Home ಜನ-ಗಣ-ಮನ ಧರ್ಮ- ಸಂಸ್ಕೃತಿ ಬ್ಯಾರಿ ಬರಹಗಾರ್ತಿಯರ ʼಒರ್ಮೆಪ್ಪಾಡ್‌ʼ

ಬ್ಯಾರಿ ಬರಹಗಾರ್ತಿಯರ ʼಒರ್ಮೆಪ್ಪಾಡ್‌ʼ

0

‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟʼ ಒಂದು ದೊಡ್ಡ ಯಶಸ್ಸು. ಆ ಯಶಸ್ಸಿನ ಗುಂಗಿನಲ್ಲಿ ದಿನಗಳು ಕಳೆದು ಹೋಗುತ್ತಿವೆ. ಈಗೊಂದು ಖಾಲಿತನ ಕಾಡುತ್ತಿದೆ. ಹಬ್ಬ ಮುಗಿದಮೇಲೆ ಕಾಡುವ ಆಯಾಸದಂತಿದೆ ಈ ಖಾಲಿತನ. ಈ ಖಾಲಿತನದಲ್ಲಿ ಮುಂದೆ ನಡೆಯಬೇಕಾದ ಕೆಲಸಗಳ ಬಗ್ಗೆ ಯೋಚಿಸಬೇಕಿದೆ, ನಡೆಯಬೇಕಾದ ದಾರಿ, ಗುರಿ ಎಲ್ಲದರ ಬಗ್ಗೆಯೂ ಚರ್ಚೆ ರೂಪು ರೇಷೆ ನಡೆಯಬೇಕು-ಫಾತಿಮಾ ರಲಿಯಾ, ಕಥೆಗಾರ್ತಿ

ಈಗ ಆರರ ಹರೆಯದಲ್ಲಿರುವ ‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟವನ್ನು 2017ರಲ್ಲಿ ಆಯಿಶಾ ಯು.ಕೆ ಮತ್ತು ಝುಲೇಖಾ ಮುಮ್ತಾಜ್ ಹುಟ್ಟುಹಾಕಿದ್ದರು.‌ ಈ ಕೂಟದಲ್ಲಿ ಮರಿಯಂ ಇಸ್ಮಾಯಿಲ್‌ರಂತಹಾ ಹಿರಿಯ ಬ್ಯಾರಿ ಬರಹಗಾರ್ತಿಯರ ಜೊತೆ ಈಗಷ್ಟೇ ಸಾಹಿತ್ಯ ಕ್ಷೇತ್ರದಲ್ಲಿ ಕಣ್ಣುಬಿಡುತ್ತಿರುವ ಲೇಖಕಿಯರೂ ಇದ್ದಾರೆ. ಕಳೆದ ಆರು ವರ್ಷಗಳಿಂದಲೂ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಈ ಗುಂಪಿನಲ್ಲಿ ಗುಂಪಿನ ಸದಸ್ಯೆಯರೆಲ್ಲರೂ ಒಮ್ಮೆ ಒಟ್ಟು ಸೇರಬೇಕು, ತಮ್ಮೊಳಗಿನ ಮಾತುಗಳನ್ನು, ಕಥೆಗಳನ್ನು, ಸಂಕಟಗಳನ್ನು, ಸಂಭ್ರಮಗಳನ್ನು ಹಂಚಿಕೊಳ್ಳಬೇಕು, ಭರಪೂರ ಹರಟೆ ಹೊಡೆಯಬೇಕು ಎನ್ನುವ ತುಡಿತ ಕಳೆದ ಐದು ವರ್ಷಗಳಿಂದಲೂ ಆಗೊಮ್ಮೆ ಈಗೊಮ್ಮೆ ಪ್ರಕಟವಾಗಿ ಮತ್ತೆ ಕಾರಣಾಂತರಗಳಿಂದ ಮುಂದೂಡಲ್ಪಡುತ್ತಿತ್ತು.

