ಕೇಸರಿ ಶಾಲಿನವರು ತಲೆಕೆಡಿಸಿಕೊಳ್ಳಬೇಕಿರೋದು ಜನಿವಾರದ ಬಗ್ಗೆಯೇ ಹೊರತು ಹಿಜಾಬ್ ಬಗ್ಗೆಯಲ್ಲ!

* ಕೇಸರಿ ಶಾಲಿನ ಹಿಂದುಳಿದ ವರ್ಗದ ಯುವಕರಿಗೆ ಹಿಜಾಬ್ ಗಿಂತ ಜನಿವಾರ ಅಪಾಯಕಾರಿ!
* ಹಿಜಾಬ್ ಕೇವಲ ವಸ್ತ್ರವಷ್ಟೇ.. ಜನಿವಾರ ಮೇಲು ಕೀಳಿನ ಸಂಕೇತ!
* ಜನಿವಾರ ಎಂಬುದು ಹಿಂದುತ್ವದ ಸ್ಲೋಗನ್ 'ಹಿಂದೂ ನಾವೆಲ್ಲ ಒಂದು' ಸಂಕೇತದಲ್ಲೇ ಬರೋದಿಲ್ಲ..
ಪತ್ರಕರ್ತರಾದ ನವೀನ್ ಸೂರಿಂಜೆಯವರ ಬರಹದಲ್ಲಿ

“ಹಿಜಾಬಿಗೆ ಅವಕಾಶ ಉಂಟು, ಕೇಸರಿ ಶಲ್ಯಕ್ಕೆ ಅವಕಾಶ ಇಲ್ಲ. ನಾನಂತೂ ಕೇಸರಿ ಶಲ್ಯ ಹಾಕಿಯೇ ಹಾಕುತ್ತೇನೆ” ಎಂದು ಕೆಲ ಕಾಲೇಜಿನ ವಿದ್ಯಾರ್ಥಿಗಳು ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಅದೇ ವಿದ್ಯಾರ್ಥಿಗಳು ಕಾಲೇಜಿನೊಳಗೆ ಜನಿವಾರಕ್ಕೆ ಅಧಿಕೃತ ಮಾನ್ಯತೆ ನೀಡಲಾಗಿದೆ ಎಂಬುದನ್ನು ಮರೆಯುತ್ತಾರೆ. ಕೇಸರಿ ಶಾಲು ಧರಿಸುವ ಹಿಂದುಳಿದ ವರ್ಗದ ಹಿಂದೂ ಯುವಕರಿಗೆ ಹಿಜಾಬ್ ಗಿಂತಲೂ ಅವರ ಪಾಲಿಗೆ ಜನಿವಾರ ಅಪಾಯಕಾರಿ ಎಂಬುದು ಇನ್ನೂ ಅರಿವಿಗೆ ಬಂದಿಲ್ಲ !

ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಿಜಾಬ್ ಜೊತೆಗೆ ಜನಿವಾರಕ್ಕೂ ಅಧಿಕೃತತೆ ನೀಡಿದ್ದು ಸರ್ಕಾರವೇ ವಿದ್ಯಾರ್ಥಿ ಸಮುದಾಯದ ಮಧ್ಯೆ  ಅಸಮಾನತೆಯನ್ನು ಬಿತ್ತಿದಂತಾಗುತ್ತದೆ. ಹಿಜಾಬ್ ಎನ್ನುವುದು ಒಂದು ವಸ್ತ್ರವೇ ಹೊರತು, ಅದರ ಹಿಂದೆ ಮೇಲು-ಕೀಳು, ಶ್ರೇಷ್ಠ ನೀಚ ಎಂಬ ಅಜೆಂಡಾಗಳು ಇರುವುದಿಲ್ಲ. ಜನಿವಾರ ಎನ್ನುವುದು ವಿದ್ಯಾರ್ಥಿಗಳ ಮಧ್ಯೆ ಮೇಲು-ಕೇಳು, ಶ್ರೇಷ್ಠ ಕನಿಷ್ಠ ಭಾವನೆಗಳನ್ನು ಮೂಡಿಸುತ್ತದೆ. ಜನಿವಾರ ಎನ್ನುವುದು ಅವರವರ ವೈಯಕ್ತಿಕ ನಂಬಿಕೆ ಮತ್ತು ಆಚರಣೆಯಾಗಿದ್ದಷ್ಟೂ ಒಳ್ಳೆಯದು. ಜನಿವಾರಕ್ಕೆ ಸಾರ್ವಜನಿಕ ಮಾನ್ಯತೆ ನೀಡುವುದು ಅಸಮಾನತೆಯನ್ನು ಸಮಾಜದಲ್ಲಿ ಪೋಷಿಸಿದಂತಾಗುತ್ತದೆ.

ಹಿಜಾಬ್ ಎನ್ನುವುದು ಧರ್ಮದ ವಸ್ತ್ರ ಸಂಕೇತ. ಜನಿವಾರ ಎನ್ನುವುದು ಹಿಂದೂ ಧರ್ಮದ ಸಂಕೇತವಲ್ಲ. ಅದು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾದ ಸಂಕೇತ. ಅದಲ್ಲದೇ, ಅದು ಹಿಂದೂ ಧರ್ಮವನ್ನು ಜಾತಿಗಳ ಆಧಾರದಲ್ಲಿ ಒಡೆಯುವುದರ ಸಂಕೇತವಾಗಿದೆ. ಜನಿವಾರದ ಸಾರ್ವಜನಿಕ ಚರ್ಚೆ ಮತ್ತು ಮಾನ್ಯತೆಯು ಆರ್ ಎಸ್ ಎಸ್ ಪ್ರತಿಪಾದಿಸುವ ‘ಹಿಂದೂ ನಾವೆಲ್ಲ ಒಂದು’ ಎಂಬ ಆಶಯಕ್ಕೂ ವಿರುದ್ಧವಾಗಿದೆ.  ಜನಿವಾರ ಕಂಡಾಕ್ಷಣ ಅಥವಾ ಅದರ ಹೆಸರು ಕೇಳಿದ ತಕ್ಷಣ ಮುಜುಗರಕ್ಕೆ ಒಳಗಾಗುವುದು ಮತ್ತು ಕೀಳರಿಮೆಗೆ ಒಳಗಾಗುವುದು ಹಿಂದುಳಿದ ಹಿಂದೂ ವಿದ್ಯಾರ್ಥಿಗಳೇ ಹೊರತು ಮುಸ್ಲೀಮರಲ್ಲ. ಹಾಗಾಗಿ ಜನಿವಾರ ಹಾಕಿದ ವಿದ್ಯಾರ್ಥಿಗಳು ಅವರ ಪಾಡಿಗೆ ಹಾಕಿಕೊಂಡು ಬರಲಿ. ಜನಿವಾರವನ್ನು ‘ಮಾನ್ಯತೆ’ ರೀತಿ ಸರ್ಕಾರ ಘೋಷಿಸುವುದು ಅಸಮಾನತೆಯ ಪೋಷಣೆಯಾಗಿದೆ. ಇದು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮತ್ತು ಬ್ರಾಹ್ಮಣ ವಿದ್ಯಾರ್ಥಿಗಳ ಮಧ್ಯೆ ಕಂದಕ ಸೃಷ್ಟಿಸುತ್ತದೆ.

