ಭಾರತೀಯ ಆಹಾರ ಪರಂಪರೆಯಲ್ಲಿ ಹಾಲು ಮತ್ತು ಹಾಲಿನಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಸ್ಥಾನ ಇದೆ. ಆದರೆ, ನಿಜವಾಗಿಯೂ ಗುಣಮಟ್ಟದ ಹಾಲು ಗ್ರಾಹಕರ ಕೈ ಸೇರುತ್ತಿದೆಯೇ? ಕೃಷಿಯಲ್ಲಿ ವಿಶೇಷ ಆಸಕ್ತರಾದ ಮಂಜುನಾಥ ಹೊಳಲು ಅವರು ಹೈನುಗಾರಿಕೆಯಲ್ಲಿ ಗುಣಮಟ್ಟದ ಹಾಲಿಗಾಗಿ ತೆಗೆದುಕೊಳ್ಳಬೇಕಾದ ಎಚ್ಚರಗಳ ಬಗ್ಗೆ ಈ ಲೇಖನದ ಮೂಲಕ ಗ್ರಾಹಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಸಾವಯವ ಆಹಾರಗಳು ಜನಪ್ರಿಯವಾಗುತ್ತಿರುವುದರಿಂದ ಸಾವಯವ ಡೈರಿ ಉತ್ಪನ್ನಗಳು ಹೆಚ್ಚು ಹೆಚ್ಚು ಮಾರುಕಟ್ಟೆಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೆಲವು ವರ್ಷಗಳಿಂದ, ಆರೋಗ್ಯ, ಫಿಟ್‌ನೆಸ್ ಮತ್ತು ಸಾವಯವವು ಪೌಷ್ಟಿಕಾಂಶ ಮತ್ತು ಆಹಾರದ ಪ್ರಪಂಚಕ್ಕೆ ಸಮಾನಾರ್ಥಕವಾಗಿದೆ. ಸಾಂಕ್ರಾಮಿಕ ರೋಗವು ಆರೋಗ್ಯಕರ ಜೀವನಶೈಲಿ ಮತ್ತು ಆಹಾರದ ಆಯ್ಕೆಗಳನ್ನು ಮಾಡುವ ಮಹತ್ವದ ಅರಿವನ್ನು ಖಂಡಿತವಾಗಿಯೂ ಹೆಚ್ಚಿಸಿದೆ. ಇತ್ತೀಚೆಗೆ ವರದಿಯಾದ ಮಾಹಿತಿಯ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ಸಾವಯವ ವಸ್ತುಗಳ ಬೇಡಿಕೆಯು ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತೀವ್ರ ಇಳಿಕೆಯನ್ನು ಕಂಡಿದೆ. ಸಾವಯವ ಆಹಾರಗಳು ರಾಷ್ಟ್ರದಾದ್ಯಂತ ಹೆಚ್ಚೆಚ್ಚು ಜನಪ್ರಿಯತೆಯನ್ನು ಗಳಿಸಿ ಕೊಳ್ಳುತ್ತಿರುವುದರಿಂದ ನಮ್ಮ ದೈನಂದಿನ ಆಹಾರ ಮತ್ತು ಪೌಷ್ಟಿಕಾಂಶದ ಸೇವನೆಯ ದೊಡ್ಡ ಭಾಗವಾಗಿರುವ ಸಾವಯವ ಡೈರಿ ಉತ್ಪನ್ನಗಳ ಬೇಡಿಕೆಯು ಹೆಚ್ಚುತ್ತಿರುವುದು ಮಾತ್ರವಲ್ಲದೆ ಅವುಗಳು ದೊಡ್ಡಮಟ್ಟದಲ್ಲಿ ಹೊರಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಸಾವಯವ ಹಾಲು ಸಾಂಪ್ರದಾಯಿಕ ಹಾಲಿಗಿಂತ ಆರೋಗ್ಯಕರ
ಸಾವಯವ ಹಾಲು ಸಾಂಪ್ರದಾಯಿಕ ಹಾಲಿಗಿಂತ ಆರೋಗ್ಯಕರವಾಗಿದೆ. ಏಕೆಂದರೆ ಇಲ್ಲಿ ಹಸುಗಳು ಸಾವಯವ ಆಹಾರದ ಮೇವನ್ನು ತಿನ್ನುತ್ತವೆ. ಮತ್ತು ಒತ್ತಡ-ಮುಕ್ತ ವಾತಾವರಣವನ್ನು ಹೊಂದಿರುತ್ತವೆ. ಸಾವಯವ ಹಾಲು ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ರೋಗ-ಹೋರಾಟದ ಉತ್ಕರ್ಷಣ ನಿರೋಧಕ (Antioxidant)ಗಳ ಹೆಚ್ಚಿನ ಸಂಯೋಜನೆಯನ್ನು ಹೊಂದಿರುತ್ತದೆ. ಒಮೆಗಾ-6 ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಕಡಿಮೆ ಅನುಪಾತದ ಪರಿಣಾಮವಾಗಿ, ಸಾವಯವ ಹಾಲು ಸಾಮಾನ್ಯ ಹಾಲಿಗಿಂತ ಆರೋಗ್ಯಕರವಾಗಿರುತ್ತದೆ. ಒಮೆಗಾ -6 ಕೊಬ್ಬಿನಾಮ್ಲಗಳು ಹೃದ್ರೋಗದೊಂದಿಗೆ ಸಂಬಂಧಿಸಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಕ್ಯಾನ್ಸರ್, ಉರಿಯೂತ ಮತ್ತು ಸ್ವಯಂ ನಿರೋಧಕ ಅಸ್ವಸ್ಥತೆಗಳು (Autoimmune disorders) ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ನಿಯಮಿತ ಹಾಲಿನ ಉತ್ಪಾದನೆಯ ಸಮಯದಲ್ಲಿ ಹಸುಗಳಿಗೆ ಹಾರ್ಮೋನ್‌ಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ಮಕ್ಕಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ಆರಂಭಿಕ ಪ್ರೌಢಾವಸ್ಥೆಗೆ ಕಾರಣವಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ಆರೋಗ್ಯದ ಅಪಾಯಗಳನ್ನು ಉಂಟು ಮಾಡುತ್ತದೆ. ಸಾವಯವವಲ್ಲದ ಹಾಲಿಗೆ ಹೋಲಿಸಿದರೆ, ಸಾವಯವ ಹಾಲಿನಲ್ಲಿ ಕಬ್ಬಿಣ, ವಿಟಮಿನ್ ಇ, ಸೆಲೆನಿಯಮ್ ಮತ್ತು ಕ್ಯಾರೊಟಿನಾಯ್ಡ್‌ಗಳು ಸೇರಿದಂತೆ ಪೌಷ್ಟಿಕಾಂಶದ ಖನಿಜಗಳು ಹೆಚ್ಚಾಗಿರುತ್ತವೆ. ಈ ಪೋಷಕಾಂಶಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುತ್ತವೆ. ಉದಾಹರಣೆಗೆ, ನಮ್ಮ ಜೀವಕೋಶಗಳಲ್ಲಿನ ಆಕ್ಸಿಡೇಟಿವ್ ಹಾನಿ, ಪರಿಧಮನಿಯ ಕಾಯಿಲೆ(Coronary Artery Disease) ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಸಾವಯವ ಹಾಲಿನಲ್ಲಿ ಸಂಯೋಜಿತ ಲಿನೋಲಿಯಿಕ್ ಆಸಿಡ್ (ಸಿಎಲ್‌ಎ) ಅಧಿಕವಾಗಿದೆ. ಇದು ಕೊಬ್ಬಿನಾಮ್ಲವಾಗಿದೆ. ಇದು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯ (Immune system) ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಬೊಜ್ಜು, ಆಸ್ಟಿಯೊಪೊರೋಸಿಸ್, ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೆಚ್ಚುವರಿಯಾಗಿ, ಸಾವಯವ ಡೈರಿ ಉತ್ಪಾದನೆಯಲ್ಲಿ ಆಂಟಿಬಯೋಟಿಕ್ ಗಳನ್ನು ನಿಷೇಧಿಸಲಾಗಿದೆ ಮತ್ತು ಉತ್ತಮ ಕಾರಣಕ್ಕಾಗಿ ಪ್ರಾಣಿಗಳಿಗೆ ಬಳಸುವ ಆಂಟಿಬಯೋಟಿಕ್ ಗಳು ಮಾನವರಲ್ಲಿ ಆಂಟಿಬಯೋಟಿಕ್ ಪ್ರತಿರೋಧಕ್ಕೆ ಕಾರಣವಾಗಿ ರೋಗಗಳಿಗೆ ಕಾರಣವಾಗಬಹುದು. ಇದು ಜನರಿಗೆ ಹರಡುತ್ತದೆ. ಆಂಟಿಬಯೋಟಿಕ್ ಪ್ರತಿರೋಧವನ್ನು ನಮ್ಮ ದಿನದ ಅತ್ಯಂತ ತುರ್ತು ಮಾನವ ಆರೋಗ್ಯ ಸಮಸ್ಯೆಗಳಲ್ಲಿ ಒಂದೆಂದು ಕರೆಯಲಾಗಿದೆ. ಇದು ಪ್ರತಿ ವರ್ಷ ಸಾವಿರಾರು ಸಾವುಗಳಿಗೆ ಕಾರಣವಾಗುತ್ತದೆ. ಸಾವಯವ ಕೃಷಿ ವ್ಯವಸ್ಥೆಗಳು ಆರೋಗ್ಯಕರ ಆಹಾರದ ಸುಸ್ಥಿರ ಉತ್ಪಾದನೆಗೆ ಕೊಡುಗೆ ನೀಡುತ್ತವೆ ಎಂದು ಸಂಶೋಧನೆ ತೋರಿಸುತ್ತದೆ.
