Home ಬ್ರೇಕಿಂಗ್ ಸುದ್ದಿ ‘ತಮಿಳುನಾಡಿಗೆ ನೀರು ಹರಿಸಿದರೆ ಹೋರಾಟದ ಎಚ್ಚರಿಕೆ’ – ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ

‘ತಮಿಳುನಾಡಿಗೆ ನೀರು ಹರಿಸಿದರೆ ಹೋರಾಟದ ಎಚ್ಚರಿಕೆ’ – ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ

0

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಕಿಡಿಕಾರಿದ್ದಾರೆ. ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

‘ಸೆ.12ರವರೆಗೆ ತಮಿಳುನಾಡಿಗೆ 5000 ಕ್ಯೂಸೆಕ್ಸ್ ನೀಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಅನ್ಯಾಯ ಮಾತ್ರವಲ್ಲ ಅವಾಸ್ತವಿಕವಾಗಿದೆ. ಇದನ್ನು ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಬಾರದು ಮತ್ತು ಜಾರಿಗೊಳಿಸಬಾರದು’ ಎಂದು ಸರ್ಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ರಾಜ್ಯದಲ್ಲಿ ತೀವ್ರತರವಾದ ಬರಗಾಲದ ಛಾಯೆ ಇರುವ ಬಗ್ಗೆ ಪ್ರಸ್ತಾಪಿಸಿ ‘ರಾಜ್ಯದಲ್ಲಿ ತೀವ್ರ ಸ್ವರೂಪದ ಬರದ ಸ್ಥಿತಿ ನಿರ್ಮಾಣವಾಗಿದೆ. ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಇಂಥ ಸ್ಥಿತಿಯಲ್ಲಿ ದಿನಕ್ಕೆ 5000 ಕ್ಯೂಸೆಕ್ಸ್ ನೀರು ಎಲ್ಲಿಂದ ತರಲು ಸಾಧ್ಯ? ಇಂಥ ಅನ್ಯಾಯದ ಆದೇಶಗಳನ್ನು ಪ್ರಾಧಿಕಾರ ನೀಡಲು ಏನು ಕಾರಣ?’ ಎಂದು ಪ್ರಶ್ನಿಸಿದ್ದಾರೆ.

ಇನ್ನು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ‘ಮುಕ್ಕಾಲು ಭಾಗ ಬೆಂಗಳೂರು ನಗರ ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನೇ ನೆಚ್ಚಿಕೊಂಡಿದೆ. ಹೀಗಿರುವಾಗ ಪ್ರಾಧಿಕಾರ ಹೇಳಿದಷ್ಟು ನೀರು ಬಿಟ್ಟರೆ ಬೆಂಗಳೂರಿನ ಜನಜೀವನವೇ ಅಸ್ತವ್ಯಸ್ಥವಾಗಲಿದೆ. ಪ್ರಾಧಿಕಾರಕ್ಕೆ ಈ ಅರಿವು ಇಲ್ಲವೇ?’ ಎಂದು ಬೆಂಗಳೂರಿಗೆ ಆಗಬಹುದಾದ ನೀರಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.

‘ರಾಜ್ಯ ಸರ್ಕಾರ ಪ್ರಾಧಿಕಾರದ ತೀರ್ಮಾನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಬೇಕು. ವಾಸ್ತವವಾಗಿ ಪ್ರಾಧಿಕಾರ ಹೇಳಿದಂತೆ ನೀರು ಬಿಟ್ಟರೆ ಹದಿನೈದು ದಿನಗಳಲ್ಲಿ ಒಟ್ಟು 7 ಟಿಎಂಸಿಯಷ್ಟು ನೀರು ಬಿಡಬೇಕಾಗುತ್ತದೆ. ಅಷ್ಟೊಂದು ನೀರು ಎಲ್ಲಿಂದ ತರಲು ಸಾಧ್ಯ?’ ಎಂದು ನೀರಿನ ಉಳಿವಿನ ಬಗ್ಗೆ ಬೆಳಕು ಚೆಲ್ಲಿ ತಿಳಿಸಿದ್ದಾರೆ.

‘ಒಂದು ವೇಳೆ ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶದಂತೆ ನೀರು ಬಿಟ್ಟರೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಹೋರಾಟ ಸಂಘಟಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪ್ರಾಧಿಕಾರದ ಒತ್ತಡಕ್ಕೆ ಮಣಿಯಬಾರದು’ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬಿಸಿ ಮುಟ್ಟಿಸಿದ್ದಾರೆ.

You cannot copy content of this page

Exit mobile version