ಹಾಸನ, ಮಾರ್ಚ್ 13: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕ್ಯಾತೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಪೂರ್ವಿಕಾ(13) ಮೃತ ಬಾಲಕಿ. ನಿನ್ನೆಯಿಂದಲೇ ತಾನು ಸುಸ್ತಾಗಿರುವುದಾಗಿ ಹೇಳಿದ್ದ ಪೂರ್ವಿಕಾ, ಇಂದು ಬೆಳಿಗ್ಗೆ ಕುಸಿದು ಬಿದ್ದಳು. ತಕ್ಷಣವೇ ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದರು. ಆದರೆ ಆಕೆ ದಾರಿ ಮಧ್ಯೆಯೇ ಮೃತಪಟ್ಟಿದ್ದಳು.
ಪೂರ್ವಿಕಾ, ದೊಡ್ಡಬಂಡಾರ ಗ್ರಾಮದ ಶಿವ ಮತ್ತು ಆಶಾ ದಂಪತಿಯ ಪುತ್ರಿ. ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೋಷಕರಿಗೆ ಪೂರ್ವಿಕಾ ಆರೋಗ್ಯ ಸ್ಥಿತಿಯ ಬಗ್ಗೆ ಶಾಲಾ ಆಡಳಿತದವರು ಬೆಳಗ್ಗೆ ಮಾಹಿತಿ ನೀಡಿದ್ದರು. ಆದರೆ, ವೈದ್ಯಕೀಯ ಚಿಕಿತ್ಸೆಗೆ ಮುನ್ನವೇ ಬಾಲಕಿ ಪ್ರಾಣಬಿಟ್ಟಿದ್ದಾಳೆ.
ಈ ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಬಾಲಕಿಯ ಮೃತದೇಹದ ಅಂಗೈಗಳಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ ರೀತಿ ಕಲೆಗಳು ಕಂಡು ಬಂದಿದೆ. ಬಾಲಕಿಯ ಪಾಲಕರು ಬಂದ ನಂತರ ಮುಂದಿನ ಪ್ರಕ್ರಿಯೆ ಜರುಗಲಿದೆ. ಶಾಲಾ ಸಿಬ್ಬಂದಿ ಬಾಲಕಿಯ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಿ ಆಕೆಯ ಸಾವಿಗೆ ಕಾರಣರಾದರೆ ಎನ್ನುವ ಪ್ರಶ್ನೆಯೂ ಮೂಡಿದೆ.