Home ಜನ-ಗಣ-ಮನ ಹೆಣ್ಣೋಟ ಎಲ್ಲಿ ಹೋದಳು ಅವ್ವ?

ಎಲ್ಲಿ ಹೋದಳು ಅವ್ವ?

0

(ಈ ವರೆಗೆ….)

ನಂಜಪ್ಪ ಹಾಕಿದ ಮೆಣಸಿನ ಹೊಗೆಯಿಂದಾಗಿ ಉಸಿರಾಡಲು ಕಷ್ಟವಾಗಿ ಲಕ್ಷ್ಮಿ ತೀವ್ರ ಅಸ್ವಸ್ಥಳಾಗುತ್ತಾಳೆ. ಅಷ್ಟರಲ್ಲಿ ಅಪ್ಪ ಮಂತ್ರವಾದಿಯನ್ನು ಕರೆತಂದರೂ ಆತ ತನ್ನ ತಯಾರಿ ಮಾಡಿಕೊಳ್ಳುವಷ್ಟರಲ್ಲಿ ಲಕ್ಷ್ಮಿ ಕೊನೆಯುಸಿರೆಳೆಯುತ್ತಾಳೆ. ಇಡೀ ಊರೇ ಶೋಕಸಾಗರದಲ್ಲಿ ಮುಳುಗುತ್ತದೆ. ಮುಂದಿನ ಕಥನಕ್ಕೆ ಓದಿ ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಇಪ್ಪತ್ತೆರಡನೆಯ ಕಂತು.

ಹೊಳೆಗೆರೆಯಲ್ಲಿ ಲಕ್ಷ್ಮಿಯನ್ನು ಮಣ್ಣು ಮಾಡಿ ಬಂದು  ಮೂರು ದಿನ ಕಳೆದಿತ್ತು. ಸದಾ ಗದ್ದಲದ, ಬಜಾರಿ ಬಸವಿಯರ ಊರೆನಿಸಿಕೊಂಡಿದ್ದ ಹಳೇ ನಾರಿಪುರ, ಈ ಮೂರು ದಿನದಿಂದ ಮಾತು ಸತ್ತಂತೆ  ಸ್ತಬ್ಧವಾಗಿ ಹೋಗಿತ್ತು. ಗುಂಪಾಗಿ ಕೂರುತ್ತಿದ್ದ ಎಲ್ಲರ ಮನೆ ಬಾಗಿಲುಗಳು ಹೆಂಗಸರ ಚಕಮಕಿಯ ಸೊಲ್ಲಿಲ್ಲದೆ ಬಣಗುಟ್ಟುತ್ತಿತ್ತು. ಊಟ ನಿದ್ದೆಯ ಪರಿವೇ ಇಲ್ಲದ ಅವ್ವ, ಹುಚ್ಚಿಯಂತಾಗಿ ಬಿಟ್ಟಿದ್ದಳು. “ಮಗ ನನ್ ಬುಟ್ಟೋಗ್ ಬ್ಯಾಡ  ನಾನು ಬಂದೆ ತಡ್ಯವ್ವ  ” ಎಂದು ಕೂಗುತ್ತಾ  ಎತ್ತೆಂದರತ್ತ ಹೋಗಿಬಿಡುತ್ತಿದ್ದಳು. 

ಲಕ್ಷ್ಮಿಯನ್ನು ಮಣ್ಣು ಮಾಡಿ ಬಂದ ಆ ರಾತ್ರಿಯಂತು  ಮನೆಯವರೆಲ್ಲ ಅವ್ವನನ್ನು ಹುಡುಕುವುದರಲ್ಲೇ ಹೈರಾಣಾಗಿ ಹೋದರು. ಅಂದು ಮಧ್ಯರಾತ್ರಿ ಒಂದಾ ಮಾಡಲು ಎದ್ದ ಅಪ್ಪ, ಮಗ್ಗುಲಲ್ಲಿ ಅವ್ವ ಕಾಣದೆ ಕಂಗಾಲಾದ. ಮನೆಯವರನ್ನೆಲ್ಲಾ ಎಬ್ಬಿಸಿ, ಆ ಅಪರಾತ್ರಿಯಲ್ಲೇ  ದಿಕ್ಕಿಗೊಬ್ಬಬ್ಬರನ್ನು ಕಳುಹಿಸಿ ಹುಡುಕಿಸಿದ್ದಾಯ್ತು. ಏನು ಪ್ರಯೋಜನವಾಗಲಿಲ್ಲ. ಕೊನೆಗೆ ವಿಧಿಯಿಲ್ಲದೆ ಊರಿನ  ಎಲ್ಲರ ಮನೆಗಳ ಬಾಗಿಲು ಬಡಿದು ಅವರನ್ನೆಲ್ಲಾ  ವಿಚಾರಿಸಿದ್ದಾಯ್ತು, ಎಲ್ಲಿಯೂ ಅವ್ವನ ಸುಳಿವಿಲ್ಲ. ಆ ಹೊತ್ತು  ಮನೆಯವರಿರಲಿ ಊರಿನವರೂ ಕೂಡ  ಕಂಗಾಲಾಗಿ ಹೋದರು. ಸೋತ ಅಪ್ಪ, ಕೈ ಚೆಲ್ಲಿ ಮನೆ ಮುಂದಲ ಕಲ್ಲುಹಾಸಿನ ಮೇಲೆ ಚಿಂತಾಕ್ರಾಂತನಾಗಿ ಕುಳಿತು ಬಿಟ್ಟ. 

ಹೀಗೆ ದಿಕ್ಕು ಗಾಣದೆ ಕೂತ ಅಪ್ಪನಿಗೆ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ ತಲೆಗೆ ಬ್ಯಾಟರಿ ಕಟ್ಟಿಕೊಂಡು ಸೈಕಲ್ ಏರಿ ಆ ಕಾರ್ಗತ್ತಲ ರಾತ್ರಿಯಲ್ಲಿ ಮಗಳನ್ನು ಹೂತಿದ್ದ ಮೈಲು ದೂರದ ಹೊಳೆಗೆರೆಗೆ ಬಂದು ನೋಡಿದ. ಅಮವಾಸ್ಯೆಯ ಹಿಂದು ಮುಂದಲ ಆ ದಟ್ಟ ಕಪ್ಪಿನೊಳಗೆ ಅನುರಣಿಸುತ್ತಿದ್ದ ಅವ್ವನ ಗೋಳಾಟದ ಆರ್ತನಾದ ಅಪ್ಪನ ಎದೆಯನ್ನೇ ನಡುಗಿಸಿ ಬೆವರುವಂತೆ ಮಾಡಿಬಿಟ್ಟಿತು.

“ನಾನು ನಿನ್ ಜೊತೆ ಬಂದು ಬುಡ್ತೀನಿ ನನ್ನೂ ಕರ್ಕೊಂಡೋಗು ಬಾ ಮಗ” ಎಂದು ಸಮಾಧಿಯ ಮಣ್ಣು ಕೆದರುತ್ತಾ, ಚೀರಾಡುತ್ತಿದ್ದ ಅವ್ವನನ್ನು ಅಪ್ಪ ಎಷ್ಟು ಅಲುಗಿಸಿದರು ಎಚ್ಚರವೇ ಇಲ್ಲ. ಅಷ್ಟರಲ್ಲಿ ಅಪ್ಪನ ದಾರಿಯ ಜಾಡು ಹಿಡಿದು ಹಿಂದೆಯೇ ಎತ್ತಿನಗಾಡಿಯೇರಿ ಬಂದ ಕೆಲವು ನೆಂಟರಿಷ್ಟರು ಅಪ್ಪನೊಂದಿಗೆ ಕೈಜೋಡಿಸಿ ಅವ್ವನನ್ನು ಹೊತ್ತುತಂದು ಗಾಡಿಗೆ ಹಾಕಿಕೊಂಡು ಮನೆಗೆ ಬಂದಿದ್ದರು.

ಅಂದಿನಿಂದ ಹಗಲು ರಾತ್ರಿಗಳೆನ್ನದೆ ಮನೆಯ ಗಂಡು ಮಕ್ಕಳು, ಒಬ್ಬರಾದ ಮೇಲೇ ಒಬ್ಬರು ಪಾಳಿಯ ಮೇಲೆ ಅವ್ವನನ್ನು ಕಾಯತೊಡಗಿದ್ದರು.

ವಾರ ಒಪ್ಪತ್ತು ಎನ್ನುವುದರೊಳಗೆ ಮುಗಿದೇ ಹೋದ ಲಕ್ಷ್ಮಿಯ ಘಟನೆಯಿಂದ ದಿಗ್ಭ್ರಾಂತರಾದ ಮನೆಯವರಿಗೆ ದೊಡ್ಡ ಶೂನ್ಯ ಆವರಿಸಿದಂತಾಗಿತ್ತು. ಜೊತೆಗೆ ಮಗಳ ಸಾವನ್ನು ಒಪ್ಪಿಕೊಳ್ಳಲಾರದೆ ಸ್ಥಿಮಿತ ಕಳೆದುಕೊಂಡ ಅವ್ವನನ್ನು ಸಂಭಾಳಿಸುವ ದೊಡ್ಡ ಸವಾಲು ಬೇರೆ. ಹೀಗಿರಲಾಗಿ ಲಕ್ಷ್ಮಿಯ ಸಾವಿನ ಸುದ್ದಿ ಯಾರಿಗೆ ತಿಳಿಯಿತು, ಯಾರಿಗೆ ತಿಳಿಯಲಿಲ್ಲ ಎನ್ನುವ ವಿಚಾರವಾಗಿ ಮನೆಯವರಾರಿಗೂ ಗ್ಯಾನವೇ ಇರಲಿಲ್ಲ. 

ಲಕ್ಷ್ಮಿ ಸತ್ತ ಐದನೇ ದಿನಕ್ಕೆ ಜೋಗತಿ ಕಟ್ಟೆಯ ಸಾಹುಕಾರನ ಹೆಂಡತಿ ಪಾರ್ವತಿ, ಸೊಸೆ ಮದುವೆ ಹೊತ್ತಿಗೆ ರವಿಕೆ ಹೊಲಿಸಿಕೊಂಡು ತಯಾರಾಗಲೆಂದು ಬಯಸಿ, ತಾನು ಆಸೆ ಪಟ್ಟು  ತರಿಸಿದ್ದ ಕಂಚಿಯ ಧಾರೆ ಸೀರೆಯನ್ನು ಸೊಸೆಗೆ ತಲುಪಿಸಿ ಬರಲೆಂದು, ಮಗ ದೇವರಾಜ ಮತ್ತು  ತಮ್ಮ ರಾಯಣ್ಣನನ್ನು ನಾರಿಪುರಕ್ಕೆ ಕಳುಹಿಸಿದಳು.

ಊರಿಗೆ ಯಾವುದಾದರೂ ಹೊಸ ಕಮಾನಿನ ಗಾಡಿ ಬಂತೆಂದರೆ ಬಾಗಿಲ ಬಳಿ ಓಡಿ ಬಂದು ಇಣುಕಿ ನೋಡುತ್ತಿದ್ದ ನಾರಿಪುರದ ಹೆಂಗಸರು, ಮಕ್ಕಳು ಅಂದು ಕೂಡ ಕುತೂಹಲದಿಂದ ಬಾಗಿಲ ಬಳಿ ಬಂದು ಇಣುಕಿದರು. ಕೊರಳಲ್ಲಿ ತಳತಳಿಸುತ್ತಿದ್ದ ಕಿರುಬೆರಳ ಗಾತ್ರದ ಚಿನ್ನದ ಸರ, ಎರಡೂ ಕೈ ಬೆರಳುಗಳಿಗೂ ಏರಿಸಿದ್ದ ಹರಳಿನುಂಗುರ, ತೊಟ್ಟ ಗರಿಗರಿ ಬಣ್ಣದ ಅಂಗಿ,  ಬಿಸಿಲ ಜಳಕ್ಕೆ ಕೆಂಪಾದ ದುಂಡನೆಯ ಕೆನ್ನೆ, ಅಬ್ಬಾ… ಲಕ್ಷ್ಮಿಗೆ ಹೇಳಿ ಮಾಡಿಸಿದಂತೆ ಈಡು ಜೋಡಾಗಿದ್ದ ಆ ಸ್ಪುರದ್ರೂಪಿ  ಹುಡುಗ  ಒಂದು ಗಳಿಗೆ ನೋಡುಗರನ್ನೇ ಮೈ ಮರೆಸಿ ಬಿಟ್ಟಿದ್ದ. ಚಾವಟಿ ಹಿಡಿದು  ಎತ್ತುಗಳನ್ನು ನಿಯಂತ್ರಿಸುತ್ತಿದ್ದ  ಅವನು  ನೋಡುತ್ತಿದ್ದವರ ಕಣ್ಣೋಟಕ್ಕೆ ಸಂಕೋಚ ಪಟ್ಟು  ” ಹೋಯ್  ಹೋಯ್ ಅರ್ರ ಅರ್ರ” ಎಂದು ಸದ್ದು ಮಾಡಿ ಎತ್ತುಗಳತ್ತ ಮೆಲ್ಲನೆ ಚಾವಟಿ ಬೀಸಿದ. ವಾಸ್ತವಕ್ಕಿಳಿದ ಹೆಂಗಸರ  ಕಣ್ಣಂಚುಗಳಲ್ಲಿ ತಮಗೆ ಗೊತ್ತಿಲ್ಲದಂತೆ ನೀರಾಡಿ ಹಾಗೆ ಮೆಲ್ಲಗೆ ಒಳಸರಿದು ಹೋದರು.

