ಚೆನ್ನೈ: ತಮಿಳುನಾಡು ಹಿಂದಿ ಭಾಷೆಯ ವಿರುದ್ಧವಿಲ್ಲ, ಆದರೆ ಬಲವಂತದ ಹೇರಿಕೆಯನ್ನು ಮಾತ್ರ ವಿರೋಧಿಸುತ್ತದೆ ಎಂದು ಅಲ್ಲಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಭಾಷೆಯ ದಮನದ ವಿರುದ್ಧ ದ್ರಾವಿಡ ಚಳುವಳಿಗಳು ಹುಟ್ಟಿಕೊಂಡವು ಎಂದು ಅವರು ಹೇಳಿದರು. ದಕ್ಷಿಣದ ರಾಜ್ಯಗಳಂತೆ ಉತ್ತರದ ರಾಜ್ಯಗಳಲ್ಲಿ ಚಲನಚಿತ್ರೋದ್ಯಮಗಳು ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಆಯಾ ರಾಜ್ಯಗಳು ತಮ್ಮದೇ ಭಾಷೆಯನ್ನು ರಕ್ಷಿಸಿಕೊಳ್ಳಲು ವಿಫಲವಾದರೆ ಹಿಂದಿ ಆ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅವರು ಮನೋರಮಾ ದಿನಪತ್ರಿಕೆ ಬಳಗ ಆಯೋಜಿಸಿದ್ದ ಕಲಾ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಅಣ್ಣಾದೊರೈ ಮತ್ತು ಕರುಣಾನಿಧಿಯಂತಹ ದ್ರಾವಿಡ ನಾಯಕರು ರಾಷ್ಟ್ರೀಯತೆ ಮತ್ತು ವೈಜ್ಞಾನಿಕ ವಿಧಾನವನ್ನು ಉತ್ತೇಜಿಸಲು ತಮಿಳು ಸಾಹಿತ್ಯವನ್ನು ವ್ಯಾಪಕವಾಗಿ ಬಳಸಿಕೊಂಡರು ಎಂದು ಉದಯನಿಧಿ ಹೇಳಿದರು. ಅದರಿಂದಾಗಿ ಜನರಲ್ಲಿ ಒಳ್ಳೆಯ ಮನ್ನಣೆ ಸಿಕ್ಕಿತು ಎಂದು ಸ್ಮರಿಸಿದರು. ಸಂಸ್ಕೃತಿ ಮತ್ತು ಭಾಷೆಯ ಪ್ರಾಬಲ್ಯದ ವಿರುದ್ಧ ಹುಟ್ಟಿಕೊಂಡ ಚಳವಳಿಯೇ ದ್ರಾವಿಡ ಚಳವಳಿ ಎಂದರು.
1930 ಮತ್ತು 1960 ರ ದಶಕಗಳಲ್ಲಿ, ಹಿಂದಿಯನ್ನು ಅಧಿಕೃತ ಭಾಷೆಯಾಗಿ ಗುರುತಿಸುವುದರ ವಿರುದ್ಧ ದ್ರಾವಿಡ ಚಳುವಳಿಗಳು ನಡೆದವು. ಈಗಲೂ ಹಿಂದಿ ಬಾರದ ರಾಜ್ಯಗಳಲ್ಲಿ ‘ರಾಷ್ಟ್ರೀಯವಾದಿಗಳು’ ಬಲವಂತವಾಗಿ ಹಿಂದಿ ಹೇರಲು ಯತ್ನಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಕ್ರಮಗಳು ದೇಶದ ಏಕತೆಗೆ ಭಂಗ ತರುತ್ತವೆ ಎಂದರು. ತಮಿಳುನಾಡು ಆರಂಭವಾದಾಗಿನಿಂದಲೂ ರಾಜಕೀಯ ಸಂದೇಶಗಳನ್ನು ಸಿನಿಮಾ ರೂಪದಲ್ಲಿ ರವಾನಿಸಲಾಗುತ್ತಿತ್ತು ಎಂದು ಉದಯನಿಧಿ ಹೇಳಿದ್ದಾರೆ.
ದಕ್ಷಿಣದಲ್ಲಿ ತಮಿಳು, ಮಲಯಾಳಂ ಚಿತ್ರಗಳಲ್ಲದೆ ತೆಲುಗು, ಕನ್ನಡ ಚಿತ್ರಗಳೂ ಉತ್ತಮವಾಗಿ ಓಡುತ್ತಿವೆ ಎಂದರು. ದಕ್ಷಿಣದಷ್ಟು ಉತ್ತರ ಭಾಗದಲ್ಲಿ ಸಿನಿಮಾ ಇಂಡಸ್ಟ್ರಿ ಇಲ್ಲದಿರುವುದರಿಂದ ಹಿಂದಿ ಸಿನಿಮಾಗಳು ಅಲ್ಲಿ ಆಳ್ವಿಕೆ ನಡೆಸುತ್ತಿವೆ ಎಂದರು. ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯ ಚಿತ್ರಗಳಿಗಿಂತ ಆ ಚಿತ್ರಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ ಎಂದರು. ಆಯಾ ರಾಜ್ಯಗಳು ತಮ್ಮ ಭಾಷೆ, ಸಂಸ್ಕೃತಿ, ಅಸ್ಮಿತೆಯನ್ನು ಕಾಪಾಡದಿದ್ದಲ್ಲಿ ನಷ್ಟವಾಗುತ್ತದೆ ಎಂದರು. ಒಂದು ದೇಶ, ಒಂದು ಚುನಾವಣೆ, ಒಂದು ಸಂಸ್ಕೃತಿ ಮತ್ತು ಒಂದು ಧರ್ಮವನ್ನು ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು. ನಮ್ಮದೇ ಭಾಷೆ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲು ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ ಎಂದರು.