ಈ ಆರೋಗ್ಯ ಮತ್ತು ಸುಸ್ಥಿರ ಉತ್ಪಾದನಾ ಪ್ರಯೋಜನಗಳ ಪರಿಣಾಮವಾಗಿ ಸಾವಯವ ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸಾವಯವ ಮತ್ತು ಸಾಂಪ್ರದಾಯಿಕ ಹಾಲನ್ನು ಹೋಲಿಸುವ ಕೆಲವು ಅಧ್ಯಯನಗಳು ನಡೆದಿವೆಯಾದರೂ, ಅವುಗಳ ದೀರ್ಘಕಾಲೀನ ಆರೋಗ್ಯದ ಪರಿಣಾಮಗಳನ್ನು ನಿರ್ಧರಿಸಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಒಟ್ಟಾರೆ ಪೌಷ್ಟಿಕಾಂಶದ ಪ್ರೊಫೈಲ್‌ಗಳ ಕಾರಣದಿಂದಾಗಿ ಸಾವಯವ ಆಹಾರಗಳು ಹೆಚ್ಚು ಪೌಷ್ಟಿಕವಾಗಿವೆ. ಇದಲ್ಲದೆ, ದೇಶದ ಆರ್ಥಿಕ ಬೆಳವಣಿಗೆ ಮತ್ತು ಗ್ರಾಹಕರಲ್ಲಿ ಹೆಚ್ಚುತ್ತಿರುವ ಆದಾಯವು ಸಾವಯವ ಪರ್ಯಾಯಗಳ ಅಳವಡಿಕೆಯನ್ನು ವೃದ್ಧಿಸಿದೆ.
ಹಾಲು ಮಾನವ ಹೆಚ್ಚು ಬಳಕೆ ಮಾಡುವ ಆಹಾರ ವಸ್ತುವಾಗಿದೆ. ಗುಣಮಟ್ಟದ ಹಾಲು ಉತ್ಪಾದನೆಯು ಹಸುವಿನ ಆರೋಗ್ಯವನ್ನು ಅವಲಂಬಿಸಿರುತ್ತದೆ, ಹಸುಗಳು ಆರೋಗ್ಯವಾಗಿರಬೇಕಾದರೆ ಎಲ್ಲಾ ಪೋಷಕಾಂಶಗಳನ್ನೊಳಗೊಂಡ ಸಮತೋಲನ ಆಹಾರ ನೀಡುವುದು ಅತ್ಯವಶ್ಯಕವಾಗಿರುತ್ತದೆ. ಹಸು ತಿನ್ನುವ ಆಹಾರದಲ್ಲಿರುವ ಅಂಶಗಳು ಹಾಲಿನಲ್ಲಿ ಬರುವುದರಿಂದ ಹಸುವಿಗೆ ನೀಡುವ ಆಹಾರವು ಗುಣಮಟ್ಟದಿಂದ ಕೂಡಿರುವುದು ಅವಶ್ಯಕ. ಅಕ್ಷಯಕಲ್ಪವು ರೈತರ, ಗ್ರಾಹಕರ ಮತ್ತು ಹಸುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಂಟಿಬಯೋಟಿಕ್, ಅಫ್ಲಾಟಾಕ್ಸಿನ್ ಹಾಗು ಬ್ರುಸೆಲ್ಲಾ ಮುಕ್ತ ಹಾಲು ಒದಗಿಸುತ್ತದೆ.
ಆಂಟಿಬಯೋಟಿಕ್ ಮುಕ್ತ ಹಾಲು
ಪ್ರಸ್ತುತ ದಿನಗಳಲ್ಲಿ, ಜಾನುವಾರುಗಳ ಚಿಕಿತ್ಸೆಗಾಗಿ ಮತ್ತು ರೋಗನಿರೋಧಕ ಉದ್ದೇಶಗಳಿಗಾಗಿ ಪಶುವೈದ್ಯಕೀಯ ವಲಯದಲ್ಲಿ ವಿವೇಚನಾ ರಹಿತವಾಗಿ ವಿವಿಧ ರೀತಿಯ 60,000 ಟನ್ ಗಳಿಗೂ ಅಧಿಕ ಆಂಟಿಬಯೋಟಿಕ್ (ಪ್ರತಿಜೀವಕ) ಗಳನ್ನು ಪ್ರತಿ ವರ್ಷ ಪ್ರಪಂಚದಾದ್ಯಂತ ಬಳಸಲಾಗುತ್ತಿದೆ. ಇವುಗಳ ಬಳಕೆಯಿಂದಾಗಿ ಜಾಗತಿಕವಾಗಿ, ಔಷಧ-ನಿರೋಧಕ ಕಾಯಿಲೆಗಳು ಪ್ರತಿ ವರ್ಷ 7,00,000 ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. WHO ಪ್ರಕಾರ, “ಔಷಧ-ನಿರೋಧಕ ಕಾಯಿಲೆಗಳ ವಿರುದ್ಧ ಯಾವುದೇ ಕ್ರಮವನ್ನು ತೆಗೆದು ಕೊಳ್ಳದಿದ್ದರೆ, 2050 ರ ವೇಳೆಗೆ ಪ್ರತಿ ವರ್ಷ 10 ಮಿಲಿಯನ್ ಸಾವುಗಳನ್ನು ಉಂಟು ಮಾಡಬಹುದು ಎಂದು ಅಂದಾಜಿಸಲಾಗಿದೆ. ಆರೋಗ್ಯ ವೆಚ್ಚಗಳು ಹೆಚ್ಚಾಗುವುದರಿಂದ ಜಾಗತಿಕ ಆರ್ಥಿಕತೆಗೆ ಹಾನಿಯಾಗಬಹುದು.”ಇತ್ತೀಚೆಗೆ ಮಾನವರಿಗೆ ಹೋಲಿಸಿದರೆ ಪ್ರಾಣಿಗಳಲ್ಲಿ ಆ್ಯಂಟಿಬಯೋಟಿಕ್ ಗಳ ಜಾಗತಿಕ ಬಳಕೆಯು ದ್ವಿಗುಣವಾಗಿದೆ, ಭಾರತದಲ್ಲಿ ಇದರ ಪರಿಸ್ಥಿತಿ ಭಿನ್ನವಾಗೇನಿಲ್ಲ.
