Home ಅಂಕಣ ಎನ್ಕೌಂಟರ್ : ಪ್ರಶ್ನೆಗಳು ಮತ್ತು ಸತ್ಯಾಸತ್ಯತೆಗಳು

ಎನ್ಕೌಂಟರ್ : ಪ್ರಶ್ನೆಗಳು ಮತ್ತು ಸತ್ಯಾಸತ್ಯತೆಗಳು

0

“.. ಹುಬ್ಬಳ್ಳಿ ಎನ್ಕೌಂಟರನ್ನು ಸಮರ್ಥಿಸಿ ಪ್ರಶಂಸೆ ಮಾಡುತ್ತಿರುವವರಿಗೆ ಮತ್ತು ಹಾಗೇ ಮಾಡಬೇಕು ಎಂದು ವಾದಿಸುವವರೊಂದಿಗೆ ಕೆಲವು ವಿಷಯಗಳನ್ನು, ಮಾಹಿತಿಗಳನ್ನು ಮತ್ತು ಪ್ರಸಂಗಗಳನ್ನು ಹಂಚಿಕೊಳ್ಳಬೇಕಿದೆ..” ಸಾಹಿತಿ ಯೋಗೇಶ್ ಮಾಸ್ಟರ್ ಅವರ ಬರಹದಲ್ಲಿ

ಹುಬ್ಬಳ್ಳಿ ಎನ್‌ಕೌಂಟರ್ ಸಂಭ್ರಮ ಮತ್ತು ಸಂವೇದನೆ
ಪೊಲೀಸ್ ಎನ್ಕೌಂಟರ್ ಎಂಬುದು ಒಂದು ಜಾಗತಿಕ ವಿಷಯ. ಇದರಲ್ಲಿ ವಿವಿಧ ದೇಶಗಳ ಪೊಲೀಸ್ ವ್ಯವಸ್ಥೆಯ ಧೋರಣೆ, ಉದ್ದೇಶ, ಕರ್ತವ್ಯ, ನೈತಿಕತೆ, ಹೊಣೆಗಾರಿಕೆ ಮತ್ತು ತರಬೇತಿ ಎಲ್ಲವೂ ಪಾತ್ರವಹಿಸುತ್ತದೆ. ಅದರೊಟ್ಟಿಗೆ ಪೊಲೀಸ್ ವ್ಯವಸ್ಥೆಯ ನಿರ್ವಹಣಾ ತಂತ್ರ ಮತ್ತು ಅಧಿಕಾರ ಮತ್ತು ಪೊಲೀಸ್ ಮನೋಭಾವವೂ ಕೂಡಾ ಪ್ರಧಾನವಾದ ವಿಷಯವೇ ಆಗಿದೆ. ಹಾಗೆಯೇ ಅತ್ಯಾಚಾರವೂ ಕೂಡಾ ಈ ಎನ್ಕೌಂಟರ್ ಜೊತೆಗೆ ತಳುಕು ಹಾಕಿಕೊಂಡಿರುವುದರಿAದ ಆ ವಿಷಯವನ್ನೂ ಗಮನಿಸಬೇಕಾಗದ ಅನಿವಾರ್ಯತೆ ಇದೆ.

