ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪರಾಜಯಗೊಳ್ಳುವುದು ಖಚಿತವಾಗುತ್ತಿದ್ದಂತೆ, ರಾಜ್ಯಾದ್ಯಂತ ಆ ಪಕ್ಷದ ಹಲವು ಕಚೇರಿಗಳ ಮೇಲೆ ದಾಳಿಗಳು ನಡೆದಿವೆ. ಪಕ್ಷದ ಕಚೇರಿಗಳಲ್ಲಿದ್ದ ಫ್ಲೆಕ್ಸ್ ಬೋರ್ಡ್‌ಗಳು, ಬ್ಯಾನರ್‌ಗಳು ಮತ್ತು ತೋರಣಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಬರ್ಧಮಾನ್ ಜಿಲ್ಲೆಯ ಜಮುರಿಯಾದಲ್ಲಿ ಅಪರಿಚಿತ ವ್ಯಕ್ತಿಗಳು ತೃಣಮೂಲ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾರೀಪುರದಲ್ಲಿ ಪಕ್ಷದ ಬ್ಯಾನರ್‌ಗಳು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಭಾವಚಿತ್ರಗಳನ್ನು ಹರಿದು ರಸ್ತೆಗೆ ಎಸೆಯಲಾಗಿದೆ.
ಈ ಘಟನೆಗಳ ಹಿಂದೆ ಬಿಜೆಪಿ ಬೆಂಬಲಿಗರಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಆದರೆ, ಈ ವಿಧ್ವಂಸಕ ಕೃತ್ಯಗಳಲ್ಲಿ ತಮ್ಮ ಯಾವುದೇ ಪ್ರಮೇಯವಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ. ಅಸನ್ಸೋಲ್, ಬಾರೀಪುರ, ತುಫಾನ್‌ಗಂಜ್ ಮತ್ತು ಪಾನಿಹಟಿಯಲ್ಲಿರುವ ತಮ್ಮ ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಟಿಎಂಸಿ ದೂರಿದೆ.