ಜಾನುವಾರುಗಳ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ, ಹಾಲು ಬತ್ತಿಸುವ ವಿಧಾನದಲ್ಲಿ ಮತ್ತು ಕೆಚ್ಚಲ ಬಾವುಗಳ ಚಿಕಿತ್ಸೆಯಲ್ಲಿ ಆಂಟಿಬಯೋಟಿಕ್ ಗಳನ್ನು ವಿವೇಚನಾ ರಹಿತವಾಗಿ ಬಳಸುವುದರಿಂದ ಅವುಗಳ ಅವಶೇಷಗಳು ಜಾನುವಾರುಗಳ ಅಂಗಾಂಶಗಳಲ್ಲಿ ಸಂಗ್ರಹವಾಗುತ್ತವೆ. ಜಾನುವಾರುಗಳಿಗೆ ಆಂಟಿಬಯೋಟಿಕ್ ಗಳನ್ನು ನೀಡಿದ ನಂತರ, ಹೆಚ್ಚಿನ ಔಷಧಗಳು ಜೀರ್ಣಕ್ರಿಯೆಯ ಮೂಲಕ ಮೂತ್ರದಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಮಲದಿಂದ ಹೊರಹಾಕಲ್ಪಡುತ್ತವೆ. ಆದಾಗ್ಯೂ, ಔಷಧಿಗಳ ಭಾಗವು ಹಾಲು ಮತ್ತು ಮಾಂಸದಲ್ಲಿ ನಿರ್ದಿಷ್ಟ ಅವಧಿಯವರೆಗೆ ಅವಶೇಷಗಳಾಗಿ ಉಳಿಯುತ್ತವೆ. ಹಾಲಿನಲ್ಲಿರುವ ಆ್ಯಂಟಿಬಯೋಟಿಕ್ ಅವಶೇಷಗಳನ್ನು ಪತ್ತೆ ಹಚ್ಚುವ ಕಳಪೆ ಸೌಲಭ್ಯಗಳು ಮತ್ತು ಸರಿಯಾದ ಮೇಲ್ವಿಚಾರಣಾ ವ್ಯವಸ್ಥೆಯ ಕೊರತೆಯಿಂದಾಗಿ ಅವು ಮಾನವನ ದೇಹವನ್ನು ಸೇರಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತವೆ.
ಜಾನುವಾರುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ದೇಹದ ರಕ್ಷಣೆಯನ್ನು ಭೇದಿಸಿ ಸೋಂಕನ್ನು ಉಂಟುಮಾಡುತ್ತವೆ. ಆ್ಯಂಟಿಬಯೋಟಿಕ್ ಗಳನ್ನು ಬಳಸಿ ಅಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲಲಾಗುತ್ತದೆ. ಆದರೆ ಕಡಿಮೆ ಸಂಖ್ಯೆಯ ಆ್ಯಂಟಿಬಯೋಟಿಕ್ ಗಳು ಸ್ವಾಭಾವಿಕವಾಗಿ ಔಷಧ-ನಿರೋಧಕವಾಗಿರುತ್ತವೆ. ಹೀಗೆ ಚಿಕಿತ್ಸೆ ಮತ್ತು ಆಹಾರದ ಮೂಲಕ ಕಡಿಮೆ ಪ್ರಮಾಣದ ಆ್ಯಂಟಿಬಯೋಟಿಕ್ ಗಳು ದಿನೇ ದಿನೇ ಹಸುಗಳ ದೇಹವನ್ನು ಸೇರಿ ಹೆಚ್ಚು ಹೆಚ್ಚು ಔಷಧಿ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಹೀಗೆ ವಿವಿಧ ರೀತಿಯ ಆ್ಯಂಟಿಬಯೋಟಿಕ್ ಗಳನ್ನು ವಿವೇಚನಾ ರಹಿತವಾಗಿ ಪದೇ ಪದೇ ಬಳಸಿದಾಗ ಔಷಧ-ನಿರೋಧಕ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತವೆ. ಹಸುಗಳ ದೇಹದಲ್ಲಿ ಈ ರೀತಿಯ ಔಷಧ-ನಿರೋಧಕ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾದಾಗ, ಯಾವುದೇ ಕಾಯಿಲೆಗಳು ಬಂದಾಗ ಯಾವುದೇ ಆ್ಯಂಟಿಬಯೋಟಿಕ್ ಗಳನ್ನು ನೀಡಿದರು ಸಹ ಅವು ಪರಿಣಾಮ ಬೀರುವುದಿಲ್ಲ. ಹೀಗಾಗಿ ಮುಂದೊಂದು ದಿನ ಹಸುಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಬಂದು ಆ್ಯಂಟಿಬಯೋಟಿಕ್ ಗಳನ್ನು ನೀಡಿದರೂ ಅವು ಕಾರ್ಯನಿರ್ವಹಿಸದೇ ಮರಣ ಹೊಂದುತ್ತವೆ.