ಹಿಜಾಬ್ ಎಂದರೆ ಶಿರವಸ್ತ್ರ. ಹಿಜಾಬ್ ಮತ್ತು ಬುರ್ಕಾ ಎರಡೂ ಒಂದೇ ಅಲ್ಲ. ಹಿಂದೂ ಸಮುದಾಯದ ಹಲವು ಜಾತಿಗಳಲ್ಲಿ ಹುಡುಗಿಯರು ಶಿರವಸ್ತ್ರ ಧರಿಸುತ್ತಾರೆ. ಇಂತಹ ಶಿರವಸ್ತ್ರಕ್ಕೆ ಎದುರಾಗಿ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎನ್ನುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು, ಹಿಜಾಬ್ ವಿಷಯ ಬಿಟ್ಟು ಜನಿವಾರದ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಜನಿವಾರ ಹಾಕಿದ ವಿದ್ಯಾರ್ಥಿಗಳಿಗೆ ಇರುವ ಸವಲತ್ತುಗಳು ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳಿಗೆ ಇದೆಯೆ ಎಂಬ ಪ್ರಶ್ನೆಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉತ್ತರ ಕಂಡುಕೊಳ್ಳಬೇಕು.

ಉದಾಹರಣೆಗಾಗಿ 2020 ರ ದಾಖಲೆಗಳನ್ನು ಪರಿಶೀಲಿಸೋಣಾ. 2020 ರಲ್ಲಿ ಜನಿವಾರಧಾರಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿಯಲ್ಲಿ ಐಎಎಸ್, ಐಪಿಎಸ್ ಪರೀಕ್ಷೆ ಬರೆಯಲು ತರಬೇತಿ‌ ನೀಡಲಾಗುತ್ತದೆ. ತರಬೇತಿಗಾಗಿ ಒಂದು ವರ್ಷದಲ್ಲಿ 535 ಬ್ರಾಹ್ಮಣ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.ಈ ಪೈಕಿ 166 ಅಭ್ಯರ್ಥಿಗಳನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿ ದೆಹಲಿಯ ಪ್ರತಿಷ್ಠಿತ ಸಂಕಲ್ಪ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಯಿತು. ಚಾಣಕ್ಯ ಆಡಳಿತ ತರಬೇತಿ ಯೋಜನೆ ಇರುವುದು “EWS ಬ್ರಾಹ್ಮಣ ವಿದ್ಯಾರ್ಥಿ”ಗಳಿಗೆ ಮಾತ್ರ. ಅಂದರೆ ಆರ್ಥಿಕವಾಗಿ ಹಿಂದುಳಿದ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಮೀಸಲು. ಆದರೆ ಸರ್ಕಾರ ಆಯ್ಕೆ ಮಾಡುವಾಗ ಬಡ ಬ್ರಾಹ್ಮಣರನ್ನು ಮಾತ್ರ ಹುಡುಕಲಿಲ್ಲ.‌ 166 ಅಭ್ಯರ್ಥಿಗಳ ಪೈಕಿ 80 ಅಭ್ಯರ್ಥಿಗಳು ಶ್ರೀಮಂತ ಬ್ರಾಹ್ಮಣ ಕುಟುಂಬದಿಂದ (NO EWS)ಬಂದ ವಿದ್ಯಾರ್ಥಿಗಳು ಎಂಬುದನ್ನು ಸರ್ಕಾರಿ ದಾಖಲೆಗಳು ಹೇಳುತ್ತವೆ !

ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ ಅವರ ಜಾತಿ ಸಂಘಟನೆಗಳು ಕಾರ್ಯಕ್ರಮ ಮಾಡಿ  5 ಸಾವಿರವೋ, ಹತ್ತು ಸಾವಿರವೋ ಪ್ರೋತ್ಸಾಹಧನ ನೀಡಿ ಸನ್ಮಾನಿಸಿ ಫೋಟೋ ಹಾಕಿಸಿಕೊಳ್ಳುತ್ತಾರೆ. ಆದರೆ ಬ್ರಾಹ್ಮಣ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ ಅಧಿಕ ಅಂಕ ಪಡೆದುಕೊಂಡರೆ 15 ಸಾವಿರ, 10 ಸಾವಿರ, 05 ಸಾವಿರ ಜೊತೆಗೆ ಬೆಳ್ಳಿ ಪದಕ ನೀಡಿ ರಾಜ್ಯ ಸರ್ಕಾರ ಗೌರವಿಸುತ್ತದೆ.  ಉದಾಹರಣೆಗೆ 2019-20 ರ ದಾಖಲೆಯ ಪ್ರಕಾರ, ಪ್ರತೀ ವರ್ಷ ಇದಕ್ಕಾಗಿ ರಾಜ್ಯ ಸರ್ಕಾರವು 1,355,000.00 ರೂಗಳನ್ನು ವ್ಯಯಿಸಿದೆ‌.

ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಕೋರ್ಸ್ ಗಳನ್ನು ಕಲಿಯುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಪಾವತಿ ಮಾಡಲು ಸಾಂಧೀಪಿನಿ ಶಿಷ್ಯ ವೇತನ ಯೋಜನೆ ರಾಜ್ಯ ಸರ್ಕಾರದಲ್ಲಿ ಜಾರಿಯಲ್ಲಿದೆ. ಭಾರತದಲ್ಲಿ ಹಾಗೂ ಹೊರ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅತೀ ಕಡಿಮೆ / ಶೂನ್ಯ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ಒದಗಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನಿರ್ವಹಣಾ ವೆಚ್ಚ(Day Scholar/ hosteller Maintenance) ಹಾಗೂ ಶುಲ್ಕ ಮರುಪಾವತಿ(Fee Reimbursement) ಒದಗಿಸಲಾಗುತ್ತದೆ. ಇವೆಲ್ಲವೂ ಜನಿವಾರವಿಲ್ಲದೇ ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳಿಗೆ ಇವೆಯೇ ?

ಆಚಾರ್ಯತ್ರಯ ವೇದ ಶಿಷ್ಯವೇತನ ಯೋಜನೆ ಅಡಿಯಲ್ಲಿ ಬ್ರಾಹ್ಮಣ ಸಮುದಾಯದ ವೇದ ವಿದ್ಯಾರ್ಥಿಗಳಿಗೆ/ಆಗಮ ವಿದ್ಯಾರ್ಥಿಗಳಿಗೆ /ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ/ವಿದ್ವಾಂಸರಿಗೆ ಶಿಷ್ಯ ವೇತನ ನೀಡಲಾಗುತ್ತದೆ. ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ ಅಡಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳ ಬ್ರಾಹ್ಮಣ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಸನ್ನಿಧಿ ಯೋಜನೆ ಅಡಿಯಲ್ಲಿ  ಅರ್ಹ ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ & ಉಚಿತ ಹಾಸ್ಟಲ್ ನಿರ್ಮಾಣ/ ಹಾಸ್ಟೆಲ್‌ ಸೌಲಭ್ಯ ಕಲ್ಪಿಸುವುದು / ಹಾಸ್ಟಲ್ ಶುಲ್ಕವನ್ನು ಮರು ಪಾವತಿಲಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ ಅಡಿಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಚಾರ್ಟೆಡ್ ಅಕೌಂಟೇನ್ಸಿ, ಕಂಪನಿ ಸೆಕ್ರೇಟರಿ ಇನ್ನಿತರ ವೃತ್ತಿಪರ ಪರೀಕ್ಷೆಗಳಿಗೆ ಉಚಿತ ಶಿಕ್ಷಣ / ತರಬೇತಿ, ಸಿ.ಇ.ಟಿ, ಜೆ.ಇ.ಇ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಲಾಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರವು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ವೇಳೆಯಲ್ಲಿ, ಸಾಂದೀಪನಿ ಶಿಷ್ಯ ವೇತನ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಗೆ ವೃತ್ತಿಪರ ಅಥವಾ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು (ಸರ್ಕಾರದ ಆದೇಶ ಸಂಖ್ಯೆ: ಕಂಇ 99 ಮುಅಬಿ 2020 ದಿನಾಂಕ: 20-11-2020) ಸಹಾಯಧನವಾಗಿ 15 ಸಾವಿರ ರೂಗಳನ್ನು ನೀಡಲಾಗುತ್ತಿತ್ತು.‌ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 06.01.2024 ರಂದು ಈ ಮೊತ್ತವನ್ನು ಒಂದು ಲಕ್ಷ ರೂಗಳಿಗೆ ಏರಿಸಿದೆ. ಈಗ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಇತ್ಯಾದಿ ಕೋರ್ಸ್ ಗಳ ವ್ಯಾಸಾಂಗಕ್ಕೆ ಪ್ರವೇಶ ಪರೀಕ್ಷಾ ಪ್ರಾಧಿಕಾರದಿಂದ (CET ಅಥವಾ PG entrance exams) ಸೀಟು ಪಡೆದು ಕಾಲೇಜಿಗೆ ಸೇರ್ಪಡೆಯಾದ ಅರ್ಹ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರೆಸಲು ಸಹಾಯಧನ ರೂಪದಲ್ಲಿ 1.00 ಲಕ್ಷ ರೂಪಾಯಿ ಸಿಗಲಿದೆ.‌ ಇದೆಲ್ಲವೂ ಸಿಗುವುದು ಜನಿವಾರಧಾರಿ ವಿದ್ಯಾರ್ಥಿಗಳಿಗೇ ಹೊರತು ಕೇಸರಿ ಶಾಲು ಹಾಕಿಕೊಂಡವರಿಗಲ್ಲ !

ತಲೆಗೆ ಶಿರವಸ್ತ್ರ ಹಾಕುವುದರಿಂದ ಅಥವಾ ತೆಗೆಯುವುದರಿಂದ ಯಾವ ಅವಕಾಶಗಳೂ ಸಿಗುವುದಿಲ್ಲ. ಅದೊಂದು ಅವರವರ ಇಚ್ಚೆಯ ಕಂಫರ್ಟೇಬಲ್ ವಸ್ತ್ರವಷ್ಟೆ. ಇಂತಹ ವಸ್ತ್ರವನ್ನು ಹಾಕಲೇಬೇಕು ಅಥವಾ ತೆಗೆಯಲೇಬೇಕು ಎಂದು ಹೇಳುವುದು ಮೂಲಭೂತವಾದವಾಗುತ್ತದೆ. ಜನಿವಾರ ಹಾಗಲ್ಲ, ಅದು ಹಾಕುವವರಿಗೆ ಮಾತ್ರ ಸೀಮಿತವಲ್ಲ. ಜನಿವಾರವನ್ನು ಹಾಕುವ ಮೂಲಕ ಎದುರಿರುವ ಜನಿವಾರ ರಹಿತ ವ್ಯಕ್ತಿ ‘ಕನಿಷ್ಠ’ ಎಂದು ಪರೋಕ್ಷವಾಗಿ ಘೋಷಿಸಲಾಗುತ್ತದೆ. ಇದು ‘ಹಿಂದೂ ನಾವೆಲ್ಲ ಒಂದು’ ಎಂಬ ಹಿಂದುತ್ವದ ಘೋಷಣೆಗೆ ವಿರುದ್ದವಾಗಿದೆ.  ಅದಕ್ಕಿಂತಲೂ ಮುಖ್ಯವಾಗಿ ಎಲ್ಲಾ ಹುದ್ದೆಗಳಲ್ಲಿ ಬ್ರಾಹ್ಮಣರೇ ಯಾಕಿದ್ದಾರೆ ? ಹಿಂದುಳಿದ ಹಿಂದೂ ಯುವಕರು  ಯಾಕಿಲ್ಲ ಎಂದು ಯೋಚಿಸಿದರೆ ಕಾಲೇಜು ಶಿಕ್ಷಣದಲ್ಲಿ ‘ಜನಿವಾರಧಾರಿಗಳು ಬಳಸುವ ಮೀಸಲಾತಿ’ ಗಮನ ಸೆಳೆಯುತ್ತದೆ. ಹಿಜಾಬ್ ಗೆ ಎದುರಾಗಿ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎನ್ನುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಜನಿವಾರದ ಬಗ್ಗೆ ಚಿಂತಿಸಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು