Home ಬೆಂಗಳೂರು ಉಚಿತವಾಗಿ ಸಿಗುವ  ಜನ ಔಷಧಿ, ರಿಯಾಯಿತಿ ದರದಲ್ಲಿ ಏಕೆ ಬೇಕು?: ದಿನೇಶ್‌ ಗುಂಡುರಾವ್‌

ಉಚಿತವಾಗಿ ಸಿಗುವ  ಜನ ಔಷಧಿ, ರಿಯಾಯಿತಿ ದರದಲ್ಲಿ ಏಕೆ ಬೇಕು?: ದಿನೇಶ್‌ ಗುಂಡುರಾವ್‌

0

ಜನ ಔಷದಿ ವಿಚಾರಾವಾಗಿ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೇಳಿರುವ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ಪ್ರತ್ಯುತ್ತರ ನೀಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಉಚಿತವಾಗಿಯೇ ಔಷಧಿಗಳು ದೊರೆಯುತ್ತವೆ. ಔಷಧಿಗಳು ಉಚಿತವಾಗಿ ಸಿಗುವಾಗ ರಿಯಾಯಿತಿ ದರದ, ಜನ ಔಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಏಕೆ ಬೇಕು ಅಂತ ಗುಂಡೂರಾವ್ ಮರುಪ್ರಶ್ನೆ ಮಾಡಿದ್ದಾರೆ.

ಅಷ್ಟಕ್ಕೂ ತೇಜಸ್ವಿ ಸೂರ್ಯ ಕೇಳಿದ ಪ್ರಶ್ನೆಯಲ್ಲಿ ಏನಿದೆ?
ಜನ ಔಷದಿ ವಿಚಾರಾವಾಗಿ ತಮ್ಮ ʼಎಕ್ಸ್‌ʼ ನಲ್ಲಿ ಬರೆದು ಕೊಂಡಿರುವ ತೇಜಸ್ವಿ ಸೂರ್ಯಾರವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನ್ ಔಷಧಿ ಕೇಂದ್ರಗಳನ್ನು ಬಂದ್ ಮಾಡುವಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಆದೇಶಿಸಿದ್ದು, ಇದರಿಂದ ಸಾಮಾನ್ಯ ಬಡಜನತೆಗೆ ಅತ್ಯಂತ ರಿಯಾಯಿತಿ ದರಗಳಲ್ಲಿ ದೊರಕುತ್ತಿದ್ದ ಔಷಧಿಗಳು, ಜನವಿರೋಧಿ ಸರ್ಕಾರದ ನೀತಿಯಿಂದಾಗಿ ಬಡ, ಮಧ್ಯಮ ವರ್ಗದ ಜನತೆಗೆ ಸಂಕಟ ತಂದೊಡ್ಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ  200ಕ್ಕೂ ಅಧಿಕ ಜನ್ ಔಷಧಿ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ, ತಾಲ್ಲೂಕು & ಜಿಲ್ಲಾ ಆಸ್ಪತ್ರೆಗಳ ಆವರಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ವಾರ್ಷಿಕ 40 ಕೋಟಿ ರೂ, ಉಳಿತಾಯವಾಗುತ್ತದೆ ಎಂದಿದ್ದಾರೆ.

ಔಷಧಿ ಕೇಂದ್ರಗಳನ್ನು ಮುಚ್ಚಿದರೆ,  ಸಾಮಾನ್ಯ ಜನತೆಯ ಜೀವನದೊಂದಿಗೆ ಚೆಲ್ಲಾಟ ಆಡುವುದರ ಜೊತೆ ಜೊತೆಗೆ , ಜನ ಔಷಧಿ ಕೇಂದ್ರಗಳ ಮಾಲೀಕರ ಕುಟುಂಬಗಳಿಗೂ ಹೊಡೆತ ನೀಡಿದಂತಾಗಿದೆ, ಈ ಹಿನ್ನಲೆಯಲ್ಲಿ ಕೂಡಲೇ ಈ ನಿರ್ಧಾರವನ್ನು ಮರು ಪರಿಶೀಲಿಸಿ, ಈ ಆದೇಶವನ್ನು ಹಿಂಪಡೆದು ನಾಡಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಚಿವ ದಿನೇಶ್‌ ಗುಂಡೂರಾವ್ ಅವರಿಗೆ ಒತ್ತಾಯಿಸಿದ್ದಾರೆ.

ಸೂರ್ಯ ಪ್ರಶ್ನೆಗೆ ಗುಂಡುರಾವ್‌ ಉತ್ತರ
ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಜನ ಔಷಧಿ ಕೇಂದ್ರಗಳನ್ನ ಮುಚ್ಚದಂತೆ ಒತ್ತಾಯಿಸಿರುವ ಸಂಸದ ತೇಜಸ್ವಿ ಸೂರ್ಯಾಗೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತೇಜಸ್ವಿ ಸೂರ್ಯ ಅವರೇ, ಜನ ಔಷಧಿ ಕೇಂದ್ರಗಳಲ್ಲಿ ಔಷಧಿಗಳು ರಿಯಾಯಿತಿ ದರದಲ್ಲಿ ಸಿಗುತ್ತದೆ ನಿಜ. ಆದರೆ, ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಉಚಿತವಾಗಿಯೇ ಔಷಧಿಗಳು ದೊರೆಯುತ್ತವೆ. ಉಚಿತವಾಗಿ ಸಿಗುವಾಗ ರಿಯಾಯಿತಿ ದರದ ಜನ ಔಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಾತ್ರ ಜನ ಔಷಧಿ ಕೇಂದ್ರಗಳಿಗೆ ನಿರ್ಬಂಧಿಸಲಾಗಿದೆ. ಬೇರೆ ಸ್ಥಳಗಳಲ್ಲಿ ಇರುವ ಜ‌ನ ಔಷಧಿ ಕೇಂದ್ರಗಳಲ್ಲಿ ಸಾರ್ವಜನಿಕರು ಔಷಧಿಗಳನ್ನ ಪಡೆಯಬಹುದಾಗಿದೆ. ಬಡವರು, ಮಧ್ಯಮ ವರ್ಗದವರಿಗಾಗಿಯೇ, ಸಾವಿರಾರು ಕೋಟಿ ಖರ್ಚು ಮಾಡಿ, ಸರ್ಕಾರ ಔಷಧಿಗಳನ್ನು ಖರೀದಿಸಿ ಉಚಿತವಾಗಿ ನೀಡುತ್ತಿರುವಾಗ, ಅದರ ಸದ್ಬಳಕೆಯಾಗಬೇಕು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಜನ ಔಷಧಿ ಕೇಂದ್ರಗಳಿಗೆ ಹೊಲಿಸಿದರೆ ನಮ್ಮ ಸರ್ಕಾರಿ ಔಷಧಿ ಕೇಂದ್ರಗಳಲ್ಲಿಯೇ ಹೆಚ್ಚಿನ ಔಷಧಗಳ ಲಭ್ಯತೆ ಇದೆ. ಜನೌಷಧಿ ಕೇಂದ್ರಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದರ ಬಗ್ಗೆ ಮಾಧ್ಯಮಗಳ ವರದಿಗಳು ನಿಮ್ಮ ಕಣ್ಮುಂದೆಯೇ ಇದೆ ಎಂದು ವಾಸ್ತವವನ್ನ ಕುರಿತು ತಿಳಿಹೇಳಿದ್ದಾರೆ.

You cannot copy content of this page

Exit mobile version