ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ದೇಶದ ಉತ್ಪನ್ನಗಳ ಮೇಲೆ ಮೇಲೆ ಶೇ.20 ರಷ್ಟು ಸುಂಕ ವಿಧಿಸಿರುವ ಕುರಿತು ಚೀನಾ ದೇಶ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಅಮೆರಿಕ ಆರಂಭಿಸಿರುವ ವ್ಯಾಪಾರ ಯುದ್ಧದಲ್ಲಿ ಕೊನೆಯವರೆಗೂ ಹೋರಾಡಲು ಸಿದ್ಧ ಎಂದು ಚೀನಾ ಹೇಳಿದೆ. “ಒಂದು ಮಹಾಶಕ್ತಿ ನಮ್ಮ ಮೇಲೆ ಯುದ್ಧ ಮಾಡಲು ನಿರ್ಧರಿಸಿದರೆ, ಅದು ಸುಂಕ ಯುದ್ಧವಾಗಿರಬಹುದು, ವ್ಯಾಪಾರ ಯುದ್ಧವಾಗಿರಬಹುದು ಅಥವಾ ಯಾವುದೇ ರೀತಿಯ ಯುದ್ಧವಾಗಿರಬಹುದು, ನಾವು ಕೊನೆಯವರೆಗೂ ಹೋರಾಡಲು ಸಿದ್ಧರಿದ್ದೇವೆ” ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿ ಘೋಷಿಸಿದೆ.
ತನ್ನ ಮೇಲೆ ವಿಧಿಸಲಾಗುತ್ತಿರುವ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕದ ಉತ್ಪನ್ನಗಳ ಮೇಲೆ ಶೇ.10-15 ರಷ್ಟು ಸುಂಕ ವಿಧಿಸುವುದಾಗಿ ಅದು ಹೇಳಿದೆ.
ಫೆಂಟನಿಲ್ ಔಷಧಿಗಳ ಕಳ್ಳಸಾಗಣೆಯನ್ನು ತಡೆಯುವಲ್ಲಿ ವಿಫಲವಾದ ಕಾರಣ ಬೀಜಿಂಗ್ ಚೀನಾದ ಮೇಲಿನ ಸುಂಕವನ್ನು ದ್ವಿಗುಣಗೊಳಿಸಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡರೂ, ಚೈನಾ ಫೆಂಟನಿಲ್ ಬಿಕ್ಕಟ್ಟಿಗೆ ಅಮೇರಿಕಾವೇ ಕಾರಣ ಎಂದು ಆರೋಪಿಸಿದೆ.
“ಈ ಮಾದಕವಸ್ತು ಕಳ್ಳಸಾಗಣೆ ನಿಲ್ಲಿಸಲು ನಾವು ಮಾಡಿದ ಪ್ರಯತ್ನಗಳನ್ನು ಗುರುತಿಸದೆ ಅಮೆರಿಕ ನಮ್ಮನ್ನು ದೂಷಿಸುತ್ತಿದೆ. ಅವರು ಸುಂಕದ ಹೆಸರಿನಲ್ಲಿ ಒತ್ತಡ ಹೇರಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಷ್ಟು ದಿನ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಅವರು ನಮ್ಮನ್ನು ಶಿಕ್ಷಿಸುತ್ತಿದ್ದಾರೆ” ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.
ಪ್ರಪಂಚದಾದ್ಯಂತದ ದೇಶಗಳ ವಿರುದ್ಧ ಅಮೆರಿಕ ಅನುಸರಿಸುತ್ತಿರುವ ಸುಂಕ ಮತ್ತು ಬೆದರಿಕೆ ತಂತ್ರಗಳು ತನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅದು ಹೇಳಿದೆ.
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ತಕ್ಷಣ, ಟ್ರಂಪ್ ಪ್ರಪಂಚದಾದ್ಯಂತದ ದೇಶಗಳ ವಿರುದ್ಧ ವ್ಯಾಪಾರ ಯುದ್ಧವನ್ನು ಘೋಷಿಸಿದರು. ತಮ್ಮೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಪರಸ್ಪರ ಸುಂಕಗಳನ್ನು ವಿಧಿಸುವುದಾಗಿ ಅವರು ಘೋಷಿಸಿದರು.
ಇದರ ಭಾಗವಾಗಿ, ಕೆನಡಾ, ಮೆಕ್ಸಿಕೊ, ಭಾರತ ಮತ್ತು ಚೀನಾಗಳ ಮೇಲೆ ಸುಂಕ ವಿಧಿಸಲಾಗುವುದು ಎಂದು ಘೋಷಿಸಲಾಯಿತು. ಅಮೆರಿಕದ ಸುಂಕಗಳ ವಿರುದ್ಧ ಚೀನಾ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಂಡಿದೆ.
ಚೀನಾದ ಹಣಕಾಸು ಸಚಿವಾಲಯವು ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಕಲ್ಲಿದ್ದಲು ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಮೇಲೆ ಶೇಕಡಾ 15 ರಷ್ಟು ಸುಂಕವನ್ನು ವಿಧಿಸುವುದಾಗಿ ಘೋಷಿಸಿದೆ. ಕಚ್ಚಾ ತೈಲ, ಕೃಷಿ ಉಪಕರಣಗಳು ಮತ್ತು ದೊಡ್ಡ ಎಂಜಿನ್ ಹೊಂದಿರುವ ಕಾರುಗಳ ಮೇಲೆ ಶೇಕಡಾ 10 ರಷ್ಟು ಸುಂಕ ವಿಧಿಸಲಾಗುವುದು ಎಂದು ಅದು ಹೇಳಿದೆ.
ಬುಧವಾರ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಟ್ರಂಪ್, ಏಪ್ರಿಲ್ 2 ರಿಂದ ಭಾರತ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳ ಮೇಲೆ ಪ್ರತೀಕಾರದ ಸುಂಕಗಳನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದರು.