ಡಬ್ಬಲ್ ಇಂಜೀನ್ ಸರಕಾರದ ಕಲ್ಪನೆ ನಮ್ಮ ಫೆಡರಲ್ ಸ್ಟ್ರಕ್ಚರನ್ನು ಗಟ್ಟಿ ಮಾಡುವ ಕಲ್ಪನೆ ಅಲ್ಲ. ಏಕೆಂದರೆ ರಾಜ್ಯದ ಜನರು ಬಿಜೆಪಿಯೇತರ ಪಕ್ಷವನ್ನು ಬೆಂಬಲಿಸಿದರೆ ಆ ಪಕ್ಷದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಬಿಡುವುದಿಲ್ಲ ಎನ್ನುವ ಬೆದರಿಕೆ ಈ ಕಲ್ಪನೆಯಲ್ಲಿದೆ. -ಡಾ. ಎಂ ಚಂದ್ರ ಪೂಜಾರಿ
ಡಬ್ಬಲ್ ಇಂಜೀನ್ ಸರಕಾರದ ಕಲ್ಪನೆ ಬಿಜೆಪಿ ಕೊಡುಗೆ. ಈ ಕುರಿತು ನಡೆಯುವ ಚರ್ಚೆಗಳಲ್ಲಿ ಮೂರು ನಿಲುವುಗಳು ಮುನ್ನಲೆಗೆ ಬಂದಿವೆ. ಒಂದು, ಬಿಜೆಪಿ ನಿಲುವು. ಅದೇನೆಂದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಆಡಳಿತ ಇದ್ದರೆ ಕೇಂದ್ರದಿಂದ ಹೆಚ್ಚಿನ ನೆರವು, ಸಂಪನ್ಮೂಲಗಳು ರಾಜ್ಯಕ್ಕೆ ಹರಿದು ಬರಬಹುದೆನ್ನುವ ನಿಲುವು. ಎರಡು, ಹಣಕಾಸು ಸಮಿತಿ ನಿರ್ದಿಷ್ಟ ಮಾನದಂಡ ಬಳಸಿಕೊಂಡು ಕೇಂದ್ರ ಮತ್ತು ರಾಜ್ಯಗಳ ಪಾಲನ್ನು ಮತ್ತು ಪ್ರತಿ ರಾಜ್ಯದ ಪಾಲನ್ನು ನಿರ್ಣಯಿಸುವುದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದ ಕೂಡಲೇ ರಾಜ್ಯಕ್ಕೆ ಹೆಚ್ಚಿನ ಸಂಪನ್ಮೂಲ ಹರಿದು ಬರುವುದಿಲ್ಲ. ಮೂರು, ಗವರ್ನರ್ ಗಳ ಕಿರುಕುಳಗಳು, ಎಂಎಲ್ಎಗಳನ್ನು ಖರೀದಿಸಿ ವಿರೋಧಿ ಪಕ್ಷವನ್ನು ಅಧಿಕಾರದಿಂದ ಇಳಿಸುವುದು, ಸಿಬಿಐ, ಇಡಿ ದಾಳಿ ಇತ್ಯಾದಿ ಸಂವಿಧಾನೇತರ ಕಿರುಕುಳಗಳನ್ನು ಡಬ್ಬಲ್ ಇಂಜೀನ್ ಸರಕಾರ ತಪ್ಪಿಸಬಹುದೆನ್ನುವ ನಿಲುವು. ಈ ನಿಲುವುಗಳನ್ನು ಲೇಖನದಲ್ಲಿ ವಿಶ್ಲೇಷಿಸಿದ್ದೇನೆ.
ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಸೆಂಟ್ರಲ್ ಜಿಎಸ್ಟಿ, ಸೆಂಟ್ರಲ್ ಎಕ್ಸೈಸ್, ಕಸ್ಟಮ್ಸ್ ಇತ್ಯಾದಿ ಮೂಲಗಳಿಂದ ಕೇಂದ್ರ ಸಂಪನ್ಮೂಲ ಸಂಗ್ರಹಿಸುತ್ತದೆ. ಇವೆಲ್ಲ ರಾಜ್ಯಗಳಿಂದಲೇ ಬರುವ ಆದಾಯಗಳು. ಆದುದರಿಂದ ಇದರಲ್ಲಿ ಪಾಲು ಪಡೆಯುವುದು ರಾಜ್ಯಗಳ ಹಕ್ಕು. ಇದೇ ರೀತಿ ಇದರಲ್ಲಿ ಪಾಲು ಪಡೆಯಲು ಒಂದೇ ಪಕ್ಷದ ಸರಕಾರಗಳು ರಾಜ್ಯ ಮತ್ತು ಕೇಂದ್ರದಲ್ಲಿರುವ ಅವಶ್ಯಕತೆ ಇಲ್ಲ. ಏಕೆಂದರೆ ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯ ಮತ್ತು ಕೇಂದ್ರದ ಪಾಲನ್ನು ಹಣಕಾಸು ಸಮಿತಿ ತೀರ್ಮಾನಿಸುತ್ತಿದೆ. ಹಣಕಾಸು ಸಮಿತಿ ಸಂವಿಧಾನದ ಸೃಷ್ಟಿ. 5 ವರ್ಷಕ್ಕೊಮ್ಮೆ ಹಣಕಾಸು ಸಮಿತಿಯನ್ನು ಕೇಂದ್ರ ಸರಕಾರ ನೇಮಿಸುತ್ತದೆ. ಇದು ಕೇಂದ್ರ ಸಂಗ್ರಹಿಸುವ ಸಂಪನ್ಮೂಲದಲ್ಲಿ ರಾಜ್ಯಗಳ ಪಾಲನ್ನು ಮಾತ್ರ ನಿರ್ಣಯಿಸುವುದಲ್ಲ ಪ್ರತಿ ರಾಜ್ಯದ ಪಾಲನ್ನು ನಿರ್ಧರಿಸುತ್ತದೆ.
ಬಿಜೆಪಿಯ ತಂತ್ರಗಳು
2015ರವರೆಗೆ ಕೇಂದ್ರ ಸಂಗ್ರಹಿಸುವ ಸಂಪನ್ಮೂಲದಲ್ಲಿ ಶೇ.32ನ್ನು ರಾಜ್ಯಗಳಿಗೆ ಹಂಚಲಾಗುತ್ತಿತ್ತು. 14ನೇ ಹಣಕಾಸು ಸಮಿತಿ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲನ್ನು ಶೇ.32ರಿಂದ ಶೇ.42ಕ್ಕೆ ಏರಿಸಿತು. ಆದರೆ ಈ ಏರಿಕೆಯನ್ನು ಕೇಂದ್ರದ ಬಿಜೆಪಿ ಸರಕಾರ ಇಷ್ಟಪಡಲಿಲ್ಲ. ಹಾಗೆಂದು ಹಣಕಾಸು ಸಮಿತಿ ತೀರ್ಮಾನವನ್ನು ಬದಲಾಯಿಸುವಂತಿಲ್ಲ. ಆದುದರಿಂದ ರಾಜ್ಯಗಳ ಪಾಲನ್ನು ಹಿಂದಿನ ಪ್ರಮಾಣದಲ್ಲೇ (ಶೇ.32) ಇರಿಸಿಕೊಳ್ಳಲು ಕೇಂದ್ರ ಬೇರೆ ದಾರಿ ಹುಡುಕಿತು. ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಎರಡು ಪಾಲಿದೆ. ಒಂದು ಮೂಲ ತೆರಿಗೆ ಮತ್ತೊಂದು ಸೆಸ್ ಮತ್ತು ಸರ್ಚಾರ್ಜ್. ಮೂಲ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಆದರೆ ಸೆಸ್ ಮತ್ತು ಸರ್ಚಾರ್ಜ್ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ. ರಾಜ್ಯಗಳೊಂದಿಗೆ ಹಂಚಿಕೊಳ್ಳದಿರುವ ಸೆಸ್ ಮತ್ತು ಸರ್ಚಾರ್ಜ್ನ್ನು ಕೇಂದ್ರ ಏರಿಸುತ್ತಾ ಹೋಯಿತು. 2017ರಲ್ಲಿ ಶೇ.13.5ರಷ್ಟಿದ್ದ ಸೆಸ್ 2020ರಲ್ಲಿ ಶೇ.20.2ಕ್ಕೆ ಏರಿತು. ಸೆಸ್ ಸಂಗ್ರಹ ಹೆಚ್ಚಾದುದರಿಂದ ರಾಜ್ಯಗಳಿಗೆ ವರ್ಗಾವಣೆ ಆಗುವ ಮೊತ್ತ ಬದಲಾಗಲಿಲ್ಲ. ಇವೆಲ್ಲ ರಾಜ್ಯಗಳಿಗೆ ಅನುಕೂಲ ಮಾಡುವ 14ನೇ ಹಣಕಾಸಿನ ಶಿಫಾರಸ್ಸನ್ನು ನಿರುಪಯುಕ್ತಗೊಳಿಸಲು ಬಿಜೆಪಿ ಬಳಸಿದ ತಂತ್ರಗಳು.
