ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಹೆಚ್ಚು ಮುಸ್ಲಿಂ ವಿರೋಧಿ ಹೇಳಿಕೆಗಳಿಂದ ಖ್ಯಾತರಾಗುತ್ತಿದ್ದಾರೆ. ಅವುಗಳಲ್ಲಿ “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ನಿಮ್ಮ ಆಸ್ತಿಗಳನ್ನು ಕಿತ್ತು ‘ನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ’” ನೀಡುತ್ತದೆ ಎಂದು ಎನ್ನುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಈ ವಿಷಯವಾಗಿ ಕಾಂಗ್ರೆಸ್ ಚುನಾವಣಾ ಆಯೋಗದ ಮೆಟ್ಟಿಲನ್ನು ಸಹ ಹತ್ತಿತ್ತು ಮತ್ತು ಆಯೋಗ ಎಂದಿನಂತೆ ತನ್ನ ಮೌನವನ್ನು ಕಾಪಾಡಿಕೊಂಡಿತ್ತು.
ಈಗ ಪ್ರಧಾನಿ ಮೋದಿ ಈ ವಿಷಯದಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆ ನ್ಯೂಸ್ 18ಗೆ ನೀಡಿರುವ ಸಂದರ್ಶನದಲ್ಲಿ ತಾನು ಹಾಗೆ ಹೇಳಿರಲೇ ಇಲ್ಲ ಎಂದು ಹೇಳಿದ್ದಾರೆ.
ನ್ಯೂಸ್ 18 ಇಂಡಿಯಾದ ಕನ್ಸಲ್ಟಿಂಗ್ ಎಡಿಟರ್ ರುಬಿಕಾ ಲಿಯಾಕತ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೋದಿ, “ಮೊದಲಿಗೆ ನಾನು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾನು ಮುಸ್ಲಿಮರ ಮೇಲಿರುವ ಪ್ರೀತಿಯನ್ನು ಮಾರಾಟ ಮಾಡುವುದಿಲ್ಲ. ನಾನು ಹಿಂದೂ-ಮುಸ್ಲಿಂ ಎಂದು ರಾಜಕೀಯ ಮಾಡುವುದಿಲ್ಲ. ಹಾಗೆ ಮಾಡಲು ಪ್ರಾರಂಭಿಸಿದ ದಿನ ರಾಜಕೀಯವನ್ನು ತೊರೆಯುತ್ತೇನೆ. ನಾನು ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡಿಲ್ಲ, ಪ್ರತಿ ಬಡ ಕುಟುಂಬದ ಬಗ್ಗೆಯೂ ಮಾತನಾಡಿದ್ದೇನೆ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಇದು ನನ್ನ ನಿರ್ಣಯ” ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು 2002ರ ನಂತರ ನಂತರ ನನ್ನ ಇಮೇಜ್ ಹಾಳಾಯಿತು. ಮುಸ್ಲಿಮರು ನನ್ನನ್ನು ಇಷ್ಟಪಡುತ್ತಾರೆ. ನಾನು ನನ್ನ ಬಾಲ್ಯವನ್ನು ಮುಸ್ಲಿಮರೊಂದಿಗೆ ಕಳೆದಿದ್ದೇನೆ. ನನ್ನ ಮನೆಯ ಪಕ್ಕದಲ್ಲೇ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಈದ್ ದಿನದಂದು ನಮ್ಮ ಮನೆಗಳಲ್ಲಿ ಅಡುಗೆಯನ್ನೇ ಮಾಡುತ್ತಿರಲಿಲ್ಲ. ನಮ್ಮ ಮನೆಗೆ ಅಲ್ಲಿನ ಮುಸ್ಲಿಂ ಕುಟುಂಬಗಳು ಊಟ ಕಳುಹಿಸುತ್ತಿದ್ದವು ಎಂದಿದ್ದಾರೆ.