ಅಶಿಸ್ತು ಮತ್ತು ಸ್ಪೀಕರ್ ಗೆ ಅಗೌರವ ತೋರಿದ ಬಿಜೆಪಿ ಪಕ್ಷದ 18 ಶಾಸಕರನ್ನು ಅಮಾನತುಗೊಳಿಸಿದ ಸ್ಪೀಕರ್ ನಿರ್ಣಯ ಖಂಡನಾರ್ಹ. ಅಮಾನತುಗೊಂಡ 18 ಮಂದಿ ಶಾಸಕರ ಅಮಾನತು ಹಿಂಪಡೆಯುವ ವರೆಗೂ ಸರ್ಕಾರದ ಸಚಿವರು ಭಾಗಿಯಾಗುವ ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಿಲ್ಲ, ಹೋದರೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ಅಮಾನತು ಪ್ರಕ್ರಿಯೆ ಸಂವಿಧಾನ ಬಾಹಿರ. ಅಮಾನತುಗೊಳಿಸಿದ ಪಕ್ಷದ ಶಾಸಕರ ಅಮಾನತು ಹಿಂಪಡೆಯಬೇಕು. ಸ್ಪೀಕರ್ ಒಂದು ಪಕ್ಷದ ಮುಖವಾಣಿಯಾಗಿ ಕೆಲಸ ಮಾಡಿದ್ದಾರೆ. ಅಮಾನತು ಹಿಂಪಡೆಯುವ ವರೆಗೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹಿತ ಯಾರ ಜೊತೆಗೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ.
ಅಮಾನತು ಅಧಿವೇಶನಕ್ಕೆ ಮಾತ್ರ ಸೀಮಿತವಾಗಿರಬೇಕು. ಆದರೆ ಸದನ ಮುಕ್ತಾಯಗೊಂಡ ಬಳಿಕ ಸ್ಪೀಕರ್ ಈ ಕ್ರಮ ತೆಗೆದುಕೊಂಡಿರುವುದು ಕಾನೂನು ಬಾಹಿರ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಸ್ಪೀಕರ್ ಖಾದರ್ ಹೇಗೆ ಸದನ ನಡೆಸುತ್ತಿದ್ದಾರೆಂದು ಅವರಿಗೇ ಗೊತ್ತಿಲ್ಲ. ನಾನು ಎಂಟು ಬಾರಿ ಫೋನ್ ಕರೆ ಮಾಡಿದರೂ ಹಬ್ಬ ಇದೆ, ನಮಾಜ್ ಇದೆ ಎನ್ನುತ್ತಾ ಆಮೇಲೆ ಬಾ ಎಂದು ಹೇಳುತ್ತಾರೆ. ವಿಪಕ್ಷ ನಾಯಕನ ಕರೆಗೆ ಸ್ಪೀಕರ್ ಸ್ಪಂದಿಸುವ ರೀತಿಯಾ ಇದು ಎಂದು ಪ್ರಶ್ನಿಸಿದರು.