ದೆಹಲಿ: ಭಾರತದಲ್ಲಿ ತೆರಿಗೆ ಪಾವತಿಸದ ಆರ್‌ಎಸ್‌ಎಸ್‌ಗೆ (RSS) ಅಮೆರಿಕದಲ್ಲಿ ಲಾಬಿ ಮಾಡಲು ಸಾವಿರಾರು ಕೋಟಿ ರೂಪಾಯಿಗಳು ಎಲ್ಲಿಂದ ಬಂತು? ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಆರ್‌ಎಸ್‌ಎಸ್, ಸ್ಕ್ವೈರ್ ಪ್ಯಾಟನ್ ಬಾಗ್ಸ್ ಕಾರ್ಪೊರೇಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಸರ್ಕಾರದಲ್ಲಿ ತನಗೆ ಅನುಕೂಲಕರವಾದ ಕೆಲಸಗಳನ್ನು ಮಾಡಿಸಿಕೊಳ್ಳಲು 33 ಸಾವಿರ ಡಾಲರ್‌ಗಳೊಂದಿಗೆ (ಸುಮಾರು ₹2.75 ಕೋಟಿ) ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ಇದಕ್ಕೆ ಎಂ.ಎ. ಬೇಬಿ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಅಮೆರಿಕದಲ್ಲಿ ಆರ್‌ಎಸ್‌ಎಸ್ ಯಾವುದಕ್ಕಾಗಿ ಲಾಬಿ ಮಾಡುತ್ತಿದೆ? ಇಷ್ಟು ದೊಡ್ಡ ಮೊತ್ತದ ಹಣಕ್ಕೆ ಮೂಲಗಳು ಯಾವುವು?” ಎಂದು ಪ್ರಶ್ನಿಸಿದ್ದಾರೆ.
ದೇಶದ ವಿರೋಧ ಪಕ್ಷಗಳ ನಾಯಕರ ಮೇಲೆ ಪದೇ ಪದೇ ದಾಳಿ ಮಾಡುವ ಜಾರಿ ನಿರ್ದೇಶನಾಲಯ (ED) ಮತ್ತು ಭ್ರಷ್ಟಾಚಾರ ನಿಗ್ರಹ ದಳಗಳು (Anti-Corruption Agencies) ಆರ್‌ಎಸ್‌ಎಸ್ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಆರ್‌ಎಸ್‌ಎಸ್ ಕೆಲಸ ಮಾಡಿದೆ ಎಂದು ಸಂಬಂಧಿತ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ, ಆರ್‌ಎಸ್‌ಎಸ್ ಅಮೆರಿಕದಲ್ಲಿ ನೋಂದಾಯಿಸಲ್ಪಟ್ಟಿದೆಯೇ? ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರ್‌ಎಸ್‌ಎಸ್ ಸದಸ್ಯರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕು ಎಂದಿರುವ ಎಂ.ಎ. ಬೇಬಿ, “ಅವರು ಯಾರಿಗೆ ಹೆದರುತ್ತಿದ್ದಾರೆ?” ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
