ಪರಿಷತ್ ಚುನಾವಣೆಯ ಹೊಸ್ತಿಲಿನಲ್ಲಿ ಕರಾವಳಿ ಭಾಗದ ಬಿಜೆಪಿಯಲ್ಲಿ ಬಂಡಾಯದ ಹೊಗೆ ಏಳುತ್ತಿದ್ದು ಪಕ್ಷದ ನಾಯಕರ ಉಸಿರುಗಟ್ಟಿಸುತ್ತಿದೆ. ಲೋಕಸಭಾ ಚುನಾವಣೆಯ ಸಮಯದಲ್ಲಿನ ಬಂಡಾಯವನ್ನೇ ತಣಿಸಲಾಗದೆ ಕೈಚೆಲ್ಲಿ ಕುಳಿತಿರುವ ಬಿಜೆಪಿ ನಾಯಕತ್ವಕ್ಕೆ ಈಗ ಪದವೀಧರ ಕ್ಷೇತ್ರಗಳ ಚುನಾವಣೆ ಇನ್ನೊಂದು ತಲೆನೋವನ್ನು ತಂದೊಡ್ಡಿದೆ.
ವಿಧಾನಪರಿಷತ್ನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಇದೇ ಜೂನ್ 3ರಂದು ಮತದಾನ ನಡೆಯಲಿದೆ. ಈ ಚುನಾವಣೆಗಾಗಿ ಬಿಜೆಪಿ ಈಗಾಗಲೇ 4 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇನ್ನುಳಿದ ಎರಡು ಕ್ಷೇತ್ರಗಳನ್ನು ತನ್ನ ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.
ಆದರೆ ಈಗ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಎರಡು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿಯನ್ನು ಅದು ಎದುರಿಸುತ್ತಿದೆ. ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಬಯಸಿದ್ದ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪಕ್ಷೇತರವಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಅತ್ತ ನೈರುತ್ಯ ಶಿಕ್ಷಕ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಗಳೂರಿನ ಆರ್ಎಸ್ಎಸ್ ಮುಖಂಡ ಎಸ್ ಆರ್ ಹರೀಶ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾಗಿರುವ ಎಸ್ ಆರ್ ಹರೀಶ್ ಎಬಿವಿಪಿ ಹಿನ್ನೆಲೆಯಿಂದ ಬಂದವರು.
ಕಳೆದ ಬಾರಿ ಉಡುಪಿಯಿಂದ ಶಾಸಕ ಸ್ಥಾನದ ಟಿಕೆಟ್ ತಪ್ಪಿಸಿಕೊಂಡಿದ್ದ ರಘುಪತಿ ಭಟ್ ತಾನು ನಾಮ ಪತ್ರ ಸಲ್ಲಿಸುವುದು ಗ್ಯಾರಂಟಿ ಎಂದಿದ್ದಾರೆ.
ಬಿಜೆಪಿಯ ಬಣ ರಾಜಕೀಯವು ಪ್ರತಿ ಚುನಾವಣೆಯಲ್ಲೂ ಎದ್ದು ಕಾಣುತ್ತಿದ್ದು, ಒಂದೊಂದು ಚುನಾವಣೆಯಲ್ಲಿ ಒಂದೊಂದು ಬಣದ ಕೈ ಮೇಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಲಾಬಿ ಕೈ ಮೇಲಾಗಿತ್ತು ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತ್ರತ್ವದ ಲಿಂಗಾಯತ ಬಣ ಮೇಲುಗೈ ಸಾಧಿಸಿದೆ.