15ನೇ ಹಣಕಾಸು ಸಮಿತಿಯನ್ನು 2017ರಲ್ಲಿ ಬಿಜೆಪಿ ಸರಕಾರ ನೇಮಿಸಿದೆ. ಸಂಪನ್ಮೂಲವನ್ನು ರಾಜ್ಯಗಳ ನಡುವೆ ಹಂಚಲು ಬಳಸುವ ಮಾನದಂಡಲ್ಲಿ ಹಣಕಾಸು ಸಮಿತಿ ವಿಶೇಷ ಬದಲಾವಣೆ ಮಾಡಿಲ್ಲ. ರಾಜ್ಯದ ಜನಸಂಖ್ಯೆ, ವಿಸ್ತೀರ್ಣ, ಅರಣ್ಯ ಪ್ರದೇಶ, ಆದಾಯ ಅಂತರ, ತೆರಿಗೆ ಸಂಗ್ರಹ ಪ್ರಯತ್ನ ಮತ್ತು ಜನಸಂಖ್ಯೆ ನಿಯಂತ್ರಣ ಸಾಧನೆ ಇವೆಲ್ಲ ಹಿಂದಿನ ಹಣಕಾಸು ಸಮಿತಿಗಳು ಬಳಸಿದ ಮಾನದಂಡಗಳೇ. ಆದರೆ ಈ ಮಾನದಂಡಗಳನ್ನು ಪ್ರಯೋಗಿಸುವಾಗ ಹಿಂದಿನ ಸಮಿತಿಗಳು 1971ರ ಜನಸಂಖ್ಯೆಯನ್ನು ಬಳಸಿದರೆ 15ನೇ ಹಣಕಾಸು ಸಮಿತಿ ಕೇಂದ್ರದ ಸಲಹೆಯ ಮೇರೆಗೆ 2011ರ ಜನಸಂಖ್ಯೆಯನ್ನು ಬಳಸಿದೆ. ಕೇಂದ್ರ ಹಣಕಾಸು ಸಮಿತಿಯ ಈ ನಿರ್ಧಾರವನ್ನು ದಕ್ಷಿಣದ ರಾಜ್ಯಗಳು ಬಲವಾಗಿ ವಿರೋಧಿಸಿವೆ. ಏಕೆಂದರೆ 1971ರ ನಂತರ ಕೇಂದ್ರದ ಆದೇಶದನ್ವಯ ದಕ್ಷಿಣದ ರಾಜ್ಯಗಳು ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸಿದ್ದವು. ಆದುದರಿಂದ 1971ರಲ್ಲಿ ದಕ್ಷಿಣದ ಮೂರು ರಾಜ್ಯಗಳಲ್ಲಿ (ಕರ್ನಾಟಕ, ಕೇರಳ, ತಮಿಳುನಾಡು) ಶೇ.17ರಷ್ಟಿದ್ದ ಜನಸಂಖ್ಯೆ 2011ರ ವೇಳೆಗೆ ಶೇ.14ಕ್ಕೆ ಕುಸಿದಿತ್ತು. ಆದರೆ ಉತ್ತರದ ರಾಜ್ಯಗಳು ಅದರಲ್ಲೂ ಉತ್ತರಪ್ರದೇಶ. ಬಿಹಾರ್, ಮಧ್ಯಪ್ರದೇಶದಂತಹ ದೊಡ್ಡ ರಾಜ್ಯಗಳು ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸದಿದ್ದುದರಿಂದ 1971ರಲ್ಲಿ ಶೇ.28ರಷ್ಟಿದ್ದ ಜನಸಂಖ್ಯೆ 2011ರಲ್ಲಿ ಶೇ.31ಕ್ಕೆ ಏರಿದೆ.
ಅಷ್ಟು ಮಾತ್ರವಲ್ಲ ರಾಜ್ಯದ ಆದಾಯ ಅಂತರವನ್ನು ಮಾಪನ ಮಾಡಲು ರಾಜ್ಯದ ತಲಾ ಆದಾಯವನ್ನು ಬಳಸಲಾಗಿದೆ. ಆದಾಯವನ್ನು ರಾಜ್ಯದ ಜನಸಂಖ್ಯೆಯಿಂದ ಭಾಗಿಸಿ ತಲಾ ಆದಾಯ ನಿರ್ಧರಿಸುವುದು. ಅಂದರೆ ಇಲ್ಲೂ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಅವರ ರಾಜ್ಯದ ಆದಾಯ ಹೆಚ್ಚಿದ್ದರೂ ತಲಾ ಆದಾಯ ಕಡಿಮೆ ಆಯಿತು. ಉದಾಹರಣೆಗೆ 2022ರಲ್ಲಿ ಉತ್ತರಪ್ರದೇಶದ ಜಿಡಿಪಿ (ರೂ. 21.64 ಲಕ್ಷ ಕೋಟಿ) ಕರ್ನಾಟಕದ ಜಿಡಿಪಿಗಿಂತ (ರೂ.18.85 ಲಕ್ಷ ಕೋಟಿ) ಹೆಚ್ಚಿತ್ತು. ಆದರೆ ಜನಸಂಖ್ಯೆ ಕಾರಣದಿಂದ ಕರ್ನಾಟಕದ ತಲಾ ಜಿಡಿಪಿ (ರೂ.249957) ಉತ್ತರಪ್ರದೇಶದ ತಲಾ ಜಿಡಿಪಿಗಿಂತ (ರೂ.81500) ಮೂರು ಪಟ್ಟು ಹೆಚ್ಚಾಯಿತು. ಹೀಗೆ ಹಣಕಾಸು ಸಮಿತಿ ರಾಜ್ಯಗಳ ನಡುವೆ ಸಂಪನ್ಮೂಲ ಹಂಚಲು ಬಳಸುವ ಬಹುತೇಕ ಮಾನದಂಡಗಳು ಜನಸಂಖ್ಯೆ, ವಿಸ್ತೀರ್ಣ ಹೆಚ್ಚಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ರಾಜ್ಯಗಳ ಪರ ಇವೆ.
ಬಜೆಟ್ ಕೊರತೆಯನ್ನು ಸಾಲ ಮಾಡಿ ತುಂಬಿಸಿಕೊಳ್ಳುವ ಸ್ಥಿತಿ
ಇದೇ ಕಾರಣದಿಂದ ಕೇಂದ್ರದ ಸಂಪನ್ಮೂಲದಲ್ಲಿ ಉತ್ತರದ ಮೂರು ರಾಜ್ಯಗಳು ಶೇ.35ರಷ್ಟು ಪಾಲು ಪಡೆದರೆ ದಕ್ಷಿಣದ ಮೂರು ರಾಜ್ಯಗಳು ಕೇವಲ ಶೇ.9.6ರಷ್ಟು ಪಾಲು ಪಡೆದಿವೆ. ಆದರೆ ಇದೇ ಪ್ರಮಾಣದಲ್ಲಿ ಉತ್ತರದ ರಾಜ್ಯಗಳು ಕೇಂದ್ರದ ಬೊಕ್ಕಸಕ್ಕೆ ತೆರಿಗೆ ತುಂಬುವುದಿಲ್ಲ. 2021-22ರಲ್ಲಿ ದಕ್ಷಿಣದ ಮೂರು ರಾಜ್ಯಗಳು ಶೇ.20ರಷ್ಟು ನೇರ ತೆರಿಗೆ ತುಂಬಿದರೆ ಉತ್ತರದ ಮೂರು ರಾಜ್ಯಗಳು ಕೇವಲ ಶೇ.4ರಷ್ಟು ನೇರ ತೆರಿಗೆ ತುಂಬಿವೆ. ಅಂದರೆ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಪ್ರತಿ 1 ರೂಪಾಯಿ ತೆರಿಗೆಗೆ ಉತ್ತರ ಪ್ರದೇಶ ರೂ.1.79 ಹಿಂದಕ್ಕೆ ಪಡೆದರೆ ಕರ್ನಾಟಕ ಕೇವಲ 47 ಪೈಸೆ ಹಿಂದಕ್ಕೆ ಪಡೆಯುತ್ತಿದೆ. ಹೀಗೆ ಉತ್ತರದ ಹಿಂದುಳಿದ ರಾಜ್ಯಗಳ ಬಜೆಟ್ ಕೊರತೆಯನ್ನು ತುಂಬಲು ತಮ್ಮ ರಾಜ್ಯಗಳ ತೆರಿಗೆ ಬಳಕೆಯಾಗುವುದರಿಂದ ತಮ್ಮ ಬಜೆಟ್ ಕೊರತೆಯನ್ನು ಸಾಲ ಮಾಡಿ ತುಂಬಿಸಿಕೊಳ್ಳುವ ಸ್ಥಿತಿ ದಕ್ಷಿಣದ ರಾಜ್ಯಗಳಿಗೆ ಬಂದಿದೆ.
