“..ರಾಷ್ಟ್ರನಿರ್ಮಾಣವನ್ನು ಎದೆಯುಬ್ಬಿಸಿ ಕ್ಲೇಮ್ ಮಾಡಿಕೊಳ್ಳುವ ಆರೆಸ್ಸೆಸ್ ಇದುವರೆಗೆ ವೋಟ್ ಚೋರಿ ವಿಚಾರದಲ್ಲಿ ತುಟಿಬಿಚ್ಚಿಲ್ಲ. ಹಾಗಾದರೆ, ಅದರ ನಿಲುವೇನು ಎಂದು ನಾವೀಗ ಪ್ರಶ್ನಿಸಲೇಬೇಕಿದೆ..” ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ
ಆರೆಸ್ಸೆಸ್ ತನ್ನನ್ನು ತಾನು ದೇಶಭಕ್ತ ಸಂಘಟನೆಯೆಂದು ಬಿಂಬಿಸಿಕೊಳ್ಳುತ್ತದೆ. ರಾಷ್ಟ್ರನಿರ್ಮಾಣದಲ್ಲಿ ಪಾಲ್ಗೊಳ್ಳುವುದು ತನ್ನ ಆದ್ಯತೆಯೆಂದು ಘೋಷಿಸಿಕೊಂಡಿದೆ. ರಾಷ್ಟ್ರನಿರ್ಮಾಣ ಎಂದರೆ ಏನು? ಭಾರತದ ಮಟ್ಟಿಗೆ ಸಂವಿಧಾನ ಮೌಲ್ಯಗಳ ಅನುಸರಣೆ-ಅನುಷ್ಠಾನ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಯೇ ರಾಷ್ಟ್ರನಿರ್ಮಾಣದ ಅಡಿಗಲ್ಲುಗಳು. ಇವೆರಡು ವಿಚಾರದಲ್ಲಿ ನಾವು ಬದ್ದರಾಗುಳಿದರೆ ಸಾಕು, ನಮಗರಿವಿಲ್ಲದೇ ನಾವು ದೇಶದ ಉನ್ನತಿಗೆ, ಬಲವೃದ್ಧಿಗೆ, ಆಮೂಲಕ ಸಶಕ್ತ-ಸಮಾನ ದೇಶ ನಿರ್ಮಾಣಕ್ಕೆ ನಮ್ಮ ಕೊಡುಗೆ ನೀಡುತ್ತಿರುತ್ತೇವೆ.
ಆರೆಸ್ಸೆಸ್ಸಿಗೆ ಹೇಗೂ ನಮ್ಮ ಸಂವಿಧಾನದ ಮೇಲೆ ಗೌರವವೂ ಇಲ್ಲ, ವಿಶ್ವಾಸವೂ ಇಲ್ಲ. ತನ್ನ ಮುಖವಾಣಿ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದಲ್ಲಿ 1949ರಲ್ಲೇ ಅದನ್ನು ಸ್ಪಷ್ಟಪಡಿಸಿದೆ. ‘ಬೇರೆ ದೇಶಗಳಿಂದ ಕಾಯ್ದೆಗಳನ್ನು ಎರವಲು ತಂದು ರಚಿಸಿರುವ ಈ ಸಂವಿಧಾನದಲ್ಲಿ ನಮ್ಮ ರಾಷ್ಟ್ರೀಯತೆಯ ಲವಲೇಷವೂ ಇಲ್ಲ, ಹಾಗಾಗಿ ನಾವಿದನ್ನು ಒಪ್ಪಲು ಸಾಧ್ಯವಿಲ್ಲ, ಮನುಸ್ಮೃತಿಯೇ ನಮ್ಮ ಸಂವಿಧಾನ’ ಎಂದು ಆರ್ಗನೈಸರ್ ಹೇಳಿಯಾಗಿದೆ; ಅದಕ್ಕೆ ತಕ್ಕಂತೆ ಇವತ್ತಿನವರೆಗೂ ಆರೆಸ್ಸೆಸ್ ನಮ್ಮ ಹೆಮ್ಮೆಯ ಸಂವಿಧಾನವನ್ನು ತಿರಸ್ಕಾರದಿಂದ ಕಾಣುತ್ತಲೇ ಬಂದಿದೆ. ಹಾಗಾಗಿ ಸಾಂವಿಧಾನಿಕ ಮೌಲ್ಯಗಳ ಅನುಸರಣೆ-ಅನುಷ್ಠಾನ ಆಯಾಮದಿಂದ ಅದರ ರಾಷ್ಟ್ರನಿರ್ಮಾಣದ ಧ್ಯೇಯವನ್ನು ಪ್ರಶ್ನೆ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಇನ್ನುಳಿದದ್ದು ಪ್ರಜಾಪ್ರಭುತ್ವದ ರಕ್ಷಣೆ. ಇದು ನೆಲೆ ನಿಂತಿರುವುದೇ ಪ್ರಜೆಯನ್ನು ಪ್ರಭುವಾಗಿಸುವ ಸಂಸದೀಯ ಚುನಾವಣಾ ವ್ಯವಸ್ಥೆಯ ಮೇಲೆ. ವೋಟ್ ಚೋರಿ ವಿವಾದವು ಈ very ಚುನಾವಣಾ ವ್ಯವಸ್ಥೆಯ ಮೇಲೆಯೇ ದಾಳಿ ಮಾಡುತ್ತಿರುವ ಪ್ರಶ್ನೆಯನ್ನು ಮುಂದೊಡ್ಡುತ್ತಿದೆ. ಈ ಆರೋಪದೆಡೆಗೆ ನಿರ್ಲಕ್ಷ್ಯವಹಿಸುವ ಯಾರು ಕೂಡಾ ರಾಷ್ಟ್ರನಿರ್ಮಾಣದ claim ಮಾಡಲು ಅರ್ಹರಲ್ಲ.