ನಮ್ಮ ಸಮಾಜದಲ್ಲಿ ಯಾವುದೇ ಅವಘಡ ಅಥವಾ ದುರ್ಘಟನೆ ನಡೆದಾಗ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಆಧಾರದಲ್ಲಿ ಜನಾಭಿಪ್ರಾಯದ ಅಲೆಗಳು ಏಳುತ್ತವೆ. ಅವು ಸಾಮಾನ್ಯವಾಗಿ ಭಾವೋದ್ರೇಕದ ಅಭಿವ್ಯಕ್ತಿಯೇ ಆಗಿರುತ್ತದೆ. ಅಂತಹ ಭಾವುಕತೆಯ ಉದ್ವೇಗ ಅಥವಾ ಉದ್ರೇಕವನ್ನು ಇನ್ನೂ ಸ್ಪಷ್ಟಪಡಿಸಲು ‘ಭಾವೋನ್ಮಾದ’ ಎಂದು ಹೇಳಿದರೆ ಸೂಕ್ತ. ಯಾವ ವಿಷಯದಲ್ಲಿ ಉದ್ವೇಗ, ಉದ್ರೇಕ ಮತ್ತು ಉನ್ಮಾದಗಳು ಇರುತ್ತವೆಯೋ ಅಲ್ಲಿ ವಿವೇಚನೆ, ವಿವೇಕ ಮತ್ತು ವಿಶ್ಲೇಷಣೆಗಳು ಇಲ್ಲವಾಗುತ್ತವೆ. ಜೊತೆಗೆ ಸಂವೇದನೆ ಮತ್ತು ಸೂಕ್ಷ÷್ಮತೆಯ ಕೊರತೆಯಿದ್ದು ‘ಅರಣ್ಯ ನ್ಯಾಯ’ ವಿಜೃಂಭಿಸುತ್ತದೆ. ಅರಣ್ಯ ನ್ಯಾಯದಲ್ಲಿ ಹಿಂದಿನದರ ಪರಿಶೀಲನೆ ಮತ್ತು ಮುಂದಿನದರ ದೂರದೃಷ್ಟಿ ಇಲ್ಲವಾಗಿ ಆ ಹೊತ್ತಿನ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಷ್ಟೇ ಮುಖ್ಯವೂ ಮತ್ತು ನ್ಯಾಯವೂ ಎನಿಸಿಕೊಂಡುಬಿಡುತ್ತದೆ.  

ನಮ್ಮ ನಾಡಿನ, ಅದರಿಂದ ವಿಸ್ತೃತಗೊಂಡು ದೇಶದ ಮತ್ತು ಜಾಗತಿಕ ಮಟ್ಟದ ಎನ್ಕೌಂಟರುಗಳನ್ನು ಗಮನಿಸುತ್ತಲೇ ಈಗ ಪ್ರಸ್ತುತ ಚಾಲ್ತಿಯಲ್ಲಿರುವ ಹುಬ್ಬಳ್ಳಿಯ ಎನ್ಕೌಂಟರ್ ಒಂದು ಆರಂಭಿಕ ಪ್ರಸಂಗವೆಂದೇ ಪರಿಗಣಿಸೋಣ.

೧೪ನೇ ತಾರೀಖು, ಏಪ್ರಿಲ್ ೨೦೨೫ರಂದು ಬಿಹಾರ ಮೂಲದ ರಿತೇಶ್ ಕುಮಾರ್ ಭಾನುವಾರ ಬೆಳಿಗ್ಗೆ  ಐದು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರಕ್ಕೆ ಪ್ರಯತ್ನಿಸಿ ಕೊಲೆ ಮಾಡಿದ. ನಂತರ ಸಿ ಸಿ ಟಿವಿ ಆಧರಿಸಿ ಮತ್ತು ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ತಾರಿಹಾಳ ಸೇತುವೆಯ ಬಳಿಯ ಹಳೇ ಶೆಡ್ಡಲ್ಲಿ ಆರೋಪಿ ವಾಸಿಸುತ್ತಿದ್ದು, ಆತನ ಜೊತೆಗಾರರ ಬಗ್ಗೆ ತಿಳಿಯಲು ಹೋದಾಗ ಆತನೋ ಆತನ ಜೊತೆಗಾರರೋ ಕಲ್ಲು ಹೊಡೆಯುತ್ತಾ ದಾಳಿ ಮಾಡಿ, ಆರೋಪಿ ತಪ್ಪಿಸಿಕೊಳ್ಳಲು ಹೋದಾಗ ಎನ್ಕೌಂಟರ್ ನಡೆಯಿತು. ಪಿ ಎಸ್ ಐ ಅನ್ನಪೂರ್ಣಗೆ ಅತ್ಯುನ್ನತ ಪದಕಕ್ಕೆ ಶಿಫಾರಸು ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷಿ ಹೆಬ್ಬಾಳ್ಕರ್ ಹೇಳಿದರು. ಜೊತೆಗೆ “ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ನಾನು ಹಿಂದಿನಿAದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ಇಂಥ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು, ದೌರ್ಜನ್ಯಕ್ಕೆ ಒಳಗಾದವರಿಗೆ ತ್ವರಿತವಾಗಿ ‘ನ್ಯಾಯ’ ಸಿಗಬೇಕು” ಎಂದೂ ಹೇಳಿದ್ದಾರೆಂದು ಪತ್ರಿಕೆಗಳಲ್ಲಿ ವರದಿಗಳಾಗಿವೆ. 
ಇದು ಸುದ್ದಿ.

ಯಾರೇ ಮೇಲಿನ ಲೈಂಗಿಕ ದೌರ್ಜನ್ಯ ಘೋರ, ಅದರಲ್ಲೂ ಮಗುವಿನ ಮೇಲಾಗುವುದು ಇನ್ನೂ ಘೋರ ಮತ್ತು ಅಕ್ಷಮ್ಯ. ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುವಂತೆ ಕಠಿಣ ಶಿಕ್ಷೆ ಆಗಬೇಕು, ಗಲ್ಲು ಶಿಕ್ಷೆ ವಿಧಿಸಬೇಕು, ತ್ವರಿತವಾಗಿ ‘ನ್ಯಾಯ’ ಸಿಗಬೇಕು. ನ್ಯಾಯ ಸಿಗಬೇಕು ಎಂದರೆ, ಶಿಕ್ಷೆ ಆಗಬೇಕು ಎಂದರೆ ಅದು ಪೋಲೀಸರಿಂದ ಅಲ್ಲ ಸರ್ಕಾರದ ಪ್ರತಿನಿಧಿಗೆ ತಿಳಿಯದೇ ಹೋಯಿತು. 

ಬಿಹಾರದಿಂದ ಕೂಲಿ ಕೆಲಸ ಮಾಡಲು ಬಂದಿದ್ದ ರಿತೇಶ್ ಮತ್ತು ಅವನ ಜೊತೆಗಾರರು ಸ್ಥಳೀಯ ಪೋಲೀಸರನ್ನು ಎದುರಿಸುವಷ್ಟು ಮತ್ತು ದಾಳಿ ಮಾಡುವಷ್ಟು ಸನ್ನದ್ಧರಾಗಿದ್ದರೆ, ಸಮರ್ಥರಾಗಿದ್ದರೆ? ಗೊತ್ತಿಲ್ಲ! ಲಾಟಿ ಮತ್ತು ಬಂದೂಕುಗಳನ್ನು ಹೊಂದಿರುವ ಪೋಲೀಸರಿಗೆ ಕಲ್ಲುಗಳಿಂದ ಹೊಡೆಯುತ್ತಾ ಪೋಲೀಸರು ತಮ್ಮಆತ್ಮ ರಕ್ಷಣೆಗಾಗಿ ಬಂದೂಕು ಉಪಯೋಗಿಸುವಷ್ಟು ಉಗ್ರ ಹೋರಾಟ ಮಾಡಿದರೇ? ಗೊತ್ತಿಲ್ಲ!

