ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಶಾಸಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನವೆಂಬರ್ 17 ಕ್ಕೆ ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಬಿಜೆಪಿ ಇಂದು ತನ್ನ ಪಕ್ಷದ ಶಾಸಕಾಂಗ ಸಭೆ ಕರೆದಿದೆ. ಬಹುತೇಕ ಇಂದು ಪ್ರತಿಪಕ್ಷ ನಾಯಕನ ಆಯ್ಕೆ ಕೂಡಾ ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಶುಕ್ರವಾರ ಸಂಜೆ 6 ಗಂಟೆಗೆ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಆಕಾಂಕ್ಷಿಗಳು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಭಿನ್ನಾಭಿಪ್ರಾಯ ಶಮನದ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಕಡೆಯಿಂದ ಇಬ್ಬರು ವೀಕ್ಷಕರು ರಾಜ್ಯಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಮುಖ್ಯವಾಗಿ ಪ್ರತಿಪಕ್ಷ ನಾಯಕನ ರೇಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುರೇಶ್ ಕುಮಾರ್, ಆರ್ ಅಶೋಕ್, ಅಶ್ವತ್ಥ್ ನಾರಾಯಣ್, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ ಇದ್ದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಆ ಜವಾಬ್ದಾರಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಇನ್ನು ಹಿಂದುಳಿದ ವರ್ಗಗಳ ಸಾಲಿನಲ್ಲಿ ಸುನೀಲ್ ಕುಮಾರ್ ಸ್ಥಾನ ಸಿಕ್ಕಿದರೂ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ಗೆ ಈ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೊಂದು ವೇಳೆ ಪ್ರತಿಪಕ್ಷ ನಾಯಕನ ಸ್ಥಾನ ಸುನೀಲ್ ಕುಮಾರ್ ಕೈತಪ್ಪಿದರೆ ಬಿಜೆಪಿಯ ಭದ್ರಕೋಟೆ ಎನ್ನಿಸಿಕೊಳ್ಳುವ ಕರಾವಳಿ ಭಾಗಕ್ಕೆ ಬಿಜೆಪಿ ಯಾವುದೇ ಪ್ರಾತಿನಿಧ್ಯ ಕೊಡದಂತಾಗಲಿದೆ. ಈ ಹಿನ್ನೆಲೆಯಲ್ಲಿ ಕೇವಲ ಮತ ಹಾಗೂ ರಾಜಕೀಯಕ್ಕಷ್ಟೆ ಕರಾವಳಿ ಭಾಗದವರನ್ನು ಪರಿಗಣನೆ ಮಾಡುತ್ತಿರುವ ಬಗ್ಗೆ ಸಣ್ಣ ಮಟ್ಟದ ವಿರೋಧದ ಕೂಗು ಕೇಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಇನ್ನು ಶಾಸಕ ಆರಗ ಜ್ಞಾನೇಂದ್ರ ಕೂಡಾ ಅಲ್ಲಲ್ಲಿ ತಾನೂ ಸಹ ಪ್ರತಿಪಕ್ಷ ನಾಯಕನ ಆಕಾಂಕ್ಷಿ, ಜವಾಬ್ದಾರಿ ಕೊಟ್ಟರೆ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ಹೇಳಿಕೆ ನೀಡಿದ್ದರು. ಹಿಂದಿನ ಬಿಜೆಪಿ ಪಕ್ಷದ ಆಡಳಿತದಲ್ಲಿ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ತಮ್ಮ ಅಧಿಕಾರಾವಧಿಯ ಬಹುತೇಕ ದಿನಗಳಲ್ಲಿ ತಮ್ಮ ಸ್ವಕ್ಷೇತ್ರ ಬಿಟ್ಟು ಕದಲದ ಬಗ್ಗೆ ಗಂಭೀರ ಆರೋಪವಿದೆ. ರಾಜ್ಯದಲ್ಲಿ ಎಂತಹ ಅಪರಾಧ ಪ್ರಕರಣ, ಗಲಭೆಯಂತ ಸಂದರ್ಭದಲ್ಲಿ ತಮ್ಮ ಕ್ಷೇತ್ರ ತೀರ್ಥಹಳ್ಳಿಯಲ್ಲೇ ಇದ್ದುಕೊಂಡು ಆಡಳಿತ ನಡೆಸಿದ್ದರು. ಅಧಿವೇಶನದ ಸಮಯದಲ್ಲಷ್ಟೆ ಆರಗ ಜ್ಞಾನೇಂದ್ರ ಕ್ಷೇತ್ರ ಬಿಟ್ಟಿದ್ದರು ಎಂಬ ಆರೋಪವೂ ಆರಗ ಜ್ಞಾನೇಂದ್ರ ಮೇಲಿರುವುದರಿಂದ ಪಕ್ಷದ ವಲಯದಲ್ಲೇ ಜ್ಞಾನೇಂದ್ರ ಬಗ್ಗೆ ಅಪಸ್ವರವಿದೆ.
ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಇರುವ ಮತ್ತೊಬ್ಬ ಪ್ರಬಲ ಆಕಾಂಕ್ಷಿ, ಶಾಸಕ ಸುರೇಶ್ ಕುಮಾರ್. ಬಿಜೆಪಿ ಹಿಂದಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಬ್ರಾಹ್ಮಣರ ಹಿಡಿತದಲ್ಲೇ ಇದ್ದಂತಹ ಪಕ್ಷ. ಹಿಂದಿನ ಅಧಿಕಾರಾವಧಿಯಲ್ಲಿ ಬಹುತೇಕ ಬಿ.ಎಲ್.ಸಂತೋಷ್ ಆಡಳಿತದಲ್ಲಿ ಮೂಗು ತೂರಿಸಿದ ಸೂಪರ್ ಸಿಎಂ ಎಂಬ ಅಪಖ್ಯಾತಿ ಕೂಡಾ ಇದೆ. ಆದರೆ ರಾಜ್ಯಾಧ್ಯಕ್ಷ ಹುದ್ದೆಯ ರೇಸ್ ನಲ್ಲಿ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯ ನಂತರ ಸಂಪೂರ್ಣ ಬ್ರಾಹ್ಮಣರ ಹಿಡಿತ ತಪ್ಪಿದಂತಾಗಿದೆ. ಆದರೆ ಯಾವೊಂದು ಬಣದಲ್ಲೂ ಅಷ್ಟಾಗಿ ಗುರುತಿಸಿಕೊಳ್ಳದ ಸುರೇಶ್ ಕುಮಾರ್ ಗೆ ಹೈಕಮಾಂಡ್ ಪ್ರತಿಪಕ್ಷ ನಾಯಕನ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸಬಹುದು ಎನ್ನಲಾಗಿದೆ.
ರಾಜ್ಯಾಧ್ಯಕ್ಷ ಹುದ್ದೆಗೆ ಲಿಂಗಾಯತರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಒಕ್ಕಲಿಗ ಪ್ರಾತಿನಿಧ್ಯದ ಕೂಗು ಬಿಜೆಪಿ ಆಂತರಿಕ ಮಟ್ಟದಲ್ಲಿ ಕೇಳಿ ಬಂದಿದೆ. ಹಿರಿತನದ ಆಧಾರದಲ್ಲಿ ನೋಡುವುದಾದರೆ ಆರ್.ಅಶೋಕ್ ಗೆ ಹಾಗೂ ತಂತ್ರಗಾರಿಕೆ ಅಡಿಯಲ್ಲಿ ಅಶ್ವತ್ಥ್ ನಾರಾಯಣ್ ಇಬ್ಬರೂ ಸೂಕ್ತ ಎಂಬ ಮಾತು ಎಲ್ಲಾ ಕಡೆಯಿಂದಲೂ ಕೇಳಿ ಬರುತ್ತಿದೆ. ಈಗಾಗಲೇ ಆರ್.ಅಶೋಕ್ ತನ್ನದೇ ಸ್ಥಾನ ಭದ್ರ ಎಂಬ ಹುಮ್ಮಸ್ಸಿನಲ್ಲಿದ್ದರೆ ಅಶ್ವತ್ಥ್ ನಾರಾಯಣ್ ಅವರ ಆಯ್ಕೆಯನ್ನೂ ಇಲ್ಲಿ ತಳ್ಳಿ ಹಾಕುವಂತಿಲ್ಲ.
ಎಲ್ಲರೂ ತಿಳಿದಿರುವಂತೆ ಬಿಜೆಪಿ ಒಳಗಿನ ಬಣ ರಾಜಕೀಯ ಕೂಡ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಕೆಲಸ ಮಾಡಬಹುದು ಎನ್ನಲಾಗಿದೆ. ರಾಜ್ಯಾಧ್ಯಕ್ಷನ ಆಯ್ಕೆಯಲ್ಲಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದರೂ, ಬಿ.ಎಲ್.ಸಂತೋಷ್ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತನ್ನದೇ ಅಭ್ಯರ್ಥಿ ಆಗಬೇಕು ಎಂಬ ಪಟ್ಟು ಹಿಡಿದಂತಿದೆ. ಈಗಿರುವಂತೆ ರೇಸ್ ನಲ್ಲಿ ಇರುವ ಸುರೇಶ್ ಕುಮಾರ್, ಅಶ್ವತ್ಥ್ ನಾರಾಯಣ್, ಆರ್.ಅಶೋಕ್ ಆರಗ ಜ್ಞಾನೇಂದ್ರ ಈ ನಾಲ್ಕು ಹೆಸರುಗಳು ಬಿಜೆಪಿ ಪಟ್ಟಿಯಲ್ಲಿ ಇರುವ ಪ್ರಮುಖ ಹೆಸರುಗಳು ಎನ್ನಲಾಗಿದೆ. ಕೊನೆಯ ಕ್ಷಣದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಆಗಬಹುದು ಎಂದರೂ ಅಥವಾ ಶಾಸಕರ ಒಮ್ಮತ ಕೂಡಾ ಅಷ್ಟೆ ಮುಖ್ಯ ಸ್ಥಾನ ಪಡೆಯಬಹುದು ಎನ್ನಲಾಗಿದೆ.