Sunday, April 28, 2024

ಸತ್ಯ | ನ್ಯಾಯ |ಧರ್ಮ

ರಾಮನಗರ: ಪೊಲೀಸರ ಕಿರುಕುಳ ಆರೋಪದಡಿ ಬದುಕು ಕೊನೆಗೊಳಿಸಿದ ಮಹಿಳೆ

ಬೆಂಗಳೂರು: ಪೊಲೀಸರ ಕಿರುಕುಳದಿಂದ ಗೃಹಿಣಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ಚನ್ನಪಟ್ಟಣ ನಗರದ ಕೋಟೆ ಲೇಔಟ್ ನಿವಾಸಿ 31 ವರ್ಷದ ಮಾಧುರಿ ಎಂದು ಗುರುತಿಸಲಾಗಿದೆ. ಮಾಧುರಿ ಶನಿವಾರ ನಿದ್ರೆ ಮಾತ್ರೆ ಸೇವಿಸಿದ್ದು, ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪೊಲೀಸರಿಂದ ಹಿಂಸೆ ಮತ್ತು ಕಿರುಕುಳ ತಾಳಲಾರದೆ ತನ್ನ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

ಹಣಕಾಸಿನ ವಿಚಾರವಾಗಿ ಮಾಧುರಿ ಚನ್ನಪಟ್ಟಣ ಗ್ರಾಮಾಂತರ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ತನಗೆ ಪೊಲೀಸರು ಅವಮಾನ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಆಕೆಯನ್ನು ಪೊಲೀಸರು ದೂರು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ ಮತ್ತು ಸಂತ್ರಸ್ತೆಯ ವಿರುದ್ಧ ಹಲವು ವಂಚನೆ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾಗಿ ಆರೋಪಿಸಲಾಗಿದೆ. ತನ್ನ ಸಾವಿನ ನಂತರವಾದರೂ ತನಗೆ ನ್ಯಾಯ ಸಿಗಲಿ ಎಂದು ಮಹಿಳೆ ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ಹೇಳಿದ್ದರು. ಈ ಸಂಬಂಧ ಸಂಬಂಧಿಕರು ಹಾಗೂ ಕುಟುಂಬಸ್ಥರು ರಾಮನಗರ ಎಸ್ಪಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಚನ್ನಪಟ್ಟಣ ಟೌನ್ ಇನ್ಸ್ ಪೆಕ್ಟರ್ ಶೋಭಾ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ನೀಡಬೇಕಿದೆ.

ನಿಮ್ಮಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳು ಮೂಡುತ್ತಿದ್ದಲ್ಲಿ ದಯವಿಟ್ಟು ದುಡುಕುವ ಮುನ್ನ ಈ ಸಂಖ್ಯೆಯನ್ನು ಸಂಪರ್ಕಿಸಿ: +91 80 23655557, +91 80 23656667, [email protected]

Related Articles

ಇತ್ತೀಚಿನ ಸುದ್ದಿಗಳು