ಯಾವುದೇ ಎನ್ಕೌಂಟರ್ ಆದ ಮೇಲೆ ಅದರದ್ದೂ ತನಿಖೆ ನಡೆಯುತ್ತದೆ. ತನಿಖೆಯ ತಂಡ ಪೊಲೀಸ್ ಅನಗತ್ಯ ಶಕ್ತಿಯನ್ನು ಪ್ರದರ್ಶಿಸಿದರೋ ಅಥವಾ ನಿಜವಾದ ಎನ್ಕೌಂಟರೋ, ನಕಲಿ ಎನ್ಕೌಂಟರೋ ಅಥವಾ ಯೋಜಿತ ಅಂದರೆ ಸ್ಟೇಜ್ಡ್ ಎನ್ಕೌಂಟರೋ ಎಂದು ಪರಿಶೀಲಿಸಿ ವರದಿ ಸಲ್ಲಿಸುತ್ತದೆ. ಅದು ನ್ಯಾಯಾಂಗಕ್ಕೆ ಸಲ್ಲಿಸಲಾಗುತ್ತದೆ. ಹಾಗಾಗಿ ನಾನೆಲ್ಲೋ ಒಂದು ಮೂಲೆಯಲ್ಲಿ ಕುಳಿತು ಅದರ ಬಗ್ಗೆ ಈಗಲೇ ನಿರ್ಣಾಯಕವಾಗಿ ಬರೆಯುವುದು ಖಂಡಿತ ಸರಿಯಲ್ಲ.

ಆದರೂ, ಈ ಎನ್ಕೌಂಟರನ್ನು ಸಮರ್ಥಿಸಿ ಪ್ರಶಂಸೆ ಮಾಡುತ್ತಿರುವವರಿಗೆ ಮತ್ತು ಹಾಗೇ ಮಾಡಬೇಕು ಎಂದು ವಾದಿಸುವವರೊಂದಿಗೆ ಕೆಲವು ವಿಷಯಗಳನ್ನು, ಮಾಹಿತಿಗಳನ್ನು ಮತ್ತು ಪ್ರಸಂಗಗಳನ್ನು ಹಂಚಿಕೊಳ್ಳಬೇಕಿದೆ.

ಹುಬ್ಬಳ್ಳಿಯ ಮಗುವಿನ ಪ್ರಕರಣದಲ್ಲಿ ಎನ್ಕೌಂಟರ್ ಎಂಬುದು ನಮಗೆಲ್ಲಾ ಭಾವುಕತೆಯ ಮತ್ತು ಸಂಕಟದ ವಿಷಯವಾಗಿದ್ದು ಭಾವೋದ್ರೇಕದಲ್ಲಿ ಅಥವಾ ಭಾವಾವೇಶದಲ್ಲಿ ಅಪರಾಧಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸುತ್ತೇವೆ. ಆದರೆ ಭಾರತದ ಸಂವಿಧಾನವು ಕಾನೂನಿನ ನಿಯಮಗಳ ಆಧಾರದಲ್ಲಿ ನಾಗರಿಕ ಸಮಾಜವನ್ನು ರೂಪಿಸಲು ಬದ್ಧವಾಗಿದೆ. ಇಲ್ಲಿ ನಮ್ಮ ಭಾವೋದ್ರೇಕವು ಅಥವಾ ಭಾವಾವೇಶವು ಸಮ್ಮತವಾಗುವುದಿಲ್ಲ. ಏಕೆಂದರೆ ಭಾವಾವೇಶವು ವ್ಯಕ್ತಿಯ ವೈಚಾರಿಕ ಕ್ರಮವನ್ನು ಮತ್ತು ವ್ಯವಸ್ಥೆಯ ಚೌಕಟ್ಟನ್ನು ಮೀರಲು ಪ್ರೇರೇಪಿಸುತ್ತದೆ. ಅದೊಂದು ಉನ್ಮಾದದಂತೆ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
ಒಬ್ಬೊಬ್ಬ ಪೋಲಿಸ್ ಅಧಿಕಾರಿಗೆ ಒಂದೊಂದು ವಿಷಯಕ್ಕೆ ಭಾವೋನ್ಮಾದ ಉಂಟಾಗಬಹುದು. ಜಾತಿ, ಧರ್ಮ, ಜನಾಂಗಗಳ ವಿಷಯದಲ್ಲಿ ಆಯಾ ವ್ಯಕ್ತಿಗಳು ಭಾವೋದ್ರೇಕಕ್ಕೆ ಒಳಗಾಗಬಹುದು. ಹೆಣ್ಣು ಮತ್ತು ಗಂಡು ಎಂಬ ಲಿಂಗ ತಾರತಮ್ಯದ ವಿಷಯದಲ್ಲಿಯೇ ಎಷ್ಟೋ ಜನ ಕಟ್ಟರ್ ಆಗಿರುತ್ತಾರೆ. ಹಾಗಿರುವಾಗ ಯಾವುದೇ ಒಂದು ಭಾವೋದ್ವೇಗದ ತೀರ್ಮಾನಗಳು ಮತ್ತು ಪೋಲೀಸರ ವರ್ತನೆಗಳು ಎನ್ಕೌಂಟರ್ ಮಾಡಿ ಬಿಸಾಕಿ ಬಿಡಲು ಸಾಧ್ಯತೆಗಳಿರುತ್ತವೆ.

