ಚಂಡೀಗಢ: ವಿವಾಹಿತ ಮಹಿಳೆಯ ಗರ್ಭಪಾತದ ವಿಷಯದಲ್ಲಿ ಪತಿಯ ಒಪ್ಪಿಗೆಯಿಗಿಂತ ಮಹಿಳೆಯ ಸ್ವಂತ ಇಚ್ಛೆ ಮತ್ತು ಒಪ್ಪಿಗೆಯೇ ಪ್ರಮುಖ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪತಿಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಒಳಗಾಗಲು ಅವಕಾಶ ನೀಡಿದ ನ್ಯಾಯಾಲಯ, ಮಹಿಳೆಯ ದೈಹಿಕ ಮತ್ತು ಮಾನಸಿಕ ಸ್ವಾಯತ್ತತೆಯನ್ನು ಒತ್ತಿ ಹೇಳಿದೆ.
ಪಂಜಾಬ್ ಮೂಲದ 21 ವರ್ಷದ ವಿವಾಹಿತ ಮಹಿಳೆಯೊಬ್ಬರು ತಮ್ಮ ಎರಡನೇ ತ್ರೈಮಾಸಿಕದಲ್ಲಿರುವ ಗರ್ಭಧಾರಣೆಯನ್ನು ಕೊನೆಗೊಳಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ನಿರ್ದೇಶನ ನೀಡಲಾಗಿದೆ. ಅರ್ಜಿದಾರರು ಮೇ 2, 2025ರಂದು ಮದುವೆಯಾಗಿದ್ದು, ಪತಿಯೊಂದಿಗೆ ಪ್ರಕ್ಷುಬ್ಧ ಹಾಗೂ ಅಸಮಾಧಾನಕರ ಸಂಬಂಧ ಹೊಂದಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಸ್ತುತ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದೂ ಅವರು ಹೇಳಿದ್ದಾರೆ.
ಹಿಂದಿನ ವಿಚಾರಣೆಯಲ್ಲಿ, ಅರ್ಜಿದಾರರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವಂತೆ ನ್ಯಾಯಾಲಯವು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್)ಗೆ ವೈದ್ಯಕೀಯ ಮಂಡಳಿ ರಚಿಸಲು ನಿರ್ದೇಶಿಸಿತ್ತು. ವೈದ್ಯಕೀಯ ಮಂಡಳಿಯ ವರದಿ ಪ್ರಕಾರ, ಮಹಿಳೆ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯಕ್ಕೆ (ಎಂಟಿಪಿ) ವೈದ್ಯಕೀಯವಾಗಿ ಯೋಗ್ಯಳಾಗಿದ್ದಾರೆ.
ಡಿಸೆಂಬರ್ 23ರಂದು ಸಲ್ಲಿಸಲಾದ ವೈದ್ಯಕೀಯ ವರದಿಯಲ್ಲಿ, ಯಾವುದೇ ಜನ್ಮಜಾತ ವಿರೂಪವಿಲ್ಲದ 16 ವಾರಗಳು ಮತ್ತು ಒಂದು ದಿನಗಳ ಗರ್ಭಾವಸ್ಥೆಯೊಂದೇ ಜೀವಂತ ಭ್ರೂಣ ಇರುವುದಾಗಿ ತಿಳಿಸಲಾಗಿದೆ. ಜೊತೆಗೆ, ಅರ್ಜಿದಾರರು ಕಳೆದ ಆರು ತಿಂಗಳಿನಿಂದ ಖಿನ್ನತೆ ಮತ್ತು ಆತಂಕದ ಲಕ್ಷಣಗಳಿಂದ ಬಳಲುತ್ತಿದ್ದು, ಚಿಕಿತ್ಸೆಯಲ್ಲಿದ್ದರೂ ಕನಿಷ್ಠ ಮಟ್ಟದ ಸುಧಾರಣೆ ಮಾತ್ರ ಕಂಡುಬಂದಿದೆ ಎಂದು ವರದಿ ಹೇಳಿದೆ. ವಿಚ್ಛೇದನ ಪ್ರಕ್ರಿಯೆಗಳ ನಡುವೆ ಗರ್ಭಧಾರಣೆಯೇ ತೀವ್ರ ಮಾನಸಿಕ ಸಂಕಟಕ್ಕೆ ಕಾರಣವಾಗಿದೆ ಎಂದು ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟಿದೆ.
“ಅರ್ಜಿದಾರರು ಮಾನಸಿಕ ಚಿಕಿತ್ಸೆ ಮತ್ತು ಸಮಾಲೋಚನೆಯನ್ನು ಮುಂದುವರಿಸಬೇಕಿದೆ. ಆದರೆ ಅವರು ತಮ್ಮ ಒಪ್ಪಿಗೆ ನೀಡಲು ಮಾನಸಿಕವಾಗಿ ಸಂಪೂರ್ಣ ಸದೃಢಳಾಗಿದ್ದಾರೆ” ಎಂದು ವೈದ್ಯಕೀಯ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸುವೀರ್ ಸೆಹಗಲ್ ಅವರ ನೇತೃತ್ವದ ನ್ಯಾಯಪೀಠ, ಅರ್ಜಿದಾರರು ಗರ್ಭಪಾತಕ್ಕೆ ಒಳಗಾಗಲು ವೈದ್ಯಕೀಯವಾಗಿ ಸೂಕ್ತ ಸ್ಥಿತಿಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಗರ್ಭಪಾತಕ್ಕೆ ಮೊದಲು ಪತಿಯ ಅಥವಾ ವಿಚ್ಛೇದಿತ ಪತಿಯ ಒಪ್ಪಿಗೆ ಅಗತ್ಯವಿದೆಯೇ ಎಂಬುದೇ ಪರಿಗಣಿಸಬೇಕಾದ ಏಕೈಕ ಪ್ರಶ್ನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಹಿಳೆಯ ದೈಹಿಕ ಸ್ವಾತಂತ್ರ್ಯ, ಗೌಪ್ಯತೆ ಮತ್ತು ಆಯ್ಕೆ ಮಾಡುವ ಹಕ್ಕುಗಳನ್ನು ಕಾನೂನು ರಕ್ಷಿಸುತ್ತದೆ ಎಂದು ಒತ್ತಿ ಹೇಳಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಮಹಿಳೆಯ ನಿರ್ಧಾರವೇ ಅಂತಿಮ ಎಂದು ಸ್ಪಷ್ಟ ಸಂದೇಶ ನೀಡಿದೆ.