ಆದರೆ, ರಾಷ್ಟ್ರನಿರ್ಮಾಣವನ್ನು ಎದೆಯುಬ್ಬಿಸಿ ಕ್ಲೇಮ್ ಮಾಡಿಕೊಳ್ಳುವ ಆರೆಸ್ಸೆಸ್ ಇದುವರೆಗೆ ವೋಟ್ ಚೋರಿ ವಿಚಾರದಲ್ಲಿ ತುಟಿಬಿಚ್ಚಿಲ್ಲ. ಹಾಗಾದರೆ, ಅದರ ನಿಲುವೇನು ಎಂದು ನಾವೀಗ ಪ್ರಶ್ನಿಸಲೇಬೇಕಿದೆ. ಮತ್ತು ತನ್ನ ನಿಲುವನ್ನು ಆ ಶತಾಯುಷಿ ಸಂಭ್ರಮದ ಸಂಘಟನೆ ಸ್ಪಷ್ಟಪಡಿಸಲೇಬೇಕಿದೆ.
Either ವೋಟ್ ಚೋರಿ ಆರೋಪವನ್ನು ಒಪ್ಪಿ ಖಂಡಿಸಬೇಕು ಅಥವಾ; ಇದು ಕೇವಲ ರಾಜಕೀಯ ಆರೋಪ, ಇದರಲ್ಲಿ ಹುರುಳಿಲ್ಲ, ಎಂದೆನಿಸದರೆ ಆರೋಪವನ್ನು ನಿರಾಕರಿಸಿ, ಇಂತಹ ಸುಳ್ಳು ಆರೋಪಗಳು ಪ್ರಜಾಪ್ರಭುತ್ವಕ್ಕೆ ಮಾರಕ ಅಂತಾದರೂ ಅದು ಬಹಿರಂಗವಾಗಿ ಹೇಳಬೇಕು. ಇವೆರಡನ್ನೂ ಬಿಟ್ಟು, ಇಂತಹ ಗಂಭೀರ ವಿಚಾರ ತನ್ನ ಗಮನಕ್ಕೇ ಬಂದಿಲ್ಲವೇನೊ ಎಂಬಂತೆ ತೆಪ್ಪಗಿದ್ದು ಬಿಡೋದು ಆರೆಸ್ಸೆಸ್ಸಿಗೆ ಮಾತ್ರವಲ್ಲ, ರಾಷ್ಟ್ರ ನಿರ್ಮಾಣದ ಕ್ಲೇಮು ತೆಗೆದುಕೊಳ್ಳುವ ಯಾವ ಸಂಘಟನೆಗೂ ತಕ್ಕುದಲ್ಲ. ಇಂತಹ ಜಾಣಕಿವುಡು ಅಥವಾ ಜಾಣಕುರುಡುತನವನ್ನ ತೋರುವ ಯಾವುದೇ ಸಂಘಟನೆಯ ಅಂತರಾಳವೇ ಬೂಟಾಟಿಕೆಯದ್ದು ಎಂದು ಭಾರತದ ಜನ ಗ್ರಹಿಸಬೇಕಾಗುತ್ತದೆ. ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ವೋಟ್ ಚೋರಿ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸದಿದ್ದರೆ ನೂರನೇ ವರ್ಷಾಚರಣೆಯಲ್ಲಿರುವ ಆರೆಸ್ಸೆಸ್ ತನ್ನ ಬೂಟಾಟಿಕೆಯನ್ನು ತಾನೇ ಸಾಬೀತು ಮಾಡಿಕೊಂಡಂತಾಗುತ್ತದೆ.
ಮಾತನಾಡಲೇಬೇಕಾದ ಸಮಯದಲ್ಲಿ ಮಾತನಾಡಲೇಬೇಕಾದವರು ಮಾತನಾಡದೆ ಉಳಿಯುವುದನ್ನು ಮೌನ ಎನ್ನುವುದಿಲ್ಲ; ದ್ರೋಹ ಎನ್ನುತ್ತಾರೆ.