ನೆಲಮಂಗಲ ಸೆ.14: ಬಹುಶಃ ಇನ್ನೂ ಒಳಮೀಸಲಾತಿ ಜಾರಿ ಆಗುವ ಹಂತದಲ್ಲಿದೆ ಇನ್ನೂ ಆಗಿಲ್ಲ. ನಾನೊಬ್ಬ ಕಾಂಗ್ರೆಸ್ಸಿಗೆ 21 ವರ್ಷ ದುಡಿದವನಾಗಿ, ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದುಕೊಂಡು ಮುಂದಿನ ದಿನಗಳಲ್ಲಿ ಅಧಿಕಾರ-ಸ್ಥಾನಮಾನಗಳಿಗೆ ಆಕಾಂಕ್ಷಿಯಾಗಿರುವ ವ್ಯಕ್ತಿಯಾಗಿಯೂ ಕೂಡ ನಾನು ಹೇಳುವುದೇನೆಂದರೆ; ಈ ಮಟ್ಟಕ್ಕೆ ನಮ್ಮ ಸರ್ಕಾರ, ನಮ್ಮ ಪಕ್ಷದ ಸರಕಾರ ತಲೆ ತಗ್ಗಿಸುವಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಲೋಹಿತ್ ನಗರದಲ್ಲಿ ಆಯೋಜಿಸಿದ್ದ ಒಳಮೀಸಲಾತಿ ಕ್ರಾಂತಿಕಾರಿ ಹೋರಾಟಗಾರ ಬಿ. ಆರ್ ಭಾಸ್ಕರ್ ಪ್ರಸಾದ್ ರವರ 50 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸಾಮಾಜಿಕ, ರಾಜಕೀಯ ವಿಶ್ಲೇಷಕ ಸಂತೋಷ್ ಕೋಡಿಹಳ್ಳಿಯವರು ಬೇಸರದಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ, ಕರ್ನಾಟಕದಲ್ಲಿ ಜಾರಿಯಾಗುವ ಒಳಮೀಸಲು ಇಡೀ ದೇಶಕ್ಕೊಂದು ಮಾದರಿ ಹಾಕಿಕೊಡುತ್ತದೆ ಎಂದುಕೊಂಡಿದ್ದೆ. ಒಬಿಸಿ ಚಾಂಪಿಯನ್, ಸಾಮಾಜಿಕ ನ್ಯಾಯದ ಹರಿಕಾರರಾದ ನಮ್ಮ ಸಿದ್ದರಾಮಯ್ಯನವರು ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿರುವುದರಿಂದ ಈ ನಿರೀಕ್ಷೆ ಸಹಜವಾಗಿತ್ತು. ಆದರೆ ಎಸ್ಸಿಗಳನ್ನ ಮೂರು ಪಂಗಡ ಮಾಡಿ, ಅಲೆಮಾರಿಗಳನ್ನು ಬೀದಿಗೆ ಬಿಸಾಕಿ, ಸ್ಪೃಶ್ಯರ ಬಾಯಿಗೆ ಅಲೆಮಾರಿಗಳನ್ನು ಆಹುತಿ ಕೊಟ್ಟು ಯಾರೋ ಮಂತ್ರಿಗಳ ಮನೆಯಲ್ಲಿ ಒಪ್ಪಂದ ನಡೆಸಿ 6+6 ಅಮಿಕಬಲ್ ಸೆಟ್ಲ್‌ಮೆಂಟ್ ಹಂಚಿಕೆ ನಡೆದು ಹೋಯ್ತಲ್ಲ. ಈ ಕೆಲಸ ಮಾಡಲಿಕ್ಕೆ ಯಾಕೇ ಬೇಕಿತ್ತು ಎಂಪಿರಿಕಲ್ ಡಾಟಾ? ಯಾಕೇ ಬೇಕಿತ್ತು ಆಯೋಗ? ಇವರಿಗೆ ಸಂವಿಧಾನ ಗೊತ್ತಾ? ಸುಪ್ರೀಂಕೋರ್ಟ್ ತೀರ್ಪಿನ ಎಬಿಸಿಡಿ ಆದರೂ ಇವರು ಓದಿಕೊಂಡಿದ್ದಾರಾ? ಎಂದು ಅತ್ಯಂತ ಬೇಸರದಿಂದ ಸರ್ಕಾರಕ್ಕೆ ತಿವಿಯುವಂತೆ ಮಾತಾಡಿ ಆದ ಪ್ರಮಾದ ಸರಿಪಡಿಸಿಕೊಳ್ಳಬೇಕೆಂದು ಒತ್ತಾಯ ಮಾಡಿದರು.
ಈ ಒಳಮೀಸಲು ಹೋರಾಟ ಅರ್ಧಕ್ಕೆ ನಿಂತಿದೆ. ಯಾರ‌್ಯಾರಿಗೆ ಅನ್ಯಾಯವಾಗಿದೆ, ಏನೇನು ಅನ್ಯಾಯವಾಗಿದೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಎರಡನೇ ಹಂತದ ಹೋರಾಟಕ್ಕೆ ಭಾಸ್ಕರ್ ಪ್ರಸಾದ್ ಅವರ ಹುಟ್ಟು ಹಬ್ಬದ ಈ ವೇದಿಕೆಯು ಭೂಮಿಕೆಯನ್ನು ನಿರ್ಮಿಸಿಕೊಟ್ಟಂತಾಗಿದ್ದು, ನಿಜವಾದ ಒಳಮೀಸಲು ಜಾರಿಗಾಗಿ ನಡೆಯಬೇಕಿರುವ ಮುಂದಿನ ಹೋರಾಟಕ್ಕೆ ಶುಭಹಾರೈಸಿ ತಮ್ಮ ಮಾತುಗಳನ್ನು ಹೇಳಿದರು.