ಸೌಜನ್ಯ ಪ್ರಕರಣ : ಸುಪ್ರೀಂ ಕೋರ್ಟ್ ಪ್ರಕಾರ ನೈಜ ಆರೋಪಿಗಳಿಂದ ‘ಲಾಭ’ ಪಡೆದ ಅಧಿಕಾರಿಗಳು ಯಾರು?

  • ತನಿಖೆಯ ವೈಫಲ್ಯವೇ ತನಿಖಾಧಿಕಾರಿಗಳಿಗೆ ‘ಪ್ರೀಮಿಯಂ’ ಒದಗಿಸಿತು! ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವ ಯಾರೂ ಗಮನಿಸದ ಪ್ರಶ್ನೆ..

ತನಿಖೆಯ ಆರಂಭಿಕ ತಪ್ಪುಗಳು ನಂತರದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ‘ಸಾಕ್ಷಿಯ ಕೊರತೆ’ಯಾಗಿ ಕಾಣಿಸುತ್ತವೆ. ಇದು ಸಾಮಾನ್ಯ ಲೋಪವಲ್ಲ. ನ್ಯಾಯ ವ್ಯವಸ್ಥೆಯ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಚಕ್ರ..” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಸೌಜನ್ಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇವಲ “ಮರುತನಿಖೆಗೆ ಆದೇಶ” ಎಂದು ಓದಿದರೆ ಈ ತೀರ್ಪಿನ ಅರ್ಧಕ್ಕಿಂತಲೂ ಕಡಿಮೆ ಅರ್ಥ ಮಾತ್ರ ನಮಗೆ ಸಿಗುತ್ತದೆ. ಈ ತೀರ್ಪಿನ ನಿಜವಾದ ಮಹತ್ವ ಮತ್ತೊಂದು ಕಡೆ ಇದೆ. ನ್ಯಾಯಾಲಯವು ತನಿಖೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡಿರುವುದಷ್ಟೇ ಅಲ್ಲ, ಆ ಲೋಪಗಳ ಪರಿಣಾಮವಾಗಿ ನ್ಯಾಯ ವ್ಯವಸ್ಥೆಯ ಮೇಲೆಯೇ ಯಾವ ರೀತಿಯ ಅನ್ಯಾಯ ಸಂಭವಿಸಿದೆ ಎಂಬುದನ್ನು ಅತ್ಯಂತ ಕಠಿಣ ಭಾಷೆಯಲ್ಲಿ ದಾಖಲಿಸಿದೆ.

ತೀರ್ಪಿನ ಪ್ಯಾರಾ 59ರಲ್ಲಿ ಸುಪ್ರೀಂ ಕೋರ್ಟ್ ಬಳಸಿರುವ ಒಂದು ವಾಕ್ಯ ಇಡೀ ಪ್ರಕರಣವನ್ನು ಹೊಸ ದೃಷ್ಟಿಕೋನದಿಂದ ನೋಡಲು ಕಾರಣವಾಗುತ್ತದೆ.
“The possibility of the real culprit(s) manipulating the investigation cannot be ruled out. Such lax and improper investigation gives premium to the Investigating Officers who failed to do their job correctly and diligently. Such lax and improper investigation gives premium to the Investigating Officers who failed to do their job correctly and diligently.”

ಅಂದರೆ, ‘ನಿಜವಾದ ಅಪರಾಧಿಗಳು ತನಿಖೆಯ ದಿಕ್ಕನ್ನೇ ತಮಗೆ ಅನುಕೂಲವಾಗುವಂತೆ ಬದಲಾಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಇಂತಹ ಸಡಿಲ ಮತ್ತು ಅಸಮರ್ಪಕ ತನಿಖೆ, ತಮ್ಮ ಕರ್ತವ್ಯವನ್ನು ಸರಿಯಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸದ ತನಿಖಾಧಿಕಾರಿಗಳಿಗೆ ಒಂದು ರೀತಿಯ ‘ಪ್ರೀಮಿಯಂ’ ಅಥವಾ ಲಾಭವನ್ನು ಒದಗಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತನಿಖೆಯ ವೈಫಲ್ಯವೇ ತನಿಖಾಧಿಕಾರಿಗೆ ಅನುಕೂಲವಾಗುವಂತಹ ವ್ಯವಸ್ಥೆಯ ಅಪಾಯವನ್ನು ನ್ಯಾಯಾಲಯ ಗುರುತಿಸಿದೆ. ತನಿಖೆ ಹಳ್ಳಹಿಡಿದರೆ ತನಿಖಾಧಿಕಾರಿಗೆ ಯಾವ ರೀತಿಯ ಲಾಭ ? ಯಾವ ರೀತಿಯ ಪ್ರೀಮಿಯಂ? ಏನದು ಅನುಕೂಲ? ಎಂಬುದನ್ನು ಸುಪ್ರಿಂ ಕೋರ್ಟ್ ಹೇಳಿಲ್ಲ. ನಾವು ಅರ್ಥ ಮಾಡಿಕೊಳ್ಳಬೇಕು.