ನೊಗ ಇಳಿಸಿ ಎತ್ತುಗಳನ್ನು ಅಲ್ಲೇ ಬೀದಿಯ ಬದಿಗಿದ್ದ ಒಂದು ಸಣ್ಣ ಮರಕ್ಕೆ ಕಟ್ಟಿ, ಲಕ್ಷ್ಮಿಯನ್ನು ಕಾಣುವ ಕಾತರ ಹೊತ್ತು ಬಾಗಿಲಿಗೆ ಬಂದ ದೇವರಾಜನಿಗೆ ತುಸು ನಿರಾಸೆಯಾಗಿತು. ತಿಂಗಳ ಹಿಂದೆ ತನ್ನ ಅವ್ವನೊಂದಿಗೆ ಹೀಗೆ ಬಂದಾಗ, ಮನೆಯವರೆಲ್ಲ ಹೊರಗೆ ನಿಂತು ಅವನ ಕಾಲಿಗೆ ನೀರೆರೆದು ಸಂಭ್ರಮದಿಂದ ಒಳಗೆ ಕರೆದು ಕೊಂಡು ಹೋಗಿದ್ದರು. ಇಂದು ಎದುರು ಬಂದು ನಿಂತರು ಒಳಗೆ ಕುಳಿತ ಯಾರೊಬ್ಬರು “ಈಗ ಬಂದಪ್ಪ ಅಂತ್ಲೂ ಕೇಳ್ಲಿಲ್ವಲ್ಲ” ಎಂದು ಬೇಸರಗೊಂಡ. ಇದನ್ನೆಲ್ಲಾ ನಿಭಾಯಿಸ ಬೇಕಾಗಿದ್ದ  ಅಪ್ಪ  “ಅಯ್ಯೋ…. ನಾವು ಇವ್ರುಗೆ  ಒಂದ್ ಮಾತು ಹೇಳ್ಳಿಲ್ಲವಲ್ಲಪ್ಪ ಶಿವ್ನೆ” ಎಂದು ಪೇಚಾಡುತ್ತಾ  ಕೈಕೈ ಹಿಸುಕಿಕೊಳ್ಳ ತೊಡಗಿದ. ದೇವರಾಜನ ಜೊತೆಗೆ ಬಂದಿದ್ದ ಮಾವ ರಾಯಣ್ಣನಿಗೆ ಇವರೆಲ್ಲರ ನಡೆಯಿಂದ ಇರಿಸು ಮುರುಸುಂಟಾಗಿ “ಇದೇನು ಗೌಡ್ರೆ  ಅಳಿಯ ಬಂದಿದ್ದು ಕಣ್ಲಿಲ್ವೋ” ಎಂದು ದೊಡ್ಡ ಕಂಠದಲ್ಲಿ ಕೇಳಿಯೇ ಬಿಟ್ಟ.  ನಡು ಮನೆಯ ಒಂದು ಗೋಡೆ ಬದಿಯಲ್ಲಿ ಗಾಢ ನಿದ್ದೆಗೆ ಜಾರಿದ್ದ ಅವ್ವ, ಬೆಚ್ಚಿ “ಅವ್ವ ಲಕ್ಷ್ಮಿ ನನ್ ಬುಟ್ಟ್ ಹೋಗ್ಬೇಡ ನಾನು ಬಂದೆ ತಡಿ ಮಗ” ಎಂದು ದಡ್ಡನೆ ಮೇಲಿದ್ದು ಓಡಲು ಮುಂದಾದಳು. ಅಷ್ಟರಲ್ಲಿ ಪಕ್ಕದಲ್ಲಿಯೇ ಇದ್ದ ಅವ್ವನ ತಮ್ಮ ಮುತ್ತಣ್ಣ ಅವಳ ಕೈ ಜಗ್ಗಿ ಹಿಂದಕ್ಕೆಳೆದು “ಎಚ್ರಾಗು ಎಚ್ರಾಗು ಅಕ್ಕಯ್ಯ ಇಲ್ಲ್ ನೋಡು ಅಳಿಮಯ್ಯ ಬಂದವ್ರೆ ಮಾತಾಡ್ಸು” ಎಂದು ಹೇಳಿ ಅಲ್ಲೇ ತಂಬಿಗೆಯಲ್ಲಿದ್ದ ನೀರಿನಿಂದ ಅವ್ವನ ಮುಖ ವರೆಸಿದ.

ತುಸು ಎಚ್ಚರಗೊಂಡ ಅವ್ವ ದೇವರಾಜನ ಕಾಲ ಬಳಿ ಬಂದು ಕುಳಿತಳು. ಅವನ ಕೈಹಿಡಿದು ಕಣ್ಣಿಗೆ ಒತ್ತಿಕೊಳ್ಳುತ್ತಾ “ನನ್ನ ಮಗ್ಳು ಎಲ್ಲು ಹೋಗಿಲ್ಲ ಬಂದೇ ಬತ್ತಳೆ. ಎಲಾ ನೀವೊಂದ್ಸತಿ  ಕರ್ದುನೋಡಿ ಆಗ್ಲಾದ್ರು ಬತ್ತಳ ನೋಡನ” ಎಂದು ಅಂಗಲಾಚತೊಡಗಿದಳು. ಅವ್ವನ ಈ ಅಸಂಬದ್ಧ ಮಾತುಗಳಿಂದ ದಿಕ್ಕೆಟ್ಟವನಂತಾದ ದೇವರಾಜ,  ಪ್ರಶ್ನಾರ್ಥಕವಾಗಿ ಅಪ್ಪನ ಮುಖ ನೋಡಿದ. “ಮುತ್ತಣ್ಣ ಇವುಳುನ್ನ ವಳಿಕ್ ಕರ್ಕೊಂಡ್ ಹೋಗಪ್ಪ” ಎಂದು ಹೇಳಿ ಅವ್ವನನ್ನು ಒಳಕೋಣೆಗೆ ಕಳುಹಿಸಿದ. ತೊದಲುತ್ತಾ ಮಾತು ಆರಂಭಿಸಿದ ಅಪ್ಪ, ವಾರ ಎನ್ನುವುದರೊಳಗೆ ಮುಗಿದೇ ಹೋದ ಮಗಳ ದುರಂತ ಕತೆಯನ್ನು  ಸವಿವರವಾಗಿ ಹೇಳಿ ಬಿಕ್ಕುತ್ತಾ ಕುಳಿತುಬಿಟ್ಟ.

 ಇದೆಲ್ಲವನ್ನು ಕೇಳಿ ಆಘಾತಕ್ಕೊಳಗಾದ ದೇವರಾಜ “ಚೂರು ಇತ್ಲು ಕಡಿಗ್ ಹೋಗ್ ಬತ್ತಿನಿ ಮಾವಯ್ಯ” ಎಂದು ಹೇಳಿ ಹಿತ್ತಲಿಗೆ ಹೋಗಿ  ಎದೆಯ ಭಾರ ಇಳಿಯುವವರೆಗೂ ಅತ್ತು, ಮುಖ ತೊಳೆದು ಕೊಂಡು ಒಳಬಂದ. ತನ್ನ ಅವ್ವ ಕೊಟ್ಟು ಕಳುಹಿಸಿದ್ದ ಸೀರೆಯ ಚೀಲವನ್ನು ಅಪ್ಪನ ಮುಂದೆ ಇಟ್ಟು “ಇದುನ್ನ್ ತಕ್ಕಳಿ ಮಾವಯ್ಯ ಲಕ್ಷ್ಮಿ ಗೆ ಅಂತ ಅವ್ವ ಕೊಟ್ಕಳ್ಸಿತ್ತು” ಎಂದು ಗದ್ಗದಿತನಾದ. ಅಪ್ಪ “ಅವಳೇ ಹೋದ್ಮೇಲೆ ಇದುನ್ನ ತಕ್ಕೊಂಡು ಏನ್ ಮಾಡಾನಪ್ಪ ಬ್ಯಾಡ ತಕ್ಕೊಂಡು ಹೋಗು”  ಎಂದು ಹೇಳಿ ಆ ಧಾರೆ ಸೀರೆಯನ್ನು ಹಿಂದಿರುಗಿಸಿ ಜೋಗತಿ ಕಟ್ಟೆಗೆ ಕಳುಹಿಸಿದ.

(ಮುಂದುವರೆಯುವುದು…)

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

You cannot copy content of this page

Exit mobile version