Home ಕರ್ನಾಟಕ ಚುನಾವಣೆ - 2023 ಜನಗಣತಿ ಏಕಿಲ್ಲ? | ಪಶುಗಣತಿಗೆ ಅಡ್ಡಿಯಾಗದ ಕೋವಿಡ್ ಜನಗಣತಿಗೆ ಅಡ್ಡಿಯಾಗುತ್ತದೆಯೇ?

ಜನಗಣತಿ ಏಕಿಲ್ಲ? | ಪಶುಗಣತಿಗೆ ಅಡ್ಡಿಯಾಗದ ಕೋವಿಡ್ ಜನಗಣತಿಗೆ ಅಡ್ಡಿಯಾಗುತ್ತದೆಯೇ?

0

ಸರ್ಕಾರ ಮಾಡಿರುವ ಸಾಧನೆ ಕಣ್ಣಿಗೆ ಕಾಣುತ್ತಿಲ್ಲ. ಅದೇ ರಸ್ತೆ, ಅದೇ ವ್ಯವಸ್ಥೆ. ಯಾವುದೇ ದೊಡ್ಡ ಉದ್ಯಮವನ್ನು ಸರ್ಕಾರ ಪ್ರಾರಂಭಿಸಿಲ್ಲ. ರೈತರ ಪರಿಸ್ಥಿತಿ, ಪರಿಸರ ಪರಿಸ್ಥಿತಿಗಳೆಲ್ಲ ಮುನ್ನೆಲೆಗೆ ಬಂದು ಬಡತನ, ಹಸಿವು ಸೂಚ್ಯಂಕಗಳಲ್ಲಿ ವಿಶ್ವದಲ್ಲಿ ಕುಸಿದಿರುವಂತೆ ಕುಸಿತ ಕಂಡರೆ ಎಂಬ ಭಯವೇ ಜನಗಣತಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿರಲು ಕಾರಣವಾಗಿರಬಹುದೇ? – ಆರ್.ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರು.

ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣೆಯ ಕಾವು ಏರುತ್ತಿರುವ ಸಂದರ್ಭದಲ್ಲಿ ಎಲ್ಲಾ ಪಕ್ಷದ ನಾಯಕರು ತಮ್ಮ ತಮ್ಮ ಸಾಧನೆಗಳನ್ನು ಹೇಳುತ್ತಿದ್ದಾರೆ. ರಾಷ್ಟ್ರದಲ್ಲಿ ಬಿ.ಜೆ.ಪಿ. ಸರ್ಕಾರ ಬಂದು ಒಂಬತ್ತು ವರ್ಷಗಳಾಗುತ್ತಿವೆ. ಅವರ ಪ್ರಗತಿಯನ್ನು ದಾಖಲಿಸುವ ಜನಗಣತಿ ಮುಖ್ಯವಾಗಿ ಪ್ರಕಟವಾಗಬೇಕಾಗಿತ್ತು. ಇಲ್ಲಿಯವರೆಗೆ ಜನಗಣತಿ ಬಂದಿಲ್ಲ. ಬಾರದೇ ಇರಲು ಕಾರಣವೂ ತಿಳಿದಿಲ್ಲ. ಜನಗಣತಿ ಪ್ರಕಟವಾದರೆ ಹಿಂದಿನ ಹತ್ತು ವರ್ಷಗಳ ಸಾಧನೆ ಗೊತ್ತಾಗುತ್ತದೆ. ಅದು 2024ರ ಚುನಾವಣೆ ಮೇಲೆ ಪರಿಣಾಮವನ್ನು ಬೀರುತ್ತದೆ. ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಸಾಧಿಸದೆ ಇದ್ದದ್ದನ್ನು ಸಾಧಿಸಿದ ದಾಖಲೆ ಜನಸಾಮಾನ್ಯರಿಗೆ ದೊರೆಯುತ್ತದೆ. ಇದರಿಂದ ಜನರಿಗೆ ಬಿ.ಜೆ.ಪಿ. ಸರ್ಕಾರದ ನಿಖರವಾದ ಅಭಿವೃದ್ಧಿ ಪಥ ಜನಸಾಮಾನ್ಯರ ಮುಂದೆ ಬರುತ್ತದೆ. ಮಾತುಗಳ ಸಮರಕ್ಕಿಂತ ಅಂಕಿ, ಸಂಖ್ಯೆಯ ಸಮರಕ್ಕೆ ಸನ್ಮಾನ್ಯ ಪ್ರಧಾನಿಯವರು ದಾರಿ ಮಾಡಿಕೊಡುವರೆಂದು ಜನಸಾಮಾನ್ಯರು ಕಾಯುತ್ತಿದ್ದಾರೆ. ಈ ಮಾತಿನಲ್ಲಿ ಪ್ರಗತಿಯಾಗಿದೆ ಎಂದರೆ ಅದು ಕಾಣಬೇಕು ಕಾಣುವಂತೆ ಮಾಡಬೇಕಾಗಿರುವುದು ಸರ್ಕಾರಗಳ ಕೆಲಸ.

ಬಡತನದಲ್ಲಿ ವಿಶ್ವದ 107 ದೇಶಗಳ ರ್ಯಾಂಕಿಂಗ್ ನಲ್ಲಿ ಭಾರತ 2020 ರಲ್ಲಿ 62 ಇದ್ದದ್ದು 2022 ರಲ್ಲಿ 66 ಕ್ಕೆ ಇಳಿದಿದೆ.  ಹಸಿವಿನ ಸೂಚ್ಯಂಕದಲ್ಲಿ 136 ದೇಶಗಳಲ್ಲಿ ಭಾರತ 2013 ರಲ್ಲಿ 111 ನೆಯ ರ್ಯಾಂಕಿಂಗ್ ನಲ್ಲಿ ಇತ್ತು. ಅದು ಹತ್ತು ವರ್ಷಗಳಲ್ಲಿ 125 ನೆಯ ಸ್ಥಾನಕ್ಕೆ ಕುಸಿದಿದೆ.

ಹಾಗಾದರೆ ಮೇಲೇರಿರುವುದು ಯಾವುದು? ಹತ್ತು ವರ್ಷಗಳಿಂದ ಅಧಿಕಾರ ನಡೆಸುತ್ತಿರುವವರು ಮಾತಿಗಿಂತ ಬರಹದಲ್ಲಿ ನೀಡಬೇಕಾಗಿದೆ. 2001 ರಿಂದ 2011 ರವರೆಗೆ ಏನು ಪ್ರಗತಿಯಾಗಿತ್ತು ಎಂಬುದನ್ನು 2011 ರ ಜನಗಣತಿ ಆಧರಿಸಿದ ಮಾನವ ಅಭಿವೃದ್ಧಿ ವರದಿಗಳು ದಾಖಲಿಸಿವೆ. ಜನರ ಪರಿಸ್ಥಿತಿಗಳು ಮೇಲೆ ಬಂದಿರುವುದನ್ನು ಕಾಣಿಸಿವೆ. 2021 ರ ಜನಗಣತಿ ಬಾರದೆ ಪ್ರಗತಿಯಾಗಿದೆ ಎಂದು ಹೇಳುವುದನ್ನು ಜನರು ನಂಬುವುದಾದರೂ ಹೇಗೆ? 2021 ರ ಜನಗಣತಿ ಇಲ್ಲಿಯವರೆಗೆ ಪ್ರಾರಂಭವೇ ಆಗಿಲ್ಲ. ಜನಗಣತಿ ಮಾಡಿ ವರದಿ ತಯಾರು ಆಗುವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರ ಮಾಡಿರುವ ಸಾಧನೆ ಕಣ್ಣಿಗೆ ಕಾಣುತ್ತಿಲ್ಲ. ಅದೇ ರಸ್ತೆ, ಅದೇ ವ್ಯವಸ್ಥೆ ಯಾವುದೇ ದೊಡ್ಡ ಉದ್ಯಮವನ್ನು ಸರ್ಕಾರ ಪ್ರಾರಂಭಿಸಿಲ್ಲ. ಇದ್ದ ಉದ್ಯಮಗಳು ಖಾಸಗಿಯವರಿಗೆ ಮಾರಾಟವಾಗಿವೆ. ಹೊಸ ಯೋಜನೆಗಳಿಲ್ಲ. ಪೆಟ್ರೋಲ್ ಬೆಲೆ ದಿನೇ ದಿನೇ ಏರುಗತಿಯಲ್ಲಿದೆ. ಜನರು ಬಳಸುವ ಇಂಧನ ಮುಗಿಲು ಮುಟ್ಟಿದೆ. ಹಳ್ಳಿಗರು ಗ್ಯಾಸ್ ಬಿಟ್ಟು ಸೌದೆಯ ಹುಡುಕಾಟದಲ್ಲಿ ಮುಳ್ಳುಕಂಟಿ ಕಡಿಯುತ್ತಿದ್ದಾರೆ. ದಾಖಲೆಯಲ್ಲಿ ಗ್ಯಾಸ್ ಇದೆ. ಮನೆಯಲ್ಲಿ ಉಪಯೋಗವಿಲ್ಲ.

ಐದು ವರ್ಷಗಳಿಗೆ ನಡೆಯುವ ಪಶುಗಣತಿಯನ್ನು 2019ರಲ್ಲಿ ನೀಡಿದ ಕೇಂದ್ರ ಸರ್ಕಾರಕ್ಕೆ 2021ರಲ್ಲಿ ಜನಗಣತಿ ನೀಡಲು ಸಾಧ್ಯವಿಲ್ಲವೇ? ಪಶುಗಣತಿಗೆ ಅಡ್ಡಿಯಾಗದ ಕೋವಿಡ್ ಜನಗಣತಿಗೆ ಅಡ್ಡಿಯಾಗುತ್ತದೆಯೇ? ಇಂಥ ಹಲವು ಪ್ರಶ್ನೆಗಳಿಗೆ ಕೇಂದ್ರಸರ್ಕಾರ ಉತ್ತರಿಸಬೇಕಾಗುತ್ತದೆ. ಪ್ರತಿ ಸೂಚಿಯೂ ವಿಪುಲ ಮಾಹಿತಿಯನ್ನು ನೀಡುತ್ತದೆ. ಇಂಥ ಮಾಹಿತಿ ಕೋಶವನ್ನೇ ನಾಪತ್ತೆ ಮಾಡಲಾಗಿದೆಯೇ? ಜನರ ಮೂಲಸೌಕರ್ಯದಲ್ಲಿ ಆಗಿರುವ ಬದಲಾವಣೆ, ನಗರಗಳ ಮತ್ತು ಹಳ್ಳಿಗಳ ಮೂಲಸೌಕರ್ಯಗಳಲ್ಲಿ ಆಗಿರುವ ಬದಲಾವಣೆ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಧರ್ಮವಾರು ಜನಸಂಖ್ಯೆಯ ಮಾಹಿತಿ, ಶಿಕ್ಷಣದಲ್ಲಿ ಆಗಿರುವ ಪ್ರಗತಿ ಹೀಗೆ ಜನರಿಗೆ ತಿಳಿಯಬೇಕಾಗಿರುವ ಮಾಹಿತಿಗಳನ್ನು ನೀಡುವ ಜನಗಣತಿ ತರದಿರಲು ಕಾರಣವೇನಿರಬಹುದು.!

ಮುಖ್ಯವಾಗಿ 2024ರ ಚುನಾವಣೆಯ ಮೇಲೆ ಪರಿಣಾಮವಾಗಬಹುದು. ಅಂಕಿ ಅಂಶಗಳ ನಿಖರತೆಯನ್ನು ಅಲ್ಲಗಳೆಯಲಾಗದು. ಬಾಯಿಮಾತಿನಲ್ಲಿ ಪ್ರಗತಿಯಾಗಿದೆ ಎಂಬ ಮಾಹಿತಿ ಅಂಕಿ ಸಂಖ್ಯೆಯಲ್ಲಿ ಕಾಣದೆ ತಪ್ಪಾಗಿದ್ದರೆ ಜನರು ಸರ್ಕಾರದ ಮಾತನ್ನು ನಂಬದಿರಬಹುದು. ರೈತರ ಪರಿಸ್ಥಿತಿ, ಪರಿಸರ ಪರಿಸ್ಥಿತಿಗಳೆಲ್ಲ ಮುನ್ನೆಲೆಗೆ ಬಂದು ಬಡತನ, ಹಸಿವು ಸೂಚ್ಯಂಕಗಳಲ್ಲಿ ವಿಶ್ವದಲ್ಲಿ ಕುಸಿದಿರುವಂತೆ ಕುಸಿತ ಕಂಡರೆ ಎಂಬ ಭಯವೇ ಜನಗಣತಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿರಲು ಕಾರಣವಾಗಿರಬಹುದೇ?

ಅತ್ಯುತ್ತಮವಾದ ಮಾಹಿತಿ ಕೋಶದ ಮೇಲೆ ಸರ್ಕಾರವು ಗದಾಪ್ರಹಾರ ಮಾಡಿದೆಯೆ? ಎಂಬ ಸಂಶಯ ಬರುತ್ತದೆ. ಇಂಥ ಹಲವು ಪ್ರಶ್ನೆಗಳನ್ನು ಅದು ಜನರ ಮುಂದೆ ಇಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮಾಹಿತಿ ಪಡೆಯುವ ಹಕ್ಕನ್ನು ಜನರು ಕಳೆದುಕೊಳ್ಳುತ್ತಿದ್ದಾರೆ ಎನಿಸುತ್ತದೆ. ಕೇಂದ್ರ, ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ ಪ್ರತಿ ಹಂತದ ಅಂಕಿ-ಅಂಶಗಳ ಜನಗಣತಿ ರಾಷ್ಟ್ರದ ನಿಖರ ಚಿತ್ರಣವನ್ನು ನೀಡುವ ದಾಖಲೆ. ಇದನ್ನೇ ಇಲ್ಲವಾಗಿಸುವ ಸ್ಥಿತಿ ಜನತಂತ್ರದ ಸ್ಥಿತಿ ಏನಾಗಿದೆ ಎಂಬುದನ್ನು ವಿವರಿಸುತ್ತದೆ. ಕುರುಡರಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಡಿದೆ. ಹಾಗೂ ವಿಗ್ರಹಗಳ ಸ್ಥಾಪನೆ ಕಾರ್ಯ ಹೆಚ್ಚಾಗಿದೆ. ಕರ್ಮಫಲಗಳನ್ನು ಜನರಿಗೆ ತೋರಿಸಿ ನಿಮ್ಮ ಸ್ಥಿತಿಗೆ ನೀವೇ ಜನರ ಭಾವನೆಗಳನ್ನು ಅಧಿಕಾರದಲ್ಲಿರುವವರು ಲೆಕ್ಕಿಸುತ್ತಿಲ್ಲ. ಜನರ ಮನಸ್ಸಿನಲ್ಲಿ ತುಂಬಿರುವ ಧರ್ಮದ ವಿಷಯವೇ ಸಾಕೆಂಬ ಧೋರಣೆ ಆಳುವವರಿಗೆ ಇರುವಂತಿದೆ. ಆದುದರಿಂದಲೇ ಎಲ್ಲ ಕಡೆ ದೇವಾಲಯಗಳ ನಿರ್ಮಾಣ ಕಾರಣ. ಅದನ್ನು ಕಳೆದುಕೊಂಡು ಮುಂದಿನ ಜನ್ಮದಲ್ಲಿ ಭಾಗ್ಯವಂತರಾಗಲು ದುಡಿಯಿರಿ ಮತ್ತು ದುಡಿಯುತ್ತಲೇ ದಣಿಯಿರಿ. ಅನ್ನ, ಆರೋಗ್ಯ ಇವೆಲ್ಲಾ ಪೂರ್ವಜನ್ಮದ ಪುಣ್ಯವೆಂದು ಸಾರುತ್ತಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ಕಾರಣ ಎಂದು ಕೈತೊಳೆಯುತ್ತಿದ್ದಾರೆ. ಅದನ್ನೇ ಹೇಳಿ ಅಧಿಕಾರ ಹಿಡಿದು ಅದು ತಾನಿರುವವರೆಗೂ ಇರುತ್ತದೆ ಎಂಬ ಸಂದೇಶವನ್ನು ನೀಡುತ್ತಾ ವಿಶ್ವದ ನಂಬರ್ ಒಂದು ನಾಯಕರಾಗಿ ವಿಶ್ವಗುರುವಾಗಿ ಭಾರತದ ಹೆಮ್ಮೆ ಎಂಬ ಚಿತ್ರಣ ನೀಡಿ ವಾಸ್ತವವನ್ನು ಮರೆಸುತ್ತಿದ್ದಾರೆ.

ಆರ್.ಸುನಂದಮ್ಮ

ನಿವೃತ್ತ ಪ್ರಾಧ್ಯಾಪಕಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ

You cannot copy content of this page

Exit mobile version