ಸುಪ್ರಿಂ ಕೋರ್ಟ್​ ನ ಈ ಒಂದು ವಾಕ್ಯದ ಅರ್ಥವನ್ನು ಆಳವಾಗಿ ನೋಡಬೇಕು. ಮೊದಲ ತನಿಖಾಧಿಕಾರಿ ತಪ್ಪು ಮಾಡಿದರೆ, ಸಾಕ್ಷಿ ಸಂಗ್ರಹಿಸದಿದ್ದರೆ, ಸಿಸಿಟಿವಿ ಪಡೆಯದಿದ್ದರೆ, ಪ್ರಮುಖ ಸಾಕ್ಷಿಗಳನ್ನು ವಿಚಾರಿಸದಿದ್ದರೆ, ಡಿಎನ್‌ಎ ಸಾಕ್ಷಿಯನ್ನು ಸರಿಯಾಗಿ ಸಂರಕ್ಷಿಸದಿದ್ದರೆ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತನಿಖೆ ಮಾಡದಿದ್ದರೆ, ಕೆಲವು ವರ್ಷಗಳ ನಂತರ ಬರುವ ಮುಂದಿನ ತನಿಖಾ ತಂಡದ ತನಿಖಾಧಿಕಾರಿಗಳು “ಸಾಕ್ಷಿ ಸಿಗುತ್ತಿಲ್ಲ” ಎಂದು ಹೇಳಲು ಸುಲಭವಾಗುತ್ತದೆ. ಈ ಮೂಲಕ ತನಿಖಾಧಿಕಾರಿಗಳು ಲಾಭಮಾಡಿಕೊಳ್ಳುತ್ತಾರೆ, ಇದೇ ‘ಪ್ರೀಮಿಯಂ’ !.

ಅಂದರೆ, ತಪ್ಪಾಗಿ ತನಿಖೆ ಮಾಡಿದವರ ತಪ್ಪಿನಿಂದಲೇ ನಂತರ ಸತ್ಯವನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಆ ಕಷ್ಟವನ್ನು ಮತ್ತೆ ಅದೇ ತನಿಖಾಧಿಕಾರಿಯ ವಿರುದ್ಧ ಬಳಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತನಿಖೆಯ ಆರಂಭಿಕ ಹಂತದಲ್ಲಿ ಮಾಡಬೇಕಿದ್ದ ಕೆಲಸವನ್ನು ಮಾಡದೇ ಇರುವುದರಿಂದ ಉಂಟಾದ ನಷ್ಟವನ್ನು ನಂತರ “ಈಗ ಸಾಕ್ಷಿ ಎಲ್ಲಿದೆ?” ಎಂಬ ಪ್ರಶ್ನೆಯಿಂದ ಮುಚ್ಚಿಹಾಕುವ ಅಪಾಯ ಇದೆ.
ಸುಪ್ರೀಂ ಕೋರ್ಟ್ ಇದೇ ಕಾರಣಕ್ಕೆ ತನಿಖಾಧಿಕಾರಿಗಳ ವೈಫಲ್ಯವನ್ನು ಕೇವಲ ಪ್ರೊಸೀಜರಲ್ ಲ್ಯಾಪ್ಸ್​ ಎಂದು ನೋಡಿಲ್ಲ.

ಈ ಪ್ರಕರಣದಲ್ಲಿ ಮೊದಲು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದರು. ನಂತರ CID ತನಿಖೆ ನಡೆಸಿತು. ಬಳಿಕ CBI ತನಿಖೆ ನಡೆಸಿತು. ಆದರೆ ಮೂರು ತನಿಖಾ ಹಂತಗಳ ನಂತರವೂ ಸೌಜನ್ಯಳ ಸಾವಿಗೆ ಸ್ಪಷ್ಟವಾದ ಆರೋಪಿಯನ್ನು ಹೆಸರಿಸಿ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಮೂರು ತನಿಖಾ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಪರಿಶೀಲಿಸದಿದ್ದ ಕೆಲವು ಸುಳಿವುಗಳನ್ನು 2026ರಲ್ಲಿ ರಾಜ್ಯ ಸರ್ಕಾರವೇ ಮೂರು ವಾರಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಯಿತು ಎಂಬ ಸಂಗತಿಯನ್ನು ವಿಶೇಷವಾಗಿ ದಾಖಲಿಸಿದೆ.

ಪ್ಯಾರಾ 48ರಲ್ಲಿ ನ್ಯಾಯಾಲಯವು DNA ತಜ್ಞ ವಿನೋದ್ ಜೆ. ಲಕ್ಕಪ್ಪನ್ ಅವರ ಸಾಕ್ಷ್ಯವನ್ನು ಗಮನಿಸಿದೆ. ಸೌಜನ್ಯಳ ಚೂಡಿದಾರ್ ಟಾಪ್‌ನಲ್ಲಿದ್ದ ಕೂದಲಿನ ಮಾದರಿಗಳಲ್ಲಿ ಆರೋಪಿಯ ಕೂದಲಿನ ಜೊತೆಗೆ ಇನ್ನೊಬ್ಬ ಪುರುಷನ ಕೂದಲು ಕೂಡ ಪತ್ತೆಯಾಗಿತ್ತು. ಅನುಮಾನಾಸ್ಪದ ವ್ಯಕ್ತಿಗಳನ್ನು ಪತ್ತೆಹಚ್ಚಿದರೆ ಅವರ ರಕ್ತದ ಮಾದರಿಯನ್ನು ಪಡೆದು ಈಗಲೂ ಆ ಕೂದಲಿನೊಂದಿಗೆ DNA ಹೋಲಿಕೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಕಾರಣದಿಂದ “ಗೋಲ್ಡನ್ ಅವರ್‌ನಲ್ಲಿ ಸಿಗದ ಸಾಕ್ಷಿ ಈಗ ಸಿಗುವುದಿಲ್ಲ” ಎಂಬ ಹೈಕೋರ್ಟ್‌ನ ನಿಲುವು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ತನಿಖೆಯ ಮೊದಲ ಹಂತದಲ್ಲಿ ಸಂಗ್ರಹಿಸಿದ ವೈಜ್ಞಾನಿಕ ಸಾಕ್ಷಿ ಇನ್ನೂ ಜೀವಂತವಾಗಿದ್ದರೆ, ಆಗಿನ ತನಿಖೆ ಏಕೆ ಆ ಸಾಕ್ಷಿಯ ದಿಕ್ಕಿನಲ್ಲಿ ಸಾಗಲಿಲ್ಲ? ಹೀಗೆ ಮಾಡುವುದರಿಂದ ತನಿಖಾಧಿಕರಿಗಳಿಗೆ ಏನು ಲಾಭ ? ಏನೋ ಪ್ರೀಮಿಯಂ ಇರಬೇಕಲ್ಲವೇ ?

ಸೆಷನ್ಸ್ ಕೋರ್ಟ್ ದಾಖಲಿಸಿರುವ ಲೋಪಗಳನ್ನೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ವಿವರವಾಗಿ ಗಮನಿಸಿದೆ. ಅಪರಾಧ ನಡೆದ ಸ್ಥಳದ ಸಮೀಪದ CCTV ದೃಶ್ಯಗಳನ್ನು ಸಂಗ್ರಹಿಸಿರಲಿಲ್ಲ. ಮೊದಲ ತನಿಖಾಧಿಕಾರಿ ಸಂಗ್ರಹಿಸಿದ್ದ ಮೊಬೈಲ್ ಟವರ್ ಡಂಪ್ ಮಾಹಿತಿಯನ್ನು ಮುಂದಿನ ತನಿಖಾಧಿಕಾರಿಗೆ ಹಸ್ತಾಂತರಿಸಿರಲಿಲ್ಲ. ಸೌಜನ್ಯಳ ಛತ್ರಿ, ಚಪ್ಪಲಿ, ಒಳಉಡುಪುಗಳು ಪತ್ತೆಯಾಗಿರಲಿಲ್ಲ. ಸ್ಥಳದ ವಿಡಿಯೋಗ್ರಫಿ ಮಾಡಲಾಗಿರಲಿಲ್ಲ. ಪೋಸ್ಟ್‌ಮಾರ್ಟಂ ಅನ್ನು ವಿಡಿಯೋಗ್ರಾಫ್ ಮಾಡಿರಲಿಲ್ಲ. ಸ್ಥಳದಲ್ಲಿ ಸಿಕ್ಕ ಚೀಟಿಯನ್ನು ವಶಪಡಿಸಿಕೊಂಡು ಹಸ್ತಾಕ್ಷರ ತಜ್ಞರ ಪರಿಶೀಲನೆಗೆ ಕಳುಹಿಸಿರಲಿಲ್ಲ. ಇವೆಲ್ಲವೂ ತೀರ್ಪಿನಲ್ಲಿ ದಾಖಲಾದ ಅಂಶಗಳು. ಆದರೆ ಇವುಗಳಲ್ಲಿಯೇ ಅತ್ಯಂತ ಗಂಭೀರವಾದದ್ದು vaginal swab. ಸೆಷನ್ಸ್ ಕೋರ್ಟ್ ದಾಖಲಿಸಿದಂತೆ, ಅತ್ಯಂತ ಪ್ರಮುಖ ವೈದ್ಯಕೀಯ ಸಾಕ್ಷಿಯಾಗಬಹುದಾಗಿದ್ದ vaginal swab ಸರಿಯಾಗಿ ಸಂರಕ್ಷಿಸದ ಕಾರಣ DNA ಪರೀಕ್ಷೆಗೆ ಯೋಗ್ಯವಾಗಿರಲಿಲ್ಲ. ತೀರ್ಪಿನಲ್ಲೇ ತಜ್ಞರ ಸಾಕ್ಷಿಯನ್ನು ಉಲ್ಲೇಖಿಸಿ, ಅದನ್ನು ಸರಿಯಾಗಿ ಒಣಗಿಸಿ ಪ್ಯಾಕ್ ಮಾಡಬೇಕಾದ ವಿಧಾನ ವೈದ್ಯರಿಗೆ ತಿಳಿದಿರಬೇಕಾಗಿತ್ತು ಎಂದು ದಾಖಲಿಸಲಾಗಿದೆ. ಸೌಜನ್ಯ ಪ್ರಕರಣದಲ್ಲಿ ಆ ಸಾಕ್ಷಿ ಪರೀಕ್ಷೆಗೆ ಯೋಗ್ಯವಾಗದಿರುವುದರಿಂದ ಆರೋಪಿಯನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ವೈಜ್ಞಾನಿಕ ಮಾರ್ಗವೇ ಮುಚ್ಚಿಹೋಯಿತು. ಇಲ್ಲಿ “ಪ್ರೀಮಿಯಂ” ಎಂಬ ಪದದ ನಿಜವಾದ ಅರ್ಥ ಮತ್ತೆ ಎದುರಾಗುತ್ತದೆ.

ಒಬ್ಬ ತನಿಖಾಧಿಕಾರಿ ಸಾಕ್ಷಿ ಸಂಗ್ರಹಿಸದೆ ಹೋದರೆ, ಆ ಸಾಕ್ಷಿ ನಂತರ ನ್ಯಾಯಾಲಯದಲ್ಲಿ ಲಭ್ಯವಿರುವುದಿಲ್ಲ. ಒಬ್ಬ ವೈದ್ಯಕೀಯ ಅಧಿಕಾರಿ ಸಾಕ್ಷಿಯನ್ನು ಸರಿಯಾಗಿ ಸಂರಕ್ಷಿಸದಿದ್ದರೆ, ವರ್ಷಗಳ ನಂತರ ಅದನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಒಬ್ಬ ತನಿಖಾಧಿಕಾರಿ CCTV ಪಡೆಯದಿದ್ದರೆ, ಅದರ ಅವಧಿ ಮುಗಿದ ಮೇಲೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಅಂದರೆ ತನಿಖೆಯ ಆರಂಭಿಕ ತಪ್ಪುಗಳು ನಂತರದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ‘ಸಾಕ್ಷಿಯ ಕೊರತೆ’ಯಾಗಿ ಕಾಣಿಸುತ್ತವೆ. ಇದು ಸಾಮಾನ್ಯ ಲೋಪವಲ್ಲ. ನ್ಯಾಯ ವ್ಯವಸ್ಥೆಯ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಚಕ್ರ. ಇದನ್ನು ತನಿಖಾಧಿಕಾರಿಗಳು ಯಾಕೆ ಸೃಷ್ಟಿಸಿಕೊಳ್ಳುತ್ತಾರೆ? ಅವರಿಗೇನು ಪ್ರೀಮಿಯಂ ಸಿಗುತ್ತದೆ ?

ಈ ಪ್ರಕರಣದಲ್ಲಿ ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಸೌಜನ್ಯಳ ಕುಟುಂಬ ಮತ್ತು ಸ್ಥಳೀಯರು ಆರಂಭದಿಂದಲೇ ಕೆಲವು ವ್ಯಕ್ತಿಗಳ ಹೆಸರುಗಳನ್ನು ಅನುಮಾನಾಸ್ಪದವಾಗಿ ಹೇಳಿದ್ದರು. ಆದರೆ ಸೆಷನ್ಸ್ ಕೋರ್ಟ್ ದಾಖಲಿಸಿದಂತೆ, ಆ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ ಅಥವಾ ಅವರ ವಿರುದ್ಧ ಆರೋಪಗಳ ಬಗ್ಗೆ ಸಮರ್ಪಕ ತನಿಖೆ ನಡೆಸಲಾಗಿದೆ ಎಂಬ ದಾಖಲೆ ಇರಲಿಲ್ಲ. ಅಂದರೆ ತನಿಖೆಯ ಸಮಸ್ಯೆ ಕೇವಲ “ತಪ್ಪು ವ್ಯಕ್ತಿಯನ್ನು ಬಂಧಿಸಿದರು” ಎನ್ನುವುದಲ್ಲ. ಒಬ್ಬ ವ್ಯಕ್ತಿಯನ್ನು ಆರೋಪಿ ಮಾಡುವುದಕ್ಕಿಂತ ಮೊದಲು ಉಳಿದ ಸಾಧ್ಯತೆಗಳನ್ನು ತನಿಖೆ ಮಾಡಲಾಗಿದೆಯೇ? ಸಂತೋಷ್ ರಾವ್ ಬಗ್ಗೆ ತನಿಖಾಧಿಕಾರಿಗಳಿಗೆ ಅನುಮಾನ ಬಂದರೂ ಇನ್ಯಾರೋ ಇರಬೇಕು ಎಂಬ ಅನುಮಾನಗಳೂ ತನಿಖಾಧಿಕಾರಿಗೆ ಬರಬೇಕು. ಇದು ಕ್ರಿಮಿನಲ್ ತನಿಖೆಯ ಮೂಲ ಕ್ರಮ. ಈ ಮೂಲ ಕ್ರಮವನ್ನೇ ತನಿಖಾಧಿಕಾರಿಗಳು ಮರೆತಿದ್ದು ಯಾಕೆ ? ಯಾವ ಲಾಭಕ್ಕಾಗಿ ?

ಇದಕ್ಕಾಗಿಯೇ ತೀರ್ಪಿನ ಪ್ಯಾರಾ 54ರಲ್ಲಿ ನ್ಯಾಯಾಲಯವು fair investigation ಕೂಡ ಸಂವಿಧಾನದ Article 21 ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕಿನ ಭಾಗ ಎಂದು ಪುನರುಚ್ಚರಿಸಿದೆ. ನ್ಯಾಯಯುತ ವಿಚಾರಣೆ ಮಾತ್ರವಲ್ಲ, ನ್ಯಾಯಯುತ ತನಿಖೆಯೂ ಅಗತ್ಯ. ತನಿಖೆ fair, transparent ಮತ್ತು judicious ಆಗಿರಬೇಕು ಎಂದು ನ್ಯಾಯಾಲಯ ದಾಖಲಿಸಿದೆ. ಇದು ಅತ್ಯಂತ ಮಹತ್ವದ ಕಾನೂನು ದೃಷ್ಟಿಕೋನ. ಏಕೆಂದರೆ ಸಾಮಾನ್ಯವಾಗಿ ನ್ಯಾಯಾಲಯದ ವಿಚಾರಣೆಯೇ “ನ್ಯಾಯ”ದ ಕೇಂದ್ರ ಎಂದು ನಾವು ಭಾವಿಸುತ್ತೇವೆ. ಆದರೆ ಸುಪ್ರೀಂ ಕೋರ್ಟ್ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ವಿಚಾರಣೆ ನ್ಯಾಯಯುತವಾಗುವುದಕ್ಕೂ ಮೊದಲು ತನಿಖೆಯೇ ನ್ಯಾಯಯುತವಾಗಿರಬೇಕು. ತನಿಖೆಯಲ್ಲೇ ಸತ್ಯವನ್ನು ಹುಡುಕುವ ಪ್ರಕ್ರಿಯೆ ವಕ್ರವಾದರೆ, ನಂತರ ನ್ಯಾಯಾಲಯದಲ್ಲಿ ಎಷ್ಟು ನ್ಯಾಯಯುತ ವಿಚಾರಣೆ ನಡೆಸಿದರೂ ಸತ್ಯದ ಒಂದು ಭಾಗ ಕಳೆದುಹೋಗಿರಬಹುದು. ಈ ರೀತಿ ತನಿಖೆಯನ್ನೇ ವಕ್ರಗೊಳಿಸಿದ್ದು ಯಾಕೆ ?

ತೀರ್ಪಿನ ಪ್ಯಾರಾ 58 ಮತ್ತೊಂದು ಮಹತ್ವದ ವಿಷಯವನ್ನು ಹೇಳುತ್ತದೆ. ಅಪರಾಧ ಪ್ರಕರಣದಲ್ಲಿ ಬಲಿಪಶುವನ್ನು ನ್ಯಾಯಾಂಗ ಪ್ರಕ್ರಿಯೆಯ “ಹೊರಗಿನ ವ್ಯಕ್ತಿ”ಯಂತೆ ನೋಡಲು ಸಾಧ್ಯವಿಲ್ಲ. criminal jurisprudence ಕಾಲಕ್ರಮೇಣ victimologyಗೆ ಮಹತ್ವ ನೀಡಿದೆ ಎಂದು ನ್ಯಾಯಾಲಯ ದಾಖಲಿಸಿದೆ. ಸಂತೋಷ್ ರಾವ್ ತಪ್ಪಾಗಿ ಆರೋಪಿಯಾಗಿದ್ದರೆ ಅವರಿಗೆ ಆಗಿರುವ ಅನ್ಯಾಯವನ್ನು ನ್ಯಾಯಾಲಯ ಸರಿಪಡಿಸಬಹುದು. ಆದರೆ ಸೌಜನ್ಯಳಿಗೆ ಏನಾಯಿತು ಎಂಬ ಸತ್ಯವನ್ನು ತನಿಖೆ ಪತ್ತೆಹಚ್ಚದೇ ಹೋದರೆ, ಆಕೆಯ ಪರವಾಗಿ ಆ ನಷ್ಟವನ್ನು ಯಾರು ಸರಿಪಡಿಸುತ್ತಾರೆ? ಎಂದು ನ್ಯಾಯಾಲಯ ಕೇಳಿದೆ.

ಸುಪ್ರೀಂ ಕೋರ್ಟ್ ಕೇವಲ “ಮರುತನಿಖೆ ಮಾಡಿ” ಎಂದು ಹೇಳಿ ಪ್ರಕರಣವನ್ನು ಮುಗಿಸಿಲ್ಲ. ಅಂತಿಮ ತೀರ್ಪಿನಲ್ಲಿ ಕರ್ನಾಟಕ ಸರ್ಕಾರವು ಆಧುನಿಕ ತನಿಖಾ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಸಮರ್ಥ ತನಿಖಾಧಿಕಾರಿಗಳನ್ನು ಒಳಗೊಂಡ Special Investigation Team ರಚಿಸಬೇಕು ಎಂದು ಹೇಳಿದೆ. ಅದಕ್ಕಿಂತ ಮುಖ್ಯವಾಗಿ, ಬೆಳ್ತಂಗಡಿ ಪೊಲೀಸ್, CID ಅಥವಾ CBIಯ ಹಿಂದಿನ ತನಿಖಾ ತಂಡಗಳಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಯನ್ನು ಹೊಸ SITಯಲ್ಲಿ ಸೇರಿಸಬಾರದು ಎಂದು ಸ್ಪಷ್ಟವಾಗಿ ನಿರ್ದೇಶಿಸಿದೆ. ಇದೂ “ಪ್ರೀಮಿಯಂ” ಎಂಬ ಪದದ ಮತ್ತೊಂದು ಅರ್ಥವನ್ನು ನೀಡುತ್ತದೆ.

ಹಿಂದಿನ ತನಿಖೆಯ ಮೇಲೆ ನಂಬಿಕೆ ಇಟ್ಟುಕೊಂಡೇ ಹೊಸ ತನಿಖೆ ನಡೆಸಿದರೆ, ಹಿಂದಿನ ತನಿಖೆಯ ತಪ್ಪುಗಳನ್ನೇ ಹೊಸ ತನಿಖೆಯಲ್ಲೂ ಮಾಡುವ ಸಂಭವವಿದೆ. ಹಾಗಾಗಿ ‘ಪ್ರೀಮಿಯಂ’ ಪಡೆದುಕೊಂಡ ಎಲ್ಲಾ ಅಧಿಕಾರಿಗಳನ್ನು ಹೊಸ ಎಸ್​​ಐಟಿಯಿಂದ ಸುಪ್ರಿಂ ಕೋರ್ಟ್ ಹೊರಗಿಟ್ಟಿದೆ.

ಈ ಪ್ರಶ್ನೆಗೆ ಸಂಬಂಧಿಸಿದಂತೆ ತೀರ್ಪಿನ ಪ್ಯಾರಾ 59 ಅತ್ಯಂತ ಕಠಿಣವಾಗಿದೆ. ನ್ಯಾಯಾಲಯದ ಪ್ರಕಾರ ತನಿಖೆಯ ರೀತಿಯೇ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟುಮಾಡಿದೆ. ಆರೋಪಿಯಾಗಿ ವಿಚಾರಣೆಗೊಳಗಾದ ವ್ಯಕ್ತಿ ಆ ಅಪರಾಧ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮುಂದೆ ದಾಖಲೆಗಳು ತೋರಿಸಿದ್ದರೂ, ತನಿಖೆಯು ಆ ಸ್ಥಿತಿಗೆ ಹೇಗೆ ತಲುಪಿತು ಎಂಬುದು ಗಂಭೀರ ಪ್ರಶ್ನೆಯಾಗಿದೆ. ನಿಜವಾದ ಅಪರಾಧಿಗಳು ತನಿಖೆಯನ್ನು ಪ್ರಭಾವಿತಗೊಳಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಅದರ ನಂತರವೇ ಬರುತ್ತದೆ ಆ ಅತ್ಯಂತ ಕಠಿಣ ವಾಕ್ಯ ‘Such lax and improper investigation gives premium to the Investigating Officers who failed to do their job correctly and diligently’ ವನ್ನು ಸುಪ್ರಿಂ ಕೋರ್ಟ್ ಬರೆದಿದೆ. ಹಾಗಾಗಿ ಪ್ರೀಮಿಯಂ ಪಡೆದುಕೊಂಡ ಎಲ್ಲಾ ತನಿಖಾಧಿಕಾರಿಗಳು ಹೊಸ ಎಸ್​ಐಟಿಯ ತನಿಖೆ ಎದುರಿಸಬೇಕಿದೆ, ಕಟಕಟೆ ಹತ್ತಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು