ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ಮೂರೂ ತಾಲ್ಲೂಕುಗಳನ್ನು ಒಳಗೊಂಡಂತಾ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾದ ಸುಧೀರ್ ಕುಮಾರ್ ಮುರೋಳ್ಳಿ ಅವರ ಹೆಸರನ್ನು ಕೈಬಿಟ್ಟು ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ನೇರವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಕಡೆಗೆ ಕಾರ್ಯಕರ್ತರು ಕಿಡಿಕಾರುವಂತಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ಶೃಂಗೇರಿ ಕ್ಷೇತ್ರದ ಕಾರ್ಯಕರ್ತರ ಕಡೆಯಿಂದ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರ ಸರ್ವಾಧಿಕಾರಿ ನಡೆ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬಂದಿದೆ. ತನಗಾಗದ ಎಲ್ಲರನ್ನೂ ಡಾ.ಅಂಶುಮಂತ್ ಕಡೆಗಣಿಸುವ ರೀತಿ ಮತ್ತು ಕ್ಷೇತ್ರದಲ್ಲೇ ಜಿಲ್ಲಾಧ್ಯಕ್ಷರ ಬಗೆಗಿರುವ ಅಸಹನೆ ತೀವ್ರ ಮಟ್ಟದಲ್ಲಿ ಈಗ ಹೊರ ಬಿದ್ದಿದೆ. ಇದೇ ರೀತಿ ಮುಂದುವರೆದರೆ ಪಕ್ಷ ಕಟ್ಟಲು ಶ್ರಮಿಸಿರುವ ನೈಜ ಕಾರ್ಯಕರ್ತರೇ ಪಕ್ಷದಿಂದ ದೂರ ಉಳಿಯುವ ಕಾಲ ಹತ್ತಿರದಲ್ಲೇ ಇದೆ ಎಂಬ ಸಂದೇಶವನ್ನು ಕಾರ್ಯಕರ್ತರು ರವಾನಿಸಿದ್ದಾರೆ.
2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿಂದೆ ಸುಧೀರ್ ಕುಮಾರ್ ಮುರೊಳ್ಳಿಯವರ ಶ್ರಮವೇ ಪ್ರಮುಖವಾಗಿ ನಿಲ್ಲುತ್ತದೆಯೇ ಹೊರತು ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆ ಅಲ್ಲ ಎಂದು ಪೀಪಲ್ ಮೀಡಿಯಾ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಜಿಲ್ಲಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶೃಂಗೇರಿ ಕ್ಷೇತ್ರದಲ್ಲಿ ಇದೇ ಏಪ್ರಿಲ್ 23 ರಂದು ಕಾಂಗ್ರೆಸ್ ಪಕ್ಷದ ಕಡೆಯಿಂದ ಆಯೋಜಿಸಲಾದ “ಸರ್ಕಾರದ ನಡೆ, ಕಾರ್ಯಕರ್ತರ ಕಡೆ” ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ಸ್ಥಳೀಯ ಪ್ರಭಾವಿ ಕಾಂಗ್ರೆಸ್ಸಿಗ ಸುಧೀರ್ ಕುಮಾರ್ ಮುರೋಳ್ಳಿ ಅವರ ಹೆಸರು ಕೈ ಬಿಟ್ಟ ಹಿನ್ನೆಲೆಯಲ್ಲಿ ಈ ಆಕ್ರೋಶ ಭುಗಿಲೆದ್ದಿದೆ. ಈ ಹಿಂದೆಯೂ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಇದೇ ರೀತಿಯ ಅನೇಕ ಯಡವಟ್ಟುಗಳನ್ನು ಮಾಡಿಕೊಂಡು ಬಂದಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಅನೇಕ ಸ್ಥಳೀಯ ನಾಯಕರು ಜಿಲ್ಲಾಧ್ಯಕ್ಷರ ವಿರುದ್ಧ ತಿರುಗಿಬಿದ್ದಿದ್ದಾರೆ.

ಡಾ. ಅಂಶುಮಂತ್ ನಡೆಯ ಇನ್ನೊಂದು ದೊಡ್ಡ ದುರಂತವೆಂದರೆ ಏಪ್ರಿಲ್ 23 ರಂದು ನಡೆಯಲಿರುವ “ಸರ್ಕಾರದ ನಡೆ, ಕಾರ್ಯಕರ್ತರ ಕಡೆ” ಕಾರ್ಯಕ್ರಮಕ್ಕೆ ಈ ಹಿಂದೆ ಮಾಡಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರ ಭಾವಚಿತ್ರವೇ ಮರೆಯಾಗಿತ್ತು. ಇದು ಸ್ಪಷ್ಟವಾಗಿ ಕಣ್ತಪ್ಪಿನಿಂದ ಆದ ಪ್ರಮಾದ ಅಲ್ಲವೇ ಅಲ್ಲ ಎಂದು ಚಿಕ್ಕಮಗಳೂರು ಭಾಗದ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆಯೂ ಶಾಸಕ ರಾಜೇಗೌಡರ ಬಗ್ಗೆ ತೀವ್ರ ಅಸಮಾಧಾನ ಇದ್ದ ಹಿನ್ನೆಲೆಯಲ್ಲಿ ಶಾಸಕರು ಆಯೋಜಿಸಿದ್ದ ಬಹುತೇಕ ಕಾರ್ಯಕ್ರಮಕ್ಕೆ ಡಾ.ಅಂಶುಮಂತ್ ಗೈರು ಹಾಜರಾಗಿದ್ದರು. ಏಪ್ರಿಲ್ 23 ರ ಕಾರ್ಯಕ್ರಮಕ್ಕೂ ಇದೇ ರೀತಿಯ ಬೆಳವಣಿಗೆ ಬಗ್ಗೆ ತೀವ್ರ ಆಕ್ರೋಶ ಹೊರಬಿದ್ದ ನಂತರ ಅಂಶುಮಂತ್ ಶೃಂಗೇರಿ ಕ್ಷೇತ್ರದ ಶಾಸಕ ಟಿಡಿ ರಾಜೇಗೌಡರ ಹೆಸರು ಮತ್ತು ಭಾವಚಿತ್ರ ಹಾಕಿದ್ದಾರೆ.
ರಾಜ್ಯದ ಯಾವುದೇ ಮೂಲೆಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಪಕ್ಷದ ಚಿಂತನೆ ಮತ್ತು ವೈಚಾರಿಕ ನಿಲುವಿನ ಯಾವುದೆ ಕಾರ್ಯಕ್ರಮ ಇದ್ದರೆ ತನ್ನ ಸ್ವಂತ ಖರ್ಚಿನಲ್ಲಿ ಅಲ್ಲಿಗೆ ಹೋಗಿ ಭಾಷಣ ಮತ್ತು ವಿಷಯ ಮಂಡನೆ ಮಾಡಿ ಬರುವ ಸುಧೀರ್ ಕುಮಾರ್ ಮುರೋಳ್ಳಿ, ರಾಜ್ಯ ಕೆ.ಪಿ.ಸಿ.ಸಿ ಮಟ್ಟದಲ್ಲಿ ಗುರುತರ ಜವಾಬ್ಧಾರಿ ಹೊಂದಿರುವ ನಾಯಕರು. ಇಂತವರು ತನ್ನ ಸ್ವಂತ ಕ್ಷೇತ್ರದಲ್ಲೇ ಪಕ್ಷದ ಆಹ್ವಾನ ಪತ್ರಿಕೆಯಲ್ಲಿ ಅವರನ್ನು ಹೊರಗಿಟ್ಟದ್ದು ಸ್ಪಷ್ಟವಾಗಿ ಅವರ ಮೇಲಿನ ಅಸೂಯೆಯೇ ಕಾರಣ ಎಂಬ ಬಗ್ಗೆ ಕ್ಷೇತ್ರದಾದ್ಯಂತ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಸುಧೀರ್ ಕುಮಾರ್ ಮುರೋಳ್ಳಿಯವರ ಬೆಂಬಲಿಸುವವರನ್ನೂ ಸಹ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಡಾ.ಅಂಶುಮಂತ್ ಅವರ ಮತ್ತೊಂದು ಯಡವಟ್ಟು ಎಂದರೆ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಅವಿಭಜಿತ ಉಡುಪಿ ಚಿಕ್ಕಮಗಳೂರು ಕ್ಷೇತ್ರದವರೇ ಆದರೂ ಅವರ ಹೆಸರನ್ನೂ ಕೈಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಪಕ್ಕದ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ನಾಯಕ ಮಾಜಿ ಸಚಿವರು ಜೊತೆಗೆ ಚಿಕ್ಕಮಗಳೂರು ಜಿಲ್ಲಾ ಪ್ರಚಾರ ಸಮಿತಿ ಉಸ್ತುವಾರಿಯೂ ಆದ ಕಿಮ್ಮನೆ ರತ್ನಾಕರ್ ಅವರ ಹೆಸರನ್ನೂ ಜಿಲ್ಲಾಧ್ಯಕ್ಷರು ಕೈ ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿನಯ್ ಕುಮಾರ್ ಸೊರಕೆ ಮತ್ತು ಕಿಮ್ಮನೆ ರತ್ನಾಕರ್ ಅವರು ಆಯೋಜಿಸಿದ್ದ ಈ ಹಿಂದಿನ ಹಲವು ಕಾರ್ಯಕ್ರಮಗಳಲ್ಲಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಗೈರಾಗಿದ್ದರು. ಕ್ಷುಲ್ಲಕ ಕಾರಣ ಕೊಟ್ಟು ದೂರ ಇದ್ದರು. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಈ ಎಲ್ಲಾ ನಾಯಕರು ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಆಪ್ತರಾಗಿದ್ದಾರೆ ಎಂಬುದು. ಇದು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕ್ಷೇತ್ರದಾದ್ಯಂತ ವ್ಯಕ್ತವಾಗಿದೆ.
ಈ ಅವಧಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯ ವಿಷಯದಲ್ಲೂ ಸಹ ಡಾ.ಅಂಶುಮಂತ್ ಮೂಗು ತೂರಿಸಿದ್ದು ಜಿಲ್ಲಾದ್ಯಂತ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳ ಫಲಿತಾಂಶವನ್ನೂ ಜಿಲ್ಲಾಧ್ಯಕ್ಷರು ತಡೆ ಹಿಡಿದಿದ್ದರು. ಜಿಲ್ಲೆಯಾದ್ಯಂತ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಸುಧೀರ್ ಕುಮಾರ್ ಮುರೊಳ್ಳಿಯವರ ಬೆಂಬಲಿಗರೇ ಆಗಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಯುವ ಕಾಂಗ್ರೆಸ್ ಪದಾಧಿಕಾರಿಗಳ ಫಲಿತಾಂಶ ಹೊರಬಿದ್ದರೂ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಶ್ರೀಜಿತ್ ಸೇರಿದಂತೆ ಎಲ್ಲರ ಫಲಿತಾಂಶ ಕೂಡ ತಡವಾಗಿ ಹೊರಬಿದ್ದಿತ್ತು. ಇದಕ್ಕೆ ನೇರ ಕಾರಣ ಡಾ.ಅಂಶುಮಂತ್ ಎಂಬುದು ಕ್ಷೇತ್ರದಾದ್ಯಂತ ಕೇಳಿ ಬಂದ ಆರೋಪವಾಗಿದೆ.
ಒಂದು ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಭಜರಂಗದಳ ಎಂದರೆ ದೊಡ್ಡ ದಂಡೇ ಇತ್ತು. ಇದನ್ನು ತನ್ನ ಸಂಘಟನಾ ಚತುರತೆಯಲ್ಲಿ ಮಟ್ಟ ಹಾಕಿದ್ದು ಸುಧೀರ್ ಕುಮಾರ್ ಮುರೊಳ್ಳಿಯವರ ತಂತ್ರಗಾರಿಕೆ. ಇಂದಿಗೂ ಸಹ ಕ್ಷೇತ್ರದಲ್ಲಿ ಭಜರಂಗದಳ ಆಗಿನ ಕಾಲದಲ್ಲಿ ಮೆರೆದಂತೆ ಮೆರೆಯಲು ದೊಡ್ಡ ಅಡ್ಡಗಾಲಾಗಿರುವುದು ಸುಧೀರ್ ಕುಮಾರ್ ಮುರೊಳ್ಳಿಯವರು. ಹೀಗಿರುವಾಗ ಸುಧೀರ್ ಅವರನ್ನು ಪಕ್ಷದ ಕಾರ್ಯಕ್ರಮದಿಂದ ದೂರ ಇಟ್ಟಿರುವುದು ಡಾ.ಅಂಶುಮಂತ್ ಅವರ ಸರ್ವಾಧಿಕಾರಿ ನಡೆ ಎಂಬುದು ಕ್ಷೇತ್ರದ ಕಾರ್ಯಕರ್ತರ ದೊಡ್ಡ ಆರೋಪವಾಗಿದೆ.
ಕೆಲವೇ ದಿನಗಳ ಹಿಂದೆ ಬಿಜೆಪಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರನ್ನು ಹೊಗಳಿ ಮಾತಾಡಿದ್ದರು. ಇದು ಅವರ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಗೆ ಸ್ಪಷ್ಟ ಉದಾಹರಣೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಡಾ.ಅಂಶುಮಂತ್ ಪರೋಕ್ಷವಾಗಿ ಬಿಜೆಪಿ ಜೊತೆಗೂ ಕೈ ಜೋಡಿಸಿರಬಹುದೇ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ನ ಈ ಬೆಳವಣಿಗೆ ನೋಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಎಲ್ಲಾ ರೀತಿಯ ಅನುಕೂಲ ಆಗಲಿದ್ದು, ಡಾ.ಅಂಶುಮಂತ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆದು ಎಚ್ಚರಿಕೆ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಡಾ.ಅಂಶುಮಂತ್ ಕಾಂಗ್ರೆಸ್ಸನ್ನು ಸಂಪೂರ್ಣ ನಿರ್ಣಾಮ ಮಾಡಿಯೇ ನಿರ್ಮಿಸುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ಪಾಳೆಯದಿಂದ ಕೇಳಿ ಬರುತ್ತಿದೆ.