ನಗರ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ನಡೆದ ‘ ನಂದಿನಿ ಉಳಿಸಿ’ ಪ್ರತಿಭಟನೆಯ ಬಿಸಿಗೆ ಮೈಸೂರಿನ ವಿವಿ ಪುರಂನಲ್ಲಿರುವ ಅಮುಲ್ ಮಾರಾಟ ಮಳಿಗೆ ಒಂದು ದಿನದ ಮಟ್ಟಿಗೆ ಮುಚ್ಚಲ್ಪಟ್ಟಿತು.
ನಂದಿನಿಯ ಕೆಚ್ಚಲಿಗೆ ಕೈ ಹಚ್ಚಿದರೆ ಕನ್ನಡಿಗರ ಕಿಚ್ಚನ್ನು ಎದುರಿಸಬೇಕಾದೀತು ಎಚ್ಚರ ಎಂದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಪತ್ರಕರ್ತ ಟಿ.ಗುರುರಾಜ್, ಕನ್ನಡಿಗರ ಸಹನೆಯನ್ನು ಕೆಣಕಬೇಡಿ ಎಂದರು.
ಇಂದು ಸಾತ್ವಿಕವಾಗಿ ನಡೆದಿರುವ ಈ ಚಳವಳಿಯನ್ನು ಹಗುರವಾಗಿ ಪರಿಗಣಿಸಿದರೆ, ಗಂಭೀರ ಪರಿಣಾಮಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ ಮತ್ತು ಶಾಂತಿ, ಕ್ರಾಂತಿಯಾಗಿ ಮಾರ್ಪಡುವುದು ಅನಿವಾರ್ಯವಾಗುತ್ತದೆ ಎಂದ ಗುರುರಾಜ್ ಭಾಷಾ ಚಳವಳಿಯನ್ನು ಮತ್ತೆ ಕಟ್ಟಲು ಇದು ಸಕಾಲ ಎಂದರು.
ಅಹಿಂದ ಸಂಘಟನೆಯ ಅಧ್ಯಕ್ಷ ಶಿವರಾಂ, ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಭಾಜಪ ಸರ್ಕಾರ, ಈ ನೆಲದ ರೈತರನ್ನು ಸರ್ವನಾಶ ಮಾಡಲು ಮುಂದಾಗಿರುವುದು ದುರಂತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
VIDEO – ನಂದಿನಿ ನುಂಗಲು ಹೊರಟ ಅಮಿತ್ ಷಾ ಗೆ ಕನ್ನಡಿಗರ ಮಾತಿನೇಟು
ಕಮ್ಯುನಿಸ್ಟ್ ಹೋರಾಟಗಾರ ಜಗನ್ನಾಥ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚಿಂತಕ ಪ್ರೊ ಕಾಳಚಿನ್ನೇಗೌಡ, ಹೋರಾಟಗಾರ್ತಿ ಸವಿತಾ ಮಲ್ಲೇಶ್ ಮತ್ತಿತರರು ಮಾತನಾಡಿದರು.
ವಿವಿಧ ಸಂಘಟನೆಗಳನ್ನು ಪ್ರತಿನಿಧಿಸುವ ರಾಕೇಶ್, ಜೆ ಜೆ ಆನಂದ್, ಪ್ರಕಾಶ್ ಗೌಡ, ಜಮೀರ್ ಇಮ್ರಾನ್ ಪಾಷಾ, ಹರೀಶ್, ಮೊಗಣ್ಣಚಾರ್, ಯೋಗೇಶ್ ಉಪ್ಪಾರ್ ರವಿನಂದನ್, ನಾಗೇಶ್ ನೆಲೆಹಿನ್ನೆಲೆ ಗೋಪಾಲಕೃಷ್ಣ, ಮಹೇಂದ್ರ ಕಾಗಿನೆಲೆ ಮತ್ತಿತರರು ಪ್ರತಿಭಟನೆಗೆ ಸಾಕ್ಷಿಯಾದರು.