ನೆನಪಿರಲಿ ಎಷ್ಟೋ ಬಾರಿ ಎನ್ಕೌಂಟರುಗಳು ಬರಿಯ ಭಾವೋದ್ವೇಗದ ವಿಷಯವಷ್ಟೇ ಆಗಿರುವುದಿಲ್ಲ. ರಾಜಕೀಯ, ಸಾಮಾಜಿಕ ಮತ್ತು ಜಾತಿ ಹಾಗೂ ಹಣದ ವಿಷಯದಲ್ಲಿ ಮೇಲ್ವರ್ಗದವರಾಗಿರುವ ವಿಷಯಗಳೂ ಕೂಡಾ ಕಾರಣವಾಗಿರುತ್ತವೆ.

೨೭ನೇ ತಾರೀಖು ನವಂಬರ್ ೨೦೧೯ರಲ್ಲಿ ಹೈದರಾಬಾದಿನ ಪಶುವೈದ್ಯೆಯೊಬ್ಬರು ಸಮೂಹ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದರು. ದೇಶಾದ್ಯಂತ ಈ ಪ್ರಕರಣದ ಬಗ್ಗೆ ಆತಂಕ ಮತ್ತು ಆಕ್ರೋಶಗೊಂಡ ಪ್ರತಿಕ್ರಿಯೆಗಳು ಮತ್ತು ಪ್ರತಿಭಟನೆಗಳು ವ್ಯಕ್ತವಾಗತೊಡಗಿದವು. ನಾಲ್ಕು ಜನರನ್ನು ಆರೋಪಿಗಳೆಂದು ಗುರುತಿಸಿ ಬಂಧಿಸಲಾಯಿತು. ಅವರು ತಪ್ಪೊಪ್ಪಿಕೊಂಡರೂ ಕೂಡಾ. ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಅಪರಾಧಿಗಳಿದ್ದರು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕೊಡುವುದರ ಮೂಲಕ ಕಾನೂನು ಕ್ರಮಗಳನ್ನು ಬಿಗಿಗೊಳಿಸಬೇಕು ಎಂದು ಕೂಗೆದ್ದಿತ್ತು.

ಪೊಲೀಸರು ಅತ್ಯಾಚಾರ ನಡೆದ ಸ್ಥಳಕ್ಕೆ ಅಪರಾಧಿಗಳನ್ನು ಕರೆದೊಯ್ದಾಗ ಅವರಲ್ಲಿ ಇಬ್ಬರು ಪೊಲೀಸರ ಬಂದೂಕನ್ನು ಕಸಿದುಕೊಂಡು ದಾಳಿ ಮಾಡಲು ಯತ್ನಿಸಿದರು ಎನ್ನಲಾಗಿ ಅವರೆಲ್ಲರನ್ನೂ ಎನ್ಕೌಂಟರ್ ಮಾಡಲಾಯಿತು. ಆಗ ಸಾರ್ವಜನಿಕರಿಂದ ವ್ಯಾಪಕವಾದ ಪ್ರಶಂಸೆ ದೊರಕಿತು. ಅತ್ಯಾಚಾರಿಗಳಿಗೆ ಇಂತಹ ಶಿಕ್ಷೆ ದೊರಕಿದರೆ ಮುಂದೆ ಇಂತಹ ಪ್ರಕರಣಗಳು ಆಗುವುದಿಲ್ಲ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿತ್ತು. ಇನ್ನೂ ಮುಂದುವರಿದು ಎನ್ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿಯು ನಮ್ಮ ಸಮುದಾಯದವರೆಂದು ಕೂಡಾ ಲಿಂಗಾಯತ ಸಮುದಾಯದ ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನ ಮತ್ತು ಸಂಭ್ರಮಗಳನ್ನು ಹಂಚಿಕೊಂಡಿದ್ದರು. ನ್ಯಾಯಾಂಗ ತನಿಖೆಯಿಂದ ವಿಳಂಬವಾಗುವ ಪರಿಗೆ ಬೇಸತ್ತಿದ್ದ ಸಾರ್ವಜನಿಕರು ತ್ವರಿತವಾಗಿ ಪೊಲೀಸರೇ ನ್ಯಾಯ ಒದಗಿಸಿದರೆಂಬAತೆ ಹೂಗಳನ್ನು ಎರಚಿ ಸಂಭ್ರಮ ವ್ಯಕ್ತಪಡಿಸಿದ್ದರು. ಗಣ್ಯವ್ಯಕ್ತಿಗಳಿಂದ ಹಿಡಿದು ಸಾಮಾನ್ಯರವರೆಗೂ ಪೊಲೀಸರನ್ನು ಪ್ರಶಂಸಿಸಿದ್ದರು.

ಯಾವುದೇ ಎನ್ಕೌಂಟರುಗಳು ನಡೆದಾದ ವಿಚಾರಣಾ ಸಮಿತಿಯು ನೇಮಕವಾದಂತೆ ಇದಕ್ಕೂ ಆಯಿತು. ಅದರಿಂದ ತಿಳಿದುಬಂದುದ್ದೇನೆAದರೆ ಇದೊಂದು ಯೋಜಿತ ಅಥವಾ ಸ್ಟೇಜ್ಡ್ ಎನ್ಕೌಂಟರ್ ಎಂದು.

ಹೇಗೋ ಅಪರಾಧಿಗಳಿಗೆ ಶಿಕ್ಷೆಯಾಯಿತು. ನ್ಯಾಯಾಲಯ ಕೊಟ್ಟರೇನು ಅಥವಾ ಪೊಲೀಸರೇ ಕೊಟ್ಟರೇನು ಎಂದು ಸಮಾಧಾನದ ಉಸಿರು ಬಿಡುವ ಬದಲು ಅತ್ಯಾಚಾರ, ಎನ್ಕೌಂಟರ್ ಮತ್ತು ಅದನ್ನು ಸಂಭ್ರಮಿಸುವ ಮನಸ್ಥಿತಿ ಹಾಗೂ ಪರಿಸ್ಥಿತಿಗಳ ಬಗ್ಗೆ ಸೂಕ್ಷ÷್ಮವಾಗಿ ಗಮನಿಸುವ ಅಗತ್ಯತೆ ಇದೆ. ಏಕೆಂದರೆ ಇದರ ಮೇಲೆ ವ್ಯಕ್ತಿಗಳ ಜೀವಗಳು, ಅಧಿಕಾರದ ಉಪಯೋಗ ಮತ್ತು ದುರುಪಯೋಗಗಳು, ವ್ಯವಸ್ಥೆಯು ಸಡಿಲಗೊಂಡು ಮುಂದೆ ದಿಕ್ಕೆಡುವ ಸಾಧ್ಯತೆಗಳೆಲ್ಲಾ ಇದರಲ್ಲಿ ಅಡಕವಾಗಿವೆ.
(ಮುಂದುವರಿಯುವುದು)

You cannot copy content of this page

Exit mobile version