಣ್ಣಪುಟ್ಟ ಸಮುದಾಯಗಳಿಗೆ ಮೀಸಲು ಸೌಲಭ್ಯ ನೀಡಿ ಅವರ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಅನೇಕ ಹೋರಾಟ, ಸಂಘರ್ಷಗಳನ್ನು ಮಾಡಿದ್ದೇನೆ. ಆದರೆ, ಯಾವತ್ತೂ ನಾನು ಸಭಾಧ್ಯಕ್ಷರ ಪೀಠಕ್ಕೆ ಅಪಮಾನ ಮಾಡಿಲ್ಲ. ಮಾಡುವುದೂ ಇಲ್ಲ. ಆದರೆ, ಇಲ್ಲಿ ನಡೆಯುತ್ತಿರುವುದನ್ನು ನೋಡಿ ಬೇಸರ ಆಗುತ್ತದೆ ಎಂದು ದೇವೇಗೌಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version