ಬೇಲೂರು : ಬೇಲೂರು ತಾಲ್ಲೂಕಿನ ಕೋಗಿಲಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮಡಿಹಳ್ಳಿ ಗ್ರಾಮ ಹಾಗು ನಾಗೇನಹಳ್ಳಿ, ಹಿರೆಹಸಡೆ ಅಬ್ದುಲ್ ಅಜೀಜ್ ಎಸ್ಟೇಟ್ ಫಸಲಿಗೆ ಬಂದಿದ್ದ ಕಾಫಿತೋಟ ಹಾಗು ಜೋಳದ ಹೊಲಕ್ಕೆ ಕಾಡಾನೆ ದಾಳಿ ಮಾಡಿದ ಪರಿಣಾಮ ಒಂದೆರಡು ತಿಂಗಳಲ್ಲಿ ಕಟಾವು ಮಾಡುವ ಹಂತದಲ್ಲಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಅರೇಹಳ್ಳಿ ಹೋಬಳಿ ಮಲ್ಲಾಪುರ ಗ್ರಾಮದ ಹೇಮಂತ್ ಕುಮಾರ್ ಬೊಮ್ಮಡಿಹಳ್ಳಿ ಗ್ರಾಮದಲ್ಲಿ ಜೋಳದ ಬೆಳೆ ಬೆಳೆದಿದ್ದು, ಎಂದಿನಂತೆ ಇಂದು ಬೆಳಿಗ್ಗೆ ಹೊಲಕ್ಕೆ ಹೋದ ಸಂದರ್ಭ ದಲ್ಲಿ ಘಟನೆ ಬೆಳಕಿಗೆ ಬಂದಿದೆ. ಹಾಗೆ ನಾಗೇನಹಳ್ಳಿ ಹಿರೆಹಸಡೆ ಗ್ರಾಮದಲ್ಲೂ ಆನೆಗಳ ರಂಪಾಟದಿಂದ ಸಾಕಷ್ಟು ಕಾಫಿಗಿಡಗಳು ಸಂಪೂರ್ಣ ವಾಗಿ ನೆಲಕಚ್ಚಿದೆ.ಬೀಟಮ್ಮ ಗುಂಪಿನ ಸುಮಾರು 12 ಆನೆಗಳು ಒಟ್ಟಾಗಿ ಕಾಣಿಸಿ ಕೊಂಡು ಕಾಫಿತೋಟವನ್ನು ಹಾಳುಮಾಡಿದ್ದು ಇದರಿಂದ ಸುಮಾರು ೧.೫೦ ಲಕ್ಷ ರೂ ನಷ್ಟವಾಗಿದೆ ಎಂದು ಅಬ್ದುಲ್ ಹಜೀಜ್ ತಮ್ಮ ನೋವು ತೋಡಿಕೊಂಡಿದ್ದಾರೆ.
ಅದರಂತೆ ಬೊಮ್ಮಡಿಹಳ್ಳಿ ಗ್ರಾಮದಲ್ಲೂ ಆನೆಗಳ ಕಾಲ್ತುಳಿತಕ್ಕೆ ಸಿಲುಕಿ ಎರಡು ತಿಂಗಳಲ್ಲಿ ಫಸಲು ನೀಡಬೇಕಾದ ಜೋಳದ ಗಿಡಗಳು ಮುರಿದು ಬಿದ್ದಿವೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದಿದ್ದ ಫಸಲನ್ನು ಆನೆಗಳು ತಿಂದು ನಷ್ಟ ಉಂಟು ಮಾಡಿವೆ, ಬೆಳೆ ನಾಶದಿಂದ ಈ ಭಾಗದ ರೈತರು ಆತಂಕ ಗೊಂಡಿದ್ದು, ಜಮೀನಿಗೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಅಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಿ, ಕಾಡಾನೆಗಳನ್ನು ಸ್ಥಳಾಂತರಿಸ ಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ರೈತ ಹೇಮಂತ್ ಕುಮಾರ್ ಆಗ್ರಹಿಸಿದ್ದಾರೆ.