Home ಜನ-ಗಣ-ಮನ ಕೃಷಿ ನೋಟ ಬೆಳೆ ಸಮೀಕ್ಷೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ; ಬೆಳೆ ಸಮೀಕ್ಷೆ ವ್ಯತ್ಯಾಸದ ಬಗ್ಗೆ ಕೃಷಿ...

ಬೆಳೆ ಸಮೀಕ್ಷೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ; ಬೆಳೆ ಸಮೀಕ್ಷೆ ವ್ಯತ್ಯಾಸದ ಬಗ್ಗೆ ಕೃಷಿ ಸಚಿವರ ಪ್ರತಿಕ್ರಿಯೆ

0

ಬೆಳಗಾವಿ (ಸುವರ್ಣ ಸೌಧ): ಕೃಷಿ ಜಮೀನುಗಳಲ್ಲಿ ನಡೆಯುವ ಬೆಳೆ ಸಮೀಕ್ಷೆಯನ್ನು ಸ್ವತಃ ರೈತರೇ “ಬೆಳೆ ಸಮೀಕ್ಷೆ – ರೈತರ ಆಪ್” ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಬೆಳೆ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ತರೀಕೆರೆ ಕ್ಷೇತ್ರದ ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲಾ ರೈತರ ತಾಕುಗಳ ಬೆಳೆ ಮಾಹಿತಿ ದಾಖಲಿಸುವ ಉದ್ದೇಶದಿಂದ ಆದ್ಯತೆಯ ಮೇರೆಗೆ ಮೊದಲ ಹಂತದಲ್ಲಿ ರೈತರೇ ಸ್ವತಃ ಆಯಪ್ ಮೂಲಕ ಬೆಳೆ ಸಮೀಕ್ಷೆ ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.

ಸಕಾಲದಲ್ಲಿ ರೈತರು ಬೆಳೆ ಸಮೀಕ್ಷೆ ಸಲ್ಲಿಸದಿದ್ದಲ್ಲಿ ಖಾಸಗಿ ನಿವಾಸಿಗಳ ಮೂಲಕ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಆದರೆ ಖಾಸಗಿ ನಿವಾಸಿಗಳ ಬದಲಿಗೆ ಸಂಘ–ಸಂಸ್ಥೆಗಳ ಮೂಲಕ ಸಮೀಕ್ಷೆ ನಡೆಸಲು ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಬೆಳೆ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ರೈತರು ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಇಂತಹ ಪ್ರಕರಣಗಳಲ್ಲಿ ಮರು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 4.40 ಕೋಟಿ ತಾಕುಗಳ ಬೆಳೆ ಸಮೀಕ್ಷೆ ನಡೆಯುತ್ತಿದ್ದು, ಸುಮಾರು 2 ಲಕ್ಷ ಆಕ್ಷೇಪಣೆಗಳು ದಾಖಲಾಗುತ್ತಿವೆ. ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಒಂದೇ ಸ್ಥಳದಲ್ಲಿ ಕುಳಿತು ಬೆಳೆ ಸಮೀಕ್ಷೆ ಮಾಡುವಂತಿಲ್ಲ ಎಂಬುದನ್ನೂ ಸಚಿವರು ಸ್ಪಷ್ಟಪಡಿಸಿದರು.

ದಟ್ಟ ಅರಣ್ಯ ಹಾಗೂ ಅಭಯಾರಣ್ಯ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿಲ್ಲ. ಆದರೆ ಅಭಯಾರಣ್ಯ ಅಂಚಿನ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲು ತೊಂದರೆಯಾಗಿದೆ ಎಂಬ ಯಾವುದೇ ದೂರುಗಳು ಬಂದಿಲ್ಲ. ರೈತರೇ ಸ್ವತಃ ಸಮೀಕ್ಷೆ ಸಲ್ಲಿಸುವ ವ್ಯವಸ್ಥೆ ಇರುವುದರಿಂದ ಈ ಸಮಸ್ಯೆ ಉಂಟಾಗಿಲ್ಲ ಎಂದರು.

ಇದೇ ಸಂದರ್ಭದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ಮಲೆನಾಡು ಪ್ರದೇಶದ ಕೆಲವು ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಕಷ್ಟಕರವಾಗುತ್ತಿದೆ. ಹೀಗಾಗಿ ಮ್ಯಾನುಯಲ್ ಸಮೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.

You cannot copy content of this page

Exit mobile version