ಬೆಂಗಳೂರು: ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ನಾಯಕರ ತಂಡ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ (ರವಿ ಗಾಣಿಗ) ಶನಿವಾರ ಪುನರುಚ್ಚರಿಸಿದ್ದಾರೆ. ತಮ್ಮ ಆರೋಪಕ್ಕೆ ಪುರಾವೆಗಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಲಹೆ ಪಡೆದು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.
ಬಿಜೆಪಿ ನಾಯಕರ ತಂಡವೊಂದು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಪಕ್ಷ ತೊರೆಯಲು ಹಣ ಮತ್ತು ಸಚಿವ ಸ್ಥಾನದ ಆಸೆ ಹುಟ್ಟಿಸುತ್ತಿದೆ ಎಂದು ರವಿ ಗಾಣಿಗ ಶುಕ್ರವಾರ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ಯತ್ನಿಸುತ್ತಿರುವ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಹೇಳಿದ್ದಾರೆ. ಈ ವಿಷಯದ ಕುರಿತು ಶಾಸಕ ರವಿಯವರೊಡನೆ ಇನ್ನಷ್ಟೇ ಮಾತನಾಡಬೇಕಿದೆ. ಅವರ ಬಳಿ ಈ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.
ಬಿಜೆಪಿ ಅದೆಷ್ಟೇ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸಿದರೂ ಅದರ ಪ್ರಯತ್ನ ಫಲಿಸುವುದಿಲ್ಲ ಎಂದು ಹೇಳಿದರು.