ಬೆಂಗಳೂರು : ಇಡೀ ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಿಪಿಎಲ್ (BPL) ಕಾರ್ಡ್ (Card) ಕರ್ನಾಟಕದಲ್ಲೇ (Karnataka) ಇವೆ. ರಾಜ್ಯದಲ್ಲಿ 1 ಕೋಟಿ 28 ಲಕ್ಷದಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಎಪಿಎಲ್ (APL) ಅರ್ಹತೆ ಹೊಂದಿರೋರು ಬಿಪಿಎಲ್ ಕಾರ್ಡ್ ಹೊಂದಿರುವುದೇ ಇದಕ್ಕೆ ಕಾರಣ. ಇದನ್ನ ಮತ್ತೆ ಪರಿಷ್ಕರಣೆ (Revise) ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ (K.H.Muniyappa) ಹೇಳಿದರು.
ರಾಜ್ಯದಲ್ಲಿ 5 ಮಾನದಂಡ ಇಟ್ಟುಕೊಂಡು ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಇರುವವರಿಗೆ ಕಾರ್ಡ್ ರದ್ದು ಮಾಡಲ್ಲ. ಅವರಿಗೆ ಎಪಿಎಲ್ ಕೊಡುತ್ತೇವೆ. ಮಾನದಂಡಗಳನ್ನು ಸರಿಯಾಗಿ ಅನುಷ್ಠಾನ ಮಾಡುವ ಕೆಲಸ ಮಾಡುತ್ತೇವೆ ಎಂದು ಇಂದಿನ ಅಧಿವೇಶನದ ಕಲಾಪದ ವೇಳೆ ಸದನಕ್ಕೆ ಮಾಹಿತಿ ನೀಡಿದರು. ಪ್ರಶೋತ್ತರ ಅವಧಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನಾಗರಾಜ್ ಯಾದವ್, ಪಡಿತರ ಕೊಡುವ ತಂತ್ರಾಂಶದಲ್ಲಿ ಲೋಪ ಇದೆ. e-PoS ತಂತ್ರಾಂಶದಲ್ಲಿ ದೊಡ್ಡ ಸಮಸ್ಯೆ ಆಗಿದೆ. ಇದರಿಂದ 1 ಕೋಟಿ 50 ಲಕ್ಷ ಪಡಿತರ ಚೀಟಿ ಹೊಂದಿರೋರಿಗೆ ಸಮಸ್ಯೆ ಆಗುತ್ತಿದೆ. ಪಡಿತರ ಕೊಡೋದ್ರಲ್ಲಿ ಅಕ್ರಮವಾಗುತ್ತಿದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪಡಿತರವು ಕಾಳಸಂತೆಯಲ್ಲಿ ಮಾರಾಟ
ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಸಚಿವ ಮುನಿಯಪ್ಪ ಅವರು, ಮೊದಲು ತಂತ್ರಾಂಶದಲ್ಲಿ ಲೋಪ ಇತ್ತು, ಈಗ ಆ ಸಮಸ್ಯೆ ಇಲ್ಲ. ಅಲ್ಲದೇ ಪಡಿತರ ರೇಷನ್ ಕಾಳ ಸಂತೆಯಲ್ಲಿ ಮಾರಾಟ ಆಗುತ್ತಿರುವುದು ಸತ್ಯ. ಇದನ್ನ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಅನೇಕ ಕೇಸ್ ಹಾಕಲಾಗಿದೆ. ದಂಡ ವಸೂಲಿ ಮಾಡಲಾಗಿದೆ ಎಂದು ಸದನಕ್ಕೆ ವಿವರಿಸಿದರು.
ಎಪಿಎಲ್ ಕಾರ್ಡ್ ಅರ್ಹತೆ ಇರುವವರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಿಪಿಎಲ್ ಕಾರ್ಡ್ ಇರುವುದು ಕರ್ನಾಟಕದಲ್ಲಿ. ನಮ್ಮ ರಾಜ್ಯದಲ್ಲಿ 75%ರಷ್ಟು ಬಿಪಿಎಲ್ ಕಾರ್ಡ್ ಗಳು ಇವೆ. 1 ಕೋಟಿ 28 ಲಕ್ಷ ಬಿಪಿಎಲ್ ಕಾರ್ಡ್‌ಗಳಿದ್ದು, 4 ಕೋಟಿ ಜನ ಇದ್ದಾರೆ. ಈ ಹಿಂದೆ ಎಪಿಎಲ್ ಅರ್ಹತೆ ಇರೋರು ಬಿಪಿಎಲ್‌ನಲ್ಲಿ ಇದ್ದರು. ಅದನ್ನ ಸರಿ ಮಾಡೋಕೆ ಮುಂದಾಗಿದ್ದೆವು, ಆಗ ಗಲಾಟೆ ಆಯ್ತು. ಈಗ ಮತ್ತೆ ಅದನ್ನ ಪರಿಷ್ಕರಣೆ ಮಾಡ್ತೀವಿ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಬೇಕು ಎಂದು ಕೋರಿದರು. ಈ ವಿಚಾರವೂ ಈ ಬಾರಿಯ ಆಧಿವೇಶನದಲ್ಲಿ ಹಲ್ ಚಲ್ ಎಬ್ಬಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.