ಫೆಡರಲ್ ಸ್ಟ್ರಕ್ಚರನ್ನು ಅಲುಗಾಡಿಸುವ ಕಲ್ಪನೆ
ಇವೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಗಂಭೀರವಾಗಿ ಪ್ರಯತ್ನಿಸುವ ಬದಲು ಇವನ್ನೂ ಡಬ್ಬಲ್ ಇಂಜೀನ್ ಸರಕಾರದ ಹೆಸರಲ್ಲಿ ಓಟು ಬ್ಯಾಂಕ್ ಪೊಲಿಟಿಕ್ಸ್ ಗೆ ಬಿಜೆಪಿ ಬಳಸಿಕೊಳ್ಳುತ್ತಿದೆ. ಬಿಹಾರದಲ್ಲಿ, ತಮಿಳುನಾಡಲ್ಲಿ, ಆಂಧ್ರದಲ್ಲಿ ಬಿಜೆಪಿ ಸರಕಾರ ಇಲ್ಲ ಆದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇತ್ತು. ಆದರೆ ಮೇಲಿನ ರಾಜ್ಯಗಳು ಕೇಂದ್ರದ ಸಂಪನ್ಮೂಲದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಪಾಲು ಪಡೆದಿವೆ. ಹೀಗೆ ಡಬ್ಬಲ್ ಇಂಜೀನ್ ಸರಕಾರದಿಂದ ರಾಜ್ಯಗಳು ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಹೆಚ್ಚಿನ ಪಾಲು ಪಡೆಯಲು ಸಾಧ್ಯವಿಲ್ಲ ಎನ್ನುವುದು ಮೇಲಿನ ಮಾಹಿತಿಯಿಂದ ಸ್ಪಷ್ಟವಾಗಿದೆ. ಸಂಪನ್ಮೂಲ ವಿತರಣೆಯ ವಾಸ್ತವ ಹೀಗಿರುವಾಗ ಡಬ್ಬಲ್ ಇಂಜೀನ್ ಸರಕಾರದ ಕಲ್ಪನೆ ಮೂಲಕ ಬಿಜೆಪಿ ರಾಜ್ಯಗಳಿಗೆ ನೀಡುವ ಸಂದೇಶ ಏನು? ಡಬ್ಬಲ್ ಇಂಜೀನ್ ಸರಕಾರ ಇಲ್ಲವಾದರೆ ಕೇಂದ್ರದ ಸಂವಿಧಾನೇತರ ಕಿರುಕುಳಗಳನ್ನು (ಗವರ್ನರ್ ಕಿರುಕುಳ, ಎಂಎಲ್ಎಗಳ ಖರೀದಿ, ಸಿಬಿಐ, ಇಡಿ ದಾಳಿ ಇತ್ಯಾದಿಗಳನ್ನು) ತಪ್ಪಿಸಿಕೊಳ್ಳುವುದು ಕಷ್ಟ ಎನ್ನುವ ಸಂದೇಶವನ್ನು ಈ ಕಲ್ಪನೆ ರವಾನಿಸುತ್ತಿದೆ. ಆದುದರಿಂದ ಡಬ್ಬಲ್ ಇಂಜೀನ್ ಸರಕಾರದ ಕಲ್ಪನೆ ನಮ್ಮ ಫೆಡರಲ್ ಸ್ಟ್ರಕ್ಚರನ್ನು ಗಟ್ಟಿ ಮಾಡುವ ಕಲ್ಪನೆ ಅಲ್ಲ. ಏಕೆಂದರೆ ರಾಜ್ಯದ ಜನರು ಬಿಜೆಪಿಯೇತರ ಪಕ್ಷವನ್ನು ಬೆಂಬಲಿಸಿದರೆ ಆ ಪಕ್ಷದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಬಿಡುವುದಿಲ್ಲ ಎನ್ನುವ ಬೆದರಿಕೆ ಈ ಕಲ್ಪನೆಯಲ್ಲಿದೆ. ಆದುದರಿಂದ ಇದೊಂದು ಫೆಡರಲ್ ಸ್ಟ್ರಕ್ಚರನ್ನು ಅಲುಗಾಡಿಸುವ ಕಲ್ಪನೆ.
ಡಾ. ಎಂ ಚಂದ್ರ ಪೂಜಾರಿ
ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರು.