ಹಾಸನ : ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ದುರ್ಘಟನೆಯೊಂದರಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ.

ಗಜೇಂದ್ರಪುರ ಗ್ರಾಮದ ಚಂದ್ರಮ್ಮ (45) ಮೃತ ಮಹಿಳೆ. ಡಾ. ಕರುಣ್ ಎಂಬುವವರ ಕಾಫಿ ತೋಟದಲ್ಲಿ ಕೆಲಸಕ್ಕಾಗಿ ಬೆಳಿಗ್ಗೆ ಆಗಮಿಸಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಏಕಾಏಕಿ ದಾಳಿ ಮಾಡಿದ ಕಾಡಾನೆಯೊಂದು ಚಂದ್ರಮ್ಮ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿ, ಕಾಲಿನಿಂದ ತುಳಿದು ಬರ್ಬರವಾಗಿ ಕೊಂದಿದೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸ್ಥಳೀಯರು ಮತ್ತು ಕೆಲಸಗಾರರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಅರೇಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.