ಹಾಲಿನಲ್ಲಿರುವ ಆಂಟಿಬಯೋಟಿಕ್ ಅವಶೇಷಗಳ ನಿಯಂತ್ರಣವು ಬಹು ಮುಖ್ಯವಾಗಿದೆ. ರಾಸುಗಳ ಚಿಕಿತ್ಸೆಗಿಂತ ಅವುಗಳಿಗೆ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಅಕ್ಷಯಕಲ್ಪ ಸಂಸ್ಥೆಯು ತನ್ನ ರೈತರಿಗೆ ಪಶುವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದು, ಆ್ಯಂಟಿಬಯೋಟಿಕ್ ಬಳಕೆ ಮತ್ತು ಹಾಲು ಹಿಂತೆಗೆದುಕೊಳ್ಳುವ ಅವಧಿ ಬಗ್ಗೆ ಮಾಹಿತಿ ನೀಡುತ್ತಿದೆ. ಪ್ರಾಥಮಿಕವಾಗಿ ರೈತರು ಹಸುಗಳ ಚಿಕಿತ್ಸೆಯಲ್ಲಿ ಮನೆ ಮದ್ದು ಬಳಕೆ ಮಾಡುವುದರ ಬಗ್ಗೆ ತರಬೇತಿ ನೀಡುತ್ತಿದೆ. ಹಾಲಿನಲ್ಲಿ ಆ್ಯಂಟಿಬಯೋಟಿಕ್ ಅಂಶಗಳು ಸೇರದಂತೆ ನೋಡಿಕೊಳ್ಳುವ ಮಹತ್ತರವಾದ ಜವಾಬ್ದಾರಿ ರೈತರ ಮೇಲಿದೆ.
ಬ್ರುಸೆಲ್ಲಾ ಮುಕ್ತ ಹಾಲು
ಬ್ರೂಸೆಲೋಸಿಸ್ ಜಾಗತಿಕವಾಗಿ ಪ್ರಪಂಚದಾದ್ಯಂತ ಕಂಡುಬರುತ್ತಿರುವ, ಹೆಚ್ಚಿನ ದೇಶಗಳಲ್ಲಿ ವರದಿಯಾಗುತ್ತಿರುವ ರೋಗವಾಗಿದೆ. ಬ್ರುಸೆಲ್ಲಾ ರೋಗವು ಪ್ರಾಣಿಜನ್ಯ ರೋಗವಾಗಿದ್ದು, ವಿವಿಧ ಬ್ರುಸೆಲ್ಲಾ ಜಾತಿಯಾ ಬ್ಯಾಕ್ಟೀರಿಯಾಗಳಿಂದ ಹರಡುವ ರೋಗವಾಗಿದೆ. ರೋಗಗ್ರಸ್ತ ಪ್ರಾಣಿಗಳ ಸಂಪರ್ಕದಲ್ಲಿರುವ ಮನುಷ್ಯರಿಗೆ ಅವುಗಳ ಉಸಿರಾಟ, ಜೊಲ್ಲು ಮತ್ತು ಹಾಲನ್ನು ಸೇವಿಸುವುದರ ಮೂಲಕ ರೋಗ ಹರಡುತ್ತದೆ. ಬ್ರೂಸೆಲೋಸಿಸ್ ಮಾನವರ ಸಂತಾನೋತ್ಪತ್ತಿ ವ್ಯವಸ್ಥೆ, ಹೃದಯ, ಯಕೃತ್ತು ಮತ್ತು ಕೇಂದ್ರ ನರಮಂಡಲ ಸೇರಿದಂತೆ ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು. ಪುರುಷರಿಗೆ ಪುರುಷತ್ವ ನಾಶವಾಗಬಹುದು, ಮಹಿಳೆಯರಿಗೆ ಗರ್ಭಪಾತವಾಗಬಹುದು. ವಯಸ್ಸಾದವರಿಗೆ ಮೂಳೆ ಅಥವಾ ಸಂಧಿ ನೋವು ಕಾಣಿಸಿಕೊಳ್ಳಬಹುದು. ಈ ರೋಗವು ಅನೇಕ ವಿಲಕ್ಷಣ ರೂಪಗಳಲ್ಲಿ ಕಂಡು ಬರಬಹುದು, ಅನೇಕ ರೋಗಿಗಳಲ್ಲಿ ರೋಗ ಲಕ್ಷಣಗಳು ಸೌಮ್ಯವಾಗಿರುತ್ತವೆ. ಅದರಿಂದಾಗಿ ರೋಗ ನಿರ್ಣಯವನ್ನು ಮಾಡುವುದು ಕಷ್ಟಸಾಧ್ಯವಾಗುತ್ತದೆ. ದೀರ್ಘಕಾಲದ ಬ್ರೂಸೆಲೋಸಿಸ್ ದೇಹದಾದ್ಯಂತ ತೊಡಕುಗಳನ್ನು ಉಂಟು ಮಾಡಬಹುದು. ಹಸಿ ಹಾಲನ್ನು ಕುಡಿಯುವುದರಿಂದ ಈ ಕಾಯಿಲೆ ಬರುತ್ತದೆ, ಹಾಲನ್ನು ಚೆನ್ನಾಗಿ ಕಾಯಿಸಿ ಕುಡಿಯುವುದರಿಂದ ಬರುವುದಿಲ್ಲ.
ಜಾನುವಾರುಗಳಲ್ಲಿ ಬ್ರೂಸೆಲೋಸಿಸ್ ಒಂದು ವ್ಯಾಪಕವಾದ ಸಂತಾನೋತ್ಪತ್ತಿ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಗರ್ಭಧರಿಸಿದ ಹಸುಗಳಲ್ಲಿ 7 ಅಥವಾ 8 ನೇ ತಿಂಗಳಿನಲ್ಲಿ ಗರ್ಭಪಾತವಾಗುವುದು, ಕಂದು ಕರು ಹಾಕುವುದು, ದುರ್ಬಲ ಕರುಗಳ ಜನನ, ವಿಳಂಬವಾಗಿ ಕರು ಹಾಕುವಿಕೆ, ಕರು ಹಾಕಿದಾಗ ಸರಿಯಾಗಿ ಸತ್ತೆ ಬೀಳದಿರುವುದು, ಹಸುವಿನ ಕಾಲಿನ ಗೆಣ್ಣುಗಳಲ್ಲಿ ಊತ ಕಾಣಿಸಿಕೊಳ್ಳುವುದು ಮತ್ತು ಹಾಲಿನ ಇಳುವರಿಯಲ್ಲಿ ಗಮನಾರ್ಹ ಇಳಿಕೆಯಾಗುತ್ತದೆ. ಗರ್ಭಧರಿಸಿದ ಹಸುವಿನ ಹೊಕ್ಕುಳ ಭಾಗದಲ್ಲಿ ಗೋಚರ ಊತ ಮತ್ತು ಯೋನಿಯಿಂದ ರಕ್ತಸ್ರಾವವು ಸಾಮಾನ್ಯವಾಗಿರುತ್ತದೆ. ಬ್ರೂಸೆಲೋಸಿಸ್ ರೋಗ ಒಂದು ಬಾರಿ ಮನುಷ್ಯರಿಗೆ ಅಥವಾ ಪ್ರಾಣಿಗಳಿಗೆ ಬಂತೆಂದರೆ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ ಮತ್ತು ಈ ರೋಗಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಬ್ರೂಸೆಲೋಸಿಸ್ ರೋಗವನ್ನು ತಡೆಗಟ್ಟಲು ಪ್ರಮುಖವಾಗಿ ನಿರಂತರ ತಪಾಸಣೆ ಮತ್ತು ಲಸಿಕೆಯನ್ನು ನೀಡುವುದರಿಂದ ಸಾಧ್ಯವಾಗುತ್ತದೆ.
ರೈತರು ಹೋರಿ ಕೊಡಿಸುವುದರಿಂದ ಬ್ರೂಸೆಲೋಸಿಸ್ ರೋಗ ಹರಡುವುದರಿಂದ, ಹೋರಿ ಸಂಪರ್ಕವನ್ನು ಹಸುಗಳಿಗೆ ತಪ್ಪಿಸಬೇಕು. ರೈತರು ತನ್ನ ಫಾರ್ಮ್ ಗಳಿಗೆ ಹೊಸ ಹಸುಗಳನ್ನು ಖರೀದಿಸುವಾಗ ಮೊದಲು ಹಸುಗಳನ್ನು ಪ್ರತ್ಯೇಕವಾಗಿರಿಸಬೇಕು, ನಂತರ ಅಕ್ಷಯಕಲ್ಪ ಪಶುವೈದ್ಯರ ಸಹಾಯದಿಂದ ಹಸುವಿನ ರಕ್ತದ ಮಾದರಿಯನ್ನು ಲ್ಯಾಬೋರೇಟರಿಯಲ್ಲಿ ಪರೀಕ್ಷಿಸಿ ಬ್ರುಸೆಲ್ಲಾ ರೋಗವಿಲ್ಲವೆಂದು ವರದಿ ಬಂದ ನಂತರ ಫಾರ್ಮ್ ಗೆ ಸೇರ್ಪಡೆ ಮಾಡಿಕೊಳ್ಳಬೇಕು. ಅಕ್ಷಯಕಲ್ಪವು ಗ್ರಾಹಕರ ಮತ್ತು ರೈತರ ಹಿತದೃಷ್ಟಿಯಿಂದ ಪ್ರತಿಯೊಂದು ಹಸುವನ್ನು ಬ್ರುಸೆಲ್ಲಾ ರಹಿತವೆಂದು ಖಚಿತ ಪಡಿಸಿಕೊಂಡ ನಂತರ ಹಾಲನ್ನು ರೈತರಿಂದ ಖರೀದಿಸಿ ಮಾರುಕಟ್ಟೆಗೆ ಒದಗಿಸುತ್ತದೆ. ಇಡೀ ಭಾರತದಲ್ಲಿ ಬ್ರುಸೆಲ್ಲಾ ರಹಿತ ಹಾಲು ಉತ್ಪಾದಿಸುತ್ತಿರುವುದು ಅಕ್ಷಯಕಲ್ಪ ಸಂಸ್ಥೆ ಮಾತ್ರ ಎಂದು ಅದು ಹೆಮ್ಮೆಯಿಂದ ಹೇಳುತ್ತದೆ.
ಅಫ್ಲಾಟಾಕ್ಸಿನ್ ಮುಕ್ತ ಹಾಲು
ಅಫ್ಲಾಟಾಕ್ಸಿನ್ ಎಂಬುದು ವಿಷಕಾರಿ ಅಂಶವಾಗಿದ್ದು, ಆಹಾರ ಮತ್ತು ಮೇವಿನ ಬೆಳೆಗಳ ಉತ್ಪಾದನೆ, ಕೊಯ್ಲು, ಶೇಖರಣೆ ಮತ್ತು ಸಂಸ್ಕರಣೆ ಸಮಯದಲ್ಲಿ ಶಿಲೀಂಧ್ರಗಳ ಕ್ರಿಯೆಯಿಂದ ಅಫ್ಲಾಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಅಫ್ಲಾಟಾಕ್ಸಿನ್ ಯುಕ್ತ ಕಲುಷಿತ ಮೇವು ಮತ್ತು ಆಹಾರವನ್ನು ಸೇವಿಸುವ ಹಸುಗಳಲ್ಲಿ ಜೀರ್ಣಕ್ರಿಯೆಯ ಮೂಲಕ ಅವುಗಳ ದೇಹವನ್ನು ಸೇರಿ ಅರೋಗ್ಯ ಮತ್ತು ಹಾಲಿನ ಇಳುವರಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹಸುಗಳಲ್ಲಿ, ಅಫ್ಲಾಟಾಕ್ಸಿನ್ ಗಳ ಪರಿಣಾಮದಿಂದ ಯಕೃತ್ತಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ, ಪ್ರತಿರಕ್ಷಣಾ ಕಾರ್ಯವನ್ನು ದುರ್ಭಲಗೊಳಿಸಿ ರೋಗಗಳಿಗೆ ಒಳಗಾಗುವಿಕೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಹೋರಿಗಳ ವೀರ್ಯದ ಕಾರ್ಯಸಾಧ್ಯತೆ ಕಡಿಮೆ ಮಾಡುವ ಮೂಲಕ ಸಂತಾನೋತ್ಪತ್ತಿ ಕಾರ್ಯವನ್ನು ದುರ್ಬಲಗೊಳಿಸಬಹುದು ಮತ್ತು ಗರ್ಭವಾಸ್ಥೆಯಲ್ಲಿರುವ ಹಸುಗಳ ಭ್ರೂಣಕ್ಕೆ ಹಾನಿಯನ್ನುಂಟುಮಾಡುತ್ತದೆ.
ಮಾನವನು ಅಫ್ಲಾಟಾಕ್ಸಿನ್ ಯುಕ್ತ ಹಾಲು ಮತ್ತು ಆಹಾರ ಸೇವನೆಯಿಂದ ತೀವ್ರವಾದ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗಬಹುದು. ಮಾನವರ ದೇಹದಲ್ಲಿ ಹೆಚ್ಚು ಅಫ್ಲಾಟಾಕ್ಸಿನ್ ಅಂಶ ಸಂಗ್ರಹವಾದಾಗ ತೀವ್ರವಾದ ಪಿತ್ತಜನಕಾಂಗದ ಸೋಂಕನ್ನುಂಟುಮಾಡುತ್ತವೆ, ತೀವ್ರವಾದ ಪಿತ್ತಜನಕಾಂಗದ ವೈಫಲ್ಯವು ಜ್ವರ, ವಾಂತಿ, ಕಿಬ್ಬೊಟ್ಟೆಯ ನೋವು, ರಕ್ತಸ್ರಾವ, ಜೀರ್ಣಕ್ರಿಯೆಯ ತೊಂದರೆಗಳು, ಮಾನಸಿಕ ಬದಲಾವಣೆಗಳು ಮತ್ತು ಕೋಮಾದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ದೀರ್ಘಕಾಲದ ಅಫ್ಲಾಟಾಕ್ಸಿನ್ ಯುಕ್ತ ಆಹಾರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಕ್ಯಾನ್ಸರ್ ನಂತಹ ಅಪಾಯಗಳಿಗೆ ಕಾರಣವಾಗುತ್ತವೆ. ಪ್ರಪಂಚದ ಸುಮಾರು 25% ಬೆಳೆ ಮೈಕೋಟಾಕ್ಸಿನ್‌ನಿಂದ ಪ್ರಭಾವಿತವಾಗಿರುತ್ತದೆ ಮತ್ತು ಅದರಲ್ಲಿ ಬಹುಪಾಲು ಅಫ್ಲಾಟಾಕ್ಸಿನ್ ಗಳಾಗಿವೆ. ಸಾಮಾನ್ಯವಾಗಿ ಹಸುಗಳಿಗೆ ಮೇವುಗಳನ್ನು ನೀಡುತ್ತೇವೆ, ಈ ಮೇವು ಗುಣಮಟ್ಟದಿಂದ ಕೂಡಿಲ್ಲದಿದ್ದರೆ ಹಸುಗಳ ಅರೋಗ್ಯ ಹಾಳಾಗುತ್ತದೆ. ಅಸಮರ್ಪಕವಾಗಿ ಸಂಗ್ರಹಿಸಲಾದ ಜೋಳ, ಗೋಧಿ, ರಾಗಿ, ಕಡಲೆಕಾಯಿ, ಮತ್ತು ಭತ್ತಗಳಲ್ಲಿ ನಿಯಮಿತವಾಗಿ ಕಂಡುಬರುತ್ತವೆ. ಆಸ್ಪರ್ಜಿಲ್ಲಸ್ ಪ್ರಭೇದಗಳು ಬೆಳೆಗಳ ಬೆಳವಣಿಗೆ ಸಮಯದಲ್ಲಿ ಸೋಂಕು ತರುತ್ತವೆ ಹಾಗು ಮಳೆಗಾಲದ ಪರಿಸ್ಥಿತಿಗಳಲ್ಲಿ ಅಥವಾ ತೀವ್ರ ಬೇಸಿಗೆ ಕಾಲದಲ್ಲಿ ಮೇವಿನ, ಕೊಯ್ಲು ಸಾಗಾಣಿಕೆ ಮತ್ತು ಸಂಗ್ರಹಣೆ ಸಮಯದಲ್ಲಿ ಮಲಿನಗೊಳ್ಳುತ್ತವೆ. ಹಸಿರು ಮೇವು, ಹಿಂಡಿ ಮತ್ತು ಜೋಳದ ನುಚ್ಚನ್ನು ತೇವಾಂಶವಿರದ ಸ್ಥಳಗಳಲ್ಲಿ ಶೇಖರಣೆ ಮಾಡಬೇಕು, ಇಲ್ಲದಿದ್ದರೆ ಅಪ್ಲೋಟೊಕ್ಸಿನ್ ಎಂಬ ಶಿಲೀಂದ್ರದಿಂದ ಬರುವ ವಿಷಕಾರಿ ಅಂಶ ಬೆಳವಣಿಗೆಯಾಗುತ್ತದೆ. ಇಂತಹ ಆಹಾರವನ್ನು ಹಸುಗಳು ತಿಂದಾಗ ಜೀರ್ಣಕ್ರಿಯೆ ವ್ಯತ್ಯಾಸವಾಗಿ ಅರೋಗ್ಯ ಹಾಳಾಗುತ್ತದೆ.
ಅಕ್ಷಯಕಲ್ಪ ಸಂಸ್ಥೆಯು ರೈತರಿಗೆ ಅಪ್ಲೋಟೊಕ್ಸಿನ್ ಬಗ್ಗೆ ಮಾಹಿತಿಯನ್ನು ಮಾಹಿತಿ ನೀಡಿ ಅರಿವು ಮೂಡಿಸುತ್ತಿದೆ. ರೈತರು ಹಸುಗಳಿಗೆ ನೀಡಲು ಖರೀದಿಸಿ ಸಂಗ್ರಹಿಸುವ ಮೆಕ್ಕೆಜೋಳದ ನುಚ್ಚು ಮತ್ತು ಹಿಂಡಿಗಳನ್ನು ಅಕ್ಷಯಕಲ್ಪ ಪಶುವೈದ್ಯರು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುತ್ತಾರೆ, ಪರೀಕ್ಷೆಯಲ್ಲಿ ಅಪ್ಲೋಟೊಕ್ಸಿನ್ ಅಂಶ ಕಂಡುಬಂದರೆ ಅಂತಹ ಮೇವನ್ನು ಹಸುಗಳಿಗೆ ನೀಡದಂತೆ ರೈತರಿಗೆ ಅದರ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ.
ಮಂಜುನಾಥ ಹೊಳಲು
ಕೃಷಿ ಬರಹಗಾರರರು.