ಬ್ಯಾರಿ ಬರಹಗಾರ್ತಿಯರ ಆರು ವರ್ಷಗಳ ಕನಸು ಸಾಕಾರಗೊಂಡದ್ದು ಮೊನ್ನೆ ನವೆಂಬರ್ ಐದರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರಿನ ಬರಕ ಶಾಲೆಯಲ್ಲಿ ‘ಒರ್ಮೆಪ್ಪಾಡ್’ ಎಂಬ ಚಂದದ ಹೆಸರಿನಲ್ಲಿ. ಅತ್ಯಂತ ಶಿಸ್ತುಬದ್ಧವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಸಂವಾದ, ಸದಸ್ಯೆಯರಿಗೆ ಮತ್ತು ಮಕ್ಕಳಿಗೆ ಫನ್‌ಗೇಮ್‌ಗಳನ್ನೂ ಆಯೋಜಿಸಲಾಗಿತ್ತು. ಬೆಳಗ್ಗೆ ಹತ್ತು ಗಂಟೆಗೆ ಶುರುವಾದ ಕಾರ್ಯಕ್ರಮ ಮುಗಿದದ್ದು ಸಂಜೆ ಐದು ಗಂಟೆಗೆ. ಪರಸ್ಪರ ಮುಖ ಪರಿಚಯ ಇಲ್ಲದ, ಒಮ್ಮೆಯೂ ನೋಡಿಲ್ಲದ ಸದಸ್ಯೆಯರೆಲ್ಲರೂ ಪರಸ್ಪರರನ್ನು ಪರಿಚಯಿಸುತ್ತಾ ಕಾರ್ಯಕ್ರಮದಲ್ಲಿ ಓಡಾಡುತ್ತಿದ್ದರೆ ಬರಕ ಶಾಲೆಯ ಆವರಣ ಪೂರ್ತಿ ಗಲಗಲ ಎನ್ನುತ್ತಿದ್ದೆಯೇನೋ ಅನ್ನಿಸುತ್ತಿತ್ತು. ಅಷ್ಟೊಂದು ಸಂಭ್ರಮ‌‌ ಅಲ್ಲಿ ಮನೆ ಮಾಡಿತ್ತು.

ಕಿರಾಅತ್‌ನೊಂದಿಗೆ ರೈಹಾನ ವಿ‌.ಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿ ಆಯಿಶಾ ಯು.ಕೆ ಸ್ವಾಗತ ಕೋರಿದರು. ಆನಂತರ ಸದಸ್ಯೆಯರು ಅಧಿಕೃತವಾಗಿ ತಮ್ಮ ತಮ್ಮ ಪರಿಚಯವನ್ನು ಮಾಡಿಕೊಟ್ಟರು. ಅದು ಮುಗಿದಂತೆ, ಮಕ್ಕಳ ಆಟೋಟವನ್ನು ಡಾ. ಮುಫೀದಾ ಮತ್ತು ರೈಹಾನ ವಿ.ಕೆ ನಡೆಸಿಕೊಟ್ಟರು.

ಆನಂತರ ಮಿಸ್ರಿಯಾ ಪಜೀರ್ ಅವರು ಕವಿಗೋಷ್ಠಿಯನ್ನು ನಿರ್ವಹಿಸಿದರು. ಈ ಕವಿಗೋಷ್ಠಿಯಲ್ಲಿ ಬ್ಯಾರಿ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಕವನಗಳನ್ನು ವಾಚಿಸಲಾಯಿತು. ನುಶ್ರಿಯಾ, ಕಲಂದರ್ ಬೀವಿ, ರೈಹಾನಾ ವಿ‌.ಕೆ, ಮಿಸ್ರಿಯಾ ಹಕೀಂ, ಉಮೈರತ್ ಕುಮೇರ್, ರಹ್ಮತ್ ಪುತ್ತೂರು, ಫೌಝಿಯಾ ಅರ್ಶದ್, ಹಸೀನಾ ಮಲ್ನಾಡ್, ನಸೀಮಾ ಸಿದ್ಧಕಟ್ಟೆ, ಸಲ್ಮಾ ಮಂಗಳೂರು, ಆಯಿಶಾ ಪೆರ್ನೆ ಕವನಗಳನ್ನು ವಾಚಿಸಿದರು. ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶಮೀಮಾ ಕುತ್ತಾರ್ ಅವರು ಮಾತನಾಡುತ್ತಾ ವಿವರಿಸುವಂಥದ್ದು ಕವಿತೆಯಲ್ಲ, ಎದೆಯೊಳಗೆ ಇಳಿಯುವಂಥದ್ದು ಕವಿತೆ ಎಂದು ಮಾರ್ಮಿಕವಾಗಿ ಹೇಳಿದರು.

ಮಧ್ಯಾಹ್ನದ ಊಟ ಮತ್ತು ನಮಾಜಿನ ವಿರಾಮದ ನಂತರ ಕಾರ್ಯಕ್ರಮ ಮುಂದುವರಿಸಲಾಯಿತು. ಅಪರಾಹ್ನದ ಮೊದಲ ಕಾರ್ಯಕ್ರಮವನ್ನಾಗಿ ‘ಹಳೆ ಬೇರು, ಹೊಸ ಚಿಗುರು’ ಎಂಬ ಆಶಯದಡಿ ಸಂವಾದವನ್ನು ಏರ್ಪಡಿಸಲಾಗಿತ್ತು. ಇದನ್ನು ಫಾತಿಮಾ ರಲಿಯಾ ಅವರು ಸಂಯೋಜಿಸಿದ್ದು ಬ್ಯಾರಿ ಬರಹಗಾರ್ತಿಯರ ಬರಹ, ಅದು ಅವರ ಬದುಕಿನ ಮೇಲೆ ಬೀರಿರುವ ಪರಿಣಾಮಗಳು, ಮನೆಯವರ ಸಹಕಾರ, ಮುಖ್ಯವಾಹಿನಿಯ ಮಾಧ್ಯಮಗಳಿಂದಾಗುತ್ತಿರುವ ತರತಮ ನೀತಿಯ ಬಗ್ಗೆ ಒಂದು ಒಳ್ಳೆಯ ಚರ್ಚೆ, ಸಂವಾದ ರೂಪುಗೊಂಡಿತು.

ಆನಂತರ ಹಸೀನಾ ಮಲ್ನಾಡ್ ಮತ್ತು ಕಲಂದರ್ ಬೀವಿ ಗುಂಪಿನ ಸದಸ್ಯೆಯರಿಗೆ ಮೋಜಿನ ಆಟೋವನ್ನು ನಡೆಸಿಕೊಟ್ಟರು. ಪ್ರತಿ ಆಟಕ್ಕೂ ಬ್ಯಾರಿ ಹೆಸರುಗಳನ್ನು ಕೊಡಲಾಗಿದ್ದು ಅತ್ಯಂತ ಆಕರ್ಷಕವಾಗಿತ್ತು. ‘ಸಾಲೆಗ್ ಬಾಡಿ ಪೊಮ್ಮಿ ಬುಕ್ ಎಡ್ತೋಂಟು’, ‘ಮಾಮಿ ಮರ್ಮೋಲು’, ‘ಏ ಮೋಲು ಸಾರಮ್ಮ ಪೊಟ್ಯೆಂಗುಂ ಪೇಡಿಕಂಡ’, ‘ಕೆಟ್ಟಿಟ್ ಬೈಕೊರು ಪಿನ್ನೆಗ್ ಬೇನಾವು’…ಈ ರೀತಿ‌ ಏಕಕಾಲಕ್ಕೆ ನಗು ಉಕ್ಕಿಸುವ ಮತ್ತು ಯೋಚನೆಗೀಡು ಮಾಡುವ ಹೆಸರುಗಳನ್ನು ಇಡಲಾಗಿತ್ತು. ಕೊನೆಯಲ್ಲಿ ಝುಲೇಖಾ ಮುಮ್ತಾಜ್ ಧನ್ಯವಾದ ಸಮರ್ಪಿಸಿದರು.

ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡಿದ್ದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಬ್ಯಾರಿ ಬರಹಗಾರ್ತಿಯರು ಆಯೋಜಿಸಿರುವ ಮೊದಲ ಕಾರ್ಯಕ್ರಮ ಇದಾಗಿದ್ದು ಮುಂದೆ ಒಂದು ಸಂಸ್ಥೆಯಾಗಿ ಈ ಕೂಟ ನಡೆಯಲಿರುವ ದಾರಿ ಮತ್ತು ಗುರಿಗೆ ಒಂದು ಸ್ಪಷ್ಟ ನಿರ್ದೇಶನವನ್ನು ಈ ಕಾರ್ಯಕ್ರಮ ನೀಡಿದೆ ಹಾಗೂ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲು ಧೈರ್ಯ ಮತ್ತು  ಹುಮ್ಮಸ್ಸು ನೀಡಿದೆ ಎಂದು ಕೂಟದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಉತ್ಸಾಹಕ್ಕೆ ಸಾಥ್ ಕೊಟ್ಟು ತಮ್ಮ ಶಾಲೆಯಲ್ಲಿ ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿಕೊಟ್ಟ ಬರಕ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಎಲ್ಲಾ ಪಾಲಕರಿಗೂ ಧನ್ಯವಾದಗಳನ್ನು ತಿಳಿಸಿರುವ ಕೂಟದ ಸದಸ್ಯರು ಇದಕ್ಕೆ ಸಹಕಾರವಿತ್ತ ರಶೀದ್ ವಿಟ್ಲ ಅವರನ್ನೂ ವಿಶೇಷವಾಗಿ ಸ್ಮರಿಸಿದ್ದಾರೆ.

ಮೊನ್ನೆಯ ಕಾರ್ಯಕ್ರಮ ಒಂದು ದೊಡ್ಡ ಯಶಸ್ಸು. ಆ ಯಶಸ್ಸಿನ ಗುಂಗಿನಲ್ಲಿ ದಿನಗಳು ಕಳೆದು ಹೋಗುತ್ತಿವೆ. ಈಗೊಂದು ಖಾಲಿತನ ಕಾಡುತ್ತಿದೆ. ಹಬ್ಬ ಮುಗಿದಮೇಲೆ ಕಾಡುವ ಆಯಾಸದಂತಿದೆ ಈ ಖಾಲಿತನ. ಬಹುಷ: ಅಡ್ಯಾರಿನ ಬರಕ ಶಾಲೆಯ ಕಲ್ಲು ಮಣ್ಣುಗಳಿಗೂ ಸಹ ನಮ್ಮಂತಹುದೇ ಒಂದು ಖಾಲಿತನ ಕಾಡುತ್ತಿರಬಹುದು. ಈ ಖಾಲಿತನದಲ್ಲಿ ಮುಂದೆ ನಡೆಯಬೇಕಾದ ಕೆಲಸಗಳ ಬಗ್ಗೆ ಯೋಚಿಸಬೇಕಿದೆ, ನಡೆಯಬೇಕಾದ ದಾರಿ, ಗುರಿ ಎಲ್ಲದರ ಬಗ್ಗೆಯೂ ಚರ್ಚೆ ರೂಪು ರೇಷೆ ನಡೆಯಬೇಕು ಮತ್ತು ಈ ಥರದ ಚರ್ಚೆಗೆ ಇದು ಸೂಕ್ತ ಕಾಲ.

ಫಾತಿಮಾ ರಲಿಯಾ

ಹೊಸ ತಲೆಮಾರಿನ ಮಹತ್ವದ ಲೇಖಕಿ.

ಇದನ್ನೂ ಓದಿ-ಮದ್ಯ ಸೇವನೆ ಮತ್ತು ಕೌಟುಂಬಿಕ ದೌರ್ಜನ್ಯ

You cannot copy content of this page

Exit mobile version